ಹನಿಟ್ರ್ಯಾಪ್ ಮಾಡುವವರು ನಿಮ್ಮ ಬಳಿ ಸುಮ್ಮನೆ ಬರುತ್ತಾರೆಯೇ?; ಮಾಡಿದ್ದುಣ್ಣೋ ಮಹಾರಾಯ ಎಂದ ಡಿ ಕೆ ಶಿವಕುಮಾರ್
ಬೆಂಗಳೂರು,ಮಾರ್ಚ್ 21: ಹಿಟ್ ಅಂಡ್ ರನ್ ರೀತಿ ಹನಿಟ್ರ್ಯಾಪ್ ಪ್ರಕರಣವೂ ಆಗಿದೆ. ನಾನು ಈ ಬಗ್ಗೆ ಗುರುವಾರದಂದೇ ಪೊಲೀಸರಿಗೆ ದೂರು ನೀಡಲಿ ಎಂದು ಸಲಹೆ ನೀಡಿದ್ದೆ. ಇದರ ಬಗ್ಗೆ ಕ್ರಮ ತೆಗೆದುಕೊಳ್ಳಲು ತಡ ಮಾಡಬಾರದು. ಇದರ ಬಗ್ಗೆ ಶೀಘ್ರ ತನಿಖೆಯಾಗಬೇಕು ಎಂದು ನಾನೂ ಒತ್ತಾಯ ಮಾಡುತ್ತಿದ್ದೇನೆ ಎಂದು ಬೆಂಗಳೂರಿನ ಸದಾಶಿವನಗರದ ನಿವಾಸದ ಬಳಿಕ ಶುಕ್ರವಾರ ಮಾಧ್ಯಮಗಳ ಜೊತೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪ್ರತಿಕ್ರಿಯಿಸಿದರು.
48 ಶಾಸಕರು ಹನಿಟ್ರ್ಯಾಪ್ ಗೆ ಒಳಗಾಗಿದ್ದಾರೆ, ಸರ್ಕಾರದ ಸಚಿವರಿಗೆ ರಕ್ಷಣೆ ಇಲ್ಲವೇ ಎಂದು ಕೇಳಿದಾಗ, "ಯಾರು ಹೇಳಿದ್ದು ರಕ್ಷಣೆಯಿಲ್ಲವೆಂದು? ಸುಮ್ಮನೆ ಹನಿಟ್ರ್ಯಾಪ್ ಮಾಡುವವರು ನಿಮ್ಮ ಬಳಿ ಬರುತ್ತಾರೆಯೇ? ನೀವು ಹಲೋ ಎಂದರೆ ಅವರು ಹಲೋ ಎನ್ನುತ್ತಾರೆ. ನೀವು ಪ್ರತಿಕ್ರಿಯೆ ನೀಡಲಿಲ್ಲ ಎಂದರೆ ಯಾರಾದರೂ ಮಾತನಾಡಿಸುತ್ತಾರಾ? ಮಾಧ್ಯಮದವರು ಮಾತಾನಾಡಿಸಿದರೆ ನಾನು ಮಾತನಾಡಿಸುತ್ತೇನೆ ಎಂದು ಕಾಲೆಳೆದರು.

ಮಾಡಿದ್ದುಣ್ಣೋ ಮಹಾರಾಯ
ಹನಿಟ್ರ್ಯಾಪ್ ಹಿಂದೆ ಡಿ.ಕೆ.ಶಿವಕುಮಾರ್ ತಂಡವಿದೆ ಎನ್ನುವ ಶಾಸಕ ಮುನಿರತ್ನ ಆರೋಪದ ಬಗ್ಗೆ ಕೇಳಿದಾಗ, "ವಿಧಾನಸೌಧದಲ್ಲಿ ಅವರು ಏನೆಲ್ಲಾ ಮಾಡಿದ್ದರು ಎನ್ನುವುದು ಪೊಲೀಸ್ ದೂರಿನಲ್ಲಿ ಇದೆಯಲ್ಲವೇ? ಆರ್.ಅಶೋಕ್ ಗೆ, ಯಡಿಯೂರಪ್ಪ ಅವರಿಗೆ ಏನೋ ಆಯಿತು ಎಂದು ಬಿಜೆಪಿಯವರೇ ಮಾತನಾಡುತ್ತಿದ್ದರಲ್ಲವೇ? ಅವರ ನೋವನ್ನು ಅವರು ಹೇಳಿಕೊಂಡಿದ್ದಾರೆ. ಮಾಡಿದ್ದುಣ್ಣೋ ಮಾರಾಯ. ಅವರ ಪಕ್ಷದವರಿಗೆ ಹೇಳಿ ಒಂದೊಳ್ಳೆ ಆಸ್ಪತ್ರೆಗೆ ಸೇರಿಸಿ ಪರೀಕ್ಷೆ ಮಾಡಿಸಲಿ. ಅವರಿಗೆ ಒಂದಷ್ಟು ತೊಂದರೆಗಳಿವೆ" ಎಂದು ವ್ಯಂಗ್ಯವಾಡಿದರು.
ಕರ್ನಾಟಕದ ಬಂದ್ ಅವಶ್ಯಕತೆಯಿಲ್ಲ
ನಾಳಿನ (ಮಾರ್ಚ್. 22) ಕರ್ನಾಟಕ ಬಂದ್ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದ ಹಿತಕ್ಕೆ ಒಳ್ಳೆ ಕೆಲಸಕ್ಕೆ ಏನಿದ್ದರೂ ನಾವು ಬೆಂಬಲ ನೀಡುತ್ತೇವೆ. ಕಾನೂನಿನಲ್ಲಿ ಇರುವ ಅವಕಾಶಗಳನ್ನು ಉಪಯೋಗಿಸಿಕೊಳ್ಳಬೇಕು. ಯಾವ ಗಲಾಟೆಗಳನ್ನೂ ಮಾಡದೆ, ಯಾವ ಬಂದ್ ಕೂಡ ಮಾಡದೇ ದಯವಿಟ್ಟು ಎಲ್ಲರೂ ಶಾಂತರೀತಿಯಿಂದ ಇರಬೇಕು ಎಂದು ಮನವಿ ಮಾಡುತ್ತೇನೆ ಎಂದು ಹೇಳಿದರು.
ಕಾವೇರಿ ನದಿ ಮಲೀನತೆ ಹಾಗೂ ನದಿ ಪಾತ್ರಗಳ ಒತ್ತುವರಿ ತಡೆಯಲು ತಂಡ ರಚನೆಗೆ ಕ್ರಮವಹಿಸಲಾಗುವುದು. ಕಾವೇರಿ ನದಿ ಮಲೀನತೆ ಹಾಗೂ ಒತ್ತುವರಿ ಬಗ್ಗೆ ಕೇಳಿದಾಗ, "ಈ ನೆಲ,ಜಲ, ಇತಿಹಾಸ, ಪರಂಪರೆ ಉಳಿಸಲು ಏನು ಬೇಕೋ ಅದೆಲ್ಲವನ್ನು ನಾವು ಮಾಡುತ್ತೇವೆ. ನಿಮ್ಮ (ಮಾಧ್ಯಮಗಳ) ಸಲಹೆ ಇದ್ದರೂ ಸ್ವೀಕರಿಸುತ್ತೇವೆ. ವಿಶ್ವ ಜಲದಿನದ ಅಂಗವಾಗಿ ಒಂದು ಒಂದು ವಾರಗಳ ಕಾಲ ಜಲ ಸಂರಕ್ಷಣೆ ಅಭಿಯಾನ ನಡೆಯಲಿದೆ. ನೀರಿನ ದುರ್ಬಳಕೆ ತಡೆಗಟ್ಟಿ, ಸದ್ಬಳಕೆ ಮಾಡುವಂತೆ ಜಾಗೃತಿ ಮೂಡಿಸುವುದೇ ಕಾವೇರಿ ಆರತಿ ಉದ್ದೇಶ ಎಂದು ತಿಳಿಸಿದರು.
ಕಳೆದ ವರ್ಷ ಉತ್ತಮ ಮಳೆಯಾದಂತೆ ಈ ವರ್ಷವೂ ಉತ್ತಮವಾಗಿ ಮಳೆಯಾಗಿ ಜನರ ಬದುಕು ಹಸನಾಗಲಿ ಎಂದು ತಲಕಾವೇರಿಯಲ್ಲಿ ಪೂಜೆ ಸಲ್ಲಿಸುತ್ತಿದ್ದೇನೆ. ನದಿ ತೀರದಲ್ಲಿ ಕಾವೇರಿ ಆರತಿ ಆಯೋಜಿಸಲು ಈಗಾಗಲೇ ಹಣ ಮೀಸಲಿಡಲಾಗಿದೆ. ಎಷ್ಟು ದಿನಗಳಿಗೆ ಒಮ್ಮೆ ಆರತಿ ಮಾಡಬೇಕು ಎನ್ನುವ ತೀರ್ಮಾನವನ್ನು ಮುಂದೆ ತಿಳಿಸಲಾಗುವುದು. ಆರತಿ ವೇಳೆ ಕೊಡಗಿನ ಕಲಾವಿದರೂ ಭಾಗವಹಿಸುವಂತೆ ನೋಡಿಕೊಳ್ಳಬೇಕು ಎಂದು ಮುಜರಾಯಿ, ನೀರಾವರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರಿಗೆ ಸೂಚನೆ ನೀಡಲಾಗಿದೆ ಎಂದರು.
ನೀರನ್ನು ದುರ್ಬಳಕೆ ಮಾಡುವುದಿಲ್ಲ, ಸುಖಾಸುಮ್ಮನೆ ಖರ್ಚು ಮಾಡುವುದಿಲ್ಲ ಎಂದು ಜನರಿಗೆ ಅರಿವು ಮೂಡಿಸಲಾಗುವುದು ಹಾಗೂ ಪ್ರತಿಜ್ಞಾವಿಧಿ ಭೋದಿಸಲಾಗುವುದು. ಇದಕ್ಕೆ ಸ್ಯಾಂಕಿ ಕೆರೆಯಲ್ಲಿ ಕಾವೇರಿ ಆರತಿಯನ್ನು ಆಯೋಜಿಸಲಾಗಿದೆ. ಜನರು ಆನ್ ಲೈನ್ ಮೂಲಕವೂ ನೀರನ್ನು ಉಳಿಸುತ್ತೇನೆ ಎಂದು ಪ್ರತಿಜ್ಞೆ ತೆಗೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಬಹುದು. ಎಲ್ಲಾ ಸಾರ್ವಜನಿಕರು, ರಾಜಕಾರಣಿಗಳು ಇದರಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.












Click it and Unblock the Notifications