ಅಭಿವೃದ್ಧಿ ಮಂತ್ರ ಪಠಿಸುತ್ತಾ ಕರ್ನಾಟಕ ಯಾತ್ರೆ ಹೊರಟ ಸಿದ್ದರಾಮಯ್ಯ
ಅಹಮದಾಬಾದ್, ಡಿಸೆಂಬರ್ 14: 2018ರ ಕರ್ನಾಟಕ ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ 'ನವ ಕರ್ನಾಟಕ ನಿರ್ಮಾಣಕ್ಕಾಗಿ' ಹೆಸರಿನಲ್ಲಿ ಒಂದು ತಿಂಗಳ ರಾಜ್ಯ ಪ್ರವಾಸ ಆರಂಭಿಸಿದ್ದಾರೆ. ಪ್ರವಾಸವನ್ನು ಸಂಪೂರ್ಣವಾಗಿ ಅಭಿವೃದ್ಧಿಯ ಮಂತ್ರ ಪಠಣೆಗೆ ಸಿದ್ದರಾಮಯ್ಯ ಮೀಸಲಿಟ್ಟಿದ್ದಾರೆ.
ತುಂಬಾ ಲೆಕ್ಕಾಚಾರದಿಂದ ತಮ್ಮ ಯಾತ್ರೆ ಆರಂಭಿಸಿರುವ ಸಿದ್ದರಾಮಯ್ಯ ಲಿಂಗಾಯುತರ ಪುಣ್ಯಭೂಮಿ ಬೀದರ್ ನ ಬಸವಕಲ್ಯಾಣದಲ್ಲಿ ಬುಧವಾರ ನವ ಕರ್ನಾಟಕ ನಿರ್ಮಾಣ ಯಾತ್ರೆಗೆ ಚಾಲನೆ ನೀಡಿದ್ದಾರೆ.

ಬುಧವಾರ ಬೀದರ್ ಮತ್ತು ಗುರುವಾರ ಕೊಪ್ಪಳದಲ್ಲಿ ಸಿದ್ದರಾಮಯ್ಯ ಹಲವು ಯೋಜನೆಗಳಿಗೆ ಚಾಲನೆ ನೀಡಿದ್ದರೆ, ಇನ್ನೂ ಹಲವು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಈ ಮೂಲಕ ಮುಂದಿನ ಚುನಾವಣೆಗೆ ಅಭಿವೃದ್ಧಿಯೇ ನಮ್ಮ ಅಜೆಂಡಾ ಎಂಬ ಸಂದೇಶವನ್ನು ಅವರು ರವಾನಿಸಿದ್ದಾರೆ.
ಎರಡೂ ದಿನಗಳ ಸಮಾವೇಶದಲ್ಲಿ ಭಾರೀ ಜನಸ್ತೋಮ ನೆರೆದಿದ್ದು ಕಾಂಗ್ರೆಸ್ ಸರಕಾರದ ಅಭಿವೃದ್ಧಿಯನ್ನು ಜನ ಬೆಂಬಲಿಸಿದಂತೆ ಭಾಸವಾಗುತ್ತಿದೆ.

ಇದಲ್ಲದೆ ಈಗಾಗಲೇ ಪರಿವರ್ತನಾ ಯಾತ್ರೆ ಯೊರಟಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್. ಯಡಿಯೂರಪ್ಪ ಮತ್ತು ವಿಕಾಸ ಪರ್ವ ಯಾತ್ರೆ ಮಾಡುತ್ತಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿಯವರಿಗೆ ಸಿದ್ದರಾಮಯ್ಯ ಸಡ್ಡು ಹೊಡೆದಿದ್ದಾರೆ. ಇದಕ್ಕೆ ತಕ್ಕಂತೆ ಸಾಮಾಜಿಕ ಜಾಲತಾಣದಲ್ಲೂ ಕಾಂಗ್ರೆಸ್ ಕಾರ್ಯಕರ್ತರ ಚಟುವಟಿಕೆಗಳು ಗರಿಗೆದರಿವೆ.
ಇನ್ನೊಂದೆಡೆ ಮತ ಲೆಕ್ಕಾಚಾರದಲ್ಲೂ ಮುಂದಿರುವ ಸಿಎಂ ತಮ್ಮ ಅಹಿಂದ (ಅಲ್ಪಸಂಖ್ಯಾತ, ಹಿಂದುಳಿದ ವರ್ಗ, ದಲಿತ) ಮತಗಳ ಜತೆ ಬಿಜೆಪಿಯ ಭದ್ರ ವೋಟ್ ಬ್ಯಾಂಕ್ ಲಿಂಗಾಯತಕ್ಕೂ ಕೈ ಹಾಕಿದ್ದಾರೆ.

ಈ ಎಲ್ಲಾ ಹಿನ್ನಲೆಗಳನ್ನು ಇಟ್ಟುಕೊಂಡು ನೋಡಿದಾಗ ಬಿಜೆಪಿ ಮತ್ತು ಜೆಡಿಎಸ್ ನ ಯಾತ್ರೆಗಳಿಂತ ಸಿಎಂ ಯಾತ್ರೆ ಹೆಚ್ಚು ಸದ್ದು ಮಾಡುತ್ತಿದೆ. 2010ರ ಸಿದ್ದರಾಮಯ್ಯನವರ 'ಬಳ್ಳಾರಿ ಚಲೋ' ಪಾದಯಾತ್ರೆಯ ಜತೆಗೂ ಇದನ್ನು ತಳುಕು ಹಾಕಲಾಗುತ್ತಿದ್ದು 2018ರಲ್ಲಿ ಕರ್ನಾಟಕದಲ್ಲಿ ಅಧಿಕಾರ ಹಿಡಿಯವುದರ ಜತೆಗೆ ರಾಜ್ಯದಲ್ಲಿ ಕಾಂಗ್ರೆಸ್ ಗೆ ಭದ್ರ ಬುನಾದಿ ಹಾಕುವ ಯೋಜನೆಯೂ ಇದರ ಹಿಂದಿದೆ.












Click it and Unblock the Notifications