ರಾಜ್ಯದಲ್ಲಿ ಕೊರೊನಾ ವೈರಸ್ ಬಗ್ಗೆ ಅನಗತ್ಯ ಆತಂಕ ಬೇಡ: ಕಾರಣ ಏನು ಗೊತ್ತಾ?
ಬೆಂಗಳೂರು, ಜೂ. 14: ಇಡೀ ಜಗತ್ತಿಗೆ ಕೊರೊನಾ ವೈರಸ್ ಆತಂಕ ತಂದಿಟ್ಟಿದೆ. ವೈರಸ್ ಸೃಷ್ಟಿಸಿರುವ ಹಾವಳಿಯೆ ಹಾಗಿದೆ. ನಮ್ಮ ರಾಜ್ಯದಲ್ಲಿಯೂ ಇಲ್ಲಿಯವರೆಗೆ (ಜೂ. 14) ಕೊರೊನಾ ವೈರಸ್‌ಗೆ 81 ಜನರು ಬಲಿಯಾಗಿದ್ದಾರೆ. ಒಟ್ಟು 6,824 ಜನರು ಸೋಂಕಿಗೆ ತುತ್ತಾಗಿದ್ದಾರೆ. ದೇಶದಲ್ಲಿ ಮೊದಲು ಸಾವು ಆಗಿದ್ದು ಕೂಡ ರಾಜ್ಯದ ಕಲಬುರಗಿಯಲ್ಲಿ.
ದೇಶದಲ್ಲಿ ಕೊರೊನಾ ವೈರಸ್‌ಗೆ ತುತ್ತಾದವರ ಸಂಖ್ಯೆ 3 ಲಕ್ಷ ಮೀರಿದೆ. ಜೊತೆಗೆ ಬಲಿಯಾದವರ ಸಂಖ್ಯೆ 9,195 ತಲುಪಿದೆ. ಇದೇ ಸಂದರ್ಭದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ನೆಮ್ಮದಿ ಕೊಡುವ ಮಾಹಿತಿಯೊಂದನ್ನು ಕೊಟ್ಟಿದ್ದಾರೆ. ರಾಜ್ಯದಲ್ಲಿ ಕೊರೊನಾ ವೈರಸ್‌ನಿಂದ ಸಾವನ್ನಪ್ಪಿದವರ ಪ್ರಮಾಣ ಕೇವಲ ಶೇಕಡಾ 1.1 ಮಾತ್ರ ಎಂದು ಡಾ. ಸುಧಾಕರ್ ಹೇಳಿದ್ದಾರೆ. ದೇಶದಲ್ಲಿ ಕೋವಿಡ್ 19 ನಿಂದ ಸಾವನ್ನಪ್ಪಿದವರ ಪ್ರಮಾಣ ಶೇಕಡಾ 2.8ರಷ್ಟಿದೆ. ಜಾಗತಿಕ ಮಟ್ಟದಲ್ಲಿ ಸೋಂಕಿಗೆ ತುತ್ತಾಗಿ ಮೃತಪಟ್ಟವರ ಪ್ರಮಾಣ ಶೇಕಡಾ 10ರಷ್ಟಿದೆ.

ಸಾವಿನ ಪ್ರಮಾಣ ಶೇ. 1.1
ಕಲಬುರಗಿಯಲ್ಲಿ ಮಾತನಾಡಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್, ರಾಜ್ಯದಲ್ಲಿ ಇದುವರೆಗೆ ಕೊರೊನಾಗೆ 81 ಜನ ಬಲಿಯಾಗಿದ್ದಾರೆ ಎಂಬ ಮಾಹಿತಿ ಕೊಟ್ಟಿದ್ದಾರೆ. ಆದರೆ ಕೊರೊನಾ ವೈರಸ್ ಸೋಂಕಿನಿಂದ ರಾಜ್ಯದಲ್ಲಿ ಸಾವಿನ ಪ್ರಮಾಣ 1.1% ರಷ್ಟಿದೆ. ಆದೇ ದೇಶದಲ್ಲಿ 2.8% ರಷ್ಟಿದೆ ಎಂಬ ಮಾಹಿತಿಯನ್ನು ಕೊಟ್ಟಿದ್ದಾರೆ.
ರಾಜ್ಯದಲ್ಲಿ 71 ಕೋವಿಡ್ 19 ಪರೀಕ್ಷೆಗೆ ಪ್ರಯೋಗಾಲಯ ಸ್ಥಾಪಿಸಲಾಗಿದೆ. ಈವರೆಗೆ ಒಟ್ಟು 4 ಲಕ್ಷ 35 ಸಾವಿರ ಕೊವಿಡ್ ಪರೀಕ್ಷೆ ಮಾಡಲಾಗಿದೆ. ಆರೂವರೆ ಕೋಟಿ ಜನಸಂಖ್ಯೆಯಲ್ಲಿ ಸಕ್ರಿಯವಾಗಿ ಸೊಂಕಿತರ ಸಂಖ್ಯೆ ಇರೋದು ಕೇವಲ 3,176 ಮಾತ್ರ ಎಂಬ ಮಾಹಿತಿಯನ್ನು ಕೊಟ್ಟಿದ್ದಾರೆ. ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಬಹಳಷ್ಟು ನಿಯಂತ್ರಣ ಮಾಡಿದ್ದೇವೆ. ಸಧ್ಯ ರಾಜ್ಯದಲ್ಲಿ ಕೇವಲ ಹದಿನೈದು ಜನ ಮಾತ್ರ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ದೇಶದ ಸ್ಥಿತಿಗತಿ
ಇನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಅವರ ಹೇಳಿಕೆಯನ್ನು ಗಮನದಲ್ಲಿಟ್ಟುಕೊಂಡು ನೋಡುವುದಾದರೆ ದೇಶದಲ್ಲಿ ಇವತ್ತಿನ (ಜೂ.14) ವರೆಗೆ ಒಟ್ಟು ಸಕ್ರಿಯ ಸೋಂಕಿತ ಪ್ರಕರಣಗಳು ಇರುವುದು 1,49,348 ಮಾತ್ರ. ಈವರೆಗೆ ಒಟ್ಟು 1,62,379 ಸೋಂಕಿತರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಸೋಂಕಿಗೆ ತುತ್ತಾಗಿ ದೇಶದಲ್ಲಿ ಮರಣ ಹೊಂದಿದವರ ಸಂಖ್ಯೆ 9,195.
ದೇಶಾದ್ಯಂತ ಈವರೆಗೆ 55 ಲಕ್ಷಕ್ಕೂ ಅಧಿಕ ಪರೀಕ್ಷೆಗಳನ್ನು ಮಾಡಲಾಗಿದೆ. ಕೋವಿಡ್ ಪರೀಕ್ಷೆ ಮಾಡಲು ಒಟ್ಟು 885 ಪ್ರಯೋಗಲಾಯಗಳನ್ನು ಸ್ಥಾಪನೆ ಮಾಡಲಾಗಿದೆ. ನಮ್ಮ ದೇಶದಲ್ಲಿ ಸೋಂಕಿಗೆ ತುತ್ತಾದವರ ಪೈಕಿ ಅರ್ಧಕ್ಕಿಂತ ಹೆಚ್ಚು ಜನರು ಈಗಾಗಲೇ ಗುಣಮುಖರಾಗಿದ್ದಾರೆ. ಜೊತೆಗೆಬ ರೋಗ ನಿರೋಧಕ ಶಕ್ತಿ ಕೂಡ ಜಾಗತಿಕ ಮಟ್ಟಕ್ಕೆ ಹೋಲಿಕೆ ಮಾಡಿದರೆ ಭಾರತದಲ್ಲಿ ಹೆಚ್ಚಿದೆ. ಹೀಗಾಗಿ ಆತಂಕ ಪಡುವ ಅಗತ್ಯವಿಲ್ಲ ಎಂದು ತಜ್ಞರು ಹೇಳಿದ್ದಾರೆ.

ಆತಂಕ ಸೃಷ್ಟಿ ಬೇಡ
ರಾಜ್ಯದಲ್ಲಿ ಕೊರೊನಾ ವೈರಸ್ ಬಗ್ಗೆ ಮಾಧ್ಯಮಗಳು ಆತಂಕ ಸೃಷ್ಟಿಸಬಾರದು ಎಂದು ಡಾ. ಸುಧಾಕರ್ ಮನವಿ ಮಾಡಿಕೊಂಡಿದ್ದಾರೆ. ಮಾಧ್ಯಮಗಳ ವರದಿ ನೋಡಿ ಜನರು ಆತಂಕಕ್ಕೊಳಗಾಗಿದ್ದಾರೆ.
ಸರ್ಕಾರಕ್ಕೆ ಇರುವಷ್ಟೆ ಜವಾಬ್ದಾರಿ ಎಲ್ಲಾ ಮಾಧ್ಯಮಗಳಿಗಿದೆ. ಅವರು ಜನರಿಗೆ ತಿಳುವಳಿಕೆ ಹೇಳುವ ಕೆಲಸ ಮಾಡಬೇಕಾಗಿದೆ. ಈ ಬಗ್ಗೆ ಮಾಧ್ಯಮಗಳಿಗೆ ಸೂಚನೆ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಲ್ಲಿ ಮನವಿ ಮಾಡುತ್ತೇನೆ ಎಂದಿದ್ದಾರೆ.

ವಿಶೇಷ ಸಮಿತಿ
ಕೊರೊನಾ ವೈರಸ್ ನಿಯಂತ್ರಣದ ಕುರಿತು ಕಲಬುರಗಿಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಸಭೆ ನಡೆಸಿದ್ದಾರೆ. ಸಭೆಯ ಬಳಿಕ ಮಾತನಾಡಿರುವ ಅವರು ರಾಜ್ಯದ ಜನರಲ್ಲಿ ಭರವಸೆ ತುಂಬಿದ್ದಾರೆ. ಕೊರೊನಾ ವೈರಸ್ ಹರಡದಂತೆ ತಡೆಯಲು ಹಾಗೂ ಸಾವಿನ ಸಂಖ್ಯೆಯನ್ನು ಇನ್ನೂ ಕಡಿಮೆ ಮಾಡಲು, ಕಲಬುರಗಿ ನಗರದಲ್ಲಿ ವಿಶೇಷ ಸಮಿತಿಗಳನ್ನು ರಚಿಸಲು ಸೂಚಿಸಿದ್ದಾರೆ. ತಲಾ ಎರಡು ಸಾವಿರ ಜನಸಂಖ್ಯೆಗೆ ಅನುಗುಣವಾಗಿ ಒಂದು ಸಮಿತಿ ಮಾಡುವಂತೆ ಜಿಲ್ಲಾಡಳಿತಕ್ಕೆ ಸಲಹೆ ಕೊಟ್ಟಿದ್ದಾರೆ.
ಸಮಿತಿಯಲ್ಲಿ ಒಬ್ಬ ಆಶಾ ಕಾರ್ಯಕರ್ತೆ, ಒಬ್ಬ ಪೊಲೀಸ್ ಕಾನ್ಸ್‌ಟೆಬಲ್ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಇರುವಂತೆ ಸೂಚಿಸಿದ್ದಾರೆ. SARI, ILI ಪ್ರಕರಣಗಳನ್ನ ಪತ್ತೆ ಹಚ್ಚಲು ಆ ಸಮಿತಿಗಳು ಕೆಲಸ ನಿರ್ವಹಿಸಲಿವೆ. ಇದೇ ಸಂದರ್ಭದಲ್ಲಿ ಕೊರೊನಾ ವೈರಸ್‌ಗೆ ಸಂಬಂಧಿಸಿದಂತೆ ಭಯ ಬೀಳದಂತೆ, ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ.












Click it and Unblock the Notifications