ಪ್ರಜಾಪ್ರಭುತ್ವದ ದೇಗುಲದಲ್ಲಿ ಜನಪ್ರತಿನಿಧಿಗಳ ಇದೆಂತಹ ಅನಾಗರಿಕ ನಡತೆ?
ಬೆಂಗಳೂರು, ಡಿಸೆಂಬರ್ 20: ನಮ್ಮ ದೇಶ ಮತ್ತು ರಾಜ್ಯದಲ್ಲಿ ಏನಾಗುತ್ತಿದೆ? ಪ್ರಜಾಪ್ರಭುತ್ವದ ದೇಗುಲ ಎಂದು ಕರೆಯಿಸಿಕೊಳ್ಳುವ ಸಂಸತ್ ಭವನ ಮತ್ತು ವಿಧಾನಸೌಧಗಳಲ್ಲಿ ನಾವು ಆಯ್ಕೆ ಮಾಡಿ ಕಳುಹಿಸಿಕೊಟ್ಟಿರುವ ಜನಪ್ರತಿನಿಧಿಗಳು ನಡೆದುಕೊಳ್ಳುತ್ತಿರುವ ರೀತಿ ಮತ್ತು ಅವರು ಸಲ್ಲಿಸುವ ಗೌರವ ಇದೇನಾ? ಎಂದು ಜನ ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳಬೇಕಾದ ಪರಿಸ್ಥಿತಿ ಒದಗಿ ಬಂದಿದೆ. ಇನ್ಮುಂದೆ ಇನ್ನು ಏನೆಲ್ಲ ನಡೆಯುತ್ತದೆಯೋ ಗೊತ್ತಿಲ್ಲ.
ಒಂದೆಡೆ ಸಂಸತ್ ಆವರಣದಲ್ಲಿ ಆಡಳಿತ, ವಿಪಕ್ಷಗಳ ನಡುವೆ ತೂಕಾಟ, ತಳ್ಳಾಟ, ಪ್ರತಿಭಟನೆ, ಆರೋಪ, ಪ್ರತ್ಯಾರೋಪಗಳು ನಡೆದರೆ, ನಮ್ಮ ರಾಜ್ಯದಲ್ಲಿ ವಿಧಾನಪರಿಷತ್ ನಲ್ಲಿ ಅಶ್ಲೀಲ, ಅಸಂಬದ್ಧ, ಏಕವಚನದ ಪದ ಪ್ರಯೋಗಗಳು, ತೊಡೆ ತಟ್ಟುವುದು, ಕೈಕೈ ಮಿಲಾಯಿಸುವುದು, ಗೂಂಡಾಗಿರಿ ಎಲ್ಲವನ್ನು ನಾವು ಆರಿಸಿ ಕಳಿಸಿದ ಜನಪ್ರತಿನಿಧಿಗಳಿಂದಲೇ ನೋಡಬೇಕಾದ ಪರಿಸ್ಥಿತಿ ಒದಗಿ ಬಂದಿರುವುದು ನಿಜಕ್ಕೂ ಈ ನಾಡಿನ ದುರಂತ ಎಂದರೆ ತಪ್ಪಾಗಲಾರದು.

ಬ್ರಿಟೀಷರ ಕಪಿಮುಷ್ಠಿಯಿಂದ ಬಿಡಿಸಿಕೊಂಡ ಭಾರತಕ್ಕೆ ಒಂದು ಸಂವಿಧಾನವನ್ನು ಡಾ.ಬಿ.ಆರ್.ಅಂಬೇಡ್ಕರ್ ನೀಡಿದರು. ಅದರ ಆಶಯದಲ್ಲಿ ಆಡಳಿತ ನಡೆಯುತ್ತಾ ಬರುತ್ತಿದೆ. ಇಡೀ ದೇಶದ ಜನರ ಪ್ರತಿನಿಧಿಯಾಗಿ ಕೇಂದ್ರಕ್ಕೆ ಸಂಸದರನ್ನು, ರಾಜ್ಯಕ್ಕೆ ಶಾಸಕರನ್ನು ಆಯ್ಕೆ ಮಾಡಿಕಳುಹಿಸುವುದು ಜನಸಾಮಾನ್ಯರಿಗೆ ಸಿಕ್ಕ ಒಂದು ಹಕ್ಕಾಗಿದೆ. ಅದನ್ನು ಇಲ್ಲಿವರೆಗೆ ನೂರಕ್ಕೆ ನೂರರಷ್ಟು ಮತದಾರರು ಚಲಾಯಿಸದೆ ಇದ್ದರೂ ಶೇ.70ರಷ್ಟು ಜನ ತಮ್ಮ ಹಕ್ಕನ್ನು ಚಲಾಯಿಸುವ ಮೂಲಕ ಜನರ ಪ್ರತಿನಿಧಿಯಾಗಿ ಸಂಸತ್ ಗೆ ಸಂಸದರನ್ನು ಮತ್ತು ವಿಧಾನಸಭೆಗಳಿಗೆ ಶಾಸಕರನ್ನು ಕಳಹಿಸಿಕೊಡುತ್ತಾ ಬಂದಿದ್ದಾರೆ.
ಜವಬ್ದಾರಿ ಮರೆಯುತ್ತಿರುವ ಜನಪ್ರತಿನಿಧಿಗಳು
ಮುಖ್ಯವಾಗಿ ಮತದಾರರಿಂದ ಆಯ್ಕೆಯಾದ ಪ್ರತಿನಿಧಿಗಳು ಚುನಾವಣೆ ಕಳೆಯುತ್ತಿದ್ದಂತೆಯೇ ತಮಗೆ ಮತ ನೀಡಿದ ಮತದಾರರನ್ನೇ ಮರೆತು ಬಿಡುತ್ತಾರೆ. ಕ್ಷೇತ್ರಕ್ಕೆ ಮತ್ತು ಕ್ಷೇತ್ರದ ಜನಕ್ಕೆ ಸರ್ಕಾರದ ಕಡೆಯಿಂದ ನಾವೇನು ಮಾಡಿಸಬೇಕು? ಅವರ ಸಂಕಷ್ಟಕ್ಕೆ ಹೇಗೆ ಸ್ಪಂದಿಸಬೇಕು? ಮುಂತಾದ ವಿಚಾರಗಳನ್ನು ಮರೆತು ಕೇವಲ ರಾಜಕೀಯ ಮಾಡುವುದರಲ್ಲಿ ತಮಗೇನು ಲಾಭ ಎಂಬ ಲೆಕ್ಕಾಚಾರದಲ್ಲಿ ಐದು ವರ್ಷಗಳನ್ನು ಪೂರೈಸಿ ಬಿಡುತ್ತಾರೆ.
ಇವತ್ತಿನ ಚುನಾವಣೆಗಳು ಕೂಡ ಹೇಗೆ ನಡೆಯುತ್ತಿವೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ... ವಿವಾದಾತ್ಮಕ, ರಾಷ್ಟ್ರೀಯ, ಭಾವನಾತ್ಮಕ ವಿಚಾರಗಳು ಪ್ರಾಮುಖ್ಯತೆ ಪಡೆಯುತ್ತಿವೆ. ಅದರಾಚೆಗೆ ಹಣ ಆಮಿಷಗಳು ಕೂಡ ಕೆಲಸ ಮಾಡುತ್ತಿವೆ. ಹೀಗಾಗಿ ಅಭಿವೃದ್ಧಿ ವಿಚಾರಗಳು ಗೌಣವಾಗುತ್ತಿವೆ. ಇನ್ನು ಗೆದ್ದು ಸಂಸತ್, ವಿಧಾನಸಭೆಗಳನ್ನು ಪ್ರವೇಶಿಸುವ ಸಂಸದ, ಶಾಸಕರು ಕೆಲವು ಯೋಜನೆಗಳಿಂದ ಒಳಿತಾಗುತ್ತದೆ ಎಂಬುದು ಗೊತ್ತಿದ್ದರೂ ತಮ್ಮ ಪಕ್ಷದ ನಿಲುವು ಎಂಬ ಕಾರಣಕ್ಕೆ ವಿರೋಧಿಸುತ್ತಾರೆ.

ಆರೋಗ್ಯಕರ ಚರ್ಚೆಗಳಿಲ್ಲದೆ ಕಲಾಪ
ದುರಂತ ಏನೆಂದರೆ ಬಹಳಷ್ಟು ಯೋಜನೆಗಳನ್ನು ವಿರೋಧಿಸಬೇಕೆಂಬ ಕಾರಣಕ್ಕೆ ವಿರೋಧಿಸುವಂತಾಗಿದೆ. ಹೀಗಾಗಿ ಪ್ರತಿಭಟನೆ, ಕೋಲಾಹಲಗಳಲ್ಲಿಯೇ ಕಾಲ ಕಳೆದು ಹೋಗುತ್ತಿದೆ. ಅಧಿಕಾರ ಪಡೆದವರು ಅದರ ಅಮಲಿನಲ್ಲಿ ತೇಲುವುದರಿಂದ ಅವರು ಜನಹಿತವನ್ನು ಮರೆಯುತ್ತಿದ್ದಾರೆ. ಮತ ಪಡೆಯುವುದೇ ಮುಖ್ಯವಾಗಿರುವ ಕಾರಣ ಆರ್ಥಿಕ ಹೊರೆ ಎನಿಸಿದರೂ ಮತದಾರರ ಮತ ಸೆಳೆಯುವ ಕಾರಣಕ್ಕಾಗಿ ಕೆಲವೊಂದು ಭರವಸೆಗಳನ್ನು ಮತಪಡೆಯುವುದು ಅನಿವಾರ್ಯ ಎಂಬಂತಾಗಿದೆ.
ಇತ್ತೀಚೆಗಿನ ವರ್ಷಗಳಲ್ಲಿ ದೇಶಕ್ಕೆ ಒಳಿತಾಗುವ, ಜನಹಿತದ, ಅಭಿವೃದ್ಧಿಗೆ ಪೂರಕವಾದ ವಿಚಾರಗಳಿಗೆ ಸಂಬಂಧಿಸಿದಂತೆ ಆರೋಗ್ಯಕರ ಚರ್ಚೆಗಳೇ ನಡೆಯುತ್ತಿಲ್ಲ. ಕೇವಲ ಪ್ರತಿಭಟನೆ, ಧರಣಿಗಳಲ್ಲಿಯೇ ಕಲಾಪ ಮುಗಿದು ಹೋಗುತ್ತಿದೆ. ದೇಶಕ್ಕೆ, ನಾಡಿಗೆ ಒಳ್ಳೆದಾಗುವ ಯಾವುದೇ ವಿಚಾರಗಳು ಒಮ್ಮತದಿಂದ ಚರ್ಚೆಗೆ ಬರುತ್ತಿಲ್ಲ. ಹೀಗಾಗಿ ಜನರ ತೆರಿಗೆಯ ಹಣ ಪೋಲಾಗುತ್ತಿದೆ. ಇದೆಲ್ಲವನ್ನು ಮೀರಿ ದ್ವೇಷದ ರಾಜಕಾರಣ ತಾಂಡವವಾಡುತ್ತಿರುವುದು ಭವಿಷ್ಯದ ದೃಷ್ಟಿಯಿಂದ ದೇಶಕ್ಕೆ ಮಾರಕವಾದರೂ ಅಚ್ಚರಿಯಿಲ್ಲ.
ಪ್ರಜಾಪ್ರಭುತ್ವದ ಆಶಯಕ್ಕೆ ಚ್ಯುತಿ
ವತ್ತು ನಡೆಯುತ್ತಿರುವ ಎಲ್ಲ ಬೆಳವಣಿಗೆಗಳನ್ನು ನೋಡಿದ ಬಳಿಕ ನಾವು ಎಂತಹ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿದ್ದೇವೆ ಎಂಬ ಪ್ರಶ್ನೆಗಳು ಉದ್ಭವಿಸದೆ ಇರುವುದಿಲ್ಲ. ಜನಪ್ರತಿನಿಧಿಗಳೇ ಮಾತಿನ ಹಿಡಿತ ತಪ್ಪಿ ಅನಾಗರಿಕರಂತೆ ವರ್ತಿಸಿದರೆ, ಅವರನ್ನು ನೋಡಿ ಜನ ಏನಂದುಕೊಳ್ಳಬೇಕು? ಒಬ್ಬ ಜನಪ್ರತಿನಿಧಿಯಾದವನು ಎಲ್ಲವನ್ನು ಶಾಂತಚಿತ್ತದಿಂದ ಆಲಿಸುವ ಮತ್ತು ಸಮಯೋಚಿತ ಉತ್ತರಗಳನ್ನು ನೀಡಬೇಕಾಗುತ್ತದೆ. ಅವರ ಬಾಯಿಯಿಂದ ಹೊರಡುವ ಪ್ರತಿ ಮಾತುಗಳು ಪ್ರಜಾಪ್ರಭುತ್ವದ ಆಶಯವನ್ನು ಎತ್ತಿ ಹಿಡಿಯುವಂತಿರಬೇಕು.

ಈ ಸಮಯದಲ್ಲಿ ಬುದ್ಧನ ಉಪದೇಶಗಳು ನಡತೆಮೀರಿದ ನಮ್ಮ ಕೆಲವು ರಾಜಕಾರಣಿಗಳಿಗೆ ಹೇಳಿ ಮಾಡಿಸಿದಂತಿದೆ. ತಾನು ಮಾಡುವ ಒಳ್ಳೆಯ ಅಥವಾ ಕೆಟ್ಟ ಕರ್ಮಗಳು ನೆರಳಿನಂತೆ ಹಿಂಬಾಲಿಸಿ ಬರುತ್ತವೆ. ತಂದೆಯಾದವನು ತನ್ನ ಮಕ್ಕಳನ್ನು ಹೇಗೆ ಕಾಳಜಿಯಿಂದ ನೋಡಿಕೊಳ್ಳುತ್ತಾನೋ, ಅದೇ ಕಾಳಜಿಯನ್ನು ಅಧಿಕಾರಸ್ಥರು ವಹಿಸಬೇಕಾಗುತ್ತದೆ. ಅಧಿಕಾರದಲ್ಲಿ ಇರುವವರು ಯಾವುದೇ ಕಾರಣಕ್ಕೂ ತಮಗಿಂತ ಕೆಳಗಿನವರನ್ನು ತುಳಿಯಬಾರದು ಎಂಬ ಬುದ್ದಿಮಾತನ್ನು ಹೇಳಿದ್ದಾರೆ.
ರಾಜಕಾರಣಿಗಳಿಗೆ ಬುದ್ಧನ ಉಪದೇಶವೇನು?
ಆಡಳಿತಗಾರನ ಅರ್ಥಾತ್ ನಮ್ಮನ್ನಾಳುವ ಆಡಳಿತಗಾರರ ಹೃದಯದಲ್ಲಿ ಪ್ರೇಮವಿರಬೇಕು. ನಿಸ್ವಾರ್ಥ ಪ್ರೇಮವಿಲ್ಲದಿದ್ದರೆ ಯಾವ ಸೇವಾ ಕಾರ್ಯವೂ, ಆಡಳಿತವೂ ಯಶಸ್ವಿಯಾಗುವುದಿಲ್ಲ. ಅಷ್ಟೇ ಅಲ್ಲದೆ, ಇಂದ್ರಿಯಗಳನ್ನು ಹತೋಟಿಗೆ ತಂದುಕೋ, ನಿನ್ನ ದೊರೆತನದ ಹಿರಿಮೆಯನ್ನೇ ಮನಸ್ಸಿನಲ್ಲಿ ಮೆಲುಕಾಡುತ್ತಿರಬೇಕು, ನಿನ್ನನ್ನು ಸ್ತುತಿಸುವ ಹೊಗಳುಭಟ್ಟರ ಮಾತಿಗೆ ಕಿವಿಗೊಡಬೇಡ ಎಂಬ ಎಚ್ಚರಿಕೆಯನ್ನು ಬುದ್ಧ ನೀಡಿದ್ದಾರೆ.
ಅಧಿಕಾರಸ್ಥರಿಗೆ ತಾನು ಏನು ಮಾಡಿದರೂ ನಡೆಯುತ್ತದೆ ಎಂಬ ಮನೋಭಾವ ಹೆಚ್ಚಾಗಿರುತ್ತದೆ. ಅಂತಹವರು ಸಂಯಮ ಕಳೆದುಕೊಂಡರೆ ಅಂಕುಶವಿಲ್ಲದ ಕಾಡಾನೆಯಂತೆ ವರ್ತಿಸಿಬಿಡುತ್ತಾರೆ.

ಇದರಿಂದ ಬರೀ ಆತನಿಗೆ ಮಾತ್ರ ಕೆಡುಕು ಆಗುವುದಿಲ್ಲ ಇದರ ಪರಿಣಾಮಗಳು ಆತನ ಸುತ್ತಮುತ್ತಲಲ್ಲಿ ಇರುವವರ ಮೇಲೂ ಬೀರುತ್ತದೆ ಎಂದು ಬುದ್ಧ ಹೇಳಿದ್ದಾರೆ. ಇವತ್ತಿನ ಪರಿಸ್ಥಿತಿಯನ್ನು ಗಮನಿಸಿದರೆ ಅಂದು ಬುದ್ಧ ನೀಡಿದ ಉಪದೇಶಗಳು ಇವತ್ತಿಗೂ ಪ್ರಸ್ತುತವಾಗಿದ್ದು, ಇನ್ನಾದರೂ ಜವಬ್ದಾರಿಯುತ ಸ್ಥಾನದಲ್ಲಿದ್ದವರು, ಪ್ರಜಾಪ್ರಭುತ್ವದ ದೇಗುಲದೊಳಗಿದ್ದಾಗ ಬುದ್ಧನ ಉಪದೇಶವನ್ನು ಮೆಲುಕು ಹಾಕುವುದು ಒಳ್ಳೆಯದು.












Click it and Unblock the Notifications