ಸರ್ಕಾರ ಉರುಳಿಸಲು ಕೈ ನಾಯಕರು ಪ್ಲಾನ್ : ಸ್ಟೋಟಕ ಹೇಳಿಕೆ ನೀಡಿದ ವಿಜಯೇಂದ್ರ
ಬೆಂಗಳೂರು, ಏಪ್ರಿಲ್ 22: ಕಾಂಗ್ರೆಸ್ ಮುಖಂಡರು ಕಿತ್ತಾಡಿದರೆ ಬಿಜೆಪಿಯವರು, ಅಮಿತ್ ಶಾ ಅವರು ಕಾಂಗ್ರೆಸ್ ಸರ್ಕಾರ ಉರುಳಿಸಿಬಿಡುತ್ತಾರೆ ಎಂದು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರು ಹೇಳಿದ್ದಾರೆ. ಮಲ್ಲಿಕಾರ್ಜುನ್ ಖರ್ಗೆಯವರೇ, ನಿಮ್ಮ ಕಾಂಗ್ರೆಸ್ ಪಕ್ಷದ ಶಾಸಕರೇ ಸರಕಾರ ಅಸ್ಥಿರಗೊಳಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಳೆದೆರಡು ವರ್ಷಗಳಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಹಣ ನೀಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರವು ಅಧಿಕಾರಕ್ಕೆ ಬಂದ ಬಳಿಕ ಬೆಲೆ ಏರಿಕೆಯ ಗ್ಯಾರಂಟಿಯನ್ನು ಜನರಿಗೆ ನೀಡಿದೆ. 50ಕ್ಕೂ ಹೆಚ್ಚು ದಿನಬಳಕೆಯ ಅಗತ್ಯ ವಸ್ತುಗಳ ಮೇಲೆ ಬೆಲೆ ಏರಿಕೆ ಮಾಡಿದ ಸರಕಾರ ಸಿದ್ದರಾಮಯ್ಯನವರದು ಎಂದು ಟೀಕಿಸಿದರು. ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ ಮತ್ತು ಹಿಂದೂಗಳಿಗೆ ಅಪಮಾನ ಮಾಡುತ್ತಿದ್ದಾರೆ. ಪರಿಶಿಷ್ಟ ಜಾತಿ, ಪಂಗಡಗಳ ಅಭಿವೃದ್ಧಿಗೆ ಮೀಸಲಿಟ್ಟ 38,500 ಕೋಟಿ ರೂಪಾಯಿಗಳನ್ನು ಸಿದ್ದರಾಮಯ್ಯನವರ ಸರಕಾರ ದುರ್ಬಳಕೆ ಮಾಡಿದೆ ಎಂದು ಆರೋಪಿಸಿದರು.

ಕರ್ನಾಟಕ ರಾಜ್ಯದಲ್ಲಿ ಇರುವುದು ಜನಪರ ಸರಕಾರ ಅಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರವು ಬಡವರ, ರೈತರ, ಜನಸಾಮಾನ್ಯರ ಪರವಾದ ಸರಕಾರ ಅಲ್ಲ. ಈ ಸರಕಾರ ರೈತ ವಿರೋಧಿ ಹಾಗೂ ಬಡವರ ವಿರೋಧಿ ಎಂದು ತಿಳಿಸಿದರು. ಸಿದ್ದರಾಮಯ್ಯನವರು ಕಳೆದ 20 ತಿಂಗಳಿಂದ ಅಭಿವೃದ್ಧಿ ಕಾರ್ಯಕ್ಕೆ ಹಣ ನೀಡಿಲ್ಲ. ಗ್ಯಾರಂಟಿಗೆ ಹಣ ಹೊಂದಿಸಲು ಕಷ್ಟವಾಗಿದೆ ಎಂದು ಕಾಂಗ್ರೆಸ್ಸಿನ ಹಿರಿಯ ಶಾಸಕ ಆರ್.ವಿ.ದೇಶಪಾಂಡೆ ಹೇಳಿದ್ದಾರೆ. ಅದೇ ಪಕ್ಷದ ಹಿರಿಯ ಶಾಸಕ ರಾಜು ಕಾಗೆಯವರು ಅಭಿವೃದ್ಧಿ ಕಾರ್ಯಕ್ಕೆ ಹಣ ಇಲ್ಲದೆ, ಆತ್ಮಹತ್ಯೆ ಮಾಡಿಕೊಳ್ಳುವಂಥ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯದಲ್ಲಿ ಇರುವುದು ಜನಪ್ರಿಯ ಸರಕಾರವಲ್ಲ; ಇದು ಜಾಹೀರಾತಿನ ಸರಕಾರ ಎಂದು ಟೀಕಿಸಿದರು. ಇಂಥ ಜನವಿರೋಧಿ ಸರಕಾರದ ನಿಜ ಬಣ್ಣ ಬಯಲು ಮಾಡಿ, ಜನಜಾಗೃತಿ ಮೂಡಿಸಲು ಬಿಜೆಪಿ ಜನಾಕ್ರೋಶ ಯಾತ್ರೆ ಮಾಡುತ್ತಿದೆ. ಹಿಂದೆ ಯಡಿಯೂರಪ್ಪ ಅವರು ಬಿಜೆಪಿ ಮುಖ್ಯಮಂತ್ರಿಯಾಗಿದ್ದಾಗ ಕರ್ನಾಟಕವು ಅಭಿವೃದ್ಧಿ ವಿಷಯದಲ್ಲಿ ದೇಶದಲ್ಲಿ ಎರಡನೇ ಸ್ಥಾನದಲ್ಲಿತ್ತು. ಅದೇ ಕರ್ನಾಟಕವು ಈಗ ಇಡೀ ದೇಶದಲ್ಲಿ ಮೊದಲ ಸ್ಥಾನಕ್ಕೆ ಬಂದಿದೆ. ಅದು ಅಭಿವೃದ್ಧಿ ವಿಚಾರಕ್ಕೆ ಅಲ್ಲ; ಭ್ರಷ್ಟಾಚಾರದಲ್ಲಿ ಎಂದು ವ್ಯಂಗ್ಯವಾಗಿ ನುಡಿದರು. ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರೇ ಇದನ್ನು ಹೇಳಿದ್ದಾಗಿ ವಿವರಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರವು ಜನರ ಪಾಲಿಗೆ ಬದುಕಿದ್ದೂ ಸತ್ತಂತಿದೆ. ಕಳೆದ ಎರಡು ವರ್ಷಗಳಲ್ಲಿ ಈ ಸರಕಾರ ಬಂದ ಮೇಲೆ ಬೆಲೆ ಏರಿಕೆ ಗರಿಷ್ಠ ಮಟ್ಟಕ್ಕೆ ತಲುಪಿದೆ. ರೈತರಿಗೆ ತೊಂದರೆ ಕೊಡುತ್ತಿದ್ದಾರೆ. ಬೆಲೆ ಏರಿಕೆ ಪರಿಣಾಮವಾಗಿ ಬಡಜನರು ತತ್ತರಿಸಿ ಹೋಗಿದ್ದಾರೆ. ಯಾವುದೇ ಅಭಿವೃದ್ಧಿ ಕಾರ್ಯಗಳಿಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯ ಪರಿಸ್ಥಿತಿ ಇದೆ ಎಂದು ಆರೋಪಿಸಿದರು. ಅಭಿವೃದ್ಧಿ ಆಗುತ್ತಿಲ್ಲ. ಒಂದು ತೊಟ್ಟು ವಿಷ ಕೊಡಿ, ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಬಿಜೆಪಿ ಶಾಸಕರು ಹೇಳುತ್ತಿಲ್ಲ.
ಆಡಳಿತ ಪಕ್ಷದ ಹಿರಿಯ ಶಾಸಕ ರಾಜು ಕಾಗೆಯವರು ಹೇಳುತ್ತಿದ್ದಾರೆ. ಬಿ.ಆರ್.ಪಾಟೀಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಆರ್.ವಿ.ದೇಶಪಾಂಡೆ ಅವರಂಥ ಹಿರಿಯ ಶಾಸಕರೂ ಅಭಿವೃದ್ಧಿಗೆ ಹಣ ಕೊಡಲು ಸಾಧ್ಯ ಆಗುತ್ತಿಲ್ಲ. ಗ್ಯಾರಂಟಿಗಳಿಂದ ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಮಾಡಲಾಗುತ್ತಿಲ್ಲ ಎಂದು ಹೇಳಿದ್ದಾರೆ. ಸಿದ್ದರಾಮಯ್ಯನವರು ಕೇವಲ ಮುಸಲ್ಮಾನರ ಮುಖ್ಯಮಂತ್ರಿಯಂತೆ ವರ್ತಿಸುತ್ತಿದ್ದಾರೆ. ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಅದಕ್ಕಾಗಿ ಜನಾಕ್ರೋಶ ಯಾತ್ರೆ ಮಾಡುತ್ತಿರುವುದಾಗಿ ವಿವರಿಸಿದರು. ಅಹಿಂದ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದ ಕಾಂಗ್ರೆಸ್ಸಿಗರು, ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ಸಮುದಾಯಗಳನ್ನು ಮರೆತು ಕೇವಲ ಅಲ್ಪಸಂಖ್ಯಾತರ ಹಿಂದೆ ಹೊರಟಿದ್ದಾರೆ.
ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ಸಾವಿರಾರು ಕೋಟಿ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಇದು ಖಂಡನೀಯ ಎಂದು ತಿಳಿಸಿದರು. 50ಕ್ಕೂ ಜನೋಪಯೋಗಿ ವಸ್ತುಗಳ ಬೆಲೆ ಏರಿಸಿದ್ದಾರೆ. ಪೆಟ್ರೋಲ್ ಬೆಲೆ 3.50 ರೂ. ಏರಿಸಿದ್ದರೆ ತೆರಿಗೆ ಮೂಲಕ ಡೀಸೆಲ್ ಬೆಲೆ 5.50 ರೂ. ಹೆಚ್ಚಿಸಿದ್ದಾರೆ. ಸ್ಟಾಂಪ್ ಡ್ಯೂಟಿ ಹೆಚ್ಚಿಸಿದ್ದಾರೆ. ಹಾಲಿನ ಬೆಲೆ 9 ರೂ. ಜಾಸ್ತಿ ಮಾಡಿದ್ದಾರೆ. ಬೆಲೆ ಏರಿಕೆಯಿಂದ ಜನರು ಪರದಾಡುವಂತಾಗಿದೆ. ರೈತರೂ ತೊಂದರೆಗೆ ಸಿಲುಕಿದ್ದಾರೆ ಎಂದು ಬಿ ವೈ ವಿಜಯೇಂದ್ರ ಅವರು ಹೇಳಿದರು.
ಇನ್ನೂ ಈ ವೇಳೆ ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಸಂಸದರಾದ ಡಿ ವಿ ಸದಾನಂದಗೌಡ ಅವರು ಮಾತನಾಡಿ, ಸಿದ್ದರಾಮಯ್ಯ ಮತ್ತು ಅವರ ಸಚಿವ ಸಂಪುಟವು ಅಲಿಬಾಬ ಮತ್ತು 40 ಕಳ್ಳರ ಕಥೆಯ ತದ್ರೂಪ. ಯಾವುದೇ ರಾಜಕೀಯ ಪಕ್ಷಗಳು ಜನರ ಪರವಾಗಿ ಅಧಿಕಾರದಲ್ಲಿದ್ದಾಗ ಮಾತ್ರ ಕೆಲಸ ಮಾಡುವುದಲ್ಲ. ಪ್ರತಿಪಕ್ಷದಲ್ಲಿ ಇದ್ದಾಗ ಕೂಡ ಕೆಲಸ ಮಾಡಿದರೆ ಮಾತ್ರ ರಾಜಕೀಯ ಪಕ್ಷವೆಂದು ಅನಿಸಿಕೊಳ್ಳುತ್ತದೆ ಎಂದು ತಿಳಿಸಿದರು.
ನಮಗೆ ಇವತ್ತು ಅಧಿಕಾರ ಇಲ್ಲ. ಸಿದ್ದರಾಮಯ್ಯರವರು ನಡದಿದ್ದೇ ದಾರಿ ಎಂದು ನಾವು ಸುಮ್ಮನೆ ಕುಳಿತುಕೊಳ್ಳುಕೊಂಡರೆ ನೀವೆಲ್ಲರೂ ಕಣ್ಣೀರಿನಲ್ಲಿ ಕೈತೊಳೆಯುವ ಕೆಲಸವಾಗುತ್ತದೆ. ಅದಕ್ಕಾಗಿ ವಿಜಯೇಂದ್ರರ ನೇತೃತ್ವದಲ್ಲಿ, ನಮ್ಮೆಲ್ಲ ಹಿರಿಯ ನಾಯಕರು ನಾವೆಲ್ಲ ಈ ಜನಾಕ್ರೋಶ ಯಾತ್ರೆಯನ್ನು ಪ್ರಾರಂಭಿಸಿದ್ದೇವೆ. ನೀವುಗಳು ನಮ್ಮ ಜೊತೆ ಬನ್ನಿ. ರಾಜ್ಯದಲ್ಲಿ ಈ ಕಾಂಗ್ರೆಸ್ ಸರ್ಕಾರಕ್ಕೆ ತಕ್ಕ ಪಾಠವನ್ನು ಕಲಿಸಬೇಕೆಂದು ನಿಶ್ಚಯ ಮಾಡಿದ್ದೇವೆ ಎಂದರು.
ಇವತ್ತಿನ ಸರ್ಕಾರ ಹೇಗಿದೆ ಎನ್ನುವುದು ನಿಮಗೆ ಚೆÀನ್ನಾಗಿ ಗೊತ್ತಿದೆ. ಅಲಿಬಾಬ ಮತ್ತು 40 ಕಳ್ಳರು ಕಥೆಯನ್ನು ನೀವು ಕೇಳಿದ್ದೀರಿ ಅದರ ತದ್ರೂಪವೇ ಸಿದ್ದರಾಮಯ್ಯ ನವರ 40 ಡೋಂಗಿ ಮಂತ್ರಿಗಳು ಈ ರಾಜ್ಯದಲ್ಲಿರುವವರು ಎಂದು ಟೀಕಿಸಿದರು. ಸರ್ಕಾರದ ಖಜಾನೆಯನ್ನು ಲೂಟಿ ಹೊಡೆದಾಯಿತು; ಕೊಳ್ಳೆ ಹೊಡೆದಾಯಿತು. ಸರ್ಕಾರದ ಖಜಾನೆ ಖಾಲಿಯಾಯಿತು. ಇನ್ನೆಲ್ಲಿಂದ ಕಳ್ಳತನ ಮಾಡೋದು? ಎಲ್ಲ ಜನರ ಕಿಸೆಗೆ ಕೈಹಾಕೋಣ ಅಲ್ಲಿಂದ ಕಳ್ಳತನ ಮಾಡೋಣ ಎಂದು ಹೇಳಿ ಬೆಲೆ ಏರಿಕೆಯನ್ನು ಮಾಡಿ ಖಜಾನೆ ತುಂಬಿ ಅಲ್ಲಿಂದ ಲೂಟಿ ಮಾಡುವ ಕೆಲಸ ಕಾರ್ಯಗಳನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ದೂರಿದರು.
ಕಾಂಗ್ರೆಸ್ ಸರ್ಕಾರವು 48 ಜನೋಪಯೋಗಿ ವಸ್ತುಗಳ ಮೇಲೆ ತೆರಿಗೆ ಹಾಕಿದೆ. ತೆರಿಗೆ ಹಾಕದೆ ಇರುವ ಎರಡು ಸ್ವತ್ತುಗಳು ಅಂದರೆ ಸಮುದ್ರ ತೆರೆಗಳು ಮತ್ತು ಉಸಿರಾಡುವ ಗಾಳಿ. ಅವುಗಳಿಗೆ ತೆರಿಗೆ ವಿಧಿಸಿರುವುದಿಲ್ಲ ಎಂದು ವ್ಯಂಗ್ಯವಾಡಿದರು.ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನರೇ ಮಾಲೀಕರು ಆದಕಾರಣ ನಾವು ನಿಶ್ಚಯ ಮಾಡಿದ್ದೇವೆ. ವಿಧಾನಸಭೆಯಲ್ಲಿ ಉತ್ತರ ಕೊಡದ ಅಲಿಬಾಬ ಮತ್ತು 40 ಕಳ್ಳರೇ ನಮಗೆ ನಮ್ಮ ಜನರಿದ್ದಾರೆ. ನಾವು ಅವರ ಆರ್ಶೀವಾದಕ್ಕಾಗಿ ವಿಜಯೇಂದ್ರ ರವರ ನೇತೃತ್ವದಲ್ಲಿ ಅವರ ಬಳಿ ನಾವು ಹೋಗುತ್ತೇವೆ ಎಂದು ಸದಾನಂದಗೌಡ ಅವರು ಎಚ್ಚರಿಸಿದರು.
ಈ ವೇಳೆ ರಾಜ್ಯದ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ, ಮಾಜಿ ಉಪಮುಖ್ಯಮಂತ್ರಿ ಮತ್ತು ಸಂಸದ ಗೋವಿಂದ ಕಾರಜೋಳ, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಧಾನಪರಿಷತ್ ವಿಪಕ್ಷ ಮುಖ್ಯ ಸಚೇತಕ್ ಎನ್. ರವಿಕುಮಾರ್, ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್, ಮಾಜಿ ಶಾಸಕರಾದ ಎಂ.ಪಿ. ರೇಣುಕಾಚಾರ್ಯ, ಮಾಡಾಳ್ ವಿರುಪಾಕ್ಷಪ್ಪ, ಮಾಜಿ ಮುಖ್ಯ ಸಚೇತಕ ಎ.ಹೆಚ್. ಶಿವಯೋಗಿಸ್ವಾಮಿ, ವಿಧಾನಪರಿಷತ್ ಮಾಜಿ ಸದಸ್ಯ ವೈ.ಎ. ನಾರಾಯಣಸ್ವಾಮಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್, ಜಿಲ್ಲಾಧ್ಯಕ್ಷ ಎನ್. ರಾಜಶೇಖರ, ಮಾಜಿ ಶಾಸಕ ವೈ. ಸಂಪಂಗಿ, ರಾಜೇಶ್ ಕುಮಾರ್, ಮುಖಂಡ ಮಾಡಾಳ್ ಮಲಿಕಾರ್ಜುನ್, ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ್, ರಾಜ್ಯ ಪದಾಧಿಕಾರಿಗಳು, ಜಿಲ್ಲಾ ಪದಾಧಿಕಾರಿಗಳು, ಮಂಡಲ ಅಧ್ಯಕ್ಷರು ಮತ್ತು ಪಕ್ಷದ ಮುಖಂಡರು ಉಪಸ್ಥಿತರಿದ್ದರು.












Click it and Unblock the Notifications