ಕೋವಿಡ್; ವಿಧಾನಸೌಧ ಉದ್ಯೋಗಿಗಳಿಗೆ ಮಾರ್ಗಸೂಚಿ
ಬೆಂಗಳೂರು, ಜನವರಿ 05; ಕರ್ನಾಟಕ ಸರ್ಕಾರ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಹಲವಾರು ನಿರ್ಬಂಧಗಳನ್ನು ಜಾರಿಗೊಳಿಸಿದೆ. ವಿಧಾನಸೌಧದಲ್ಲಿ ಕೆಲಸ ಮಾಡುವ ನೌಕರರಿಗೆ ಸಹ ಸುತ್ತೋಲೆ ಹೊರಡಿಸಲಾಗಿದೆ.
ರಾಜ್ಯದಲ್ಲಿ ಕೋವಿಡ್ 19 ರೂಪಾಂತರಿ ವೈರಸ್ ಓಮಿಕ್ರಾನ್ ವೈರಾಣು ಸೋಂಕು ಹರಡುವಿಕೆಯನ್ನು ನಿಯಂತ್ರಿಸಲು ರಾಜ್ಯ ಸರ್ಕಾರವು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಈ ಹಿನ್ನಲೆಯಲ್ಲಿ ಸುತ್ತೋಲೆ ಪ್ರಕಟವಾಗಿದೆ.
ದೃಷ್ಟಿಹೀನ ಹಾಗೂ ಇತರೆ ದೈಹಿಕ ಅಂಗವೈಕಲ್ಯ ಹೊಂದಿರುವ ಅಧಿಕಾರಿ/ ಸಿಬ್ಬಂದಿಗಳು ಮತ್ತು ಗರ್ಭಿಣಿ ಮಹಿಳಾ ಸಿಬ್ಬಂದಿಗಳು ಕಚೇರಿಗೆ ಹಾಜರಾಗುವುದರಿಂದ ವಿನಾಯಿತಿ ನೀಡಲಾಗಿದೆ. ಈ ಸುತ್ತೋಲೆ 18/1/2022ರ ತನಕ ಜಾರಿಯಲ್ಲಿರುತ್ತದೆ.

ಕೋವಿಡ್ ಹತೋಟಿಗೆ ಇನ್ನೂ ಹೆಚ್ಚಿನ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕಾದ ಅನಿವಾರ್ಯತೆ ಹಿನ್ನಲೆಯಲ್ಲಿ ಸಚಿವಾಲಯದಲ್ಲಿ ಅತ್ಯಗತ್ಯ ಸೇವೆಗಳನ್ನು ಒದಗಿಸುತ್ತಿರುವ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿರುವ ಎಲ್ಲಾ ವರ್ಗದ ಅಧಿಕಾರಿ/ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗತಕ್ಕದ್ದು ಎಂದು ಸುತ್ತೋಲೆ ಹೇಳಿದೆ.
ಇನ್ನುಳಿದ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿರುವ ಗ್ರೂಪ್-ಎ ವೃಂದದ ಎಲ್ಲಾ ಅಧಿಕಾರಿಗಳು ಕಡ್ಡಾಯವಾಗಿ ಕಚೇರಿಗೆ ಹಾಜರಾಗತಕ್ಕದ್ದು ಮತ್ತು ಗ್ರೂಪ್ ಬಿ, ಸಿ ಮತ್ತು ಡಿ ವೃಂದದ ಅಧಿಕಾರಿ ಮತ್ತು ಸಿಬ್ಬಂದಿಗಳು ಶೇ 50ರಂತೆ ರೊಟೇಷನ್ ಆಧಾರದ ಮೇಲೆ ಕರ್ತವ್ಯಕ್ಕೆ ಹಾಜರಾಗತಕ್ಕದ್ದು.
ಹೀಗೆ ಹಾಜರಾತಿಯಿಂದ ವಿನಾಯಿತಿ ನೀಡಲ್ಟಟ್ಟ ಇಲಾಖೆಯ ಕಾರ್ಯದರ್ಶಿ/ ಇಲಾಖಾ ಮುಖ್ಯಸ್ಥರು ಇಚ್ಛಿಸಿದಲ್ಲಿ ಅವರು ಬಯಸುವಂತಹ ಅಧಿಕಾರಿ/ ನೌಕರರು ಯಾವುದೇ ಕಾರಣ ನೀಡದೇ ಕಚೇರಿಗೆ ಹಾಜರಾಗುವುದು.
ಕೋವಿಡ್ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿಗಳು/ ಸಿಬ್ಬಂದಿಗಳು ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಸೂಚನೆ ನೀಡಲಾಗಿದೆ. ಜನವರಿ 18ರ ತನಕ ಈ ಸುತ್ತೋಲೆ ಜಾರಿಯಲ್ಲಿರುತ್ತದೆ ಬಳಿಕ ಸರ್ಕಾರದ ಮುಂದಿನ ಆದೇಶದ ಅನ್ವಯ ಕ್ರಮ ಕೈಗೊಳ್ಳಲಾಗುತ್ತದೆ.
ಸಾರ್ವಜನಿಕ ಪ್ರವೇಶ ನಿಯಂತ್ರಣ; ವಿಧಾನಸೌಧ, ವಿಕಾಸಸೌಧ ಮತ್ತು ಬಹುಮಹಡಿ ಕಟ್ಟಡಗಳಿಗೆ ಸಾರ್ವಜನಿಕರ ಪ್ರವೇಶ ನಿಯಂತ್ರಿಸುವ ಬಗ್ಗೆ ಮಾರ್ಗಸೂಚಿ ಪ್ರಕಟವಾಗಿದೆ.
ಸಚಿವಾಲಯದಲ್ಲಿ ಕರ್ತವ್ಯ ನಿರ್ವಹಣೆ ಮಾಡುವ ಅಧಿಕಾರಿ/ ಸಿಬ್ಬಂದಿಗಳ ಆರೋಗ್ಯ ಮತ್ತು ಆಡಳಿತದ ಹಿತದೃಷ್ಟಿಯಿಂದ ವಿಧಾನಸೌಧ, ವಿಕಾಸಸೌಧ ಮತ್ತು ಬಹುಮಹಡಿ ಕಟ್ಟಡಗಳಿಗೆ ಸಾರ್ವಜನಿಕ ಪ್ರವೇಶವನ್ನು ನಿಯಂತ್ರಿಸುವುದು ಅನಿವಾರ್ಯವಾಗಿದೆ.
ಸಚಿವಾಲಯದ ಕಟ್ಟಡಗಳಿಗೆ ಮಾನ್ಯ ಮುಖ್ಯಮಂತ್ರಿಗಳ ಸಚಿವಾಲಯ, ಮಾನ್ಯ ಸಚಿವರು ಹಾಗೂ ಸಚಿವಾಲಯದ ಇಲಾಖೆಗಳಿಂದ ಮುಂಚಿತವಾಗಿ ನಿಗದಿಪಡಿಸಲಾದ ಭೇಟಿಗೆ ಮಾತ್ರ ಆಗಮಿಸುವ ಇಲಾಖಾ ಮುಖ್ಯಸ್ಥರು/ ಸಿಬ್ಬಂದಿ ಹಾಗೂ ಸಾರ್ವಜನಿಕರು 2ನೇ ಡೋಸ್ ಲಸಿಕೆ ಪಡೆದ ಪ್ರಮಾಣ ಪತ್ರವನ್ನು ಹೊಂದಿರತಕ್ಕದ್ದು. ಸಾಮಾನ್ಯ ಭೇಟಿಗೆ ಸಾರ್ವಜನಿಕರ ಪ್ರವೇಶವನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿರ್ಬಂಧಿಸಲಾಗಿದೆ.
ಸಚಿವಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರತಿಯೊಬ್ಬ ಅಧಿಕಾರಿ/ ಸಿಬ್ಬಂದಿಗಳು 2ನೇ ಡೋಸ್ ಕೋವಿಡ್ ಲಸಿಕೆಯನ್ನು ಪಡೆದಿರುವ ಪ್ರಮಾಣ ಪತ್ರವನ್ನು ಹೊಂದಿ, ಕಚೇರಿಗೆ ಆಗಮಿಸುವುದು. ಇಲ್ಲದಿದ್ದಲ್ಲಿ ಅಂತಹವರ ಗೈರು ಹಾಜರಿಯನ್ನು ವೇತನ ರಹಿತ ರಜೆಯೆಂದು ಪರಿಗಣಿಸಲಾಗುತ್ತದೆ.
ಈ ಸಂಬಂಧ ಪೊಲೀಸ್ ಇಲಾಖೆ, ಸ್ವಾಗತ ಕೇಂದ್ರ ಮತ್ತು ಭದ್ರತಾಧಿಕಾರಿಗಳು ಸಚಿವಾಲಯದ ಕಟ್ಟಡಗಳಿಗೆ ಆಮಮಿಸುವ ಇಲಾಖೆ/ ಕಚೇರಿಗಳಿಂದ ನೀಡಲಾಗುವ ಪೂರ್ವಾನುಮತಿ ಪತ್ರ/ ಸಭಾ ಸೂಚನಾ ಪತ್ರ ಹಾಗೂ 2ನೇ ಡೋಸ್ ಕೋವಿಡ್ ಲಸಿಕೆ ಪ್ರಮಾಣ ಪತ್ರವನ್ನು ಖಚಿತಪಡಿಸಿಕೊಂಡು ಪ್ರವೇಶಕ್ಕೆ ಅನುಮತಿ ನೀಡಬೇಕು ಎಂದು ಸೂಚನೆ ನೀಡಲಾಗಿದೆ.
ಸಚಿವಾಲಯದ ಕಟ್ಟಡಗಳಲ್ಲಿನ ಪ್ರತಿಯೊಂದು ಮಹಡಿ ಕಾರಿಡಾರ್‌ನಲ್ಲಿ ಜನರು ಒಟ್ಟಾಗಿ ಗುಂಪು ಸೇರದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ಜನರು ಸಹಕಾರ ನೀಡಬೇಕು ಎಂದು ಮನವಿ ಮಾಡಲಾಗಿದೆ.












Click it and Unblock the Notifications