ವಾಯುಭಾರ ಕುಸಿತ; ಕರ್ನಾಟಕದ ಕರಾವಳಿ ಭಾಗದ ಜನರಿಗೆ ಸೂಚನೆಗಳು
ಬೆಂಗಳೂರು, ಜೂನ್ 06: ನೈಋತ್ಯ ಮುಂಗಾರು ಮಳೆಯಲ್ಲಿದ್ದ ಜನರಿಗೆ ನಿರಾಸೆಯಾಗಿಲ್ಲ. ಮುಂಗಾರು ಆಗಮನ ತಡವಾದರೂ ಸಹ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಉಂಟಾಗಿರುವ ಚಂಡಮಾರುತದ ಪ್ರಭಾವದಿಂದ ಕರ್ನಾಟಕದಲ್ಲಿ ಮಳೆ ಆರಂಭವಾಗಿದೆ. ಮಂಗಳವಾರ ಮಧ್ಯಾಹ್ನ ಬೆಂಗಳೂರು ನಗರದ ವಿವಿಧ ಪ್ರದೇಶಗಳಲ್ಲಿ ಮಳೆ ಸುರಿಯುತ್ತಿದೆ.
ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಅರಬ್ಬಿ ಸಮುದ್ರದಲ್ಲಿನ ವಾಯುಭಾರ ಕುಸಿತದಿಂದ ರಾಜ್ಯದ ಕರಾವಳಿ ಭಾಗದಲ್ಲಿ ಮುಂದಿನ 4 ದಿನಗಳಲ್ಲಿ ಸಮುದ್ರದ ಅಲೆಗಳಲ್ಲಿ ಏರಿಳಿತ ಉಂಟಾಗುವ ಮತ್ತು ಮಳೆಯಾಗುವ ಸಾಧ್ಯತೆಯಿರುತ್ತದೆ ಎಂದು ಉಡುಪಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಹೇಳಿದೆ.

ಮಳೆಯ ಮುನ್ಸೂಚನೆ ಹಿನ್ನಲೆಯಲ್ಲಿ ಉಡುಪಿ ಜಿಲ್ಲಾಡಳಿತ (ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ)ದಿಂದ ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರಿಗೆ ಸೂಚನೆಗಳನ್ನು ನೀಡಲಾಗಿದೆ. ಈ ಸಂಧರ್ಭದಲ್ಲಿ ಮೀನುಗಾರರು ಮೀನುಗಾರಿಕೆಗಾಗಿ ಸಮುದ್ರಕ್ಕೆ ತೆರಳುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದೆ.
ಸಾರ್ವಜನಿಕರು/ ಪ್ರವಾಸಿಗರು ಸಮುದ್ರ/ ನದಿ ತೀರ ಪ್ರದೇಶಗಳಲ್ಲಿ ಇಳಿಯದಂತೆ ಕಟ್ಟೆಚ್ಚರ ವಹಿಸಬೇಕು ಎಂದು ಮನವಿ ಮಾಡಲಾಗಿದೆ. ಈ ಸಂದರ್ಭದಲ್ಲಿ ಮಕ್ಕಳು/ ಸಾರ್ವಜನಿಕರು ಸಮುದ್ರ ತೀರ, ಅಪಾಯಕಾರಿ ವಿದ್ಯುತ್ ಕಂಬ/ ಕಟ್ಟಡ/ ಮರಗಳ ಹತ್ತಿರ/ ಕೆಳಗೆ ನಿಲ್ಲಬಾರದು ಮತ್ತು ನೆರೆ ಪೀಡಿತ ತಗ್ಗು ಪ್ರದೇಶದಲ್ಲಿ ವಾಸಿಸುವ ಸಾರ್ವಜನಿಕರು ಸುರಕ್ಷಿತ ಸ್ಥಳಗಳನ್ನು ತಲುಪುದು ಎಂದು ಸೂಚಿಸಲಾಗಿದೆ.

ಜಿಲ್ಲಾ/ ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿದ್ದು, ವಿಪತ್ತನ್ನು ನಿಭಾಯಿಸಲು ತಯಾರಿ ಮಾಡಿಕೊಳ್ಳುವುದು ಎಂದು ಸೂಚನೆ ನೀಡಲಾಗಿದೆ. ಅಲ್ಲದೇ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆಯನ್ನು ತಿಳಿಸಲಾಗಿದ್ದು, ಇದು 24*7 ಕಾರ್ಯ ನಿರ್ವಹಣೆ ಮಾಡಲಿದೆ ಎಂದು ಹೇಳಿದೆ. ಸಂಖ್ಯೆಗಳು 0820-2574802/ 1077.
ಬಿಪರ್ ಜಾಯ್ ಎಂದು ಹೆಸರು; ಜೂನ್ ತಿಂಗಳಿನಲ್ಲಿ ನೈಋತ್ಯ ಮುಂಗಾರು ಮಾರುತಗಳು ಕೇರಳ ಪ್ರವೇಶ ಮಾಡಿ ಮುಂಗಾರು ಮಳೆ ಆರಂಭವಾಗಬೇಕು. ಆದರೆ ಈಗ ಅರಬ್ಬಿ ಸಮುದ್ರದಲ್ಲಿ ಉಂಟಾದ ಚಂಡಮಾರುತದ ಪರಿಣಾಮ ಮುಂಗಾರು ವಿಳಂಬವಾಗಿದೆ. ಈ ಚಂಡಮಾರುತಕ್ಕೆ 'ಬಿಪರ್ ಜಾಯ್' ಎಂದು ನಾಮಕರಣ ಮಾಡಲಾಗಿದೆ.
ಈ ಚಂಡಮಾರುತ ಮುಂದಿನ 24 ಗಂಟೆಗಳಲ್ಲಿ ಮತ್ತಷ್ಟು ಪ್ರಬಲವಾಗಲಿದ್ದು, ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಇದರಿಂದಾಗಿ ಮುಂಗಾರು ಮಳೆಗೆ ಕಾಯುತ್ತಿದ್ದ ಜನರಿಗೆ ಚಂಡಮಾರುತ ಮಳೆ ತಂದುಕೊಟ್ಟಿದೆ.
ಚಂಡಮಾರುತವು ಸಮುದ್ರ ಮಟ್ಟದಿಂದ 5.8 ಕಿ. ಮೀ. ವರೆಗೆ ಹರಡಿದೆ. ಆಗ್ನೇಯ ಅರಬ್ಬಿ ಸಮುದ್ರದಲ್ಲಿ ಕಡಿಮೆ ಒತ್ತಡದ ಪ್ರದೇಶ ನಿರ್ಮಾಣವಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಚಂಡಮಾರುತ ಉತ್ತರಾಭಿಮುಖವಾಗಿ ಸಾಗುವ ನಿರೀಕ್ಷೆ ಇದೆ.
ಕರ್ನಾಟಕ, ಗೋವಾ, ತಮಿಳುನಾಡು, ಕೇರಳ, ಮಧ್ಯ ಮಹಾರಾಷ್ಟ್ರದಲ್ಲಿ ಮಳೆಯಾಗುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಜಮ್ಮು ಮತ್ತು ಕಾಶ್ಮೀರ, ಲೇಹ್ ಲಡಾಖ್, ಮುಜಾಫರ್‌ಬಾದ್, ಉತ್ತರಾಖಂಡ, ಹಿಮಾಚಲ ಪ್ರದೇಶದಲ್ಲಿಯೂ ಮಳೆಯ ಮುನ್ಸೂಚನೆ ನೀಡಲಾಗಿದೆ.
ಬೆಂಗಳೂರು ನಗರದಲ್ಲಿ ಮಳೆ; ಮಂಗಳವಾರ ಮಧ್ಯಾಹ್ನ ಬೆಂಗಳೂರು ನಗರದ ವಿವಿಧ ಪ್ರದೇಶಗಳಲ್ಲಿ ಮಳೆಯಾಗಿದೆ. ಮಧ್ಯಾಹ್ನ 3.30ರ ಸುಮಾರಿಗೆ ಗಾಳಿಯ ಜೊತೆ ಆರಂಭವಾದ ಮಳೆ ಸುಮಾರು ಅರ್ಧಗಂಟೆಗಳ ಕಾಲ ಸುರಿದಿದೆ. ಕಳೆದ ವಾರದಿಂದ ನಗರದಲ್ಲಿ ಮಳೆಯಾಗಿರಲಿಲ್ಲ. ಬೆಳಗ್ಗೆ ಮೋಡ ಕವಿದ ವಾತಾವರಣ ಕಂಡು ಬಂದರೂ ಬಳಿಕ ಬಿಸಿಲು ನೆತ್ತಿ ಸುಡುತ್ತಿತ್ತು.
ಬಿರುಬಿಸಿಲಿನಿಂದ ಕಂಗೆಟ್ಟಿದ್ದ ನಗರದ ಜನರಿಗೆ ಇಂದು ಸುರಿದ ಮಳೆ ನೆಮ್ಮದಿ ನೀಡಿದೆ. ನಗರದಲ್ಲಿ ಮೋಡ ಕವಿದ ವಾತಾವರಣ ಇದ್ದು, ಸಂಜೆ ಮತ್ತೆ ಮಳೆಯಾಗುವ ಸೂಚನೆ ಇದೆ. ಚಂಡಮಾರುತದ ಪರಿಣಾಮ ನಗರದಲ್ಲಿಯೂ ಮಳೆ ಮುಂದುವರೆಯಬಹುದು.












Click it and Unblock the Notifications