ಕಾಂಗ್ರೆಸ್ 85% ಸರ್ಕಾರ: ಆಗ ಎಲ್ಲದಕ್ಕೂ ಕಮಿಷನ್ ಪಡೆಯುತ್ತಿದ್ದರು ಎಂದ ಸಿಎಂ ಬೊಮ್ಮಾಯಿ
ಬೆಳಗಾವಿ, ಏಪ್ರಿಲ್ 26: ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ನಾಯಕರು ಎಲ್ಲದಕ್ಕೂ ಕಮಿಷನ್ ಪಡೆಯುತ್ತಿದ್ದರು. ದುಡ್ಡೇ ದೊಡ್ಡಪ್ಪ ಎನ್ನುತ್ತಿದ್ದರು. ಕಾಂಗ್ರೆಸ್ 85 ಪರ್ಸೆಂಟ್ ಸರ್ಕಾರ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ಗೆ ತಿರುಗೇಟು ನೀಡಿದರು.
ಬುಧವಾರ ಬೆಳಗಾವಿ ಜಿಲ್ಲೆಯ ರಾಯಭಾಗ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಧುರ್ಯೊಧನ ಐಹೊಳೆ ಅವರ ಪರ ರೋಡ್ ಶೋ ನಡೆಸಿ ಮತಯಾಚಿಸಿದರು. ಬಳಿಕ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಸದಾ 40 ಪರ್ಸೆಂಟ್ ಬಿಜೆಪಿ ಸರ್ಕಾರ ಎನ್ನುವ ಕಾಂಗ್ರೆಸ್‌ಗೆ ತಿರುಗೇಟು ನೀಡಿದ್ದಾರೆ.

ಸಾಮಾಜಿಕ ನ್ಯಾಯ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಾರೆ. 30 ವರ್ಷದಿಂದ ಮೀಸಲಾತಿ ಹೆಚ್ಚಳಕ್ಕೆ ಹೋರಾಟ ನಡೆಸಿದರೂ ಅವರಿಗೆ ಮೀಸಲಾತಿ ಹೆಚ್ಚಳ ಮಾಡಿರಲಿಲ್ಲ. ನಾನು ಬಂದು ಮೀಸಲಾತಿ ಹೆಚ್ಚಳ ಮಾಡಿದ್ದೇನೆ. ಅಲ್ಲದೇ ಆಂತರಿಕ ಮೀಸಲಾತಿ ಹೆಚ್ಚಳ ಮಾಡಿದ್ದೇನೆ.ಇದೇ ಮಾದರಿಯನ್ನು ಎಲ್ಲ ರಾಜ್ಯಗಳು ಜಾರಿ ಮಾಡಬೇಕು ಎನ್ನುವ ಚರ್ಚೆ ನಡೆದಿದೆ. ಲಿಂಗಾಯತರ ಮೀಸಲಾತಿಯನ್ನೂ ಹೆಚ್ಚಳ ಮಾಡಿದ್ದೇವೆ. ನಾವು ಎಲ್ಲ ಜನರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿದ್ದೇವೆ. ಜನರು ಈಗ ಜಾಗೃತರಾಗಿದ್ದಾರೆ ಎಂದು ಅವರು ಹೇಳಿದರು.
ಹಣ ಬಲವುಳ್ಳವರಿಗೆ ಜನರ ಕಷ್ಟ ಅರ್ಥವಾಗದು
ಹಣದ ಬಲದಿಂದ ಜನರನ್ನು ಖರೀದಿ ಮಾಡಬಹುದು ಎಂದು ಕೆಲವು ಅಧಿಕಾರಿಗಳು ರಾಜಕಾರಣಕ್ಕೆ ಬರುತ್ತಾರೆ. ಅವರು ಸೆಲ್ಯೂಟ್ ಹೊಡೆಸಿಕೊಂಡು, ನಮಸ್ಕಾರ ಮಾಡಿಸಿಕೊಂಡು ರೂಢಿ ಇರುತ್ತದೆ. ಆದರೆ ಜನರ ಪ್ರಾಮಾಣಿಕ ಸೇವೆ ಮಾಡಿ ಜನರ ಸುಖ ದುಃಖವನ್ನು ಅರ್ಥ ಮಾಡಿಕೊಳ್ಳುವವರನ್ನು ಆಯ್ಕೆ ಮಾಡಿದರೆ ಅವರು ನಿಮ್ಮ ಸೇವೆ ಮಾಡುತ್ತಾರೆ ಎಂದರು.
ದುರ್ಯೋಧನ ಐಹೊಳೆ ಹೆಸರಿಗೆ ಮಾತ್ರ ಧುರ್ಯೋಧನ. ಆದರೆ ಕೆಲಸದಲ್ಲಿ ಬಲಭೀಮ. ಯಾವುದು ಆಗಲ್ಲವೋ ಅದನ್ನು ಮಾಡಿ ತೋರಿಸುವ ಛಾತಿ ಅವರಲ್ಲಿರುವ ಕಾರಣ ಅವರನ್ನು ಭೀಮ ಎಂದು ಕರೆಯುತ್ತೇನೆ. ದುರ್ಯೋಧನ ಐಹೊಳೆ ಅತ್ಯಂತ ಸರಳ ವ್ಯಕ್ತಿ. ರಾಯಭಾಗ ಭಾಗದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಜನರ ಆಶೋತ್ತರಗಳನ್ನು ಈಡೇರಿಸಿ ವಿಶ್ವಾಸ ಗಳಿಸಿರುವ ಸರಳ ಸಜ್ಜನ ರಾಜಕಾರಣಿ. ಅವರಂತಹ ದಕ್ಷ ಪ್ರಾಮಾಣಿಕ ಶಾಸಕರು ಸಿಗುವುದು ಕಷ್ಟ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಮತ ಮಾರಾಟಕ್ಕಿಲ್ಲ ಎಂದು ಹೇಳಿ
ನಿಮಗೆ ಜನರ ಸೇವೆ ಮಾಡುವ ವ್ಯಕ್ತಿ ಬೇಕಾ?, ನಿಮ್ಮ ಮಾಲೀಕರಾಗುವವರು ಬೇಕಾ?. ಪ್ರಜಾಪ್ರಭುತ್ವದಲ್ಲಿ ಜನರೇ ಮಾಲೀಕರು. ನಮ್ಮ ಪ್ರತಿನಿಧಿ ನಿಮ್ಮ ಸೇವೆ ಮಾಡಿದರೆ ಅವರನ್ನು ಮತ್ತೆ ಮುಂದುವರೆಸಿ. ನಿಮ್ಮ ಮತ ಪಡೆದು ಅವರೇ ಮಾಲೀಕರಾದರೆ ಜನ ಮಾಡಬೇಕು. ನಾವು ಸ್ವಾಭಿಮಾನಿಗಳು, ನಮ್ಮ ಮತ ಮಾರಾಟಕ್ಕಿಲ್ಲ ಎಂದು ನೀವು ಸ್ಪಷ್ಟವಾಗಿ ಹೇಳಬೇಕು ಎಂದು ಸಿಎಂ ಸಲಹೆ ನೀಡಿದರು.
ಅಭಿವೃದ್ಧಿ ಮಾಡಿದ ಬಿಜೆಪಿಗೆ ಮತ ಹಾಕಿ: ಸಿಎಂ ಮನವಿ
ಈ ಕ್ಷೇತ್ರಕ್ಕೆ ಧುರ್ಯೋಧನ ಐಹೊಳೆ ಉತ್ತಮ ಕೆಲಸ ಮಾಡಿದ್ದಾರೆ. ಕರೆಗಾವ್ ಏತ ನೀರಾವರಿಗೆ 560 ಕೋಟಿ ಮಂಜುರಾತಿ ಕೊಟ್ಟು ನಾವೇ ಅನುಷ್ಠಾನ ಮಾಡುತ್ತೇವೆ. ನಿಮ್ಮ ಬೇಡಿಕೆ ನೀರಾವರಿ ಯೋಜನೆಗಳನ್ನು ನಾವೇ ಅನುಷ್ಠಾನಕ್ಕೆ ತರುತ್ತೇವೆ. ಈ ಕ್ಷೇತ್ರಕ್ಕೆ ಬೇಕಾದ ರಸ್ತೆ, ನೀರು, ಎಲ್ಲ ಸೌಕರ್ಯಗಳನ್ನು ಸಮರ್ಪಕವಾಗಿ ಮಾಡಿದ್ದಾರೆ. ಇಂತಹ ಕಾರ್ಯ ಮುಂದುವರೆಯಬೇಕಾದರೆ ಧುರ್ಯೊಧನ ಐಹೊಳೆಯವರನ್ನು ಆಯ್ಕೆ ಮಾಡಿ ಎಂದು ಮುಖ್ಯಮಂತ್ರಿಗಳು ಮನವಿ ಮಾಡಿದರು.
ರೈತರ ಉನ್ನತಿಗೆ ಹಲವಾರು ಕಾರ್ಯಕ್ರಮ
ನಮ್ಮ ಸರ್ಕಾರ ರೈತರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ಜಾರಿಗೆ ತಂದಿದ್ದೇವೆ. ರೈತರಿಗೆ ಯಶಸ್ವಿನಿ ಯೋಜನೆ ಮರು ಜಾರಿ ಮಾಡಿದ್ದೇವೆ. 47 ಲಕ್ಷ ರೈತರಿಗೆ ಇದರಿಂದ ಪ್ರಯೋಜನ ಆಗಿದೆ. ಡೀಸಲ್ ಸಬ್ಸಿಡಿ ಯನ್ನು ಪ್ರತಿ ರೈತರಿಗೆ ಕೊಟ್ಟಿದ್ದೀವಿ. ಶೂನ್ಯ ಬಡ್ಡಿ ದರದಲ್ಲಿ 5 ಲಕ್ಷದ ವರೆಗೂ ಸಾಲ ಕೊಡುತ್ತಿದ್ದೇವೆ. ಬೆಂಬಲ ಬೆಲೆ ಕೊಡಲು 3600 ಕೋಟಿ ರೂ ಆವರ್ತ ನಿಧಿ ಇಟ್ಟಿದ್ದೇವೆ. ಇದಲ್ಲದೇ ಬೀಜ ಗೊಬ್ಬರಕ್ಕೆ ಪ್ರತಿ ರೈತನಿಗೆ 10 ಸಾವಿರ ಕೊಡುವ ವ್ಯವಸ್ಥೆ ಮಾಡಿದ್ದೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.












Click it and Unblock the Notifications