Karnataka Rains: 'ಪೆಂಗಲ್' ಚಂಡಮಾರುತದಿಂದ ರಾಜ್ಯದ ಈ ಜಿಲ್ಲೆಗಳಿಗೆ ಧಾರಾಕಾರ ಮಳೆ! ಯೆಲ್ಲೋ ಅಲರ್ಟ್
ಬೆಂಗಳೂರು, ನವೆಂಬರ್ 28: ಕರ್ನಾಟಕ ರಾಜ್ಯದ ಮೇಲೆ ಕೊನೆಗೂ ಚಂಡಮಾರುತ 'ಪೆಂಗಲ್' (Cyclone Fenga) ಪ್ರಭಾವ ಶುರುವಾಗಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಬುಧವಾರದವರೆಗೂ ಚಂಡಮಾರುತದ ಪ್ರಭಾವ ಇಲ್ಲ ಎನ್ನಲಾಗಿತ್ತು. ಆದರೆ ಗುರುವಾರ ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆ ವರದಿ ಪ್ರಕಾರ, ಎರಡು ದಿನ ರಾಜ್ಯದಲ್ಲಿ ಅದರಲ್ಲೂ ದಕ್ಷಿಣ ಒಳನಾಡಿನಲ್ಲಿ ಇನ್ನಿಲ್ಲದಂತೆ ಭಾರೀ ಮಳೆ ಸುರಿಯಲಿದೆ. ಹೀಗಾಗಿ ಅನೇಕ ಜಿಲ್ಲೆಗಳಲ್ಲಿ 'ಯೆಲ್ಲೋ ಅಲರ್ಟ್' ಕೊಡಲಾಗಿದೆ ಎಂದು IMD ತಿಳಿಸಿದೆ.
ಕರ್ನಾಟಕದ ದಕ್ಷಿಣ ಒಳನಾಡು ಜಿಲ್ಲೆಗಳಾದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ, ದಾವಣಗೆರೆ, ಬಳ್ಳಾರಿ ಹಾಗೂ ಚಿತ್ರದುರ್ಗ ಜಿಲ್ಲೆಗಳ ಮೇಲೆ ಚಂಡಮಾರುತದ ಪ್ರಭಾವ ಉಂಟಾಗಲಿದೆ ಎಂದು ಹವಾಮಾನ ಇಲಾಖೆ ವರದಿ ದೃಢಪಡಿಸಿದೆ.

ಈ ಮೇಲಿನ ಎಲ್ಲ ಜಿಲ್ಲೆಗಳಲ್ಲಿ ಡಿಸೆಂಬರ್ ತಿಂಗಳು ಮೊದಲ 02 ದಿನವೇ ಭರ್ಜರಿ ಆರ್ಭಟ ಕಂಡು ಬರಲಿದೆ. ಡಿಸೆಂಬರ್ 1 ಮತ್ತು 2ರಂದು ಈ ಜಿಲ್ಲೆಗಳಲ್ಲಿ ಸುಮಾರು 110 ಮಿಲಿ ಮೀಟರ್ ಭಾರೀ ಮಳೆ ಆಗುವ ಸಾಧ್ಯತೆ ಇದೆ. ಹೀಗಾಗಿ ಈ ಎಲ್ಲ ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ಘೋಷಿಸಲಾಗಿದೆ ಎಂದು ಗುರುವಾರ ಹವಾಮಾನ ಇಲಾಖೆ ಬಿಡುಗಡೆ ಮಾಡಿರುವ ಮುನ್ಸೂಚನೆಯಲ್ಲಿ ತಿಳಿಸಲಾಗಿದೆ.
ಈಗಾಗಲೇ ರಾಜ್ಯದಲ್ಲಿ ವಿಪರೀತ ಚಳಿ ವಾತಾವರಣ ಉಂಟಾಗಿದೆ. ಮೈ ಕೊರೆವ ಚಳಿಗೆ ಜನರು ನಡುಗಿದ್ದಾರೆ. ಇದರ ಬೆನ್ನಲ್ಲೆ ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ವಾಯುಭಾರ ಕುಸಿತವು ತೀವ್ರಗೊಂಡು 'ಫೆಂಗಲ್' ಚಂಡಮಾರುತವಾಗಿ ಬದಲಾಗಿರುವುದನ್ನು ಹವಾಮಾನ ತಜ್ಞರು ಖಚಿತ ಪಡಿಸಿದ್ದಾರೆ. ಈ ಹಿಂದೆ 'ಆಸ್ನಾ' ಮತ್ತು 'ಡಾನಾ' ಚಂಡಮಾರುತದಿಂದ ಕಂಗೆಟ್ಟಿದ್ದ ಕರಾವಳಿ ರಾಜ್ಯಗಳಿಗೆ ಇದೀಗ ಮತ್ತೆ ನೆರೆ, ಪ್ರವಾಹ ಭೀತಿ ಶುರುವಾಗಿದೆ.

ಉತ್ತರಕ್ಕೆ ಭಾರೀ ಮಳೆ ಇಲ್ಲ: ಎಲ್ಲೆಡೆ ಚಳಿ ಹೆಚ್ಚಳ
ರಾಜ್ಯದ ಉತ್ತರ ಒಳನಾಡಿನ ಹಾವೇರಿ, ಧಾರವಾಡ, ಬೆಳಗಾವಿ, ವಿಜಯಪುರ, ಕೊಪ್ಪಳ, ಬೀದರ್, ಯಾದಗಿರಿ, ಗದಗ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಶುಷ್ಕ ವಾತಾವರಣ ಮುಂದುವರಿಯಲಿದೆ. ಬೆಳಗ್ಗೆ ಮತ್ತು ಸಂಜೆಯಿಂದ ರಾತ್ರಿವರೆಗೆ ವ್ಯಾಪಕ ಚಳಿ ಕಂಡು ಬರಲಿದೆ. ಇಲ್ಲಿ ಭಾರೀ ಮಳೆ ಆಗುವುದು ಅನುಮಾನ ಎನ್ನಲಾಗಿದೆ.
ಕರ್ನಾಟಕ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಚಳಿ ಹೆಚ್ಚಾಗಿದ್ದು, ಮಬ್ಬು ವಾತಾವರಣ ಕಂಡು ಬರುತ್ತಿದೆ. ಡಿಸೆಂಬರ್ ಮೊದಲ ವಾರವೇ ರಾಜ್ಯಕ್ಕೆ ಭಾರೀ ಮಳೆಯ ಆಗಮನವಾಗಲಿದೆ. ಇದು ಒಂದು ರೀತಿಯಲ್ಲಿ ಹಿಂಗಾರು ಬಿತ್ತನೆ ಮಾಡಿದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಜನ ಜೀವನ ಅಸ್ತವ್ಯಸ್ತ ಮಾಡುವಷ್ಟರ ಮಟ್ಟಿಗೆ ಮಳೆ ಸುರಿದರೆ ವ್ಯಾಪಾರ, ಜನರು, ಮಕ್ಕಳ ಆರೋಗ್ಯ ಮೇಲೆ ಪ್ರಭಾವ ಬೀರುತ್ತದೆ. ದೈನಂದಿನ ಕಾರ್ಯ ಚಟುವಟಿಕೆಗಳಿಗೆ ತೊಂದರೆ ಆಗಲಿದೆ.












Click it and Unblock the Notifications