ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಳಿವಿನಂಚಿನತ್ತ ಮಲೆನಾಡಿನ ಕಾಡುಮಾವು

By ನಮ್ಮ ಪ್ರತಿನಿಧಿ
|
Google Oneindia Kannada News

ಮಲೆನಾಡಿನ ಹೆಮ್ಮರಗಳಲ್ಲಿ ಗೊಂಚಲುಗಳಲ್ಲಿ ಪುಟ್ಟಪುಟ್ಟ ಕಾಯಿಬಿಟ್ಟು ಕಂಗೊಳಿಸುವ ಕಾಡು ಮಾವು ಇದೀಗ ಹಣ್ಣಾಗಲು ಆರಂಭಿಸಿದೆ. ಹೀಗಾಗಿ ಮರಗಳ ಕೆಳಗೆ ಅಡ್ಡಾಡುತ್ತಾ ಬಿದ್ದ ಹಣ್ಣನ್ನು ಆಯ್ದು ಮನೆಗೆ ತರುವ ದೃಶ್ಯಗಳು ಸಾಮಾನ್ಯವಾಗಿದೆ.

ಒಂದು ಕಾಲದಲ್ಲಿ ಎಲ್ಲೆಂದರಲ್ಲಿ ಕಾಣಲು ಸಿಗುತ್ತಿದ್ದ ಕಾಡು ಮಾವು ಈಗ ನೇಪಥ್ಯಕ್ಕೆ ಸರಿದಿವೆ. ಆದ್ದರಿಂದ ಮಲೆನಾಡಿನಲ್ಲಿ ಕಾಡುಮಾವುಗೆ ಒಂದಷ್ಟು ಬೇಡಿಕೆಯೂ ಹೆಚ್ಚಿದೆ. ಹಣ್ಣನ್ನು ತಿನ್ನಲು ಮಾತ್ರವಲ್ಲದೆ ಇತರೆ ಖಾದ್ಯಗಳಲ್ಲಿ ಬಳಸುವುದರಿಂದ ಅದರ ಉಪಯೋಗ ಅರಿತ ಜನ ಅದರತ್ತ ಒಲವು ತೋರುತ್ತಿದ್ದಾರೆ. ಆದರೆ ಪಟ್ಟಣದ ಹೆಚ್ಚಿನ ಮಂದಿಗೆ ಅದರ ಬಗ್ಗೆ ಹೆಚ್ಚಾಗಿ ತಿಳಿದಂತಿಲ್ಲ.[ಕರ್ನಾಟಕದ ಮಾವು ನೇರ ರಫ್ತಿಗಾಗಿ ಕೇಂದ್ರಕ್ಕೆ ಮನವಿ]

ಈಗಾಗಲೇ ವಿವಿಧ ರೀತಿಯ ಮಾವಿನ ಹಣ್ಣುಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಾಗಿದೆ. ಈಗ ಪಟ್ಟಣಗಳ ಬೀದಿ ಬದಿಯಿಂದ ಆರಂಭವಾಗಿ ಮಾರುಕಟ್ಟೆವರೆಗೆ ಎಲ್ಲೆಂದರಲ್ಲಿ ವಿವಿಧ ಮಾದರಿಯ ಹಣ್ಣುಗಳ ಮಾರಾಟದ ಭರಾಟೆ ಕಂಡು ಬರುತ್ತಿದ್ದು ಇವುಗಳ ನಡುವೆ ಮಲೆನಾಡಿನ ಕಾಡು ಮಾವುನ್ನು ಮಾರಾಟ ಮಾಡುವುದು ಕಂಡು ಬರುತ್ತಿದೆ.

ಮಾರುಕಟ್ಟೆಗೆ ಮಾರಾಟಕ್ಕೆ ಬಂದಿರುವ ಮಾವಿನ ಹಣ್ಣಿಗೆ ಕಿಲೋವೊಂದಕ್ಕೆ 30ರಿಂದ ಆರಂಭವಾಗಿ ದರ ಬೆಳೆಯುತ್ತಾ ಹೋಗುತ್ತದೆ. ಒಂದೊಂದು ಮಾದರಿಯ ಹಣ್ಣಿಗೂ ಒಂದೊಂದು ಬೆಲೆ ನಿಗದಿ ಮಾಡಲಾಗಿರುತ್ತದೆ. ಅಷ್ಟೇ ಅಲ್ಲ ಇವತ್ತಿದ್ದ ಬೆಲೆ ನಾಳೆಯಿಲ್ಲದ ಪರಿಸ್ಥಿತಿಯೂ ಇದೆ.[ಮಾವಿಗೂ ತಟ್ಟಿದ ಬರದ ಬಿಸಿ, ಮಾರುಕಟ್ಟೆಯಿಂದ ಕಣ್ಮರೆ]

Decline of Malnad Mango species

ಬಯಲು ಸೀಮೆಗಳಲ್ಲಿ ರೈತರಿಗೆ ಮಾವು ಜೀವನಾಧಾರವಾಗಿದ್ದು, ಈ ಬಾರಿ ಉತ್ತಮ ಫಸಲು ಬಂದಿರುವುದು ರೈತರಿಗೆ ಸಂತಸ ತಂದಿದೆ. ಅಷ್ಟೇ ಅಲ್ಲದೆ ಬಿಸಿಲಿನ ತಾಪವೂ ಹೆಚ್ಚಿರುವುದರಿಂದ ಜನ ಹಣ್ಣುಗಳಿಗೆ ಮಾರು ಹೋಗುತ್ತಿದ್ದಾರೆ. ಇತ್ತೀಚೆಗೆ ಮಾವಿನ ಹಣ್ಣುಗಳ ಹೊಸ ತಳಿಗಳನ್ನು ಸಂಸ್ಕರಿಸಲಾಗಿದ್ದು, ಕಡಿಮೆ ಅವಧಿಯಲ್ಲಿ ಫಸಲು ಬಿಡುವ, ಹೆಚ್ಚು ಇಳುವರಿ ನೀಡುವ ತಳಿಗಳನ್ನು ರೈತರು ಬೆಳೆಯುತ್ತಿದ್ದಾರೆ.

ಇನ್ನು ಮಲೆನಾಡಿನ ಬಗ್ಗೆ ಹೇಳುವುದಾದರೆ ಇವತ್ತಿಗೂ ಇಲ್ಲಿ ಹಳೆಯಕಾಲದ ಮಾವಿನ ತಳಿಗಳೇ ಹೆಚ್ಚಾಗಿ ಕಂಡು ಬರುತ್ತಿವೆ. ಈ ಪೈಕಿ ಬಹಳ ಹಿಂದಿನ ಕಾಲದಿಂದಲೂ ತೋಟಗಳ ನಡುವೆ ಬೆಳೆಯುತ್ತಾ ಬಂದಿರುವ ನೆಕ್ಕರೆ(ಗೋಮಾವು) ಮಾವಿನ ಹಣ್ಣುಗಳಿಗೆ ಹೆಚ್ಚಿನ ಮಾರುಕಟ್ಟೆಯಿಲ್ಲದಿದ್ದರೂ ಗ್ರಾಮೀಣ ಜನರಿಗೆ ಅಚ್ಚುಮೆಚ್ಚಾಗಿಯೇ ಉಳಿದು ಹೋಗಿವೆ. ಈ ಮಾವಿನ ಹಣ್ಣುಗಳನ್ನು ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚಾಗಿ ಕಾಣಬಹುದಾಗಿದೆ. [ಅಪ್ಪೆಮಿಡಿ ಉಪ್ಪಿನಕಾಯಿ ಬೇಕಾ? ಭಟ್ಟರಿಗೆ ಫೋನ್ ಮಾಡಿ]

ಇನ್ನು ಕಾಡುಗಳಲ್ಲಿ ಹೆಮ್ಮರವಾಗಿ ಬೆಳೆದು ರುಚಿಯಾದ ಹಣ್ಣುಗಳನ್ನು ಬಿಡುವ ಕಾಡುಮಾವಿನ ಹಣ್ಣುಗಳಂತು ಇಂದಿಗೂ ಹಳ್ಳಿಗರ ಪಾಲಿಗೆ ಕಲ್ಪವೃಕ್ಷವೇ. ಮಿಡಿಯನ್ನು ಉಪ್ಪಿನಕಾಯಿಯಾಗಿ, ಹಣ್ಣನ್ನು ತಿನ್ನಲು ಅಲ್ಲದೆ, ಸಾರು, ಹುಳಿ ಹೀಗೆ ವಿವಿಧ ಖಾದ್ಯಗಳಾಗಿ ಮಾಡುವುದಲ್ಲದೆ, ಉಪ್ಪಿನ ನೀರಿನಲ್ಲಿಟ್ಟು ಮಳೆಗಾಲಕ್ಕೆ ಬಳಸಿಕೊಳ್ಳಲಾಗುತ್ತದೆ.

ಮೊದಲೆಲ್ಲ ಈ ಮಾವಿನ ಹಣ್ಣುಗಳಿಂದ ಹಳ್ಳಿಜನರ ತರಕಾರಿ ಸಮಸ್ಯೆ ನೀಗುತ್ತಿತ್ತು. ಇತ್ತೀಚಿಗಿನ ದಿನಗಳಲ್ಲಿ ಕಾಡು ಮಾವಿನ ಮರಗಳು ನಾಶವಾಗುತ್ತಿವೆ. ಇನ್ನೊಂದೆಡೆ ಪರಿಸರದ ಮೇಲಾಗುತ್ತಿರುವ ಪರಿಣಾಮಗಳಿಂದಲೋ ಮೊದಲಿನಷ್ಟು ಫಸಲುಗಳು ಬರುತ್ತಿಲ್ಲ. ಸಂಬಾರ, ಜೀರಿಗೆ ಹೀಗೆ ವಿವಿಧ ಸುವಾಸನೆಯಿಂದ ಕೂಡಿರುವ ಈ ಹಣ್ಣುಗಳು ರಾಸಾಯನಿಕ ಮುಕ್ತ ಮತ್ತು ಹೆಚ್ಚು ಜೀವಸತ್ವ ಹೊಂದಿದ ಹಣ್ಣುಗಳಾಗಿವೆ.

ಹಿತ್ತಲಗಿಡ ಮದ್ದಲ್ಲ ಎಂಬ ಮಾತಿನಂತೆ ಇಂತಹ ಹಣ್ಣಿನ ಮರಗಳನ್ನು ನಾಶ ಮಾಡುತ್ತಿರುವ ನಾವು ಮಾರುಕಟ್ಟೆಗೆ ಬರುವ ರಾಸಾಯನಿಕವನ್ನು ಹೊಂದಿರುವ ಹಣ್ಣಿಗೆ, ಅದರ ಸೌಂದರ್ಯ, ರುಚಿಗೆ ಮಾರು ಹೋಗುತ್ತಿದ್ದೇವೆ ಆದರೆ ಆರೋಗ್ಯದ ದೃಷ್ಟಿಯಿಂದ ಉತ್ತಮವಾಗಿದ್ದ ಕಾಡು ಮಾವಿನ ಹಣ್ಣುಗಳನ್ನು ಉಳಿಸಿಕೊಳ್ಳುವ ಪ್ರಯತ್ನಗಳನ್ನು ನಾವು ಮಾಡದಿರುವುದರಿಂದಾಗಿ ಅವುಗಳು ಅಳಿವಿನಂಚಿನತ್ತ ಸದ್ದಿಲ್ಲದೆ ಸಾಗುತ್ತಿವೆ.

English summary
Mango industry fears decline of Malnad Mango species variety, There is threat of extinction of Mango trees due to deforestation in Western Ghat region of Karnataka
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X