Bengaluru: ಬೀದಿಬದಿ ವ್ಯಾಪಾರಿಗಳು-ಪಾದಾಚಾರಿಗಳ ರಕ್ಷಣೆಗೆ ಕ್ರಮ, ದೆಹಲಿ ಬೇಟಿ ಬಗ್ಗೆ ಡಿಸಿಎಂ ಏನಂದ್ರು?
ಬೆಂಗಳೂರು, ಜುಲೈ 31: ಬೆಂಗಳೂರಿನಲ್ಲಿ ಬೀದಿ ಬದಿ ವ್ಯಾಪಾರಿಗಳ ಅಂಗಡಿ ಮುಂಗಟ್ಟು ತೆರವಿಗೆ ವಿರೋಧ ಹೆಚ್ಚಾಗಿದೆ. ಪ್ರತಿಭಟನೆಯ ಎಚ್ಚರಿಕೆಗಳು ಮಧ್ಯೆ ಸರ್ಕಾರ ಭರವಸೆ ನೀಡಿದೆ. ನಗರದ ಬಹುತೇಕ ರಸ್ತೆಗಳಲ್ಲಿ ಪಾದಚಾರಿ ಮಾರ್ಗದಲ್ಲಿ ಜನರಿಗೆ ಓಡಾಡಲು ಅವಕಾಶವೇ ಇಲ್ಲದಾಗಿದೆ. ಆದ್ದರಿಂದ ಬೀದಿಬದಿ ವ್ಯಾಪಾರಿಗಳ ಹಿತ ರಕ್ಷಣೆಗೆ ಹಾಗೂ ಪಾದಚಾರಿ ಮಾರ್ಗದಲ್ಲಿ ಸುಗಮ ಸಂಚಾರಕ್ಕೆ ಅಗತ್ಯ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾದಾಚಾರಿ ಮಾರ್ಗದಲ್ಲಿ ಬೀದಿಬದಿ ವ್ಯಾಪಾರಿಗಳನ್ನು ಖಾಲಿ ಮಾಡಿಸಬೇಕು ಎಂದು ಅನೇಕ ಒತ್ತಡವಿದೆ. ನಾನೇ ಖುದ್ದಾಗಿ ಈ ಕುರಿತು ಪರಿಶೀಲನೆ ನಡೆಸಿದ್ದೇನೆ. ಅನೇಕ ಕಡೆ ರಸ್ತೆಯೇ ಇಲ್ಲ. ಹಾಗೆಂದ ಮಾತ್ರಕ್ಕೆ ಸರ್ಕಾರ ಬೀದಿ ವ್ಯಾಪಾರಿಗಳ ವಿರುದ್ಧ ಇಲ್ಲ. ಅವರಿಗೆ ತೊಂದರೆ ನೀಡುವ ಉದ್ದೇಶ ನಮ್ಮದಲ್ಲ.

ರಸ್ತೆ ಬದಿ ವ್ಯಾಪಾರ ಮಾಡಿ ಜೀವನ ಕಟ್ಟಿಕೊಳ್ಳುವವರು ಬದುಕಬೇಕು. ಆದರೆ ಜನರ ಓಡಾಟಕ್ಕೆ ಪಾದಚಾರಿ ಮಾರ್ಗದಲ್ಲಿ ದಾರಿ ಬಿಡಬೇಕು. ಹಾಗೇ ದಾರಿ ಬಿಟ್ಟಿದ್ದರೆ ಯಾವುದೇ ರೀತಿ ಅಭ್ಯಂತರವಿಲ್ಲ ಎಂದು ಅವರು ತಿಳಿಸಿದರು.
ಪಾದಾಚಾರಿಗಳು ಸುಗಮವಾಗಿ ಓಡಾಸಲು ಜಾಗ ಬೇಕು. ಕೆಲವೆಡೆ ಇದಕ್ಕೆ ಅವಕಾಶ ಇಲ್ಲದ್ದರಿಂದ ಅನೇಕ ಮಂದಿ ಬಂದು ದೂರು ನೀಡುತ್ತಿದ್ದಾರೆ. ಇಬ್ಬರ ಹಿತ ಕಾಯಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಸುಳ್ಳು ಕೇಸಿನ ಬಗ್ಗೆ ಮುಂದೆ ವಿವರಿಸುತ್ತೇನೆ: ಡಿಕೆಶಿ
ಸುಪ್ರೀಂ ಕೊರ್ಟ್ ಸಿಬಿಐ ಅರ್ಜಿ ವಜಾ ಮಾಡಿ ಹೈಕೋರ್ಟ್ ತಡೆಯಾಜ್ಞೆ ಆದೇಶ ಎತ್ತಿ ಹಿಡಿದ ಕುರಿತು ಪ್ರತಿಕ್ರಿಯಿಸಿದ ಅವರು, ,ಸುಪ್ರೀಂ ತೀರ್ಪು ನೀಡಿರುವ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ನನಗೆ ದೇಶದ ನ್ಯಾಯಾಂಗ ವ್ಯವಸ್ಥೆ ಮೇಲೆ ಗೌರವ, ನಂಬಿಕೆ ಇದೆ. ನ್ಯಾಯ ನೀಡುವ ಸ್ಥಾನದಿಂದ ಅನ್ಯಾಯ ಆಗುವುದಿಲ್ಲ ಎಂಬ ನಂಬಿಕೆ ಇದೆ.

ನನ್ನ ಮೇಲೆ ಏನೇ ಸುಳ್ಳು ಪ್ರಕರಣ ದಾಖಲಿಸಿದರೂ ಸಹ ನ್ಯಾಯಲಯದಲ್ಲಿ ನನಗೆ ನ್ಯಾಯ ಸಿಗಲಿದೆ. ಈ ಸುಳ್ಳು ಕೇಸಿನ ಬಗ್ಗೆ ರಾಜ್ಯದ ಜನರಿಗೆ ಮುಂದೊಂದು ದಿನ ವಿವರಿಸುತ್ತೇನೆ. ಈಗ ಆ ವಿಚಾರವಾಗಿ ಮಾತನಾಡುವುದಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬೆಂಗಳೂರಿಗೆ ಬಂದಾಗ ಈ ಸಭೆ ನಡೆಸಬೇಕಿತ್ತು. ಅದೇ ದಿನ ಉಮ್ಮನ್ ಚಾಂಡಿ ನಿಧನ ಹೊಂದಿದರು. ಆದ ಕಾರಣ ಅವತ್ತು ಇದ್ದಂತಹ ಸಿಎಲ್‌ಪಿ ಮೀಟಿಂಗ್ ಸಹ ರದ್ದಾಗಿತ್ತು. ರಾಜ್ಯ ಸರ್ಕಾರ ಈಗಾಗಲೇ 4 ಗ್ಯಾರಂಟಿಗಳು ಜಾರಿಗೆ ತಂದಿದ್ದು, ಅವುಗಳನ್ನು ಹೇಗೆ ಪ್ರಚಾರ ಮಾಡಬೇಕು. ಹಾಗೂ ಮುಂದಿನ ದಿನಗಳಲ್ಲಿ ಜನಪರ ಯೋಜನೆಗಳನ್ನು ಹೇಗೆ ತೆಗೆದುಕೊಳ್ಳಬೇಕು ಎಂದು ಚರ್ಚೆ ಮಾಡಲಾಗುವುದು ಎಂದು ರಾಹುಲ್ ಗಾಂಧಿ ಅವರು ದೆಹಲಿ ಆಹ್ವಾನ ಕುರಿತು ವಿವರಿಸಿದರು.
ಲೋಕಸಭೆ ಚುನಾವನೆಗೆ ಸಿದ್ಧತೆ ಮಾಡಿಕೊಳ್ಳಬೇಕಿದೆ
ಮುಂದಿನ ಕೆಲವೇ ತಿಂಗಳಲ್ಲಿ 2024ರ ಲೋಕಸಭಾ ಚುನಾವಣೆ ಎದುರಾಗಲಿದೆ. ಹಿರಿಯ ನಾಯಕರಿಗೆ ಜವಾಬ್ದಾರಿ ವಹಿಸಬೇಕಿದೆ. ಅಭ್ಯರ್ಥಿಗಳ ಆಯ್ಕೆ ಹೇಗಿರಬೇಕು ಎಂಬ ವಿಚಾರವಾಗಿ ನಾವು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕಿದೆ. ಎಲ್ಲರು ಒಟ್ಟಾಗಿ ಕೆಲಸ ಮಾಡಬೇಕಿದ್ದು, ಇದಕ್ಕಾಗಿ ಕೆಲವು ಸಲಹೆ ನೀಡಲಿದ್ದೇವೆ.
ಸಾರ್ವಜನಿಕರ ಸಮಸ್ಯೆಗಳ ಕುರಿತು ಅಧಿಕಾರಿಗಳು ಮಾತನಾಡಲಿ. ಆದರೆ ಪಾಲಿಸಿ/ಯೋಜನೆ ವಿಚಾರವಾಗಿ ಅವರು ಬಾಯಿಗೆ ಬಂದಂತೆ ಮಾತನಾಡಲು ಸಾಧ್ಯವಿಲ್ಲ. ಪಾಲಿಸಿ ವಿಚಾರ ಸರ್ಕಾರಕ್ಕೆ ಸಂಬಂಧಿಸಿದ್ದು ಅವರು ಹೇಗೆ ಮಾತನಾಡುತ್ತಾರೆ? ಅವರು ಸ್ಥಳೀಯವಾಗಿ ಜನರ ಸಮಸ್ಯೆಗಳನ್ನು ಬಗೆಹರಿಸುವಂತೆ ಸೂಚನೆ ನೀಡಿದ್ದೇವೆ ಎಂದು ಸರ್ಕಾರಿ ಅಧಿಕಾರಿಗಳು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಬಾರದು ಎಂಬ ವಿಚಾರಕ್ಕೆ ಡಿಕೆ ಶಿವಕುಮಾರ್ ಹೀಗೆ ಪ್ರತಿಕ್ರಿಯಿಸಿದರು.
ದೆಹಲಿ ಬೇಟಿ ಬಳಿಕ ಸಭೆಗೆ ಆಹ್ವಾನ
ಕಾಂಗ್ರೆಸ್ ಶಾಸಕರಲ್ಲಿ ಯಾವುದೇ ಅಸಮಾಧಾನವಿಲ್ಲ. 'ಇಂಡಿಯಾ' ಸಭೆ ಇದ್ದ ಕಾರಣ ಅಂದು ಕರೆಯಲಾಗಿದ್ದ ಶಾಸಕಾಂಗ ಪಕ್ಷದ ಸಭೆ ರದ್ದಾಗಿತ್ತು. ಅದಕ್ಕೆ ಅನೇಕ ಹಿರಿಯ ನಾಯಕರು ಶಾಸಕಾಂಗ ಪಕ್ಷದ ಸಭೆ ಮಾಡಬೇಕು ಎಂದು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸಭೆ ಮಾಡಿದ್ದೇವೆ. ದೆಹಲಿ ಸಭೆಗೆ ಹೋಗಿ ಬಂದ ಬಳಿಕ ನಾನು ಹಾಗೂ ಮುಖ್ಯಮಂತ್ರಿಗಳು ಎಲ್ಲಾ ಜಿಲ್ಲಾ ನಾಯಕರ ಸಭೆ ಕರೆಯಲಿದ್ದೇವೆ ಎಂದು ತಿಳಿಸಿದರು.
ಸರ್ಕಾರ ಮತ್ತು ಪಕ್ಷದ ನಡುವೆ ಸಮನ್ವಯ ಸಾಧಿಸಲು ಸಮಿತಿ ಏಕೆ? ನಾನು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇರುವಾಗ ನಾವೇ ಎಲ್ಲ ಸಮಸ್ಯೆ ಬಗೆಹರಿಸುತ್ತೇವೆ. ಸಮನ್ವಯ ಸಮಿತಿ ಏಕೆ? ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.












Click it and Unblock the Notifications