Government Employee: ತುಟ್ಟಿಭತ್ಯೆ ಏರಿಕೆ, ಅಪ್‌ಡೇಟ್ ಕೊಟ್ಟ ಸರ್ಕಾರಿ ನೌಕರರ ಸಂಘ
ಬೆಂಗಳೂರು, ನವೆಂಬರ್ 27: ಕರ್ನಾಟಕ ಸರ್ಕಾರಕ್ಕೆ ನವೆಂಬರ್ ಮೊದಲ ವಾರದಲ್ಲಿಯೇ ಬೇಡಿಕೆ ಸಲ್ಲಿಕೆ ಮಾಡಿದರೂ ಸಹ ಇನ್ನೂ ತುಟ್ಟಿಭತ್ಯೆ (ಡಿಎ) ಏರಿಕೆ ಕುರಿತು ಆದೇಶವನ್ನು ಹೊರಡಿಸಿಲ್ಲ. ಕೇಂದ್ರ ಸರ್ಕಾರ ದೀಪಾವಳಿ ಹಬ್ಬದ ಸಂದರ್ಭದಲ್ಲಿಯೇ ತನ್ನ ನೌಕರರಿಗೆ ತುಟ್ಟಿಭತ್ಯೆ (ಡಿಎ) ಮತ್ತು ಪಿಂಚಣಿದಾರರಿಗೆ ತುಟ್ಟಿ ಪರಿಹಾರ (ಡಿಆರ್) ಏರಿಕೆ ಮಾಡಿತ್ತು. ಆದರೆ ರಾಜ್ಯ ಸರ್ಕಾರ ಈ ಕುರಿತು ಆದೇಶವನ್ನು ಹೊರಡಿಸಲು ವಿಳಂಬವನ್ನು ಮಾಡುತ್ತಿದೆ. ಆದೇಶ ಹೊರಡಿಸುವಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಮುಖ್ಯಮಂತ್ರಿಗಳಿಗೆ ಮತ್ತೆ ಮನವಿಯನ್ನು ಸಲ್ಲಿಕೆ ಮಾಡಿದೆ.
ಸಂಪ್ರದಾಯದಂತೆ ಕೇಂದ್ರ ಸರ್ಕಾರ ಡಿಎ ಏರಿಕೆ ಮಾಡಿದ ಬಳಿಕ ರಾಜ್ಯ ಸರ್ಕಾರವು ಡಿಎ ಹೆಚ್ಚಳ ಮಾಡುತ್ತದೆ. ಆದರೆ ಕರ್ನಾಟಕ ರಾಜ್ಯ ಸರ್ಕಾರ ಡಿಎ ಹೆಚ್ಚಳದ ಕುರಿತು ಆದೇಶವನ್ನು ಇನ್ನೂ ಹೊರಡಿಸಿಲ್ಲ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ, ಆರ್ಥಿಕ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಕೆ ಮಾಡಲಾಗಿದೆ. ಆದರೆ ಸರ್ಕಾರ ಇನ್ನೂ ಸಹ ತೀರ್ಮಾನವನ್ನು ಕೈಗೊಂಡಿಲ್ಲ.

ಕೇಂದ್ರದಲ್ಲಿ ಡಿಎ ಹೆಚ್ಚಳ ಮಾಡಿದ ಬಳಿಕ ಕರ್ನಾಟಕ ಸರ್ಕಾರವು ರಾಜ್ಯ ಸರ್ಕಾರಿ ನೌಕರರ ಡಿಎ ಏರಿಕೆ ಮಾಡಬೇಕಿದೆ. ರಾಜ್ಯ ಸರ್ಕಾರ ರಚನೆ ಮಾಡಿದ್ದ ರಾಜ್ಯ 7ನೇ ವೇತನ ಆಯೋಗ ಸಹ ತನ್ನ ಶಿಫಾರಸಿನಲ್ಲಿ ರಾಜ್ಯ ಸರ್ಕಾರಕ್ಕೆ ಇದೇ ಮಾದರಿ ಮುಂದುವರೆಸುವಂತೆ ಹೇಳಿದೆ. ಈಗ ಡಿಎ ಏರಿಕೆ ಕುರಿತು ಸರ್ಕಾರಿ ನೌಕರರ ಸಂಘ ಅಪ್‌ಡೇಟ್ ನೀಡಿದೆ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ. ಎಸ್. ಷಡಾಕ್ಷರಿ ಹೆಸರಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ವೇದಿಕೆ ಟೆಲಿಗ್ರಾಮ್ ಗ್ರೂಪ್‌ನಲ್ಲಿ ಪೋಸ್ಟ್‌ವೊಂದನ್ನು ಹಾಕಲಾಗಿದೆ. ತುಟ್ಟಿಭತ್ಯೆ ಏರಿಕೆ ಕುರಿತು ಇದರದಲ್ಲಿ ಮಾಹಿತಿ ನೀಡಲಾಗಿದೆ.
ಪೋಸ್ಟ್‌ನಲ್ಲಿ, 'ಸರ್ಕಾರಿ ನೌಕರರಿಗೆ ದಿನಾಂಕ 1/7/2024ರಿಂದ ಬಾಕಿ ಇರುವ ತುಟ್ಟಿಭತ್ಯೆಯನ್ನು ಶೀಘ್ರವಾಗಿ ಬಿಡುಗಡೆಗೊಳಿಸುವಂತೆ ಸಂಘವು ಮನವಿ ಸಲ್ಲಿಸಿದ್ದು, ಮುಖ್ಯಮಂತ್ರಿಗಳು ತುಟ್ಟಿಭತ್ಯೆಯನ್ನು ಶೀಘ್ರದಲ್ಲೇ ಬಿಡುಗಡೆಗೊಳಿಸುವ ಕುರಿತು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಶೀಘ್ರದಲ್ಲೇ ಅಧಿಕೃತ ಆದೇಶ ಹೊರಬೀಳಲಿದೆ' ಎಂದು ತಿಳಿಸಲಾಗಿದೆ.
ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಂಡು ಸರ್ಕಾರ ಆದೇಶವನ್ನು ಹೊರಡಿಸುವ ನಿರೀಕ್ಷೆ ಇದೆ. ನವೆಂಬರ್ 28ರ ಗುರುವಾರ ಸಚಿವ ಸಂಪುಟ ಸಭೆಯನ್ನು ಕರೆಯಲಾಗಿದೆ. ಈ ಕುರಿತು ಆರ್. ಚಂದ್ರಶೇಖರ್, ಸರ್ಕಾರದ ಅಪರ ಕಾರ್ಯದರ್ಶಿ (ಸಚಿವ ಸಂಪುಟ) ಸೂಚನಾ ಪತ್ರವನ್ನು ಹೊರಡಿಸಿದ್ದಾರೆ.
ದಿನಾಂಕ 28.11.2024 ಗುರುವಾರ ಬೆಳಗ್ಗೆ 11 ಗಂಟೆಗೆ ವಿಧಾನ ಸೌಧದ ಸಚಿವ ಸಂಪುಟ ಸಭಾಮಂದಿರದಲ್ಲಿ ಕರೆಯಲಾಗಿದ್ದ ಸಚಿವ ಸಂಪುಟದ 2430 ಸಭೆಯನ್ನು ಅದೇ ಮಧ್ಯಾಹ್ನ 3 ಗಂಟೆಗೆ ಮುಂದೂಡಲಾಗಿದೆ ಎಂದು ಹೇಳಿದ್ದಾರೆ.
ಕೆಲವು ದಿನಗಳ ಹಿಂದೆ ತುಟ್ಟಿಭತ್ಯೆ ಏರಿಕೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದು ವೈರಲ್ ಆಗಿತ್ತು. ಆಗ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಈ ಕುರಿತು ಸ್ಪಷ್ಟನೆ ನೀಡಿತ್ತು. ಡಿಎ ಹೆಚ್ಚಳದ ಕುರಿತು ಸರ್ಕಾರ ಯಾವುದೇ ಆದೇಶವನ್ನು ಹೊರಡಿಸಿಲ್ಲ. ರಾಜ್ಯ ಸರ್ಕಾರಿ ನೌಕರರ ಸಂಘ ಈ ಕುರಿತು ಸರ್ಕಾರದ ಮಟ್ಟದಲ್ಲಿ ಪ್ರಯತ್ನವನ್ನು ನಡೆಸುತ್ತಿದೆ. ಆದರೆ ಆದೇಶ ಪ್ರಕಟವಾಗಬೇಕಿದೆ ಎಂದು ಹೇಳಿತ್ತು.
ನೌಕರರ ಸಂಘದ ಅಧ್ಯಕ್ಷ ಸಿ. ಎಸ್. ಷಡಾಕ್ಷರಿ ಡಿಎ ಏರಿಕೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಆರ್ಥಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಎಲ್. ಕೆ. ಅತೀಕ್ ಅವರಿಗೆ ಪತ್ರ ಬರೆದಿದ್ದರು. ನವೆಂಬರ್ ಮೊದಲ ವಾರವೇ ಈ ಕುರಿತು ಆದೇಶವನ್ನು ಹೊರಡಿಸಬೇಕು ಎಂದು ಬೇಡಿಕೆ ಸಲ್ಲಿಸಿದ್ದರು.
ಮತ್ತೊಮ್ಮೆ ಸಿ. ಎಸ್. ಷಡಾಕ್ಷರಿ ಅವರ ನೇತೃತ್ವದ ನಿಯೋಗ ಇದೇ ವಿಚಾರವಾಗಿ ಎಲ್. ಕೆ. ಅತೀಕ್ ಭೇಟಿಯಾಗಿತ್ತು. ಆಗ ಸೂಕ್ತ ತೀರ್ಮಾನ ಕೈಗೊಳ್ಳುವ ಭರವಸೆ ನೀಡಲಾಗಿತ್ತು. ಆದರೆ ಸರ್ಕಾರ ಇನ್ನೂ ಯಾವುದೇ ಆದೇಶವನ್ನು ಹೊರಡಿಸಿಲ್ಲ. ಇದರಿಂದಾಗಿ ಸರ್ಕಾರಿ ನೌಕರರು ಬೇಸರಗೊಂಡಿದ್ದಾರೆ.












Click it and Unblock the Notifications