ಕಾವೇರಿ ನೀರು ಬಿಡುಗಡೆ ವಿವಾದ: ರಾಜಕೀಯ ಉದ್ದೇಶಕ್ಕಾಗಿ ಬಿಜೆಪಿ ಪ್ರತಿಭಟನೆ ಎಂದ ಡಿಕೆಶಿ
ಕಾವೇರಿ ನೀರು ಬಿಡುಗಡೆ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ. ಎತ್ತಿನಹೊಳೆ ಯೋಜನೆ ಸಂಬಂಧ ಹಾಸನ ಜಿಲ್ಲೆ ಸಕಲೇಶಪುರದ ಹೆಬ್ಬನಹಳ್ಳಿ ಪವರ್ ಸಬ್ ಸ್ಟೇಷನ್ ಮತ್ತು ದೊಡ್ಡನಾಗರ ಪಂಪ್ ಹೌಸ್‌ಗೆ ಮಂಗಳವಾರ ಭೇಟಿ ನೀಡಿದ ಸಂದರ್ಭದಲ್ಲಿ ಕಾವೇರಿ ವಿವಾದ ಕುರಿತಂತೆ ಮಾತನಾಡಿದ್ದಾರೆ.
ಕಾವೇರಿ ವಿಚಾರವಾಗಿ ಪ್ರತಿಭಟನೆ ನಡೆಯುತ್ತಿರುವ ಬಗ್ಗೆ ಪ್ರಶ್ನಿಸಿದಾಗ, ರಾಜಕೀಯ ಉದ್ದೇಶಕ್ಕಾಗಿ ನಡೆಯುತ್ತಿರುವ ಪ್ರತಿಭಟನೆ ನಿಲ್ಲಿಸಲು ಸಾಧ್ಯವೇ? ಅವರಿಗೆ ತಮ್ಮ ಅಸ್ತಿತ್ವ ತೋರಿಸಿಕೊಳ್ಳಬೇಕು. ನೀರು ಎಷ್ಟಿದೆ ಎಂಬ ವಾಸ್ತವಾಂಶ ಹೇಳಿದ್ದೇನೆ ಎಂದು ಹೇಳಿದರು.

ತಮಿಳುನಾಡಿಗೆ ತೊಂದರೆ ಆಗಿದೆ ಎಂದು ಅವರು ಕೋರ್ಟ್ ಮೊರೆ ಹೋಗಿದ್ದು, ನಮಗೂ ತೊಂದರೆ ಆಗಿದೆ. ನಾವು ನಮ್ಮ ರೈತರಿಗೆ ನೀರಿನ ಅಭಾವದ ಬಗ್ಗೆ ಹೇಳಿದ್ದೇವೆ. ಸಹಜ ಮಳೆ ಸಮಯದಲ್ಲಿ ನಾವು 70 ಟಿಎಂಸಿ ನೀರು ಬಿಡಬೇಕು. ಮಳೆ ಕೊರತೆ ಇದ್ದಾಗ 32 ಟಿಎಂಸಿ ನೀರು ಬಿಡಬೇಕು. ಈಗಾಗಲೇ ನಾವು 24 ಟಿಎಂಸಿ ನೀರು ಬಿಟ್ಟಿದ್ದು, ಇನ್ನೂ 8.5 ಟಿಎಂಸಿ ನೀರು ಬಿಡಬೇಕಿದೆ ಎಂದು ಹೇಳಿದರು.
ನಮಗೆ ನೀರಿನ ಕೊರತೆ ಇದೆ. ಹೀಗಾಗಿ ಅವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ನೀರು ಬಿಡುವ ಅಧಿಕಾರ ಬಿಜೆಪಿ ಕೈಯಲ್ಲಿ ಇದೆ. ನಾವು ಸರ್ವಪಕ್ಷ ಸಭೆ ಕರೆದಿದ್ದು, ಮುಂದೆ ಏನು ಮಾಡಬೇಕು ಎಂದು ಚರ್ಚೆ ಮಾಡುತ್ತೇವೆ. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ತಿಳಿಸಿದರು.
ಬೆದರಿಕೆ ಹಾಕಿದ್ದರೆ ದೂರು ಕೊಡಿಸಲಿ
ಅಧಿಕಾರ ದುರ್ಬಳಕೆ ಮಾಡಿಕೊಂಡು ಜೆಡಿಎಸ್ ಶಾಸಕರಿಗೆ ಬೆದರಿಕೆ ಹಾಕಿ ಕಾಂಗ್ರೆಸ್ ಪಕ್ಷಕ್ಕೆ ಕರೆಯುತ್ತಿದ್ದಾರೆ ಎಂಬ ಕುಮಾರಸ್ವಾಮಿ ಅವರ ಆರೋಪಕ್ಕೆ ಸಂಬಂಧಿಸಿದಂತೆ ಕೇಳಿದಾಗ, "ಯಾರಿಗೆ ಬೆದರಿಕೆ ಹಾಕಲಾಗಿದೆಯೋ ಅವರಿಂದ ಪೊಲೀಸರಿಗೆ ದೂರು ಕೊಡಿಸಲಿ. ಅದಕ್ಕೆ ಅವಕಾಶ ಇದೆಯಲ್ಲ" ಎಂದು ತಿಳಿಸಿದರು.
ರಾಜ್ಯದಲ್ಲಿ ಕಾಡಾನೆ ದಾಳಿಯಿಂದ ಮೃತಪಟ್ಟವರ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, "ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಎಸ್ಪಿ ಜೊತೆ ಮಾತನಾಡುತ್ತೇನೆ. ಸರ್ಕಾರ ಎಷ್ಟೇ ಪ್ರಯತ್ನ ಪಟ್ಟರೂ, ಕಾಡಾನೆಗಳು ನಡೆದಿದ್ದೇ ದಾರಿ. ಅವುಗಳನ್ನು ನಿಯಂತ್ರಣ ಮಾಡುವುದು ಕಷ್ಟ. ಈ ಬಗ್ಗೆ ಮಾಹಿತಿ ಪಡೆದು ಮಾತನಾಡುತ್ತೇನೆ" ಎಂದು ತಿಳಿಸಿದರು.
ಗುತ್ತಿಗೆದಾರರಿಗೆ ಅನ್ಯಾಯ ಆಗಲ್ಲ
ಬಿಬಿಎಂಪಿಯಲ್ಲಿ 25 ಲಕ್ಷದವರೆಗೆ ಸಣ್ಣ ಗುತ್ತಿಗೆದಾರರ ಬಿಲ್ ಪಾವತಿ ಆಗಿರುವ ಬಗ್ಗೆ ಕೇಳಿದಾಗ, "ಕೆಲಸ ಮಾಡಿರುವ ಎಲ್ಲರಿಗೂ ಹಣ ನೀಡುತ್ತೇವೆ. ಕೆಲಸ ಮಾಡಿರುವವರಿಗೆ ಸಮಯ ವ್ಯರ್ಥ ಮಾಡದೆ ಹಣ ನೀಡಿ ಎಂದು ನಿರ್ದೇಶನ ನೀಡಿದ್ದೇನೆ" ಎಂದು ತಿಳಿಸಿದರು. ಕೆಲಸ ಮಾಡಿದವರಿಗೆ ಯಾವುದೇ ತೊಂದರೆ ಇಲ್ಲ. ಅವರು ಚಿಂತಿಸುವ ಅಗತ್ಯ ಇಲ್ಲ ಎಂದು ಹೇಳಿದ್ದಾರೆ.












Click it and Unblock the Notifications