ಲೋಕಾಯುಕ್ತ ಕಚೇರಿಯಿಂದ ಕಡತ ಸಾಗಿಸಿದ ಇಬ್ಬರು ಯಾರು?

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಮಾರ್ಚ್ 14 : ಕರ್ನಾಟಕ ಲೋಕಾಯುಕ್ತದಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ಐಟಿ), ಲೋಕಾಯುಕ್ತ ಕಚೇರಿಯಿಂದ ಕಾಣೆಯಾದ ಕಡತಗಳ ಬಗ್ಗೆ ತನಿಖೆ ಆರಂಭಿಸಿದೆ. ಕಚೇರಿಯಿಂದ ಕಡತಗಳನ್ನು ಸಾಗಿಸಿದ ವ್ಯಕ್ತಿಗಳ ಗುರುತು ಪತ್ತೆ ಹಚ್ಚಲು ವಿವಿಧ ಇಲಾಖೆಗಳಿಗೆ ಪತ್ರ ಬರೆದಿದೆ.

ಭ್ರಷ್ಟಾಚಾರ ಪ್ರಕರಣ ಬಯಲಿಗೆ ಬಂದ ಒಂದೆರಡು ದಿನಗಳಲ್ಲಿಯೇ ಇಬ್ಬರು ಲೋಕಾಯುಕ್ತರ ಕಚೇರಿಯಿಂದ ಕಡತಗಳನ್ನು ಹೊತ್ತೊಯ್ದು ನ್ಯಾ.ಭಾಸ್ಕರರಾವ್ ಅವರ ಕಾರಿನಲ್ಲಿಡುತ್ತಿದ್ದ ದೃಶ್ಯ ಮಾಧ್ಯಮಗಳಲ್ಲಿ ಸೆರೆಯಾಗಿದೆ. ಈ ವ್ಯಕ್ತಿಗಳು ಯಾರು? ಎನ್ನುವುದನ್ನು ಪತ್ತೆ ಹಚ್ಚಲು ಸಹಕರಿಸಿ ಎಂದು ಎಸ್‌ಐಟಿ ಬಿಬಿಎಂಪಿ ಸೇರಿದಂತೆ ವಿವಿಧ ಇಲಾಖೆಗಳಿಗೆ ಪತ್ರ ಬರೆದು ಸೂಚನೆ ನೀಡಿದೆ. [ಭಾಸ್ಕರರಾವ್ ವಿರುದ್ಧದ ತನಿಖೆಗೆ ರಾಜ್ಯಪಾಲರ ಒಪ್ಪಿಗೆ ಬೇಕು]

lokayukta

ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ವೈ. ಭಾಸ್ಕರರಾವ್ ಅವರ ವಿರುದ್ಧ ಈ ಪ್ರಕರಣದಲ್ಲಿ ಮೊಕದ್ದಮೆ ದಾಖಲು ಮಾಡಲು ಎಸ್‌ಐಟಿ ರಾಜ್ಯಪಾಲರ ಅನುಮತಿ ಕೇಳಿದೆ. ಎಸ್ಐಟಿ ಅಧಿಕಾರಿಗಳು ಸೂಕ್ತ ಸಾಕ್ಷಿಗಳನ್ನು ಸಂಗ್ರಹಿಸಲು ಭಾಸ್ಕರ್ ರಾವ್ ಅವರ ಕಚೇರಿಯಲ್ಲಿನ ಕಡತಗಳನ್ನು ಕಾರಿಗೆ ಸಾಗಣೆ ಮಾಡಿದ ಇಬ್ಬರನ್ನು ಪತ್ತೆ ಹಚ್ಚಲು ವಿವಿಧ ಇಲಾಖೆಗಳಿಗೆ ಪತ್ರ ಬರೆದಿದೆ. [ಕರ್ನಾಟಕ ಲೋಕಾಯುಕ್ತರ ನೇಮಕ ಮತ್ತಷ್ಟು ವಿಳಂಬ]

ಕಡತಗಳನ್ನು ಕಾರಿಗೆ ಸಾಗಣೆ ಮಾಡಿದ ಇಬ್ಬರು ವ್ಯಕ್ತಿಗಳು ಯಾರು?, ಸರ್ಕಾರಿ ನೌಕರರು ಎನ್ನಲಾದ ಆ ವ್ಯಕ್ತಿಗಳು ನಿಮ್ಮ ಸಿಬ್ಬಂದಿಯೇ? ಎಂಬುದನ್ನು ಪತ್ತೆ ಮಾಡಿ ತಿಳಿಸುವಂತೆ ಎಸ್ಐಟಿ ಅಧಿಕಾರಿಗಳು ಪತ್ರದಲ್ಲಿ ಮನವಿ ಮಾಡಿದ್ದು, ಕಡತ ಸಾಗಿಸುತ್ತಿರುವ ದೃಶ್ಯಾವಳಿಯ ಸಿಡಿಯನ್ನೂ ಜೊತೆಗೆ ಕಳುಹಿಸಿಕೊಟ್ಟಿದ್ದಾರೆ. [ಲೋಕಾಯುಕ್ತದಲ್ಲಿ ಏನಿದು ಹಗರಣ?]

ಬಿಬಿಎಂಪಿ, ಖನಿಜ ಭವನ, ಜಲಮಂಡಳಿ, ಶಿಕ್ಷಣ ಇಲಾಖೆ ಸೇರಿದಂತೆ ಹಲವು ಸರ್ಕಾರಿ ಇಲಾಖೆಗಳಿಗೆ ಎಸ್‌ಐಟಿ ಪತ್ರ ಮತ್ತು ಸಿಡಿ ಕಳುಹಿಸಿದೆ. ಅದಷ್ಟು ಬೇಗ ಅವರನ್ನು ಪತ್ತೆ ಹಚ್ಚಿ ವಿವರ ನೀಡುವಂತೆ ಸೂಚನೆ ನೀಡಿದ್ದಾರೆ. [ಭಾಸ್ಕರರಾವ್ ರಾಜೀನಾಮೆ]

ಲೋಕಾಯುಕ್ತದಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಭಾಸ್ಕರರಾವ್ ಪುತ್ರ ಅಶ್ವಿನ್ ರಾವ್ ಸೇರಿದಂತೆ 10ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಿದೆ. ಭ್ರಷ್ಟಾಚಾರ ಪ್ರಕರಣ ಬೆಳಕಿಗೆ ಬಂದ ಬಳಿಕ ಕೆಲವು ದಿನಗಳ ಕಾಲ ರಜೆ ಪಡೆದಿದ್ದ ಭಾಸ್ಕರರಾವ್, ನಂತರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸದ್ಯ, ಕರ್ನಾಟಕ ಲೋಕಾಯುಕ್ತರ ಹುದ್ದೆ ತೆರವಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Special Investigation team probing corruption and extortion at the Karnataka Lokayukta launched search operations for two members who transferred files from Lokayukta Justice Bhaskar Rao office.
Please Wait while comments are loading...