ಸಿಎಂ ಸಿದ್ದುರಿಂದ ಸರ್ಕಾರಿ ನೌಕರರಿಗೆ ದಸರಾ ಗಿಫ್ಟ್
ಬೆಂಗಳೂರು, ಸೆ.26: ದಸರಾ ಹಬ್ಬದ ಕೊಡುಗೆಯಾಗಿ ರಾಜ್ಯ ಸರ್ಕಾರಿ ನೌಕರರಿಗೆ ಶೇ.4.25ರಷ್ಟು ತುಟ್ಟಿಭತ್ಯೆ ಹೆಚ್ಚಳವನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಘೋಷಿಸಿದೆ. ಇತ್ತೀಚೆಗೆ ಕೇಂದ್ರ ಸರ್ಕಾರ ತನ್ನ ನೌಕರರಿಗೆ ಶೇ.7ರಷ್ಟು ತುಟ್ಟಿಭತ್ಯೆ ನೀಡಿ ಆದೇಶ ಹೊರಡಿಸಿತ್ತು.
ಕೇಂದ್ರ ಸರ್ಕಾರಿ ನೌಕರರ ಬಾಯಿಗೆ ಗೌರಿ ಗಣೇಶ ಹಬ್ಬದ ನಂತರವೂ ಎನ್ ಡಿಎ ಸರ್ಕಾರ ಲಡ್ಡು ಹಾಕಿತ್ತು ನೌಕರರ ತುಟ್ಟಿ ಭತ್ಯೆಯನ್ನು (ಡಿಎ) ಜುಲೈ 1ರಿಂದಲೇ ಪೂರ್ವಾನ್ವಯವಾಗುವಂತೆ ಶೇ.7ರಷ್ಟು ಏರಿಸುವ ಮೂಲಕ ಕೇಂದ್ರ ಸರ್ಕಾರವು ವಿಶೇಷ ಕೊಡುಗೆ ನೀಡಿತ್ತು. ಈಗ ಕರ್ನಾಟಕ ಸರ್ಕಾರ ತನ್ನ ನೌಕರರ ಬಾಯಿಗೆ ಮೈಸೂರು ಪಾಕ್ ಹಾಕಿದೆ.[ವಿವರ ಇಲ್ಲಿ ಓದಿ]
ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತುಟ್ಟಿಭತ್ಯೆ ಹೆಚ್ಚಳಕ್ಕೆ ಒಪ್ಪಿಗೆ ಸೂಚಿಸಿ ಮಂಜೂರಾತಿ ನೀಡಿದ್ದಾರೆ. ಮೂಲವೇತನದ ಶೇ.4.25ರಷ್ಟು ತುಟ್ಟಿಭತ್ಯೆ ನೀಡುತ್ತಿದ್ದು, ಇದು ಶೇ.21ರಿಂದ ಶೇ.25.25ಕ್ಕೆ ತುಟ್ಟಿಭತ್ಯೆ ಹೆಚ್ಚಳವಾದಂತಾಗಿದೆ. ಜುಲೈ 1ರಿಂದ ಪೂರ್ವಾನ್ವಯವಾಗುವಂತೆ ರಾಜ್ಯಸರ್ಕಾರ ತುಟ್ಟಿಭತ್ಯೆ ನೀಡುತ್ತಿದೆ.

ಸುಮಾರು 6 ಲಕ್ಷ ಸರ್ಕಾರಿ ನೌಕರರು ಮತ್ತು ಅಧಿಕಾರಿಗಳಿಗೆ ತುಟ್ಟಿಭತ್ಯೆ ಹೆಚ್ಚಳ ಮಾಡಿರುವುದರಿಂದ ರಾಜ್ಯ ಸರ್ಕಾರದ ಬೊಕ್ಕಸದ ಮೇಲೆ 660 ಕೋಟಿ ರೂ. ಹೊರೆ ಬೀಳಲಿದೆ.
ನಿವೃತ್ತ ವೇತನದಾರರು ಮತ್ತು ಕುಟುಂಬ ನಿವೃತ್ತಿ ವೇತನದಾರರಿಗೂ ತುಟ್ಟಿಭತ್ಯೆ ಹೆಚ್ಚಳದ ಲಾಭ ದೊರೆಯಲಿದೆ. ಕಳೆದ ಏಪ್ರಿಲ್ ನಲ್ಲಿ ಮೂಲ ವೇತನದ ಶೇ.15ರಷ್ಟಿದ್ದ ತುಟ್ಟಿಭತ್ಯೆಯನ್ನು ಶೇ.21ಕ್ಕೆ ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಜೂನ್ 1ರಿಂದಲೇ ಪೂರ್ವಾನ್ವಯವಾಗುವಂತೆ ತುಟ್ಟಿಭತ್ಯೆಯನ್ನು ಸರ್ಕಾರಿ ನೌಕರರಿಗೆ ನೀಡಲಾಗಿತ್ತು.
ತುಟ್ಟಿ ಭತ್ಯೆ(dearness allowance): ಭಾರತದಲ್ಲಿ, ತುಟ್ಟಿಭತ್ಯೆಯು ಒಬ್ಬ ವ್ಯಕ್ತಿಯ ಸಂಬಳದ ಭಾಗವಾಗಿದೆ ತುಟ್ಟಿಭತ್ಯೆಯನ್ನು ಮೂಲ ಸಂಬಳದ ಶೇಕಡಾವಾರು ಲೆಕ್ಕವಾಗಿ ಲೆಕ್ಕಮಾಡಲಾಗುತ್ತದೆ. ನಂತರ, ಈ ಮೊತ್ತವನ್ನು ಮನೆ ಬಾಡಿಗೆ ಭತ್ಯೆಯ ಜೊತೆಗೆ ಮೂಲ ಸಂಬಳಕ್ಕೆ ಸೇರಿಸಿ ಒಟ್ಟು ಸಂಬಳವನ್ನು ಪಡೆಯಲಾಗುತ್ತದೆ. ದರಗಳು ಗ್ರಾಮೀಣ/ನಗರ ಪ್ರದೇಶಗಳ ಪ್ರಕಾರ ಬದಲಾಗುತ್ತವೆ. ತುಟ್ಟಿ ಭತ್ಯೆಯನ್ನು 12 ತಿಂಗಳಿನ ಗ್ರಾಹಕ ಬೆಲೆ ಸೂಚ್ಯಂಕದ ಆಧಾರದ ಮೇರೆಗೆ ನಿಗದಿಪಡಿಸಲಾಗುತ್ತದೆ.












Click it and Unblock the Notifications