ಮೆಟ್ರೋ ಅಧಿಕಾರಿಗಳ ಜತೆ ಡಿ ಕೆ ಶಿವಕುಮಾರ್ ಸಭೆ; ನೂತನ ಮಾರ್ಗಗಳು ಯಾವಾಗ ಆರಂಭ? ಇಲ್ಲಿದೆ ಮಾಹಿತಿ
ಬೆಂಗಳೂರು, ಜೂನ್ 07: ದೆಹಲಿ ಮೆಟ್ರೋ ರೈಲು ನಂತರ ನಮ್ಮದು ದೇಶದ ಎರಡನೇ ಅತಿ ದೊಡ್ಡ ಮೆಟ್ರೋ ಆಗಿದ್ದು, ವಿಶ್ವದರ್ಜೆ ಮಟ್ಟದ ಸೇವೆ ನೀಡುತ್ತಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಸಹಯೋಗದಲ್ಲಿ ನಮ್ಮ ಸಂಸ್ಥೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಮಂಗಳವಾರ ಬಿ ಎಂ ಆರ್ ಸಿ ಎಲ್ ಕಚೇರಿಯಲ್ಲಿ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಮೆಟ್ರೋ ರೈಲು ನಿಗಮದ ಅಧಿಕಾರಿಗಳ ಸಭೆ ಮಾಡಿ, ಕಾರ್ಯವೈಖರಿ ಪರಿಶೀಲನೆ ಮಾಡಿದ್ದೇನೆ. ಮೆಟ್ರೋ ಕಾರ್ಯನಿರ್ವಹಣೆ, ಮುಂದಿನ ಕಾರ್ಯಯೋಜನೆ ಕುರಿತು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

48 ಕೋಟಿ ಆದಾಯದಲ್ಲಿ 42 ಕೋಟಿಯಷ್ಟು ಹಣ ಕಾರ್ಯನಿರ್ವಹಣೆಗೆ ಖರ್ಚಾಗುತ್ತಿದೆ. ಬಂಡವಾಳ ಹೂಡಿಕೆ ಹೊರತಾಗಿ ಕೇವಲ 6 ಕೋಟಿ ಲಾಭದಲ್ಲಿದೆ. ಪ್ರಯಾಣಿಕರ ಹೊರತಾಗಿ ಇತರೆ ಮೂಲಗಳಿಂದ ಆದಾಯ ಗಳಿಸುವ ಕುರಿತು ನಾನು ಕೆಲವು ಸಲಹೆ ನೀಡಿದ್ದೇನೆ.
ಜಾಹೀರಾತು ಬಗ್ಗೆ ಇರುವ ನಿರ್ಬಂಧವನ್ನು ಸರಿಪಡಿಸುತ್ತೇವೆ.ಇದರ ಜತೆಗೆ ಅವರಿಗೆ ಸಬ್ಸಿಡಿಯಲ್ಲಿ ಸಿಗುತ್ತಿರುವ ವಿದ್ಯುತ್ ಅನ್ನು ಗ್ರೂಪ್ ಕ್ಯಾಪಿಟಿವ್ ಮೂಲಕ ಮತ್ತಷ್ಟು ಕಡಿಮೆ ದರಕ್ಕೆ ಪಡೆಯುವ ಸಲಹೆ ನೀಡಿದ್ದೇನೆ.
ಇನ್ನೂ ಬೈಯ್ಯಪ್ಪನಹಳ್ಳಿ ಕೆ.ಆರ್ ಪುರಂ ಮೆಟ್ರೋ ಜುಲೈ ವೇಳೆಗೆ, ಕೆಂಗೇರಿ ಹಾಗೂ ಚಲಘಟ್ಟ ಆಗಸ್ಟ್ ಅಥವಾ ಸೆಪ್ಟೆಂಬರ್ ನಲ್ಲಿ, ನಾಗಸಂದ್ರ ಹಾಗೂ ಮಾದವಾರ ಸೆಪ್ಟೆಂಬರ್, ಅಕ್ಟೋಬರ್ ವೇಳೆಗೆ ಸಿದ್ಧವಾಗಬಹುದು. ಇನ್ನು ನೂತನ ಮಾರ್ಗ ಬೊಮ್ಮಸಂದ್ರದಿಂದ ಆರ್.ವಿ ರಸ್ತೆ ಮಾರ್ಗ ಅಕ್ಟೋಬರ್ ನವೆಂಬರ್ ವೇಳೆಗೆ ಆಗಲಿದೆ.
ವಿಮಾನ ನಿಲ್ದಾಣಕ್ಕೆ ಮೆಟ್ರೋ ನಿಲ್ದಾಣಕ್ಕೆ ಸಂಪರ್ಕ ಮಾರ್ಗ 2026ರ ಜೂನ್ ವೇಳೆಗೆ ಪೂರ್ಣಗೊಳ್ಳಲಿದೆ. ಸಿಲ್ಕ್ ಬೋರ್ಡ್ ನಿಂದ ಕೆ.ಆರ್ ಪುರಂವರೆಗಿನ ಮಾರ್ಗ ಕೂಡ ಇದೇ ಸಮಯದಲ್ಲಿ ಪೂರ್ಣಗೊಳ್ಳಲಿದೆ ಎಂದು ಮಾಹಿತಿ ನೀಡಿದರು.

2ನೇ ಹಂತದ ಯೋಜನೆಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅವರು ಒಪ್ಪಿಗೆ ನೀಡಬೇಕಿದೆ. 3ಎ ಹಂತದ ಯೋಜನೆಯಲ್ಲಿ ಸರ್ಜಾಪುರದಿಂದ ಹೆಬ್ಬಾಳದವರೆಗೆ ಸಮೀಕ್ಷೆ ನಡೆಯುತ್ತಿದೆ. ಮುಂದೆ ಇದನ್ನು ಎಲ್ಲೆಲ್ಲಿ ವಿಸ್ತರಣೆ ಮಾಡಬಹುದು ಎಂದು ಸಮೀಕ್ಷೆ ಮಾಡಲು ಸೂಚಿಸಿದ್ದೇನೆ.
ಮೂರನೇ ಹಂತದ ಯೋಜನೆಗೆ ಕೇಂದ್ರ ಸರ್ಕಾರ ಇನ್ನು ಅನುಮತಿ ನೀಡಬೇಕಿದೆ. ಕೆಲವು ದಾಖಲೆಗಳನ್ನು ಕೇಳಿದ್ದು, ಅವುಗಳನ್ನು ಒದಗಿಸಲಾಗಿದೆ. ನಾನು ದೆಹಲಿಗೆ ಹೋಗಿ ಸಂಬಂಧಪಟ್ಟ ಸಚಿವರನ್ನು ಭೇಟಿ ಮಾಡಿ ಚರ್ಚೆ ಮಾಡುತ್ತೇನೆ ಎಂದು ತಿಳಿಸಿದರು.
ಮೆಟ್ರೋ ಕಾಮಗಾರಿ ವಿಳಂಬವಾಗುತ್ತಿರುವ ವಿಚಾರವಾಗಿ ಮಾತನಾಡಿ, ಇಂದಿನ ಚರ್ಚೆಯಲ್ಲಿ ಅಧಿಕಾರಿಗಳು ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ. ರಾತ್ರಿ ವೇಳೆ ಈ ಕಾಮಗಾರಿಗಳು ನಡೆಯುತ್ತಿವೆ. ಹಗಲಲ್ಲಿ ಸಿಮೆಂಟ್, ಸಾಮಗ್ರಿ ತಲುಪಿಸಲು ಆಗುತ್ತಿಲ್ಲ. ಈ ವಿಚಾರವಾಗಿ ಪೊಲೀಸರ ಜತೆ ಸಭೆ ಮಾಡಬೇಕು. ಅದನ್ನು ಮಾಡುತ್ತೇನೆ. ಈ ವಿಚಾರದಲ್ಲಿ ಪೊಲೀಸರು ಹಾಗೂ ಸಾರ್ವಜನಿಕರು ಸಹಕಾರ ನೀಡಬೇಕು ಎಂದರು.












Click it and Unblock the Notifications