ಮತ್ತೆ ಶುರುವಾಯ್ತು ಪಠ್ಯ ಪರಿಷ್ಕರಣೆ ದಂಗಲ್: ಹೆಡ್ಗೇವಾರ್‌ರಂತ ಹೇಡಿಗಳನ್ನು ಪಠ್ಯದಲ್ಲಿರಲು ಬಿಡಲ್ಲ: ಬಿ.ಕೆ.ಹರಿಪ್ರಸಾದ್
ಶಿವಮೊಗ್ಗ, ಜೂನ್ 09: ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಉಂಟಾದ ಪಠ್ಯ ಪುಸ್ತಕ ಪರಿಷ್ಕರಣೆ ದಂಗಲ್ ಇದೀಗ ಕಾಂಗ್ರೆಸ್ ಸರ್ಕಾರದಲ್ಲೂ ಸದ್ದು ಮಾಡುತ್ತಿದ್ದು, ಹೆಡ್ಗೇವಾರ್‌ರಂತ ಹೇಡಿಗಳನ್ನು ಮಕ್ಕಳ ಪಠ್ಯದಲ್ಲಿರಲು ಬಿಡಲ್ಲ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಗುಡುಗಿದ್ದಾರೆ.
ಈ ಕುರಿತು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಮಾಧ್ಯಮಗಳ ಜೊತೆಗೆ ಮಾತನಾಡಿ, ಸಂಘ ಪರಿವಾರದ ಸಿದ್ಧಾಂತಗಳು ಯಾವುದೇ ಇಲಾಖೆಯಲ್ಲಿ ತೂರಲು ಬಿಡೋದಿಲ್ಲ. ಬಿಜೆಪಿ ಅಥವಾ ಸಂಘ ಪರಿವಾರದವರು ಅವರದ್ದೇ ಆದ ಗ್ರಂಥಗಳಲ್ಲಿ ಆರು ಬಾರಿ ಕ್ಷಮಾಪಣಾ ಪತ್ರ ಕೊಟ್ಟಿರೋದಾಗಿ ಉಲ್ಲೇಖಿಸಿದ್ದಾರೆ. ಬ್ರಿಟೀಷರಿಗೆ ಯಾಕೆ ಕ್ಷಮಾಪಣಾ ಪತ್ರ ನೀಡಿದರು ಎಂದು ಹೇಳಲಿ. ಇಂತಹ ರಣಹೇಡಿಗಳ ಬಗ್ಗೆ ಮಕ್ಕಳು ಓದುವ ಪಠ್ಯ ಪುಸ್ತಕದಲ್ಲಿ ಇಡಲು ಬಿಡೋದಿಲ್ಲ ಎಂದು ಕಿಡಿಕಾರಿದ್ದಾರೆ.

ಚುನಾವಣೆ ಅಜೆಂಡಾ ಮಾಡಿಕೊಳ್ಳೋದು ಬಹಳ ಸಂತೋಷ, ಈ ಸಲ ಬಿಜೆಪಿಯನ್ನ ಜನ ಅರಬ್ಬಿ ಸಮುದ್ರಕ್ಕೆ ಹಾಕ್ತಾರೆ ಎಂದ ಅವರು, ಬಿಜೆಪಿ ಪಾರ್ಟಿ ಅನೈತಿಕ ಸರ್ಕಾರ ಮಾಡಿದ ಮೇಲೆ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟು ಹೋಗಿದೆ. ನಾಲ್ಕು ವರ್ಷ ಇವರ ಆಡಳಿತ ನೋಡಿದ್ದೇನೆ. ಕೃಷಿ, ಕಾರ್ಮಿಕ, ಶಿಕ್ಷಣ ಇಲಾಖೆಯಲ್ಲಿ ಸಂಪೂರ್ಣ ಕೇಸರೀಕರಣ ಮಾಡಲು ಬಿಜೆಪಿ ಹೊರಟಿತ್ತು.
ಭಾರತ ಸಾವಿರಾರು ವರ್ಷಗಳಿಂದಲೂ ಜಾತ್ಯಾತೀತ ರಾಷ್ಟ್ರವಾಗಿ ಉಳಿದುಕೊಂಡಿದೆ. ಇದನ್ನ ಬಿಜೆಪಿ ಬುಡಮೇಲು ಮಾಡಲು ಹೊರಟಿತ್ತು. ಎಲ್ಲೆಲ್ಲಿ ಸಂಘಪರಿವಾರದ ತತ್ವಸಿದ್ಧಾಂತಗಳನ್ನ ತೂರಲು ಹೊರಟಿದ್ದರೋ ಅದನ್ನ ನಾವು ಎಲ್ಲಾ ಕ್ಷೇತ್ರದಲ್ಲಿ ಸರಿಪಡಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತೆ ಎಂದು ಹೇಳಿದರು.
ಕೇಶವ್ ಬಲಿರಾಮ್ ಹೆಡ್ಗೇವಾರ್ ಸ್ವಾತಂತ್ರ್ಯ ಹೋರಾಟಗಾರ ಎಂದು ಸಾಬೀತು ಮಾಡಲಿ. ಬ್ರಿಟೀಷರ ಕ್ಷಮಾಪಣೆ ಕೇಳಿದ ನಕಲಿ ಸ್ವಾತಂತ್ರ್ಯ ಹೋರಾಟಗಾರರಿಗೆಲ್ಲಾ ಮನ್ನಣೆ ನೀಡಲು ಸಾಧ್ಯವಿಲ್ಲ. ಯಾರೋ ಹೇಳಿಕೆ ನೀಡಿ ನಾಥುರಾಮ್ ಗೋಡ್ಸೆ ಕೂಡ ಸ್ವಾತಂತ್ರ್ಯ ಹೋರಾಟಗಾರ ಎಂದಿದ್ದಾರೆ. ಇವರ ಸ್ವಾತಂತ್ರ್ಯ ಹೋರಾಟಗಾರರಿಗೆ ನಮಗೂ ವ್ಯತ್ಯಾಸವಿದೆ ಎಂದು ವಾಗ್ದಾಳಿ ನಡೆಸಿದರು.
ಇನ್ನೂ ನೈತಿಕ ಪೊಲೀಸ್‌ಗಿರಿ ವಿಚಾರವಾಗಿ ಮಾತನಾಡಿ, ಕರಾವಳಿ, ಮಲೆನಾಡಿನಲ್ಲಿ ನೈತಿಕ ಪೊಲೀಸ್‌ಗಿರಿ ಹೆಚ್ಚಿದೆ. ಭಜರಂಗದಳ ವಿರುದ್ಧ ಸಮರ ಸಾರಿದ್ದೆವು. ಇದನ್ನೇ ಬಿಜೆಪಿ ಅಜೆಂಡಾ ಮಾಡಿಕೊಂಡರೂ ಸಹ ಜನ ತಿರಸ್ಕರಿಸಿದರು. ಜನ ಸ್ಪಷ್ಟವಾಗಿ ತೀರ್ಪು ನೀಡಿದ್ದಾರೆ. ಇವನ್ನ ಬಿಟ್ಟು ಜನರಿಗೆ ಒಳಿತಾಗುವ ಕೆಲಸ ಬಿಜೆಪಿ ಮಾಡಲಿ ಎಂದು ಸಲಹೆ ನೀಡಿದರು.
ಸರ್ವ ಜನಾಂಗದ ಶಾಂತಿಯ ತೋಟಕ್ಕೆ ಬೆಲೆ ನೀಡಲಿ. ಜಾತಿ ಗಣತಿ ನಾವು ಬಹಿರಂಗ ಮಾಡ್ತೀವಿ, ನಮ್ಮ ನಾಯಕ ರಾಹುಲ್ ಗಾಂಧಿ ಈ ಬಗ್ಗೆ ಸ್ಪಷ್ಟವಾಗಿ ಹೇಳಿದ್ದಾರೆ. ಹಿಂದಿನ ಗಣತಿ ಎಂದು ಹೇಳಲಾಗದು, ಬದಲಾವಣೆ ಇದ್ದರೆ ಮಾಡ್ತೀವಿ. ಗ್ಯಾರಂಟಿ ಗೊಂದಲಗಳು ಬೇಡ, ಜುಲೈ ಹೊತ್ತಿಗೆ ಎಲ್ಲವೂ ಬಗೆಹರಿಯಲಿದೆ ಎಂದು ತಿಳಿಸಿದರು.
ಇನ್ನೂ ಸಿದ್ದರಾಮಯ್ಯ ಸಂಪುಟದಲ್ಲಿ ಸಮರ್ಥರಿಗೆ ಸಚಿವ ಸ್ಥಾನ ಸಿಕ್ಕಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಕಮೆಂಟ್ ಮಾಡೋದಿಲ್ಲ. ನಾನೂ ಕೂಡ ಅದರ ಆಸಕ್ತನಾಗಿಲ್ಲ ಎಂದರು.












Click it and Unblock the Notifications