ಕ್ರೈಂ ರೌಂಡಪ್ :ಮಂಗಳೂರು, ಗಗನಚುಕ್ಕಿ ಜಲ ದುರಂತ
ಬೆಂಗಳೂರು, ಅ.7: ಗಗನಚುಕ್ಕಿ ಜಲಪಾತಕ್ಕೆ ಬಿದ್ದು ನಾಲ್ವರು ಮೃತಪಟ್ಟರೆ, ಮತ್ತೊಂದೆಡೆ ಮಂಗಳೂರಿನಲ್ಲಿ ನದಿ ಸ್ನಾನಕ್ಕಿಳಿದು ಐವರು ಬಾಲಕರು ನೀರುಪಾಲಾಗಿದ್ದರೆ. ಇನ್ನೊಂದೆಡೆ ಕೆರೆಗೆ ತಾಯಿ, ಮಗಳು ಬಲಿಯಾಗಿದ್ದಾರೆ. ಭಾನುವಾರ ಜಲ ದುರಂತದ ಒಟ್ಟು 11 ಜನರು ಸಾವನ್ನಪ್ಪಿದ್ದಾರೆ.
ಮಂಗಳೂರು ನಗರದ ತಣ್ಣೀರುಬಾವಿಯ ಬಜ್ಜೋಡಿ ಕುದ್ರುವಿನಲ್ಲಿ ಫಲ್ಗುಣಿ ನದಿ ಸ್ನಾನಕ್ಕೆಂದು 8 ಬಾಲಕರು ಹೋಗಿದ್ದರು. ಇವರ ಪೈಕಿ ಐವರು ನದಿ ಪಾಲಾಗಿದ್ದಾರೆ. ಮೃತ ಬಾಲಕರನ್ನು ಸ್ಥಳೀಯರಾದ ಖಲಂದರ್(17), ರಾಜೇಶ್(17), ರಕ್ಷಿತ್(16), ಯಕ್ಷಿತ್(14) ಹಾಗೂ ಪ್ರಜ್ವಲ್(14) ಎಂದು ಗುರುತಿಸಲಾಗಿದೆ. ಮೃತರ ಪೈಕಿ ಖಲಂದರ್, ಪ್ರಜ್ವಲ್ ಹಾಗೂ ಇನ್ನೊಬ್ಬನ ಶವ ನದಿ ಕಿನಾರೆಯಲ್ಲಿ ಪತ್ತೆಯಾಗಿದೆ.
ಸಂಭ್ರಮ ಸೂತಕವಾಯಿತು: ಈ ಎಂಟು ಬಾಲಕರು ನದಿ ತಟದಲ್ಲಿ ಸಂಜೆ ಹುಲಿ ವೇಷ ಕುಣಿತದ ಪ್ರಾಕ್ಟೀಸ್ ಮಾಡುತ್ತಿದ್ದರು. ಬಳಿಕ ಸ್ನಾನ ಮಾಡಲೆಂದು ನದಿ ನೀರಿಗೆ ಇಳಿದಿದ್ದರು. ಈ ಸಂದರ್ಭದಲ್ಲಿ ನದಿಯಲ್ಲಿನ ಸುಳಿ 8 ಮಂದಿಯನ್ನು ಸೆಳೆದಿದೆ. ಆಗ ನೀರಿಗಿಳಿದಿದ್ದವರ ಪೈಕಿ ಜಗದೀಶ್, ಮಾರಿಮುತ್ತು ಹಾಗೂ ಧನುಷ್ ಈಜಿ ದಡ ಸೇರಿದ್ದಾರೆ. ಉಳಿದವರು ನೀರುಪಾಲಾಗಿದ್ದಾರೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯ ಈಜುಗಾರರ ತಂಡ ಆಗಮಿಸಿ ರಾತ್ರಿ 7.30ರ ವರೆಗೆ ಅಗ್ನಿಶಾಮಕದಳ ನೀರಿನಲ್ಲಿ ಕಣ್ಮರೆಯಾದವರ ಹುಡುಕಾಟ ನಡೆಸಿದೆ. ಸೋಮವಾರ ಮುಂಜಾನೆ 5.30ಕ್ಕೆ ಕಾರ್ಯಾಚರಣೆ ಮುಂದುವರಿಸಿದರು.
ಗಗನಚುಕ್ಕಿ ಜಲಪಾತಕ್ಕೆ ನಾಲ್ವರು ಬಲಿ: ಜಲಪಾತ ವೀಕ್ಷಣೆ, ವಿಹಾರಕ್ಕಾಗಿ ಆಗಮಿಸಿದ 3 ಯುವಕರು, ಮಹಿಳೆ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ಕೊಳ್ಳೇಗಾಲ ತಾಲೂಕಿನ ದರ್ಗಾದ ಗಗನಚುಕ್ಕಿ ಜಲಪಾತದಲ್ಲಿ ಜರುಗಿದೆ. ಮೃತರು ಚಾಮರಾಜನಗರ ಜಿಲ್ಲೆಯ ಕೆಸ್ತೂರು ಗ್ರಾಮದ ಹೇಮಂತ(18), ವಸಂತ (20) ಹಾಗೂ ಹೊಂಗನೂರು ಗ್ರಾಮದ ಚಂದ್ರಕಾಂತ(22). ಇನ್ನಷ್ಟು ಕ್ರೈಂ ಸುದ್ದಿಗಳು ಇಲ್ಲಿವೆ ನೋಡಿ...

ಬೆಂಗಳೂರಿನ ಮಹಿಳೆ ಸಾವು
ಕೊಳ್ಳೇಗಾಲದ ಗಗನಚುಕ್ಕಿ ಬಳಿ ಇರುವ ದರ್ಗಾಕ್ಕೆ ಬಂದು ಪೂಜೆ ಸಲ್ಲಿಸಿ ಗಗನಚುಕ್ಕಿ ಜಲಪಾತದ ಸಮೀಪದಲ್ಲಿ ಕುಳಿತಿದ್ದಾಗ ಕಾಲು ಜಾರಿ ಬೆಂಗಳೂರಿನ ಮಹಿಳೆಯೊಬ್ಬರು ಸಾವಿಗೀಡಾಗಿದ್ದಾರೆ. ಬೆಂಗಳೂರಿನ ಗಾಂಧಿನಗರ ನಿವಾಸಿ ಹಸೀಶಾ (32) ಮೃತರಾದವರು. ದರ್ಗಾಕ್ಕೆ ತಮ್ಮ ಪತಿಯೊಂದಿಗೆ ಪೂಜೆಗೆ ಬಂದಿದ್ದಾಗ ಈ ದುರ್ಘಟನೆ ಸಂಭವಿಸಿದೆ. ನುರಿತ ಈಜು ತಜ್ಞರಿಂದ ನಾಲ್ಕು ಶವಗಳ ಪತ್ತೆಗಾಗಿ ಶೋಧ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಲ್ಲೆ ಪ್ರಕರಣ : ಉಡುಪಿ
06/10/2013 ರಂದು 15:45 ಗಂಟೆಗೆ ಪಿರ್ಯಾದಿದಾರ ಗೋಪಾಲ ಪೂಜಾರಿ (49) ತಂದೆ:ಪಪ್ಪು ಪೂಜಾರಿ,ವಾಸ: ಸಾಲ್ಮರ,ತೆಂಕಬೆಟ್ಟು ಅಂಚೆ,ಉಪ್ಪೂರು ಗ್ರಾಮ, ರಿಕ್ಷಾ ನಿಲ್ದಾಣದಲ್ಲಿ ಬಾಡಿಗೆಗೆಂದು ಹೊರಡುತ್ತಿರುವಾಗ ಗೋಪಾಲ ಪೂಜಾರಿರವರ ಪರಿಚಯದ ಇಂದಿರಾನಗರದ ರಾಘವೇಂದ್ರ ನಾಯ್ಕ ಎಂಬಾತನು ಪೂಜಾರಿರವರನ್ನು ತಡೆದು ನಿಲ್ಲಿಸಿ ರಿಕ್ಷಾ ಬಾಡಿಗೆ ಮಾಡುವ ವಿಚಾರದಲ್ಲಿ ತಕರಾರು ತೆಗೆದು, ಕೆನ್ನೆಗೆ ಕೈಯಿಂದ ಹೊಡೆದು ದೂಡಿ ಹಾಕಿ, ಮುಂದಕ್ಕೆ ನಮ್ಮ ಸ್ಟ್ಯಾಂಡ್ ಹತ್ತಿರ ಬಾಡಿಗೆಗೆ ಬಂದರೆ ನಿನ್ನನ್ನು ಕೊಂದು ಹಾಕುವುದಾಗಿ ಜೀವ ಬೆದರಿಕೆ ಒಡ್ಡಿರುತ್ತಾರೆ.
ಗೋಪಾಲ ಪೂಜಾರಿ ಚಿಕಿತ್ಸೆಯ ಬಗ್ಗೆ ಅಲ್ಲಿದ್ದ ರಿಕ್ಷಾ ಸ್ಟ್ಯಾಂಡ್ ನವರು ಅಜ್ಜರಕಾಡು ಆಸ್ಪತ್ರೆಗೆ ದಾಖಲು ಮಾಡಿರುತ್ತಾರೆ. ಈ ಬಗ್ಗೆ ಗೋಪಾಲ ಪೂಜಾರಿರವರು ನೀಡಿದ ದೂರಿನಂತೆ 411/13 ಕಲಂ 323,341,504,506 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ವಿಷಜಂತು ಕಡಿದು ಸಾವು
ಮಾಯಕೊಂಡ ಪೊಲೀಸ್ ಠಾಣೆ ಯು.ಡಿ.ಆರ್ ನಂ: 15/2013, ಕಲಂ: 174 ಸಿ.ಆರ್.ಪಿ.ಸಿ. ಫಿರ್ಯಾದಿ ಶ್ರೀಮತಿ. ಮೀನಾಕ್ಷಮ್ಮ ಗಂಡ ಹನುಮಂತಪ್ಪ(42) ಠಾಣೆಗೆ ಹಾಜರಾಗಿ ಕೊಟ್ಟ ದೂರಿನ ಸಾರಾಂಶ : ನನ್ನ ಗಂಡ ಹನುಮಂತಪ್ಪ ಬಾಡ ಗ್ರಾಮದ ಬಾಬು ರೆಡ್ಡಿರವರ ಹೊಲಕ್ಕೆ ಕೂಲಿ ಕೆಲಸಕ್ಕೆ ಹೋದಾಗ ಯಾವುದೋ ವಿಷ ಜೆಂತು ಕಚ್ಚಿದ್ದು ಬಾಡಾ ಗ್ರಾಮದಲ್ಲಿ ನಾಟಿ ಔಷಧಿ ಕೊಡಿಸಿಕೊಂಡು ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಸಿ.ಜೆ ಆಸ್ಪತ್ರೆಗೆ ಸಂಜೆ 05-30 ಗಂಟೆ ಸಮಯದಲ್ಲಿ ಕರೆದುಕೊಂಡು ಹೋಗಿದ್ದು ವೈದ್ಯರು ನೋಡಿ ಮೃತ ಪಟ್ಟಿರುವುದಾಗಿ ತಿಳಿಸಿದ್ದು ಇವರ ಸಾವಿನಲ್ಲಿ ನಮಗೆ ಯಾವುದೇ ಸಂಶಯವಿರುವುದಿಲ್ಲ ಮುಂದಿನ ಕ್ರಮ ಜರುಗಿಸಿ ಅಂತಾ ಇತ್ಯಾದಿ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೆ.

ಪಾದಾಚಾರಿ ಸಾವು
ಅಪರಿಚಿತ ವಾಹನ ಡಿಕ್ಕಿ ಪಾದಾಚಾರಿ ವ್ಯಕ್ತಿ ಸಾವು : ಬೇಲೂರು ತಾಲ್ಲೂಕು, ಮಾದಿಹಳ್ಳಿ ಹೋಬಳಿ, ಅಂಗಡಿಹಳ್ಳಿ ಗ್ರಾಮದ ವೆಂಕಟೇಶ ರವರು ಹಗರೆಯಿಂದ ತಮ್ಮ ಗ್ರಾಮಕ್ಕೆ ಹೋಗಲು ಹಾಸನ-ಬೇಲೂರು ರಸ್ತೆ, ಅಂಗಡಿಹಳ್ಳಿ ಗ್ರಾಮದ ಹತ್ತಿರ ನಡೆದುಕೊಂಡು ಹೋಗುತ್ತಿದ್ದಾಗ ಯಾವುದೋ ಅಪರಿಚಿತ ವಾಹನದ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿ ಮಾಡಿದ ಪರಿಣಾಮ ತೀವ್ರ ಸ್ವರೂಪದ ರಕ್ತಗಾಯಗಳಾಗಿ ವೆಂಕಟೇಶ ಬಿನ್ ಸಾವುರಪ್ಪ, 40 ವರ್ಷ ರವರು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆಂದು ಮೃತರ ಸಂಬಂಧಿ ಶ್ರೀ ಚುಚಲಿ ರವರು ಕೊಟ್ಟ ದೂರಿನ
ಮೇರೆಗೆ ಹಳೇಬೀಡು ಠಾಣೆಯಲ್ಲಿ ಪ್ರಕರಣ ದಾಖಲಿಸಿ ಅಪಘಾತ ಮಾಡಿಕೊಂಡು ಹೋದ ವಾಹನ ಚಾಲಕನ ಪತ್ತೆಗಾಗಿ ಕ್ರಮ ಕೈಗೊಂಡಿರುತ್ತದೆ.

ಅಪಘಾತದಲ್ಲಿ ಸಾವು
ಕಡೂರು ಪೊಲೀಸ್ ಠಾಣೆ ಮೊ.ಸಂ. 228/2013 - ಕಲಂ: 279 304(ಎ) ಐಪಿಸಿ - ಫೀರ್ಯಾದಿ ಶ್ರೀಮತಿ ನಾಗರತ್ನ ಇವರ ಗಂಡ ಜಗದೀಶ್ವರಪ್ಪ ರವರು ಹಿರೋಹೊಂಡಾ ಮೋಟಾರ್ ಸೈಕಲ್ ನಂಬರ್ ಕೆ ಎ 18 ಕ್ಯೂ 6099 ರಲ್ಲಿ ದಿನಾಂಕ 06/10/2013 ರಂದು 1130 ಗಂಟೆಯಲ್ಲಿ ಬಿಸಲೇಹಳ್ಳಿ ಕಡೆಗೆ ಹೋಗುತ್ತಿದ್ದಾಗ ಸರಸ್ವತಿಪುರ ಗೇಟ್ ನ ಶನೇಶ್ವರ ದೇವಸ್ಥಾನ ಸಮೀಪ ಮೋಟಾರ್ ಸೈಕಲ್ ನ ಚಕ್ರ ಪಂಕ್ಚರ್ ಆಗಿ ಮೋಟಾರ್ ಸೈಕಲ್ ನಿಯಂತ್ರಣ ತಪ್ಪಿ ಜಗದೀಶ್ವರಪ್ಪ ಬೈಕ್ ಸಮೇತ ರಸ್ತೆಗೆ ಬಿದ್ದಾಗ ಅವರ ತಲೆಯ ಭಾಗಕ್ಕೆ, ಭುಜಕ್ಕೆ, ಕಾಲಿಗೆ ಪೆಟ್ಟು ಬಿದ್ದು ರಕ್ತ ಗಾಯವಾಗಿರುತ್ತೆ, ಬೈಕ್ ಜಖಂಗೊಂಡಿರುತ್ತೆ, ಹೆಚ್ಚಿನ ಚಿಕಿತ್ಸೆ ಶಿವಮೊಗ್ಗ ನಾರಾಯಣ ಹೃದಯಾಲಯಕ್ಕೆ ದಾಖಲು ಮಾಡಿ ಚಿಕಿತ್ಸೆ ಕೊಡಿಸುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿರುತ್ತಾರೆ.

ಮುಜರಾಯಿ ದೇವಾಲಯಗಳ ಅರ್ಚಕರಿಗೆ ತರಬೇತಿ ಶಿಬಿರ
ರಾಜ್ಯದ ಮುಜರಾಯಿ ಇಲಾಖೆ ಮೊಟ್ಟ ಮೊದಲಬಾರಿಗೆ ಗ್ರಾಮಾಂತರ ಪ್ರೆದೇಶದ ಮುಜರಾಯಿ ದೇವಾಲಯಗಳ ಅರ್ಚಕರ ಏಳಿಗೆಗೆ ಮುಂದಾಗಿದೆ. ದೇವಾಲಯಗಳಲ್ಲಿ ಅರ್ಚಕರಿಗೆ ತರಬೇತಿ ನೀಡಲು ಕಾರ್ಯಯೋಜನೆ ಹಮ್ಮಿಕೊಂಡಿದೆ. ತುಮಕೂರು ಜಿಲ್ಲೆ ಕುಣಿಗಲ್ ತಾಲೂಕು ಶ್ರೀಯಡಿಯೂರು ಸಿದ್ದಲಿಂಗೇಶ್ವರ ಸ್ವಾಮಿ ದೇವಾಲಯದಲ್ಲಿ ಈ ಶಿಬಿರ ಆಯೋಜಿಸಲಾಗಿದೆ ಎಂದು ಧಾರ್ಮಿಕ ದತ್ತಿ ಇಲಾಖೆ ಅದಿಸೂಚನೆ ಹೊರಡಿಸಿದೆ. ದಿನಾಂಕ 16.12.2013 ರಿಂದ 30.12.2013ರ ವರೆಗೆ 15ದಿನಗಳ ಕಾಲ ತರಬೇತಿ ಶಿಬಿರ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸ ಬೇಕಾದ ದೂರವಾಣಿ ಸಂಖ್ಯೆ: 08132-228223. ಮೊಬೈಲ್: 94494-24465












Click it and Unblock the Notifications