Government Employees: ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್; ತುಟ್ಟಿಭತ್ಯೆ 2% ಹೆಚ್ಚಳ: ಜಾರಿ ಯಾವಾಗ?
ಬೆಂಗಳೂರು, ಅಕ್ಟೋಬರ್ 15: ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಶೇ 3 ತುಟ್ಟಿಭತ್ಯೆ (ಡಿಎ) ಹೆಚ್ಚಳಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿದ ಬೆನ್ನಲ್ಲೇ ಕರ್ನಾಟಕ ಸರ್ಕಾರವೂ ಸಹ ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳ ಮಾಡುವ ಮೂಲಕ ದೀಪಾವಳಿ ಹಬ್ಬಕ್ಕೆ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದೆ.
ಹೌದು, ರಾಜ್ಯ ಸರ್ಕಾರಿ ನೌಕರರಿಗೆ ಕರ್ನಾಟಕ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಸರ್ಕಾರಿ ನೌಕರರಿಗೆ 01-07-2025ರಿಂದ ಅನ್ವಯವಾಗುವಂತೆ ಶೇ.2 ತುಟ್ಟಿಭತ್ಯೆಯನ್ನು (DA Hike 2025) ಹೆಚ್ಚಿಸುವ ಕಡತಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುಮೋದನೆ ನೀಡಿದ್ದಾರೆ. ಮುಂದಿನ 2 ರಿಂದ 3 ದಿನಗಳಲ್ಲಿ ಅಧಿಕೃತ ಆದೇಶ ಹೊರಬೀಳಲಿದೆ. ಈ ಬಗ್ಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಮಾಹಿತಿ ನೀಡಿದ್ದಾರೆ.

ಕೇಂದ್ರ ಸರ್ಕಾರ ದಸರಾ ಹಬ್ಬದ ಸಂದರ್ಭದಲ್ಲಿ ಕೇಂದ್ರ ಸರ್ಕಾರಿ ನೌಕರಿಗೆ ಶೇ 3 ರಷ್ಟು ತುಟ್ಟಿಭತ್ಯೆಯನ್ನ ಹೆಚ್ಚಿಸಿತ್ತು. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ಜುಲೈ 1ರಿಂದ ಅನ್ವಯವಾಗುವಂತೆ ಬಾಕಿ ಇರುವ ತುಟ್ಟಿಭತ್ಯೆಯನ್ನು ರಾಜ್ಯ ಸರ್ಕಾರವು ನಗದು ರೂಪದಲ್ಲಿ ಬಿಡುಗಡೆ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರು ಮನವಿ ಮಾಡಿದ್ದರು.
ಅಖಿಲ ಭಾರತ ಬೆಲೆ ಸೂಚ್ಯಂಕವನ್ನಾಧರಿಸಿ ಕೇಂದ್ರ ಸರ್ಕಾರವು ತನ್ನ ನೌಕರರಿಗೆ ತುಟ್ಟಿಭತ್ಯೆಯನ್ನು ಮಂಜೂರು ಮಾಡಿದ ದಿನಾಂಕದಿಂದಲೇ ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆಯನ್ನು ಮಂಜೂರು ಮಾಡುವುದು ಸಹ ಸಂಪ್ರದಾಯವಾಗಿರುತ್ತದೆ. ಹೀಗಾಗಿ ಬಾಕಿ ಇರುವ ತುಟ್ಟಿಭತ್ಯೆ ಬಿಡುಗಡೆಗೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಕೋರಿದ್ದರು.
ಪ್ರಸ್ತುತ ಕೇಂದ್ರ ಸರ್ಕಾರವು ಅಖಿಲ ಭಾರತ ಬೆಲೆ ಸೂಚ್ಯಂಕವನ್ನಾಧರಿಸಿ ಉಲ್ಲೇಖಿತ ಆದೇಶದಲ್ಲಿ ದಿನಾಂಕ: 01-07-2025ರಿಂದ ಅನ್ವಯವಾಗುವಂತೆ ಕೇಂದ್ರ ಸರ್ಕಾರಿ ನೌಕರರಿಗೆ ಶೇ. 3%ರಷ್ಟು ತುಟ್ಟಿಭತ್ಯೆಯನ್ನು ಮಂಜೂರು ಮಾಡಿ ಆದೇಶಿಸಿದೆ. ಆದ್ದರಿಂದ, ಕರ್ನಾಟಕ ರಾಜ್ಯದ ಸರ್ಕಾರಿ ನೌಕರರಿಗೂ ದಿನಾಂಕ: 01-07-2025 ರಿಂದ ಅನ್ವಯವಾಗುವಂತೆ ಶೇ. 3%ರಷ್ಟು ತುಟ್ಟಿಭತ್ಯೆಯನ್ನು ಸಂಪೂರ್ಣ ನಗದು ರೂಪದಲ್ಲಿ ನೀಡಿ ಆದೇಶ ಹೊರಡಿಸಲು ಸಂಬಂಧಪಟ್ಟವರಿಗೆ ನಿರ್ದೇಶನ ನೀಡಲು ಕರ್ನಾಟಕ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಕೋರಿದ್ದರು. ಇದರ ಬೆನ್ನಲ್ಲೇ ಶೇ.2ರಷ್ಟು ತುಟ್ಟಿ ಭತ್ಯೆ ಹೆಚ್ಚಳಕ್ಕೆ ಸಿಎಂ ಅನುಮೋದನೆ ನೀಡಿದ್ದಾರೆ.
ತುಟ್ಟಿಭತ್ಯೆ ಹೆಚ್ಚಳ; ಸರ್ಕಾರಕ್ಕೆ ಧನ್ಯವಾದ
ದೀಪಾವಳಿ ಹಬ್ಬದ ಹೊತ್ತಲಿ ಕರ್ನಾಟಕ ಸರ್ಕಾರವು ಸರ್ಕಾರಿ ನೌಕರರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ. ರಾಜ್ಯ ಸರ್ಕಾರಿ ನೌಕರರಿಗೆ ಶೇ.2 ತುಟ್ಟಿಭತ್ಯೆಯನ್ನು ಹೆಚ್ಚಿಸುವ ಕಡತಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುಮೋದನೆ ನೀಡಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರು ರಾಜ್ಯ ಸರ್ಕಾರಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.












Click it and Unblock the Notifications