ನಟ ದರ್ಶನ್ ಬೇಲ್ ಕ್ಯಾನ್ಸಲ್ ಬಗ್ಗೆ ಕೇಳಿ ನನಗೆ ಶಾಕ್ ಆಯ್ತು ಎಂದ ಡಿಕೆ ಶಿವಕುಮಾರ್
ಬೆಂಗಳೂರು, ಆಗಸ್ಟ್ 14: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮತ್ತೆ ಜೈಲುಪಾಲಾಗಲಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ನಟ ದರ್ಶನ್ ಸೇರಿದಂತೆ 7 ಪ್ರಮುಖ ಆರೋಪಿಗಳ ಜಾಮೀನು ರದ್ದು ಮಾಡಲಾಗಿದ್ದು, ದರ್ಶನ್ , ಪವಿತ್ರಾ ಗೌಡ, ಲಕ್ಷಣ್, ಪ್ರದೋಷ್ ಮುಂತಾದವರು ಮತ್ತೆ ಈಗ ಜೈಲು ಸೇರಿದ್ದಾರೆ. ಈ ಕುರಿತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆಗೆ ಡಿ ಕೆ ಶಿವಕುಮಾರ್ ಮಾತನಾಡಿ, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರ ಜಾಮೀನನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿರುವ ಬಗ್ಗೆ ನನಗೆ ಈಗಷ್ಟೇ ಈ ವಿಚಾರ ತಿಳಿಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದನದ ವೇಳೆ ಈ ವಿಚಾರ ತಿಳಿಸಿದರು. ನನಗೆ ಶಾಕ್ ಆಯಿತು. ನ್ಯಾಯಾಲಯದ ತೀರ್ಪಿನ ಬಗ್ಗೆ ನಾವು ಮಾತನಾಡಲು ಬರುವುದಿಲ್ಲ ಎಂದು ತಿಳಿಸಿದರು.

ಹೊತ್ತು ಮುಳುಗುವುದರಲ್ಲಿ ಅಮಾನತು ಮಾಡುತ್ತೇನೆ
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಟಿ.ಎನ್. ಜವರಾಯಿ ಗೌಡರು, ಕೆಂಪೇಗೌಡ ಬಡಾವಣೆ ವಿಚಾರವಾಗಿ ಪ್ರಶ್ನೆ ಕೇಳಿ, ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಅಕ್ರಮ ನಡೆಯುತ್ತಿದೆ ಎಂದು ಗುರುವಾರ ಹೇಳಿದರು. ಇದಕ್ಕೆ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಉತ್ತರಿಸಿದ್ದು, ಕೆಂಪೇಗೌಡ ಬಡಾವಣೆಯಲ್ಲಿ ಯಾವ ಅಧಿಕಾರಿ ಹಣ ಪಡೆದಿದ್ದಾನೆ ಹೇಳಿ, ಹೊತ್ತು ಮುಳುಗುವುದರಲ್ಲಿ ಅವರನ್ನು ಅಮಾನತು ಮಾಡುತ್ತೇನೆ ಎಂದು ಗುಡುಗಿದರು.
ಹಿರಿಯ ನಾಯಕರಾದ ಜವರೇಗೌಡರು ಅನೇಕ ಆರೋಪ ಮಾಡಿದ್ದಾರೆ. ಇಂತಹ ಪ್ರಕರಣ ನಡೆಯುತ್ತಿದ್ದರೆ, ಯಾರು, ಯಾರಿಗೆ ಹಣ ನೀಡಿದ್ದಾರೆ ಎಂದು ರೈತರಿಂದ ದೂರು ಬರೆಸಿ ಕೊಡಿ. ಇಂದು ಸಂಜೆ ಸೂರ್ಯ ಮುಳುಗುವ ಹೊತ್ತಿಗೆ ಹಣ ಪಡೆದಿರುವ ಅಧಿಕಾರಿಯನ್ನು ಅಮಾನತು ಮಾಡುತ್ತೇನೆ. ಆಮೇಲೆ ತನಿಖೆ ನಡೆಸಲಾಗುವುದು. ಭೂಮಿ ಕಳೆದುಕೊಂಡ ರೈತನ ಕಷ್ಟ ಏನು ಎಂಬ ಅರಿವು ನಮಗಿದೆ. ಅವರಿಗೆ ಸಿಗುತ್ತಿರುವುದು 9,600 ಅಡಿಗಳು ಮಾತ್ರ. ಅಭಿವೃದ್ಧಿ ಆದ ನಂತರ ಆತನಿಗೆ ಸ್ವಲ್ಪ ಹಣ ಸಿಗಬಹುದು. 2013 ರಲ್ಲಿ ಯುಪಿಎ ಸರ್ಕಾರ ತೆಗೆದುಕೊಂಡ ದಿಟ್ಟ ತೀರ್ಮಾನದ ನಂತರ ಎರಡು, ಮೂರು ಹಾಗೂ ನಾಲ್ಕು ಪಟ್ಟು ಹಣ ನೀಡುವ ತೀರ್ಮಾನವಾಗಿದೆ. ನಾವು 60:40 ಅನುಪಾತದಲ್ಲಿ ಭೂಸ್ವಾಧೀನ ಮಾಡಿಕೊಳ್ಳುವ ಯೋಜನೆ ಜಾರಿಗೆ ತಂದಿದ್ದೇವೆ ಎಂದರು.
ಭೂಸ್ವಾಧೀನ ಪ್ರಕ್ರಿಯೆಯಿಂದ ಕೆಲವು ಭೂಮಿಯನ್ನು ಬಿಡಲಾಗಿದೆ ಎಂಬ ಅಂಶವನ್ನು ಮಾನ್ಯ ಸದಸ್ಯರು ಹೇಳಿದ್ದು, ಕಾನೂನು ಬಾಹಿರವಾಗಿ ಬಿಟ್ಟಿದ್ದರೆ ಅದನ್ನು ತನಿಖೆ ಮಾಡಲು ಸಿದ್ಧವಿದ್ದೇವೆ. ಅಧಿಸೂಚನೆ ಹೊರಡಿಸಿದ ನಂತರ ಮಾರ್ಗಸೂಚಿಯಂತೆ ಎಲ್ಲವನ್ನೂ ನಡೆಸಬೇಕು. ತಮಗೆ ಬೇಕಾದವರ ಜಮೀನು ಕೈಬಿಡಲು ಸಾಧ್ಯವಿಲ್ಲ. ಆ ಭಾಗದ ಜನಪ್ರತಿನಿಧಿಯಾಗಿ ನೀವು ನಮಗೆ ಪ್ರಸ್ತಾವನೆ ನೀಡಿ. ನಾನು ನಿರ್ದಾಕ್ಷೀಣ್ಯವಾಗಿ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ಶಿವರಾಮ ಕಾರಂತ ಬಡವಾಣೆಯು ಸುಪ್ರೀಂ ಕೋರ್ಟ್ ಮಾರ್ಗದರ್ಶನದಂತೆ ನಿರ್ಮಾಣವಾಗುತ್ತಿದ್ದು, ಈಗ ಒಂದು ಹಂತಕ್ಕೆ ಬಂದಿದೆ. ಸರ್ಕಾರ ಸುಮಾರು 7 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡಿದೆ. ಇದುವರೆಗೂ ಒಬ್ಬ ರೈತನಿಗೂ ಅಲ್ಲಿ ನಿವೇಶನ ನೀಡಲು ಆಗಿಲ್ಲ. ಈ ವಿಚಾರ ಹೇಳಲು ನನಗೆ ನೋವಾಗುತ್ತದೆ. ನಾನು ಬಂದ ನಂತರ ಅರ್ಜಿ ಹಾಕಲು ಅವಕಾಶ ನೀಡಿದೆ. ಆದರೆ ಹೈಕೋರ್ಟ್ ಅರ್ಜಿ ಸ್ವೀಕಾರದಲ್ಲೂ ಯಥಾಸ್ಥಿತಿ ಕಾಯುವಂತೆ ಆದೇಶಿಸಿದೆ.
ಈ ವಿಚಾರವಾಗಿ ಅಡ್ವೊಕೇಟ್ ಜನರಲ್ ಜೊತೆ ಚರ್ಚೆ ಮಾಡುತ್ತಿದ್ದು, ರೈತರ ಆಕ್ಷೇಪದ ವಿಚಾರವಿದ್ದರೆ ಅದನ್ನು ವಿಚಾರಣೆ ಮಾಡಲಿ, ಆದರೆ ಅರ್ಜಿ ಸ್ವೀಕರಿಸುವುದನ್ನೇ ನಿಲ್ಲಿಸಿದರೆ ಕಷ್ಟವಾಗುತ್ತದೆ. ಈ ತಡೆಯಾಜ್ಞೆ ಇರುವ ಕಾರಣ ಸರ್ಕಾರಕ್ಕೆ ಪ್ರತಿ ವರ್ಷ 1 ಸಾವಿರ ಕೋಟಿ ನಷ್ಟವಾಗುತ್ತಿದೆ. ಈ ಜಮೀನು ಅಧಿಸೂಚನೆಯಾಗಿ 15 ವರ್ಷವಾಗಿದೆ. ಆ ಭಾಗದ ಕೆಲವು ರೈತರಿಗೆ ಒಂದು ರೂಪಾಯಿ ಹಣ ಕೂಡ ಸಿಕ್ಕಿಲ್ಲ. ಜಮೀನೂ ಇಲ್ಲವಾಗಿದೆ. ಸರ್ಕಾರ ಬಂಡವಾಳ ಹಾಕಿದ್ದು, ಈಗ ಅರ್ಜಿ ಮೂಲಕ ಬಂದ ಹಣದಿಂದ ಈ ರೈತರಿಗೆ ಹಣ ಪಾವತಿಸಲು ನೆರವಾಗುತ್ತದೆ. ಈ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸಿ ಜಮೀನು ಕಳೆದುಕೊಂಡವರಿಗೆ ನಿವೇಶನ ಹಂಚುವ ವ್ಯವಸ್ಥೆ ಮಾಡುತ್ತೇನೆ. ನ್ಯಾಯಾಲಯ ಈ ವಿಚಾರದಲ್ಲಿ ಆದಷ್ಟು ಬೇಗ ವಿನಾಯಿತಿ ನೀಡುವ ವಿಶ್ವಾಸವಿದೆ ಎಂದರು.












Click it and Unblock the Notifications