ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿಕ್ಷಕರ ದಿನಾಚರಣೆಗೆ ಗುಡ್ ನ್ಯೂಸ್ ಕೊಟ್ಟ ಶಿಕ್ಷಣ ಸಚಿವ ಬಿ.ಸಿ. ನಾಗೇಶ್

|
Google Oneindia Kannada News

ಬೆಂಗಳೂರು, ಸೆ. 01 : ಕೊರೊನಾ ಸಂಕಷ್ಟಕ್ಕೆ ಒಳಗಾಗಿರುವ ಖಾಸಗಿ ಶಾಲಾ ಶಿಕ್ಷಕರಿಗೆ ಸರ್ಕಾರ ಸಂತಸದ ಸುದ್ದಿ ಕೊಟ್ಟಿದೆ. ಶಿಕ್ಷಕರ ದಿನಾಚರಣೆಗೂ ಮೊದಲೇ ಸಂಕಷ್ಟದಲ್ಲಿರುವ ಖಾಸಗಿ ಶಾಲಾ ಶಿಕ್ಷಕರಿಗೆ ಹಾಗೂ ಶಿಕ್ಷಕೇತರ ಸಿಬ್ಬಂದಿಗೆ ತಲಾ ಐದು ಸಾವಿರ ರೂ. ನಂತೆ ಗೌರವ ದನ ಬಿಡುಗಡೆ ಮಾಡಿಸಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಮಹತ್ವದ ಹೆಜ್ಜೆ ಇಟ್ಟಿದ್ದಾರೆ.

ಕೊರೊನಾ ಸಂಕಷ್ಟಕ್ಕೆ ಒಳಗಾಗಿದ್ದ ಖಾಸಗಿ ಶಾಲಾ ಶಿಕ್ಷಕರಿಗೆ ಹಾಗೂ ಶಿಕ್ಷಕೇತರ ಸಿಬ್ಬಂದಿಗೆ ತಲಾ ಐದು ಸಾವಿರ ರೂ. ಪರಿಹಾರ ನೀಡುವಂತೆ ಕೋರಿ ಖಾಸಗಿ ಶಾಲಾ ಶಿಕ್ಷಕರು ಮನವಿ ಮಾಡಿದ್ದರು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಶಿಕ್ಷಕರಿಗೆ ಹಾಗೂ ಶಿಕ್ಷಕೇತರ ಸಿಬ್ಬಂದಿಗೆ ತಲಾ 5 ಸಾವಿರ ರೂ. ಗೌರವ ಧನ ನೀಡುವಂತೆ ಆದೇಶಿಸಿದ್ದರು. ಯಡಿಯೂರಪ್ಪ ಅವರು ಆದೇಶ ಮಾಡಿ ನಾಲ್ಕು ತಿಂಗಳಾದರೂ ಖಾಸಗಿ ಶಾಲಾ ಶಿಕ್ಷಕರಿಗೆ ಗೌರವ ಧನ ಕೈಗೆ ಸೇರಿರಲಿಲ್ಲ. ಆ ನಂತರ ರಾಜ್ಯದ ರಾಜಕೀಯದಲ್ಲಿ ಆದ ಬದಲಾವಣೆಯಿಂದ ಈ ಪ್ರಸ್ತಾಪವೇ ನನೆಗುದಿಗೆ ಬಿದ್ದಿತ್ತು.

ಶಿಕ್ಷಕರ ದಿನಾಚರಣೆಗೆ ಸಂತಸದ ಸುದ್ದಿ:

ಇದೀಗ ಸೆ. 5 ರಂದು ಆಚರಿಸುವ ಶಿಕ್ಷಕರ ದಿನಾಚರಣೆಗೂ ಮುನ್ನ ಖಾಸಗಿ ಶಾಲಾ ಶಿಕ್ಷಕರಿಗೆ ಹಾಗೂ ಶಿಕ್ಷಕೇತರ ಸಿಬ್ಬಂದಿಗೆ ಕೊರೊನಾ ಪರಿಹಾರ ಧನ ನೀಡುವಂತೆ ಕೋರಿ ಕ್ಯಾಮ್ಸ್ ಸೇರಿದಂತೆ ವಿವಿಧ ಸಂಘಟನೆಗಳು ಹಾಲಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರಿಗೆ ಮನವಿ ಮಾಡಿದ್ದವು. ಮನವಿಗೆ ಸ್ಪಂದಿಸಿರುವ ಶಿಕ್ಷಣ ಸಚಿವರು ಕೂಡಲೇ 1.72 ಲಕ್ಷ ಖಾಸಗಿ ಶಾಲಾ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗೆ ಪರಿಹಾರ ಧನ ಬಿಡುಗಡೆ ಮಾಡಿ ಆದೇಶಿಸಿದ್ದಾರೆ. ಮುಂದಿನ ಐದು ದಿನಗಳಲ್ಲಿ ಖಾಸಗಿ ಶಾಲಾ ಶಿಕ್ಷಕರಿಗೆ ಹಾಗೂ ಶಿಕ್ಷಕೇತರ ಸಿಬ್ಬಂದಿಯ ಬ್ಯಾಂಕ್ ಖಾತೆಗಳಿಗೆ ಪರಿಹಾರ ಧನ ಜಮೆಯಾಗಲಿದೆ. ಕೊಟ್ಟ ಮಾತಿನಂತೆ ನಡೆದುಕೊಂಡ ನೂತನ ಶಿಕ್ಷಣ ಸಚಿವರ ತೀರ್ಮಾನಕ್ಕೆ ಖಾಸಗಿ ಶಿಕ್ಷಕರ ಸಂಘಟನೆಗಳು ಅಭಿನಂದನೆ ಸಲ್ಲಿಸಿವೆ. ಶಿಕ್ಷಕರ ದಿನಾಚರಣೆಗೂ ಮುನ್ನ ಕೊರೊನಾ ಪರಿಹಾರ ಧನ ಕೊಡುವಂತೆ ಶಿಕ್ಷಣ ಸಚಿವರಿಗೆ ಮನವಿ ಮಾಡಿದ್ದೆವು. ಶಿಕ್ಷಣ ಸಚಿವರು ಖಾಸಗಿ ಶಾಲಾ ಶಿಕ್ಷಕರ ಸಂಕಷ್ಟಕ್ಕೆ ತಕ್ಷಣ ಸ್ಪಂದಿಸಿದ್ದಾರೆ ಎಂದು ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.

ಒಂದೂವರೆ ವರ್ಷದ ಹೋರಾಟಕ್ಕೆ ಸಿಕ್ಕ ಜಯ

ಒಂದೂವರೆ ವರ್ಷದ ಹೋರಾಟಕ್ಕೆ ಸಿಕ್ಕ ಜಯ

2020 ಏಪ್ರಿಲ್‌ನಿಂದ ಕೆಲಸ ಕಳೆದಕೊಂಡಿದ್ದ ಖಾಸಗಿ ಶಾಲಾ ಶಿಕ್ಷಕರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದರು. ಕೆಲವರು ತರಕಾರಿ ವ್ಯಾಪಾರ ಮಾಡಿ ಸುದ್ದಿಯಾದರು. ಇನ್ನೂ ಕೆಲವರು ಗಾರೆ ಕೆಲಸ, ಉದ್ಯೋಗ ಖಾತ್ರಿ ಯೋಜನೆ ಅಡಿ ಕೂಲಿ ಮಾಡಲು ತೆರಳಿದ್ದು ರಾಜ್ಯದಲ್ಲಿ ದೊಡ್ಡ ಮಟ್ಟದ ಸುದ್ದಿಯಾಗಿತ್ತು. ರಾಜ್ಯದಲ್ಲಿ ಒಂದೂವರೆ ವರ್ಷದಿಂದ ಖಾಸಗಿ ಶಾಲೆಗಳು ತೆರೆದಿರಲಿಲ್ಲ. ಅರ್ಧ ವೇತನ ನಂಬಿ ಆನ್‌ಲೈನ್ ತರಗತಿ ಮಾಡಿದ ಖಾಸಗಿ ಶಾಲಾ ಶಿಕ್ಷಕರ ಆರ್ಥಿಕ ಪರಿಸ್ಥಿತಿ ಹದಗೆಟ್ಟಿತ್ತು. ಬಹುತೇಕರು ಶಿಕ್ಷಕ ವೃತ್ತಿಗೆ ತಿಲಾಂಜಲಿ ನೀಡಿ ಅನ್ಯ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು.

ಎಲ್ಲಾ ವರ್ಗಕ್ಕೂ ಕೊರೊನಾ ಪರಿಹಾರ ಪ್ಯಾಕೇಜ್ ನೀಡಿದ್ದ ಸರ್ಕಾರ ಮಾತ್ರ ಖಾಸಗಿ ಶಾಲಾ ಶಿಕ್ಷಕರ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ಹೀಗಾಗಿ ಖಾಸಗಿ ಶಾಲಾ ಶಿಕ್ಷಕರು ಬೀದಿಗೆ ಇಳಿದು ಹೋರಾಟ ನಡೆಸಿದರು. ಕ್ಯಾಮ್ಸ್ ಸೇರಿದಂತೆ ಖಾಸಗಿ ಶಾಲಾ ಶಿಕ್ಷಕರ ಸಂಘಟನೆಗಳು ಪ್ರತಿಭಟನೆ ಮಾಡಿ ಸರ್ಕಾರದ ಗಮನ ಸೆಳೆದಿದ್ದವು. ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದು ಶಿಕ್ಷಕರನ್ನು ಕೊರೊನಾ ವಾರಿಯರ್ಸ್ ಎಂದು ಪರಿಗಣಿಸಿ ಪರಿಹಾರ ಘೋಷಣೆ ಮಾಡುವಂತೆ ಮನವಿ ಮಾಡಿದ್ದರು.

 ಕೊರೊನಾ ಪ್ಯಾಕೇಜ್ ಬಿಡುಗಡೆ

ಕೊರೊನಾ ಪ್ಯಾಕೇಜ್ ಬಿಡುಗಡೆ

ಖಾಸಗಿ ಶಾಲಾ ಶಿಕ್ಷಕರ ಮನವಿಗೆ ಸ್ಪಂದಿಸಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಖಾಸಗಿ ಶಾಲಾ ಶಿಕ್ಷಕರನ್ನು ಸಹ ಕೊರೊನಾ ವಾರಿಯರ್ಸ್ ಎಂದು ಪರಿಗಣಿಸಿದರು. ಅಲ್ಲದೇ ಮೊದಲ ಆದ್ಯತೆಯಲ್ಲಿ ಲಸಿಕೆ ಕೊಡುವ ಜತೆಗೆ ತಲಾ ಐದು ಸಾವಿರ ರೂ. ಪರಿಹಾರ ಘೋಷಣೆ ಮಾಡಿದರು. ಪರಿಹಾರದ ಮೊತ್ತ ಕ್ರೋಢೀಕರಿಸುವ ವಿಚಾರವಾಗಿ ಗೊಂದಲ ಏರ್ಪಟ್ಟಿತ್ತು. ಅಂತಿಮವಾಗಿ ಶಿಕ್ಷಣ ಹಕ್ಕು ಕಾಯ್ದೆ ಅಡಿ ಖಾಸಗಿ ಶಾಲೆಗಳಿಗೆ ಬಿಡುಗಡೆ ಮಾಡಬೇಕಿರುವ ಹಣದಲ್ಲಿ ಒಂದು ಭಾಗವನ್ನು ಕಡಿತ ಮಾಡಿ ಖಾಸಗಿ ಶಾಲಾ ಶಿಕ್ಷಕರಿಗೆ ಪರಿಹಾರ ನೀಡಲು ಶಿಕ್ಷಣ ಇಲಾಖೆ ಪ್ರಸ್ತಾವನೆ ಸಲ್ಲಿಸಿತು. ಇದಕ್ಕೆ ಖಾಸಗಿ ಶಾಲಾ ಆಡಳಿತ ಮಂಡಗಳು ವಿರೋಧ ವ್ಯಕ್ತಪಡಿಸಿದ್ದವು. ಅಂತೂ ಕಷ್ಟದಲ್ಲಿರುವ ಖಾಸಗಿ ಶಾಲಾ ಶಿಕ್ಷಕರಿಗೆ ತಲಾ ಐದು ಸಾವಿರ ರೂ. ಕೊರೊನಾ ಪರಿಹಾರ ಹಣ 10 ಸಾವಿರ ಲಕ್ಷ ರೂ. ಬಿಡುಗಡೆ ಮಾಡಿಸಿ ನೂತನ ಶಿಕ್ಷಣ ಸಚಿವರು ಶಿಕ್ಷಕರ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ.

ಪರಿಹಾರ ಪಡೆಯಲು ಪಾಲಿಸಬೇಕಾದ ನಿಯಮ

ಪರಿಹಾರ ಪಡೆಯಲು ಪಾಲಿಸಬೇಕಾದ ನಿಯಮ

ರಾಜ್ಯದ ಖಾಸಗಿ ಶಾಲೆಗಳಲ್ಲಿ ಕೆಲಸ ಮಾಡುತ್ತಿರುವ 1.72,945 ಖಾಸಗಿ ಶಾಲಾ ಶಿಕ್ಷಕರಿಗೆ ಹಾಗೂ ಶಿಕ್ಷಕೇತರ ಸಿಬ್ಬಂದಿಗೆ ತಲಾ ಐದು ಸಾವಿರ ರೂ. ಪರಿಹಾರ ದೊರೆಯಲಿದೆ. ಈ ಪರಿಹಾರ ಹಣ ನೊಂದಾಯಿತ ಖಾಸಗಿ ಶಾಲಾ ಶಿಕ್ಷಕರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆಯಾಗಲಿದೆ. ಆದರೆ ಶಿಕ್ಷಕರು ಕಡ್ಡಾಯವಾಗಿ ಕೆಲಸ ಮಾಡುವ ಶಾಲೆಯ ಸ್ಯಾಟ್ಸ್ ನಲ್ಲಿ ನೋಂದಣಿ ಮಾಡಿರಬೇಕು. ಜತೆಗೆ ಆಧಾರ್ ಕಾರ್ಡ್ ಲಿಂಕ್ ಹೊಂದಿರುವ ಬ್ಯಾಂಕ್ ವಿವರಗಳನ್ನು ನಮೂದಿಸಿರಬೇಕು. ಅಂತಹ ಶಿಕ್ಷಕರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಪಾವತಿಯಾಗಲಿದೆ. ಈ ಕುರಿತು ಎಲ್ಲಾ ಶಾಲೆಗಳ ಪ್ರಸ್ತಾವನೆಗಳನ್ನು ಆಯಾ ಶಾಲೆಯ ಮುಖ್ಯ ಶಿಕ್ಷಕರು ಪರಿಶೀಲಿಸಿ ಅರ್ಜಿ ಸಲ್ಲಿಸಬೇಕು. ಜತೆಗೆ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಯ ಖಾಸಗಿ ಶಾಲಾ ಶಿಕ್ಷಕರ ಬ್ಯಾಂಕ್ ಖಾತೆಗಳಿಗೆ ಹಣ ಜಮೆ ಮಾಡಲಿದ್ದಾರೆ.

Recommended Video

ಕಾಂಗ್ರೆಸ್ ಪಾರ್ಟಿ ಸೇರೋಕೆ ಅಪ್ಪ ಮಗನ ಲಾಬಿ ಜೋರಾಗಿದೆ | Oneindia Kannada
ಸ್ಯಾಟ್ಸ್ ನಲ್ಲಿ ಹೆಸರು ಇಲ್ಲದವರ ಪರದಾಟ

ಸ್ಯಾಟ್ಸ್ ನಲ್ಲಿ ಹೆಸರು ಇಲ್ಲದವರ ಪರದಾಟ

ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಸುಮಾರು ಖಾಸಗಿ ಶಾಲೆಗಳಲ್ಲಿ ಶಿಕ್ಷಕರು ತಮ್ಮ ವೃತ್ತಿ ತೊರೆದಿದ್ದಾರೆ. ಹೊಸದಾಗಿ ಶಾಲೆಗಳಿಗೆ ದಾಖಲಾಗಿರುವ ಶಾಲಾ ಶಿಕ್ಷಕರ ದಾಖಲಾತಿಯನ್ನು ಸ್ಯಾಟ್ಸ್ ನಲ್ಲಿ ದಾಖಲಿಸಲು ಸಾಧ್ಯವಾಗಿಲ್ಲ. ಈ ಮೊದಲು ಯು ಡೈಸ್ ನಲ್ಲಿ ದಾಖಲಾಗಿ ಮಾಡುವ ವೇಳೆ ಕೊರೊನಾ ಪರಿಹಾರದ ಪ್ರಸ್ತಾಪವಾಗಿರಲಿಲ್ಲ. ಹೀಗಾಗಿ ಸ್ಯಾಟ್ಸ್‌ನಲ್ಲಿ ದಾಖಲಿಸದ ಖಾಸಗಿ ಶಾಲಾ ಶಿಕ್ಷಕರಿಗೆ ಮತ್ತು ಶಿಕ್ಷಕೇತರ ಸಿಬ್ಬಂದಿಗೆ ಕೊರೊನಾ ಪರಿಹಾರ ಸಿಗುವುದು ಅನುಮಾನ. ಕೊರೊನಾ ಹಿನ್ನೆಲೆಯಲ್ಲಿ ಬಹುತೇಕ ಶಾಲಾ ಶಿಕ್ಷಕರು ಶಾಲೆ ತೊರೆದಿದ್ದಾರೆ. ಇನ್ನೂ ಕೆಲವರು ಬೇರೆ ಶಾಲೆಗಳಿಗೆ ಸೇರಿದ್ದು, ಕೆಲವರು ಎರಡು- ಮೂರು ಕಡೆ ಸ್ಯಾಟ್ಸ್‌ನಲ್ಲಿ ನೋಂದಣಿ ಮಾಡಿಸಿದ್ದಾರೆ. ಇನ್ನೂ ಕೆಲವರು ಸ್ಯಾಟ್ಸ್ ನಲ್ಲಿ ನೋಂದಣಿಯೇ ಆಗಿಲ್ಲ. ನೊಂದಣಿ ಮಾಡಲು ಅವಕಾಶವನ್ನು ಸಹ ಬಿಟ್ಟಿಲ್ಲ. ಹೀಗಾಗಿ ಖಾಸಗಿ ಶಾಲಾ ಶಿಕ್ಷಕರಿಗೆ ಪರಿಹಾರ ನೀಡುವಲ್ಲಿ ಗೊಂದಲ ಎದುರಾಗಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರು ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.

ಹೆಚ್ಚುವರಿ ಶಿಕ್ಷಕರು ಇದ್ದರೂ ಪರಿಹಾರ ಸಿಗಲ್ಲ: ಖಾಸಗಿ ಶಾಲಾ ಶಿಕ್ಷಕರಿಗೆ ತ್ವರಿತವಾಗಿ ಕೊರೊನಾ ಪರಿಹಾರ ಪ್ಯಾಕೇಜ್ ಬಿಡುಗಡೆ ಮಾಡುವ ಸಂಬಂಧ ಶಾಲಾ ವಾರು ಅನುಮೋದನೆ ನೀಡುವ ಅಧಿಕಾರವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನೀಡಲಾಗಿದೆ. ಶೇ. 100 ರಷ್ಟು ಖಾಸಗಿ ಶಾಲಾ ಶಿಕ್ಷಕರ ದತ್ತಾಂಶ ಪರಿಶೀಲಿಸಿ ಅನುಮೋದನೆ ನೀಡಿದ ಬಳಿಕ ಖಾಸಗಿ ಶಾಲಾ ಶಿಕ್ಷಕರ ಬ್ಯಾಂಕ್ ಖಾತೆಗಳಿಗೆ ಪರಿಹಾರ ಹಣ ವರ್ಗಾವಣೆಯಾಗಲಿದೆ. ಕೆಲವು ಖಾಸಗಿ ಶಾಲೆಗಳಲ್ಲಿ ಕಡಿಮೆ ವಿದ್ಯಾರ್ಥಿಗಳು ಇದ್ದಾರೆ. ಅಲ್ಲಿ ಶಿಕ್ಷಕರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಅಂತಹ ಶಾಲೆಯ ಶಿಕ್ಷಕರು ಸಹ ಪರಿಹಾರ ಪಡೆಯಲಾಗುತ್ತಿಲ್ಲ.

English summary
Education Minister B.C. Nagesh Released Corona relief fund for for private school teachers and non teaching staff
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X