ಕೂಲಿಯಾಗಿ ದುಡಿದು ಸಂಬಳ ಪಡೆಯಲಿದ್ದಾರೆ ಖೈದಿ ಪ್ರಜ್ವಲ್ ರೇವಣ್ಣ, ಹೇಗಿರಲಿದೆ ಜೈಲು ಜೀವನ?
ಹಾಸನ ಜೆಡಿಎಸ್ ಮಾಜಿ ಸಂಸದ ಹಾಗೂ ಹೆಚ್.ಡಿ.ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರು ಅತ್ಯಾಚಾರ ಕೇಸ್‌ನಲ್ಲಿ ಅಪರಾಧಿ ಎಂದು ಪರಿಗಣಿಸಲಾಗಿದೆ. ಜೀವಾವಧಿ ಶಿಕ್ಷೆಯೂ ನೀಡಲಾಗಿದೆ. ಹಾಗಾಗಿ ಇಂದಿನಿಂದಲೇ ಪ್ರಜ್ವಲ್ ಅವರು ಸಾಮಾನ್ಯ ಖೈದಿಯಂತೆ ಜೈಲಿನಲ್ಲಿ ತಮ್ಮ ದಿನಗಳನ್ನು ಕಳೆಯಲಿದ್ದಾರೆ. ಇಲ್ಲಿವರೆಗೆ ಪ್ರಜ್ವಲ್ ಅವರು ಆರೋಪಿಯಾಗಿದ್ದರಿಂದ, ಉಳಿದ ಖೈದಿಗಳಂತೆ ಪರಿಗಣಿಸಿರಲಿಲ್ಲ. ಇಂದಿನಿಂದ ಅವರು ಖೈದಿಯಾದ ಕಾರಣ ಎಲ್ಲರಂತೆ ನಿಯಮಗಳು ಅನ್ವಯಿಸಲಿವೆ. ಜೈಲಿನೊಳಗೆ ಕೂಲಿಯಾಗಿ ಕೆಲಸ ಕೂಡ ಮಾಡಲಿದ್ದಾರೆ.
ಹೌದು, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಮಹಿಳೆ ಮೇಲಿನ ಅತ್ಯಾಚಾರವನ್ನು ಗಂಭೀರವಾಗಿ ಪರಿಗಣಿಸಿ ಪ್ರಜ್ವಲ್ ಅವರಿಗೆ ಈ ಜೀವಾವಧಿ ಶಿಕ್ಷೆ ವಿಧಿಸಿದೆ. ಹೀಗಾಗಿ ನಿನ್ನೆಯಿಂದಲೇ ಅವರು ಅಧಿಕೃತ ಖೈದಿಯೂ ಆಗಿದ್ದಾರೆ. ಪ್ರಜ್ವಲ್ ರೇವಣ್ಣಗೆ ಖೈದಿ ನಂಬರ್ 15528 ನೀಡಿರುವುದಾಗಿ ತಿಳಿದುಬಂದಿದೆ. ಪ್ರಜ್ವಲ್‌ಗೆ ಜೈಲಿನಲ್ಲಿ ಧರಿಸಲು ಬಿಳಿ ವಸ್ತ್ರ ನೀಡಲಿದ್ದು, ಜೈಲು ನಿಯಮಾವಳಿಗಳಂತೆ ಜೈಲು ಆಧೀಕ್ಷಕರು ಹೇಳುವ ಕೆಲಸ ಮಾಡಿಕೊಂಡಿರಬೇಕು ಎನ್ನಲಾಗಿದೆ.

8 ಗಂಟೆ ಕೆಲಸ ಫಿಕ್ಸ್
ಇಲ್ಲಿವರೆಗೆ ವಿಶೇಷ ಸೆಲ್‌ನಲ್ಲಿದ್ದ ಪ್ರಜ್ವಲ್ ಅವರನ್ನ ಖೈದಿಗಳ ಬ್ಯಾರಕ್‌ಗೆ ಶಿಫ್ಟ್ ಮಾಡಲಾಗಿದೆ. ನಿನ್ನೆ ರಾತ್ರಿಯಿಡೀ ಪ್ರಜ್ವಲ್ ನಿದ್ದೆ ಮಾಡಲಿಲ್ಲ, ಬೆಳಿಗ್ಗೆ ಎಂದಿನಂತೆ ತಮ್ಮ ದಿನಚರಿ ಆರಂಭಿಸಿದ್ದಾರೆ. ಇನ್ನು ಮುಂದೆ ಕಡ್ಡಾಯವಾಗಿ ಪ್ರಜ್ವಲ್ ಜೈಲಿನೊಳಗೆ 8 ಗಂಟೆ ಕೆಲಸ ಮಾಡಲಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನ ಖೈದಿಗಳ ನಿಯಮಗಳನ್ನ ಪಾಲಿಸಬೇಕಿದೆ. ಜೈಲಿನಲ್ಲಿ ಗಾರ್ಡನ್, ಹೈನುಗಾರಿಕೆ, ಬೇಕರಿ, ತರಕಾರಿ ಬೆಳೆಯುವುದು, ಕರಕುಶಲ ವಸ್ತು ಸೇರಿ ಯಾವುದರೂ ಒಂದು ಕೆಲಸವನ್ನು ಆಯ್ಕೆ ಮಾಡಿಕೊಳ್ಳಬೇಕಿದೆ.
ಪ್ರಜ್ವಲ್‌ಗೆ ಸಂಬಳ ಎಷ್ಟು?
ಅದರಂತೆ ಪ್ರಜ್ವಲ್ ಆಯ್ಕೆ ಮಾಡಿಕೊಳ್ಳುವ ಕೆಲಸಕ್ಕೆ ಸಂಬಳ ಕೂಡ ಸಿಗಲಿದೆ. ಆರಂಭದಲ್ಲಿ ನಿಯಮದಂತೆ 524 ರೂಪಾಯಿ ಸಂಬಳ ನೀಡಲಾಗುತ್ತದೆ. ಬಳಿಕ ಖೈದಿ ಕೆಲಸದಲ್ಲಿ ನೈಪುಣ್ಯತೆ ತೋರಿದ ನಂತರ ಸಂಬಳ ಕೂಡ ಏರಲಿದೆ. ರಾಜಕಾರಣದ ಕುಟುಂಬದಲ್ಲಿ ಯಾವುದೇ ಕೊರತೆ ಇಲ್ಲದೆ ಮುದ್ದಾಗಿ ಬೆಳೆದಿದ್ದ ಪ್ರಜ್ವಲ್ ಜೀವನ ಜೈಲಿನಲ್ಲಿ ಸಂಪೂರ್ಣವಾಗಿ ಬದಲಾಗಲಿದೆ.
ಪ್ರಜ್ವಲ್‌ಗೆ ಜೀವಾವಧಿ ಶಿಕ್ಷೆ ಮಾತ್ರವಲ್ಲ, ಜೀವನಪರ್ಯಂತ ಸೆರೆವಾಸದ ಶಿಕ್ಷೆ ನೀಡಿ ಕೋರ್ಟ್ ತೀರ್ಪು ಕೊಟ್ಟಿದೆ. ಜೊತೆಗೆ 11.60 ಲಕ್ಷ ರೂಪಾಯಿ ದಂಡವೂ ವಿಧಿಸಿದೆ. ಈ ಹಣ ಸಂತ್ರಸ್ತೆಗೆ ಹೋಗಲಿದೆ. ಐಪಿಸಿ ಸೆಕ್ಷನ್ 376(2)(k) ಅಡಿಯಲ್ಲಿ ಪ್ರಜ್ವಲ್‌ಗೆ ಜೀವಾವಧಿ ಶಿಕ್ಷೆ, 5 ಲಕ್ಷ ರೂ. ದಂಡ ವಿಧಿಸಲಾಗಿದೆ. ಮತ್ತೊಂದು ಐಪಿಸಿ ಸೆಕ್ಷನ್ 376(2)(n) ಅಡಿಯಲ್ಲಿ ಪದೇ ಪದೇ ಅತ್ಯಾಚಾರ ಎಸಗಿದ ಆರೋಪದಲ್ಲಿ ಜೀವನಪರ್ಯಂತ ಜೈಲು ವಾಸದ ಶಿಕ್ಷೆ, 5 ಲಕ್ಷ ದಂಡ, ಐಪಿಸಿ ಸೆಕ್ಷನ್ 354(b) ಅಡಿಯಲ್ಲಿ 7 ವರ್ಷ ಸೆರೆವಾಸ, 50 ಸಾವಿರ ದಂಡ, ಮತ್ತೊಂದು ಸೆಕ್ಷನ್ ಅಡಿ 3 ವರ್ಷ ಸೆರೆವಾಸ, 25 ಸಾವಿರ ದಂಡ ಹಾಕಲಾಗಿದೆ. ವಿವಿಧ ಸೆಕ್ಷನ್‌ಗಳಲ್ಲಿ ಪ್ರಜ್ವಲ್‌ಗೆ ಪ್ರತ್ಯೇಕ ಶಿಕ್ಷೆ ವಿಧಿಸಲಾಗಿದೆ.












Click it and Unblock the Notifications