ಚನ್ನಪಟ್ಟಣ ಉಪಚುನಾವಣೆ: ಅಚ್ಚರಿಯ ಅಭ್ಯರ್ಥಿ ಕಣಕ್ಕಿಳಿಸುವ ಲೆಕ್ಕಾಚಾರದಲ್ಲಿ ಕಾಂಗ್ರೆಸ್
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಸೋಲು ಕಂಡಿರುವ ಡಿಕೆ ಸುರೇಶ್ ಅವರಿಗೆ ರಾಜಕೀಯ ಭವಿಷ್ಯವನ್ನು ಕಟ್ಟಿಕೊಡುವ ಉದ್ದೇಶದಿಂದ, ಡಿಕೆ ಶಿವಕುಮಾರ್ ಅವರು ಕನಕಪುರ ಕ್ಷೇತ್ರವನ್ನು ಸಹೋದರನಿಗೆ ಬಿಟ್ಟುಕೊಡುತ್ತಾರೆ ಎಂಬ ಮಾತು ಇತ್ತು. ಆದರೆ ಈಗ ಈ ಎಲ್ಲ ಸುದ್ದಿಗಳಿಗಿಂತಲೂ ವ್ಯಾಪಕವಾಗಿ ಇನ್ನೊಂದು ಹೆಸರು ಉಡಾಡುತ್ತಿದೆ. ಈ ಹೆಸರು ನಿಜಕ್ಕೂ ಕಾಂಗ್ರೆಸ್ ಪಾಳಯದಲ್ಲಿ ನವ ಉತ್ಸಾಹ ತುಂಬುವುದರಲ್ಲಿ ಎರಡು ಮಾತಿಲ್ಲ.
ರಾಜಕೀಯದಲ್ಲಿ ಅಪಾರ ಅನುಭವ ಹೊಂದಿರುವ ಡಿಕೆ ಶಿವಕುಮಾರ್, ಚನ್ನಪಟ್ಟಣ ಕ್ಷೇತ್ರದಲ್ಲಿನ ಉಪಚುನಾವಣೆಯನ್ನು ಗೆಲ್ಲಬೇಕೆಂದು ಪ್ಲ್ಯಾನ್ ಮಾಡಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರು ಚನ್ನಪಟ್ಟಣದಲ್ಲಿ ಈಗಾಗಲೇ ಟೆಂಪಲ್ ರನ್ ನಡೆಸಿ, ಮುಖಂಡರ ಸಭೆ ನಡೆಸಿದ್ದಾರೆ. ಈ ಬೆಳವಣಿಗೆಗಳನ್ನು ನೋಡಿದ ಮೇಲೆ ಡಿಕೆಶಿ ಚನ್ನಪಟ್ಟಣದಿಂದ ಅಖಾಡಕ್ಕೆ ಇಳಿಯುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಚಿತ್ರಣವೇ ಬೇರೆಯ ರೀತಿ ಕಾಣುತ್ತಿದೆ.

ಪ್ರತಿಷ್ಠೆಯ ಕಣ
ಡಿಕೆ ಶಿವಕುಮಾರ್ ಅಂದರೆನೇ ಹಾಗೆ, ಯಾವುದೇ ಕೆಲಸವನ್ನು ಕೈಗೆ ತೆಗೆದುಕೊಂಡರೆ ಶತಾಯ ಗತಾಯ ಸಾಧಿಸಿಯೇ ತಿರುವುದು ಅವರ ಮನಸ್ಥಿತಿ. ಕರ್ನಾಟಕದಲ್ಲಿ ಈ ಬಾರಿ ಮೂರು ಕ್ಷೇತ್ರಗಳಲ್ಲಿ ಉಪಚುನಾವಣೆಗಳು ನಡೆಯಲಿವೆ. ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಂದ ತೆರವಾದ ಶಿಗ್ಗಾಂವ ಕ್ಷೇತ್ರ, ಸಂಡೂರು ಕ್ಷೇತ್ರ ಹಾಗೂ ಚನ್ನಪಟ್ಟಣ. ಈ ಎಲ್ಲ ಕ್ಷೇತ್ರಗಳಿಗಿಂತಲೂ ಡಿಕೆಶಿ ಅವರಿಗೆ ಚನ್ನಪಟ್ಟಣ ಪ್ರತಿಷ್ಠೆಯ ಕಣವಾಗಿದೆ. ಹೀಗಾಗಿ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸುವುದು ಶಿವಕುಮಾರ್ ಅವರಿಗೆ ಸವಾಲಾಗಿದೆ.
ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಜಯ ಸಾಧಿಸಿ, ಈಗ ಕೇಂದ್ರ ಸಚಿವರಾಗಿದ್ದಾರೆ. ಹೀಗಾಗಿ ಅವರು ಚನ್ನಪಟ್ಟಣ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಸ್ಥಾನಕ್ಕೆ ಉಪಚುನಾವಣೆಗಳು ನಡೆಯಬೇಕಿದೆ. ಈ ಹಿನ್ನಲೆಯಲ್ಲಿ ಡಿಕೆ ಶಿವಕುಮಾರ್ ಮಾಸ್ಟರ್ ಪ್ಲ್ಯಾನ್ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಈ ಬಾರಿ ಉಪ ಚುನಾವಣೆಯಲ್ಲಿ ಡಿಕೆ ಶಿವಕುಮಾರ್ ಚನ್ನಪಟ್ಟಣದಿಂದ ತಮ್ಮ ಕುಟುಂಬ ಸದಸ್ಯರಿಗೆ ಟಿಕೆಟ್ ಕೊಡಿಸಬಹುದು.

ಚನ್ನಪಟ್ಟಣದಲ್ಲಿ ಯಾರಿಗೆ ಮಣೆ?
ಡಿಕೆ ಸುರೇಶ್ ಈ ಕ್ಷೇತ್ರದಿಂದ ಸ್ಪರ್ಧಿಸುವುದು ಡೌಟ್.. ಹೀಗಿರುವಾಗ ಡಿಕೆ ಶಿವಕುಮಾರ್ ತಮ್ಮದೇ ಕುಟುಂಬದ ಇನ್ನೊಬ್ಬ ಸದಸ್ಯರಿಗೆ ಅಖಾಡ ಸಿದ್ಧಗೊಳಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಅಂದಹಾಗೆ ಈ ಬಾರಿ ಡಿಕೆ ಶಿವಕುಮಾರ್ ಅವರ ಮಗಳು ಐಶ್ವರ್ಯ ಅಖಾಡಕ್ಕೆ ಇಳಿಯಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.
ಚುನಾವಣಾ ಪ್ರಚಾರದಲ್ಲಿ ಭಾಗಿ
ಈಗಾಗಲೇ ಡಿಕೆ ಸುರೇಶ್ ಅವರ ಪರ ಲೋಕಸಭಾ ಚುನಾವಣೆಯಲ್ಲಿ ಪ್ರಚಾರ ಮಾಡಿರುವ ಅನುಭವ ಹೊಂದಿರುವ ಐಶ್ವರ್ಯ, ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಣಕ್ಕೆ ಇಳಿಯಬಹುದು ಹೇಳಲಾಗುತ್ತಿದೆ. ಆದರೆ ಐಶ್ವರ್ಯ ತಮಗೆ ರಾಜಕೀಯ ಕ್ಷೇತ್ರದಲ್ಲಿ ಆಸಕ್ತಿ ಇಲ್ಲ ಎಂದು ಹೇಳಿದ್ದರು. ಆದರೆ ಈ ಬಗ್ಗೆ ಇನ್ನು ಯಾವುದೇ ಖಚಿತ ಮಾಹಿತಿಗಳು ಹೊರ ಬಂದಿಲ್ಲ. ಚನ್ನಪಟ್ಟಣದಿಂದ ಈ ಬಾರಿ ಮಹಿಳಾ ಅಭ್ಯರ್ಥಿ ಕಣಕ್ಕೆ ಇಳಿಯಬಹುದು ಎಂದು ಹೇಳಲಾಗುತ್ತಿದೆ.
ಒಂದು ವೇಳೆ ಇದು ನಿಜವಾದಲ್ಲಿ ನಿಜಕ್ಕೂ ಚುನಾವಣಾ ಕಣ ರಂಗೇರಲಿದೆ. ಬಿಜೆಪಿ ಹಾಗೂ ಜೆಡಿಎಸ್ ತನ್ನ ಅಭ್ಯರ್ಥಿಗಳನ್ನು ಹುಡುಕುತ್ತಿರುವಾಗ ಕಾಂಗ್ರೆಸ್ ಮಾಸ್ಟರ್ ಪ್ಲ್ಯಾನ್ ವರ್ಕ್ ಆಗುತ್ತದಾ ಎಂಬುದನ್ನು ಕಾದುನೋಡಬೇಕಿದೆ.












Click it and Unblock the Notifications