'ಸರ್ಕಾರ ಬಿದ್ದರೆ ಬೀಳಲಿ..' ಎಂದ ಕಾಂಗ್ರೆಸ್ ಪ್ರಭಾವಿ ನಾಯಕ
ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಬೇಕು ಎಂದು ಬಿಜೆಪಿ-ಜೆಡಿಎಸ್ ತೊಡೆ ತಟ್ಟಿವೆ. ಮತ್ತೊಂದೆಡೆ ಮುಡಾ ಕೇಸ್‌ನಿಂದಾಗಿ ಸಿಎಂ ಸಿದ್ದರಾಮಯ್ಯ ಅವರ ಕುರ್ಚಿ ಅಲುಗಾಡುತ್ತಿದೆ. ಈಗ ಸ್ವಪಕ್ಷದಿಂದಲೇ ಸರ್ಕಾರ ಬೀಳುವ ಬಗ್ಗೆ ಮಾತುಕೇಳಿಬಂದಿದೆ. ಕಾಂಗ್ರೆಸ್ ನ ಹಿರಿಯ ನಾಯಕರೊಬ್ಬರ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ.
ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯರಾದ ಬಿ.ಕೆ.ಹರಿಪ್ರಸಾದ್ ಅವರು ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಈ ವೇಳೆ ಅವರು ಸರ್ಕಾರ ಬಿದ್ದರೆ ಬೀಳಲಿ, ರಾಜ್ಯದಲ್ಲಿ ಜಾತಿಗಣತಿ ಜಾರಿಯಾಗಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ.

ಜಾತಿ ಗಣತಿ ಜಾರಿ ವಿಳಂಬದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಬಿ.ಕೆ.ಹರಿಪ್ರಸಾದ್ ಅವರು ಜಾತಿಗಣತಿ ಜಾರಿಯಿಂದ ರಾಜ್ಯದ ಎಲ್ಲ ಸಮುದಾಯಗಳಿಗೆ ಒಳ್ಳೆಯದಾಗಲಿದೆ. ಆದರೆ ಜಾತಿಗಣತಿ ಜಾರಿಯಿಂದಲೇ ಸರ್ಕಾರ ಬೀಳುತ್ತದೆ ಎನ್ನುವುದಾದರೆ, ಹಾಗೆಯೇ ಆಗಲಿ ಬಿಡಿ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲೇ ಜಾತಿಗಣತಿ ಜಾರಿ ಮಾಡುವ ಅಂಶವಿದೆ. ಹೀಗಿದ್ದರೂ ವರದಿ ಜಾರಿ ಮಾಡಲು ಸರ್ಕಾರ ಏಕೆ ಹಿಂದೇಟು ಹಾಕುತ್ತಿದೆ? ವಿಳಂಬ ಮಾಡದೆ ಮೊದಲು ಜಾತಿಗಣತಿಯನ್ನು ರಾಜ್ಯದಲ್ಲಿ ಜಾರಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪಕ್ಷದ ಪ್ರಣಾಳಿಕೆ ಬಗ್ಗೆ ಹೆಚ್ಚು ಗೌರವ ಹೊಂದಿದ್ದಾರೆ. ಈ ಜಾತಿ ಗಣತಿಗೆ ಅವರೂ ಬೆಂಬಲ ಕೋಡಬೇಕು. ಕಾಂಗ್ರೆಸ್ ಪಕ್ಷದ ಪ್ರಣಾಳಿಯಲ್ಲಿರುವ ಜಾತಿಗಣತಿ ಜಾರಿ ಬಗ್ಗೆ ಮಲ್ಲಿಕಾರ್ಜುನ್ ಖರ್ಗೆ, ರಾಹುಲ್ ಗಾಂಧಿ ಕೂಡ ಈ ಹಿಂದೆ ಮಾತನಾಡಿದ್ದಾರೆ. ಪ್ರಪಂಚ ತಲೆಕೆಳಗಾದ್ರೂ ಇದು ಜಾರಿಯಾಗಬೇಕು ಎಂದು ರಾಹುಲ್ ಖುದ್ದು ಹೇಳಿದ್ದಾರೆ. ಹೀಗಿರುವಾಗ ಸರ್ಕಾರ ಬಿದ್ದರೆ ಬೀಳಲಿ, ಅದಕ್ಕೆ ಹೆದರುವುದೇಕೆ? ಎಂದು ಬಿ.ಕೆ.ಹರಿಪ್ರಸಾದ್ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಈ ಹಿಂದೆಯೂ ಬಿ.ಕೆ.ಹರಿಪ್ರಸಾದ್ ಅವರು ಸಾಕಷ್ಟು ಬಾರಿ ರಾಜ್ಯ ಕಾಂಗ್ರೆಸ್ ಬಗ್ಗೆ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು. ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವರೊಂದಿಗೆ ಹರಿಪ್ರಸಾದ್ ಅವರಿಗೆ ಮನಸ್ತಾಪವಿದೆ ಎಂದು ಹೇಳಲಾಗಿದೆ. ಈ ಕಾರಣಕ್ಕೆ ಸಿದ್ದರಾಮಯ್ಯ ಅವರನ್ನು ಆಗಾಗ ಹರಿಪ್ರಸಾದ್ ಅವರು ಟೀಕಿಸುತ್ತಾ ಬಂದಿದ್ದರು.
ಆದರೆ, ಇತ್ತೀಚೆಗೆ ಬಿ.ಕೆ.ಹರಿಪ್ರಸಾದ್ ಅವರು ದಿಢೀರನ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಗಂಟೆಗಟ್ಟಲೆ ಚರ್ಚೆ ನಡೆಸಿ ಕುತೂಹಲ ಮೂಡಿಸಿದ್ದರು. ಸಿಎಂ ಸರ್ಕಾರಿ ನಿವಾಸ ಕಾವೇರಿಗೆ ತೆರಳಿ ಸುದೀರ್ಘ ಸಮಯದವರೆಗೆ ಚರ್ಚಿಸಿ ಬಂದಿದ್ದರು. ಈಗ ಮತ್ತೊಮ್ಮೆ ರಾಜ್ಯ ಸರ್ಕಾರದ ವಿರುದ್ಧ ಅವರು ಸಿಡಿದಿದ್ದಾರೆ.
ಇತ್ತೀಚೆಗೆ ಕಾಂಗ್ರೆಸ್‌ನಲ್ಲಿ ಸಿಎಂ ಹುದ್ದೆಯ ಆಕಾಂಕ್ಷಿಗಳ ಪಟ್ಟಿ ಹೆಚ್ಚಾಗಿತ್ತು. ಕಾಂಗ್ರೆಸ್‌ನ ಹಲವು ನಾಯಕರು ನಾನು ಸಿಎಂ ಆಗುತ್ತೇನೆ ಎಂದು ಸ್ವಯಂಘೋಷಿಸಿಕೊಂಡಿದ್ದರು. ಮತ್ತೊಂದೆಡೆ ಬಿ.ಕೆ.ಹರಿಪ್ರಸಾದ್ ಅವರು ಕೂಡ ಸಿಎಂ ರೇಸ್‌ನಲ್ಲಿದ್ದಾರೆ ಎನ್ನುವ ಗುಸಗುಸು ಇತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಅವರು, ನಾನು ಯಾವ್ ರೇಸಿನಲ್ಲೂ ಇಲ್ಲ. ನಾನು ರೇಸ್‌ನಲ್ಲಿ ಓಡುವ ಕತ್ತೆಯೂ ಅಲ್ಲ, ಕುದುರೆಯೂ ಅಲ್ಲ ಎಂದು ಬಿ.ಕೆ.ಹರಿಪ್ರಸಾದ್ ಸ್ಪಷ್ಟನೆ ನೀಡಿದ್ದರು.












Click it and Unblock the Notifications