ಬೆಂಗಳೂರಿನಲ್ಲಿ ಮಂತ್ರಿಗಳು, ಶಾಸಕರಿಗೆ ಪ್ರತ್ಯೇಕ ಕೋವಿಡ್ ಆಸ್ಪತ್ರೆ ಸ್ಥಾಪನೆ
ಬೆಂಗಳೂರು, ಜೂ. 25: ಕೊರೊನಾ ವೈರಸ್ ಆತಂಕ ಈಗ ಎಲ್ಲೆಡೆ ಆವರಿಸಿದೆ. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಸರ್ಕಾರ ಇರುವ ಆಸ್ಪತ್ರೆಗಳಲ್ಲಿಯೇ ಜನ ಸಾಮಾನ್ಯರಿಗೆ ಚಿಕಿತ್ಸೆ ಕೊಡಿಸುತ್ತಿದೆ. ಈಗಾಗಲೇ ಸೋಂಕಿತರ ಸಂಖ್ಯೆ ಹೆಚ್ಚಾಗಿರುವುದರಿಂದ ರೋಗ ಲಕ್ಷಣ ವ್ಯಕ್ತಪಡಿಸದ ಸೋಂಕಿತರನ್ನು ಆಸ್ಪತ್ರೆಗಳಿಂದ ಬಿಡುಗಡೆ ಮಾಡಲು ಸರ್ಕಾರ ಆದೇಶವನ್ನೂ ಮಾಡಿದೆ. ರಾಜ್ಯದಲ್ಲಿ ಈ ವರೆಗೆ ಒಂದೇ ಒಂದು ಆಸ್ಪತ್ರೆಯನ್ನು ಕೊರೊನಾ ವೈರಸ್ ಸೋಂಕಿತ ಜನಸಾಮಾನ್ಯರ ಚಿಕಿತ್ಸೆಗೆ ಸ್ಥಾಪನೆ ಮಾಡಲಾಗಿಲ್ಲ. ಇರುವ ಆಸ್ಪತ್ರೆಗಳಲ್ಲಿಯೆ ಸೋಂಕಿತರಿಗೆ ಚಿಕಿತ್ಸೆ ಕೊಡಲಾಗುತ್ತಿದೆ.
Recommended Video
ಆದರೆ ಸೋಂಕಿಗೆ ತುತ್ತಾಗಬಹುದಾದ ಚುನಾಯಿತ ಜನಪ್ರತಿನಿಧಿಗಳು ಅಂದರೆ ಶಾಸಕರು, ಸಂಸದರು, ಸಚಿವರು ಹಾಗೂ ಅಧಿಕಾರಿಗಳಿಗೆ ಚಿಕಿತ್ಸೆ ಕೊಡಲು ವಿಶೇಷ ಕೋವಿಡ್ ಆಸ್ಪತ್ರೆ ಸ್ಥಾಪನೆಗೆ ಅಧಿಸೂಚನೆ ಹೊರಡಿಸಲಾಗಿದೆ. ವಿಶೇಷವಾಗಿ ಅದನ್ನು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಮಾತ್ರ ಕಾಯ್ದಿರಿಸುವಂತೆ ಅಧಿಸೂಚನೆಯಲ್ಲಿ ಆದೇಶ ಮಾಡಲಾಗಿದೆ. ಆ ಮೂಲಕ ಜನಸಾಮಾನ್ಯರಿಗೊಂದು, ಪ್ರಭಾವಿಗಳಿಗೊಂದು ಚಿಕಿತ್ಸೆ ಎಂಬುದನ್ನು ಸರ್ಕಾರ ತನ್ನ ಅಧಿಸೂಚನೆ ಮೂಲಕ ತೋರಿಸಿದೆ.

ಆಸ್ಪತ್ರೆ ಸ್ಥಾಪನೆಗೆ ಅಧಿಸೂಚನೆ
ಹೆಚ್ಚುತ್ತಿರುವ ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಚುನಾಯಿತ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಪ್ರತ್ಯೇಕ ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಅಧಿಸೂಚನೆ ಹೊರಡಿಸಲಾಗಿದೆ. ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಕೊರೊನಾ ವೈರಸ್‌ಗೆ ಅತ್ಯುತ್ತಮ ಚಿಕಿತ್ಸೆ ದೊರೆಯುವಂತೆ ಮಾಡಲು ಸರ್ಕಾರ ಅಧಿಸೂಚನೆ ಹೊರಡಿಸಿದೆ. ಸಚಿವರು, ಸಂಸದರು, ಶಾಸಕರು ಹಾಗೂ ಹಿರಿಯ ಅಧಿಕಾರಿಗಳು ಸೇರಿದಂತೆ ಚುನಾಯಿತ ಜನಪ್ರತಿನಿಧಿಗಳಿಗೆ ಚಿಕಿತ್ಸೆ ಕೊಡಲು ಪ್ರತ್ಯೇಕ ಕೋವಿಡ್ ಆಸ್ಪತ್ರೆಯನ್ನು ಬೆಂಗಳೂರಿನಲ್ಲಿ ಸ್ಥಾಪಿಸಲಾಗುತ್ತಿದೆ.

ಗೆಸ್ಟ್‌ಹೌಸ್ ಇನ್ನು ಕೋವಿಡ್ ಆಸ್ಪತ್ರೆ
ಬೆಂಗಳೂರಿನ ಕುಮಾರಕೃಪಾ ಅತಿಥಿಗೃಹವನ್ನು ರಾಜಕಾರಣಿಗಳು ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳಿಗೆ ಚಿಕಿತ್ಸೆ ಕೊಡಲು ಅನುಕೂಲವಾಗುವಂತೆ ಕೋವಿಡ್-19 ಆಸ್ಪತ್ರೆಯನ್ನಾಗಿ ಮಾರ್ಪಡಿಸಲು ಅಧಿಸೂಚನೆ ಹೊರಡಿಸಲಾಗಿದೆ ಎಂದು ಆರೋಗ್ಯ ಇಲಾಖೆ ನಿರ್ದೇಶಕರು ತಿಳಿಸಿದ್ದಾರೆ. ಅತಿಥಿಗೃಹದ ಒಂದು ಭಾಗದ 100 ಕೊಠಡಿಗಳನ್ನು ಕೋವಿಡ್ ಕೇರ್ ಕೇಂದ್ರವನ್ನಾಗಿ ಬದಲಿಸಲು ಆದೇಶ ಮಾಡಿದ್ದಾರೆ.
ಅತಿಥಿಗೃಹದ ಕೊಠಡಿಗಳನ್ನು ಮುಂಗಡ ಕಾಯ್ದಿರಿಸಲು ಅವಕಾಶ ಕೊಡಬಾರದು. ಕೊಟ್ಟರೂ ಗುರುತಿಸಿದ ಭಾಗದ ಶೇಕಡಾ 30ರಷ್ಟು ಕೊಠಡಿಗಳನ್ನು ಮಾತ್ರ ಕೊಡಬೇಕು. ಜೊತೆಗೆ ಅತಿಥಿಗೃಹದ ಎದುರು ಯಾವುದೇ ಗುಂಪು ಸೇರದಂತೆ ನೋಡಿಕೊಳ್ಳಬೇಕು ಎಂದು ಆದೇಶ ಮಾಡಿದ್ದಾರೆ.

ಸಂದರ್ಶಕರಿಗೆ ನಿಷೇಧ
ಜೊತೆಗೆ ಸಂದರ್ಶಕರು ಬಂದಾಗ ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯ ಮಾಡಬೇಕು. ಅತಿಥಿಗೃಹದಲ್ಲಿ ಕರ್ತವ್ಯ ನಿರ್ವಹಿಸುವ ಪ್ರತಿ ಸಿಬ್ಬಂದಿಗೂ ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯ ಮಾಡಬೇಕು. ಒಟ್ಟಾರೆ ಬೇರೆ ಯಾರೇ ಬಂದರೂ ಪ್ರವೇಶವನ್ನು ಕಡ್ಡಾಯವಾಗಿ ನಿಷೇಧಿಸಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಚುನಾಯಿತ ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳ ಚಿಕಿತ್ಸೆ ಹಾಗೂ ನಿರ್ವಹಣೆಯ ಸಂಬಂಧ ರಾಜ್ಯ ಸರ್ಕಾರದಿಂದ ಕಾಲಕಾಲಕ್ಕೆ ಹೊರಡಿಸಲಾಗುವ ಎಲ್ಲಾ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿರುತ್ತದೆ ಎಂದು ಅಧಿಸೂಚನೆಯಲ್ಲಿ ಸೂಚಿಸಲಾಗಿದೆ.

ಜನರ ವಿರೋಧ
ಜನಪ್ರತಿನಿಧಗಳು ಹಾಗೂ ಅಧಿಕಾರಿಗಳಿಗೆ ಮಾತ್ರ ಪ್ರತ್ಯೇಕ ವಿಶೇಷ ಕೋವಿಡ್ ಆಸ್ಪತ್ರೆ ಸ್ಥಾಪನೆಗೆ ಜನ ಸಾಮನ್ಯರು ವಿರೋಧಿಸಿದ್ದಾರೆ. ಜನಪ್ರತಿನಿಧಿಗಳು ಅಧಿಕಾರಿಗಳನ್ನೇಕೆ ಮೊದಲ ದರ್ಜೆ ಪ್ರಜೆಗಳು ಎಂದು ಪರಿಗಣಿಸಬೇಕು? ವಿಕ್ಟೋರಿಯಾ, ಕೆ.ಸಿ. ಜನರಲ್ ಅಸ್ಪತ್ರೆ , ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಆಸ್ಪತ್ರೆ ಈವರಗೆ ಸರಿಸುಮಾರು 600ಕ್ಕೂ ಹೆಚ್ಚು ಸೋಂಕಿತರ ರೋಗ ವಾಸಿ ಮಾಡಿದೆಯಾದರೆ ಅದನ್ನೇ ಈ ಮೊದಲ ದರ್ಜೆ ಪ್ರಜೆಗಳೂ ಬಳಸಬಹುದಲ್ಲವೇ? ಸಂಕಟದ ಕಾಲದಲ್ಲಿ ತಮ್ಮನ್ನು 'ವಿಶೇಷ ನಾಗರಿಕರು' ಎಂಬಂತೆ ಅಧಿಕಾರಸ್ಥರು ಬಿಂಬಿಸಿಕೊಳ್ಳುವ ಪ್ರವೃತ್ತಿಗೆ ಮೊದಲು ಚಿಕಿತ್ಸೆಯಾಗಬೇಕು ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications