ಕೊರೊನಾ ಕೇಸ್ ಏರಿಕೆ: ರಾಜ್ಯದಲ್ಲಿ ಶಾಲೆಗಳಿಗೆ ಶಿಕ್ಷಣ ಇಲಾಖೆಯಿಂದ ಹೊಸ ಗೈಡ್‌ಲೈನ್ಸ್ ಬಿಡುಗಡೆ
Covid guidelines for schools-colleges: ಹೋದೆಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷಿಯೊಳಗೆ ಎಂಬಂತೆ ಮತ್ತೆ ರಾಜ್ಯದಲ್ಲಿ ಕೋವಿಡ್ ವಕ್ಕರಿಸಿಕೊಂಡಿದೆ. ದಿನದಿಂದ ದಿನಕ್ಕೆ ಪ್ರಕರಣಗಳು ಹೆಚ್ಚಾಗುತ್ತಲಿದ್ದು, ಈ ಹಿನ್ನೆಲೆ ಶಿಕ್ಷಣ ಇಲಾಖೆಯು ಶಾಲೆಗಳಿಗೆ ಮುಂಜಾಗ್ರತಾ ಕ್ರಮವಾಗಿ ಮಾರ್ಗಸೂಚಿಗಳನ್ನು ಹೊರಡಿಸಿದೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ರಾಜ್ಯದಲ್ಲಿ ಬೇಸಿಗೆ ರಜೆ ಮುಕ್ತಾಯವಾಗಿ ಮೇ 29ರಿಂದ ಶಾಲೆಗಳು ಆರಂಭವಾಗಿವೆ. ಇದೀಗ ಕೊರೊನಾ ಕಾಟ ಹಿನ್ನೆಲೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಶಿಕ್ಷಣ ಇಲಾಖೆ ಶಾಲೆಗಳಿಗೆ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ.

ರಾಜ್ಯಾದ್ಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಆರೋಗ್ಯ ಇಲಾಖೆ ಹೈ ಅಲರ್ಟ್ ಆಗಿದೆ. ಎಲ್ಲಾ ಆಸ್ಪತ್ರೆಗಳಲ್ಲೂ ಕೊರೊನಾ ಪಾಸಿಟಿವ್ ಬರುವವರ ಸಂಖ್ಯೆ ಏರಿಕೆ ಆಗುತ್ತಿದ್ದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಕೊರೊನಾ ವೈರಸ್‌ಗೆ ಬೆಂಗಳೂರಿನಲ್ಲಿ ಮೊದಲ ಬಲಿ ವರದಿ ಆಗಿತ್ತು. ಇದರ ಬೆನ್ನಲ್ಲೇ ಶಿಕ್ಷಣ ಇಲಾಖೆ ಕೂಡ ಎಚ್ಚೆತ್ತುಕೊಂಡಿದೆ.
ಈಗಾಗಲೇ ಬೇಸಿಗೆ ರಜೆ ಮುಕ್ತವಾಗಿದ್ದಿ, ಶಾಲೆಗಳು ಕೂಡ ಆರಂಭ ಆಗಿವೆ. ಈ ನಡುವೆಯೇ ಇದೀಗ ರಾಜ್ಯ ಸರ್ಕಾರ ಶಾಲಾ-ಕಾಲೇಜುಗಳಿಗೆ ಹೊಸ ಮಾರ್ಗಸೂಚಿಗಳನ್ನ ಬಿಡುಗಡೆಗೊಳಿಸಿದೆ. ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯು ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳಿಗೆ ಹೊಸ ಕೊವಿಡ್ ಮಾರ್ಗಸೂಚಿಗಳನ್ನ ಹೊರಡಿಸಿದೆ. ಮಕ್ಕಳ ಹಾಗೂ ಶಾಲಾ ಸಿಬ್ಬಂದಿ ಆರೋಗ್ಯ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ಸುತ್ತೋಲೆಯನ್ನು ಜಾರಿಗೆ ತರಲಾಗಿದೆ. ಈ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಎಲ್ಲಾ ಶಾಲೆಗಳಿಗೆ ಸೂಚಿಸಿದೆ.
ಮಾರ್ಗಸೂಚಿಗಳು
* ಮಕ್ಕಳಲ್ಲಿ ಜ್ವರ, ಕೆಮ್ಮು, ನೆಗಡಿ ಅಥವಾ ಇತರೆ ಕೊವಿಡ್-ಸಂಬಂಧಿತ ಗುಣಲಕ್ಷಣಗಳು ಕಂಡುಬಂದಲ್ಲಿ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಬಾರದು.
* ರೋಗ ಲಕ್ಷಣಗಳು ಕಂಡುಬಂದರೆ ವೈದ್ಯರ ಸಲಹೆಯಂತೆ ಚಿಕಿತ್ಸೆ ನೀಡಬೇಕು ಹಾಗೂ ಮಕ್ಕಳು ಸಂಪೂರ್ಣವಾಗಿ ಗುಣಮುಖರಾದ ಬಳಿಕ ಶಾಲೆಗೆ ಕಳುಹಿಸಬೇಕು.
* ಶಾಲೆಗೆ ಬಂದ ನಂತರ ಮಕ್ಕಳಲ್ಲಿ ಯಾವುದೇ ರೋಗ ಲಕ್ಷಣಗಳು ಕಂಡುಬಂದರೆ ಶಾಲಾ ಆಡಳಿತವು ತಕ್ಷಣ ಪೋಷಕರಿಗೆ ಮಾಹಿತಿ ನೀಡಿ ಮಕ್ಕಳನ್ನು ಮನೆಗೆ ಕಳುಹಿಸಬೇಕು.
* ಶಾಲಾ ಸಿಬ್ಬಂದಿಯಲ್ಲಿ ಜ್ವರ, ಕೆಮ್ಮು, ನೆಗಡಿ ಸೇರಿದಂತೆ ಇತರೆ ರೋಗ ಲಕ್ಷಣಗಳು ಕಂಡುಬಂದರೆ, ಅವರು ತಕ್ಷಣ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಅಗತ್ಯವಿದ್ದರೆ, ವೈದ್ಯರ ಸಲಹೆ ಪಡೆದು, ಸಂಪೂರ್ಣ ಗುಣಮುಖ ಆಗುವವರೆಗೂ ಶಾಲೆಗೆ ಹಾಜರಾಗದಂತೆ ಸೂಚಿಸಲಾಗಿದೆ.
* ಶಾಲಾ ಆವರಣ, ತರಗತಿ ಕೊಠಡಿಗಳು, ಶೌಚಾಲಯಗಳು, ಮೇಲ್ಚಾವಣೆ, ಬಿಸಿಯೂಟ ಪರಿಕರಗಳು ಸೇರಿದಂತೆ ಎಲ್ಲವನ್ನೂ ನಿಯಮಿತವಾಗಿ ಸ್ವಚ್ಛಗೊಳಿಸಬೇಕು.
* ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇದರಲ್ಲಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಮತ್ತು ಕೈಗಳನ್ನು ನಿಯಮಿತವಾಗಿ ಸ್ಯಾನಿಟೈಸ್ ಮಾಡುವುದು ಸೇರಿದೆ.
* ಶಾಲೆಗಳಲ್ಲಿ ಸ್ಯಾನಿಟೈಸರ್, ಸಾಬೂನು, ಮತ್ತು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು.
ಶಾಲಾ ಶಿಕ್ಷಣ ಇಲಾಖೆಯು ಈ ಮಾರ್ಗಸೂಚಿಗಳನ್ನು ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳಿಗೆ ಕಡ್ಡಾಯವಾಗಿ ಅನುಸರಿಸುವಂತೆ ಸೂಚನೆ ನೀಡಿದೆ. ಮಕ್ಕಳು ಮತ್ತು ಶಾಲಾ ಸಿಬ್ಬಂದಿಯ ಆರೋಗ್ಯ ರಕ್ಷಿಸುವುದು ಈ ಸುತ್ತೋಲೆಯ ಉದ್ದೇಶವಾಗಿದೆ ಎಂದು ಇಲಾಖೆ ತಿಳಿಸಿದೆ. ಕರ್ನಾಟಕ ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ, ಸದ್ಯ ರಾಜ್ಯದಲ್ಲಿ 253 ಕೊರೊನಾ ಸಕ್ರಿಯ ಸೋಂಕಿತರಿದ್ದಾರೆ. ಈ ಪೈಕಿ 3 ಮಂದಿ ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆಗೊಳಗಾಗಿದ್ದು, 250 ಮಂದಿ ಮನೆಯಲ್ಲಿ ಆರೈಕೆಯಲ್ಲಿ ಇದ್ದಾದ್ದಾರೆ. ಈವರೆಗೂ 4 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.












Click it and Unblock the Notifications