ನೀವು ಕುಡಿಯುವ ಬಾಟಲ್ ನೀರು ಅಸಲಿಯೇ ಅಥವಾ ನಕಲಿಯೇ? ಪತ್ತೆ ಹಚ್ಚಲು ಈ ಸರಳ ಟಿಪ್ಸ್ ಫಾಲೋ ಮಾಡಿ
Counterfeit Bottled Drinking Water: ಇತ್ತೀಚಿನ ದಿನಗಳಲ್ಲಿ ಆಹಾರ ಸುರಕ್ಷತೆ ಎಂಬುದು ಕೇವಲ ನಾವು ತಿನ್ನುವ ಊಟ-ತಿಂಡಿಗೆ ಮಾತ್ರ ಸೀಮಿತವಾಗಿಲ್ಲ. ಪಂಚತಾರ ಹೊಟೇಲ್‌ಗಳ ಮೇಲೆ ಭರವಸೆ ಇಡಲು ಸಾಧ್ಯವಿಲ್ಲ ಎನ್ನುವುದು ಇತ್ತೀಚೆಗೆ ಆಹಾರ ಸುರಕ್ಷತೆ ಇಲಾಖೆಯ ತಂಡ ಬೆಂಗಳೂರಿನ ಮಾಡಿದ ರೈಡಿನಿಂದಾಗಿ ಎಲ್ಲರಿಗೂ ತಿಳಿದಿದೆ. ನಾವು ದಿನನಿತ್ಯ ಬಳಸುವ ಪ್ಯಾಕ್ ಮಾಡಿದ ಆಹಾರ ಪದಾರ್ಥಗಳು ಮತ್ತು ಕುಡಿಯುವ ನೀರಿನ ಬಾಟಲಿಗಳ ಮೇಲೂ ಸಾಕಷ್ಟು ಅನುಮಾನಗಳು ಮೂಡುತ್ತಿವೆ.
ರೈಲ್ವೆ ನಿಲ್ದಾಣಗಳು, ಬಸ್ ನಿಲ್ದಾಣಗಳಲ್ಲಿ ನಕಲಿ ಪ್ಯಾಕೇಜ್ಡ್ ಕುಡಿಯುವ ನೀರಿನ ಹಾವಳಿ ವ್ಯಾಪಕವಾಗಿ ಹೆಚ್ಚಾಗುತ್ತಿದೆ. ಕಡಿಮೆ ವೆಚ್ಚದಲ್ಲಿ ತಯಾರಾಗುವ ಇಂತಹ ನಕಲಿ ಬಾಟಲಿಗಳನ್ನ ಮಾರಾಟ ಮಾಡಿ ಅಂಗಡಿಯವರು ಹೆಚ್ಚಿನ ಲಾಭ ಗಳಿಸಲು ಯತ್ನಿಸುತ್ತಿದ್ದು, ಇದು ಗ್ರಾಹಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.

ಹೆಸರು ಬದಲಿಸಿ ಗ್ರಾಹಕರಿಗೆ ವಂಚನೆ
ನಕಲಿ ನೀರಿನ ದಂಧೆಕೋರರು ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುವ ಪ್ರಮುಖ ಬ್ರ್ಯಾಂಡ್‌ಗಳ ಹೆಸರನ್ನೇ ಹೋಲುವಂತೇ ಅಕ್ಷರಗಳನ್ನ ಸ್ವಲ್ಪ ಬದಲಾಯಿಸಿ ಲೇಬಲ್ ತಯಾರಿಸುತ್ತಾರೆ. ಉದಾಹರಣೆಗೆ, ಬ್ರ್ಯಾಂಡ್ ಹೆಸರಿನ ಒಂದು ಅಕ್ಷರವನ್ನ ಸ್ವಲ್ಪ ಆಚೆ ಇಚೆ ಅದಲು-ಬದಲು ಮಾಡಿ, ಅದೇ ರೀತಿಯ ಬಣ್ಣ ಮತ್ತು ಡಿಸೈನ್ ಬಳಸಿಕೊಂಡು ಮಾರಾಟ ಮಾಡುತ್ತಾರೆ.
ದೂರ ಪ್ರಯಾಣದಲ್ಲಿರುವ ಜನರು ಅಥವಾ ಅವಸರದಲ್ಲಿರುವ ಗ್ರಾಹಕರು ಈ ವ್ಯತ್ಯಾಸವನ್ನ ಗಮನಿಸದೆ ಸುಲಭವಾಗಿ ಮೋಸ ಹೋಗುತ್ತಾರೆ. ಆದ್ದರಿಂದ ಯಾವುದೇ ನೀರಿನ ಬಾಟಲ್ ಖರೀದಿಸುವ ಮುನ್ನ ಬ್ರ್ಯಾಂಡ್ ಹೆಸರನ್ನು ಸೂಕ್ಷ್ಮವಾಗಿ ಗಮನಿಸುವುದು ತುಂಬ ಮುಖ್ಯ.
ಐಎಸ್‌ಐ ಮಾರ್ಕ್ ಮತ್ತು ಬಿಐಎಸ್ ಪರಿಶೀಲನೆ
ಯಾವುದೇ ಪ್ಯಾಕೇಜ್ಡ್ ಕುಡಿಯುವ ನೀರನ್ನು ಖರೀದಿಸುವಾಗ ಬಾಟಲಿಯ ಸೀಲ್ ಸರಿಯಾಗಿದೆಯೇ ಎಂದು ಮೊದಲು ನೋಡಿಕೊಳ್ಳಿ. ಬಾಟಲಿಯ ಮೇಲೆ ಉತ್ಪಾದನಾ ದಿನಾಂಕ ಅಂದರೆ ಮ್ಯಾನ್ಯುಫ್ಯಾಕ್ಚರ್ ದಿನಾಂಕ, ಬ್ಯಾಚ್ ಸಂಖ್ಯೆ ಮತ್ತು ಭಾರತೀಯ ಮಾನಕ ಸಂಸ್ಥೆ (BIS) ನೀಡುವ ಅಧಿಕೃತ ISI ಮಾರ್ಕ್ ಇದೆಯೇ ಎಂಬುದನ್ನು ಪರಿಶೀಲಿಸಬೇಕು.
ಕೇವಲ ಲೋಗೋ ನೋಡಿದರೆ ಸಾಕಾಗುವುದಿಲ್ಲ. ಆ ಮಾರ್ಕ್ ಅಸಲಿಯೇ ಎಂಬುದನ್ನ ಪರಿಶೀಲಿಸಲು ಗ್ರಾಹಕರು 'BIS CARE' ಮೊಬೈಲ್ ಆ್ಯಪ್ ಬಳಸಬಹುದು. ಈ ಆ್ಯಪ್ ಮೂಲಕ ಬಾಟಲಿ ಮೇಲಿರುವ ಸಿಎಂ/ಎಲ್ ಸಂಖ್ಯೆಯನ್ನ ನಮೂದಿಸಿ ಉತ್ಪನ್ನದ ನೈಜತೆಯನ್ನ ಕ್ಷಣಾರ್ಧದಲ್ಲಿ ಖಚಿತ ಪಡಿಸಿಕೊಳ್ಳಬಹುದ.
ನೀರಿನ ಗುಣಮಟ್ಟ
ಕುಡಿಯುವ ನೀರು ಯಾವಾಗಲೂ ಯಾವುದೇ ಬಣ್ಣ ಅಥವಾ ವಾಸನೆಯನ್ನ ಹೊಂದಿರಬಾರದು. ನೀರಿನಲ್ಲಿ ಸ್ವಲ್ಪವಾದರೂ ಅಸಾಮಾನ್ಯ ವಾಸನೆ, ಬದಲಾದ ರುಚಿ ಅಥವಾ ಕಲ್ಮಶ ಕಂಡುಬಂದರೆ ಅಂತಹ ನೀರನ್ನ ಸೇವಿಸಬೇಡಿ.
ಪ್ರಯಾಣದ ಸಮಯದಲ್ಲಿ ಹಣ ನೀಡಿ ನಕಲಿ ಬಾಟಲ್ ನೀರು ಖರೀದಿಸುವ ಬದಲು, ಮನೆಯಿಂದಲೇ ಫಿಲ್ಟರ್ ಮಾಡಿದ ನೀರನ್ನ ಸ್ವಚ್ಛವಾದ ಮರುಬಳಕೆ ಮಾಡಬಹುದಾದ ಬಾಟಲಿಗಳಲ್ಲಿ ಕೊಂಡೊಯ್ಯುವುದು ಆರೋಗ್ಯದ ದೃಷ್ಟಿಯಿಂದ ತುಂಬ ಒಳ್ಳೆಯದು.
ಅನುಮಾನ ಬಂದರೆ ದೂರು ನೀಡುವುದು ಹೇಗೆ?
ನೀವು ಖರೀದಿಸಿದ ನೀರಿನ ಬಾಟಲಿ ನಕಲಿ ಎಂದು ಕಂಡುಬಂದರೆ ಅಥವಾ ಅದರ ಸೀಲ್ ಒಡೆದಿದ್ದರೆ ಸುಮ್ಮನಾಗಬೇಡಿ. ಕೂಡಲೇ 'BIS CARE' ಆ್ಯಪ್ ಮೂಲಕ ನೇರವಾಗಿ ದೂರು ದಾಖಲಿಸಬಹುದು ಅಥವಾ [email protected] ಇಮೇಲ್ ವಿಳಾಸಕ್ಕೆ ದೂರು ಕಳುಹಿಸಬಹುದು. ಜಾಗೃತರಾಗಿ ಗುಣಮಟ್ಟವನ್ನ ಪರಿಶೀಲಿಸಿ ನೀರು ಕುಡಿಯುವುದು ನಮ್ಮ ಆರೋಗ್ಯ ತುಂಬ ಒಳ್ಳೆಯದು.


Click it and Unblock the Notifications
