ಕೋವಿಡ್ ಚಿಕಿತ್ಸೆ ಬಿಲ್ ಕಟ್ಟಲು ಅರ್ಧ ಎಕರೆ ಹೊಲ ಮಾರಬೇಕು!
ಬೆಂಗಳೂರು, ಸೆಪ್ಟೆಂಬರ್ 23 : "ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ 19 ಸೋಂಕಿಗೆ ಚಿಕಿತ್ಸೆ ಪಡೆದರೆ ಬಿಲ್ ಪಾವತಿ ಮಾಡಲು ಅರ್ಧ ಎಕರೆ ಹೊಲ ಮಾರಬೇಕು" ಎಂದು ಅರಸೀಕೆರೆ ಕ್ಷೇತ್ರದ ಜೆಡಿಎಸ್ ಶಾಸಕ ಕೆ. ಎಂ. ಶಿವಲಿಂಗೇಗೌಡ ಸರ್ಕಾರದ ಗಮನ ಸೆಳೆದರು.
ಬುಧವಾರ ವಿಧಾನಸಭೆ ಕಲಾಪದಲ್ಲಿ ಮಾತನಾಡಿದ ಅವರು, "ನನಗೂ ಕೋವಿಡ್ ಸೋಂಕು ತಗುಲಿತ್ತು. ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದೆ. 1.50 ಲಕ್ಷ ಬಿಲ್ ಆಗಿದೆ. ಸಾಮಾನ್ಯ ಜನರು ಎಲ್ಲಿಂದ ಹಣ ತರಬೇಕು" ಎಂದು ಪ್ರಶ್ನಿಸಿದರು.
"ಎಲ್ಲಿಂದಲೋ ವೈರಾಣು ಬಂದಿದೆ. ಈಗ ಏನೂ ಮಾಡುವುದಕ್ಕೆ ಆಗಲ್ಲ. ಹೆಂಗೆ ಬರ್ತಿದೆ, ಎಲ್ಲಿಂದ ಬರ್ತಿಗೆ ಗೊತ್ತಿಲ್ಲ. ಒಟ್ಟಿನಲ್ಲಿ ಜನರಿಗೆ ಸೋಂಕು ತಗುಲುತ್ತಿದೆ. ಸರ್ಕಾರ ಈಗ ತನ್ನ ಬದ್ಧತೆಯನ್ನು ಪ್ರದರ್ಶನ ಮಾಡಬೇಕು" ಎಂದು ಆಗ್ರಹಿಸಿದರು.

"ಕೋವಿಡ್ ಸೋಂಕಿತರ ಚಿಕಿತ್ಸೆಗೆ ಸರ್ಕಾರ ಸವಲತ್ತು ಒದಗಿಸಿ ಕೊಡಬೇಕು. ಒಂದೊಂದು ಮನೆಯಲ್ಲಿ ಇಬ್ಬರಿಗೆ, ಮೂವರಿಗೆ ಸೋಂಕು ಬಂದಿದೆ. ಅವರು ಆಸ್ಪತ್ರೆ ಬಿಲ್ ಕಟ್ಟಲು ಅರ್ಧ ಎಕರೆ ಹೊಲ ಮಾರಬೇಕು" ಎಂದು ಶಾಸಕರು ಗಮನಸೆಳೆದರು.
"3 ಲಕ್ಷ, 5 ಲಕ್ಷ ಬಿಲ್‌ಗಳು ಬರುತ್ತಿವೆ. ಖಾಸಗಿ ಅವರು ಎಷ್ಟು ಬೇಕಾದರೂ ತಿನ್ನಬಹುದು ಎಂದು ಅಂದುಕೊಂಡಿದ್ದಾರೆ. ಸರ್ಕಾರ ಖಾಸಗಿ ಆಸ್ಪತ್ರೆಗಳಿಗೆ ಕಡಿವಾಣ ಹಾಕಬೇಕು" ಎಂದು ಶಿವಲಿಂಗೇಗೌಡ ಒತ್ತಾಯಿಸಿದರು.
"ಇಂತಹ ಸಮಯದಲ್ಲಿ ಜನರ ಕಷ್ಟಕ್ಕೆ ಸ್ಪಂದಿಸದಿದ್ದರೆ ಚುನಾವಣೆ ಬಂದಾಗ ನಮ್ಮನ್ನು ಕತ್ತು ಹಿಡಿದು ಆಚೆ ದೂಡುತ್ತಾರೆ. ಕೋವಿಡ್ ಸಂದರ್ಭದಲ್ಲಿ ಭ್ರಷ್ಟಾಚಾರ ಮಾಡಿದರೆ ಭಗವಂತ ನೋಡುತ್ತಿದ್ದಾನೆ. ಎಲ್ಲರಿಗೂ ತಕ್ಕ ಪಾಠ ಕಲಿಸುತ್ತಾನೆ" ಎಂದರು.












Click it and Unblock the Notifications