Breaking: ಪಂಚಮಸಾಲಿಗೆ 2ಎ ಮೀಸಲಾತಿ: ಗಡುವು ಇಂದು ಅಂತ್ಯ, ಸಂಜೆ ಸಭೆ
ಬೆಂಗಳೂರು, ಡಿಸೆಂಬರ್ 29: ಪಂಚಮಸಾಲಿಗೆ 2ಎ ಮೀಸಲಾತಿ ನೀಡಲು ಆಗ್ರಹಿಸಿ ಬೆಳಗಾವಿಯ 'ವಿರಾಟ್ ಪಂಚಶಕ್ತಿ ಸಮಾವೇಶ'ದಲ್ಲಿ ಸರ್ಕಾರಕ್ಕೆ ನೀಡಿದ್ದ ಗಡುವು ಇಂದಿಗೆ (ಡಿ.29) ಅಂತ್ಯಗೊಳ್ಳಲಿದೆ. 2ಎ ಮೀಸಲಾತಿ ಘೋಷಣೆಯ ನಿರೀಕ್ಷೆಯಲ್ಲಿರುವ ಲಕ್ಷಾಂತರ ಪಂಚಮಸಾಲಿಗಳು ಇಂದು ಸಂಜೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯುವುದನ್ನೆ ಕಾಯುತ್ತಿದ್ದಾರೆ.
ಹೌದು, ಬಹುಬೇಡಿಕೆಯ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಘೋಷಿಸಲು ಮೊದಲು ಹಿಂದುಳಿದ ವರ್ಗಗಳ ಆಯೋಗದ ವರದಿ ಪರಿಶೀಸಲಿಸಲು, ಸಂಪೂರ್ಣವಾಗಿ ಅಧ್ಯಯನ ನಡೆಸಲು ಸಮಯ ಬೇಕು. ಪರಿಶೀಲಿಸಿ ಡಿಸೆಂಬರ್ 28ರಂದು ಸರ್ವಪಕ್ಷಗಳ ಸಭೆ ಕರೆದು ಚರ್ಚಿಸುತ್ತೇನೆ. ನಂತರ ಡಿಸೆಂಬರ್ 29ರಂದು ಸದನದಲ್ಲಿ ಈ ವಿಚಾರವಿಟ್ಟು ಮೀಸಲಾತಿ ಘೋಷಿಸುವುದಾಗಿ ಬಸವರಾಜ ಬೊಮ್ಮಾಯಿ ತಿಳಿಸಿದ್ದರು.
ಮುಖ್ಯಮಂತ್ರಿ ಭರವಸೆಯಂತೆ ಒಂದು ವಾರ ಶಾಂತಿಯುತವಾಗಿ ಕಾಯೋಣ, ನೀಡಿದ ಗಡುವು ಮುಗಿಯುವವರಿಗೂ ತಾಳ್ಮೆಯಿಂದಿರೋಣ ಎಂದು ಪಂಚಮಸಾಲಿ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷರೂ ಆದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದರು. ಅದರಂತೆ ಪಂಚಮಸಾಲಿಗಳು ಸಮಧಾನದಿಂದ ಕಾಯ್ದಿದ್ದಾರೆ.

ಗುರುವಾರ ಸಂಜೆ ಬೆಳಗಾವಿಯಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ 2ಎ ಮೀಸಲಾತಿ ಘೋಷಣೆಯ ಬಗ್ಗೆ ತಜ್ಞರು ಜೊತೆಗೆ ಸಾಧಕ ಬಾಧಕ ಗಳ ಬಗ್ಗೆ ಚರ್ಚೆ ನಡೆಯಲಿದೆ. ಅಲ್ಲದೇ ಸರ್ಕಾರ ಲಿಂಗಾಯತ ಮೀಸಲಾತಿ ಸಮಿತಿ ರಚಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಒಟ್ಟಾರೆ ಸರ್ಕಾರ ಮೀಸಲಾತಿ ಸಂಬಂಧ ಏನು ಘೋಷಿಸಲಿದೆ ಎಂದು ಕೇವಲ ಪಂಚಮಸಾಲಿಗಳು ಮಾತ್ರವಲ್ಲದೇ ಮೀಸಲಾತಿಗೆ ಆಗ್ರಹಿಸಿ ಮನವಿ ನೀಡಿರುವ ಒಕ್ಕಲಿಗರು ಮತ್ತಿತರ ಸಮುದಾಯದವರು ಕಾತರದಿಂದ ಕಾಯುತ್ತಿದ್ದಾರೆ.
2ಎ ಮೀಸಲಾತಿಗೆ ಆಗ್ರಹಿಸಿ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿಗಳ ನೇತೃತ್ವದಲ್ಲಿ ಅನೇಕ ಪ್ರತಿಭಟನೆ, ಸಭೆ, ಮನವಿ ಸಲ್ಲಿಕೆಗಳು ನಡೆದವು. ಕೂಡಲಸಂಗಮದಿಂದ ಬೆಂಗಳೂರಿಗೆ ಪಾದಯಾತ್ರೆ, ಬೆಳಗಾವಿಯಲ್ಲಿ ಲಕ್ಷಾಂತರ ಜನರಿಂದ ಬೃಹತ್ ಸಮಾವೇಶ ನಡೆದವು. ವಿಧಾನಸೌಧ, ಸುವರ್ಣಸೌಧ ಮುತ್ತಿಗೆ ಹಾಕಲು ಪಂಚಮಸಾಲಿಗಳು ಸಜ್ಜಾಗಿದ್ದವು. ಅಂತಿಮವಾಗಿ ಹೋರಾಟಕ್ಕೆ ಮಣಿದ ಸರ್ಕಾರ ಮೀಸಲಾತಿ ಘೋಷಿಸುವುದಾಗಿ ಹೇಳಿ ಕಾಲಾವಕಾಶ ಪಡೆದಿತ್ತು.












Click it and Unblock the Notifications