ಕಾಂಗ್ರೆಸ್ ಶಾಸಕನಿಂದ ಬಾಂಬ್ ಹಾಕಿಸುವ ಬೆದರಿಕೆ, ಕಾರಣವೇನು?
ಹಾಸನ ಜಿಲ್ಲೆಯ ಅರಸೀಕೆರೆ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಅವರು ಮತ್ತೆ ವಿವಾದಕ್ಕೆ ಗುರಿಯಾಗಿದ್ದಾರೆ ಎನ್ನಲಾಗಿದೆ. ಎತ್ತಿನಹೊಳೆ ವಿಚಾರದಲ್ಲಿ ಶಾಸಕ ಶಿವಲಿಂಗೇಗೌಡ ಅವರು ಈ ರೀತಿ ಬೆದರಿಕೆ ಹಾಕಿದ್ದಾರೆ ಎಂದು ಜೆಡಿಎಸ್ ಆರೋಪಿಸಿದೆ.
ಎತ್ತಿನಹೊಳೆ ಯೋಜನೆಗೆ ಭೂಮಿ ಬಿಟ್ಟುಕೊಡಲು ಅರಣ್ಯ ಇಲಾಖೆ ವಿಳಂಬ ನೀತಿ ಅನುಸರಿಸುತ್ತಿದ್ದು, ಇದು ಹೀಗೆಯೇ ಮುಂದುವರಿದರೆ ಆಟಂಬಾಂಬ್ ಹಾಕಿಸಿ ಜಾಗ ಪಡೆದುಕೊಳ್ಳಬೇಕಾಗುತ್ತೆ ಎಂದು ಅರಸೀಕೆರೆ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಹೇಳಿದ್ದಾರೆ ಎಂದು ಜೆಡಿಎಸ್ ಪತ್ರಿಕಾ ವರದಿಯನ್ನು ಹಂಚಿಕೊಂಡಿದೆ.

ತಾಲ್ಲೂಕು ಮಟ್ಟದ ಅಭಿವೃದ್ಧಿ ಸಭೆಯಲ್ಲಿ ಶಿವಲಿಂಗೇಗೌಡ ಅವರು ಈ ರೀತಿ ಮಾತನಾಡಿದ್ದಾರೆ ಎನ್ನಲಾಗಿದೆ. ಎತ್ತಿನಹೊಳೆ ಯೋಜನೆಯು ಕನಸಿನ ನೀರಾವರಿ ಯೋಜನೆ, ಇದು ತಾಲ್ಲೂಕಿನ ವ್ಯಾಪ್ತಿಯ ಐದು ಕಿಲೋಮೀಟರ್ ಪ್ರದೇಶದಲ್ಲಿ ನಡೆಯಬೇಕಿದೆ. ಇದು ಸದ್ಯ ಅರಣ್ಯ ಇಲಾಖೆಗೆ ಒಳಪಟ್ಟಿದ್ದು, ಇದನ್ನು ಬಿಟ್ಟು ಕೊಡಲು ಕೋರಿದ್ದೇವೆ. ಇದಕ್ಕೆ ಬದಲಿ ಜಾಗ ನೀಡುವುದಾಗಿಯೂ ಈಗಾಗಲೇ ಹೇಳಿದ್ದೇವೆ ಎಂದಿದ್ದಾರೆ.
ಆದರೆ, ಅರಣ್ಯ ಇಲಾಖೆಯು ಇನ್ನೂ ಭೂಮಿ ಬಿಟ್ಟುಕೊಡದೆ, ಈ ಯೋಜನೆಗೆ ಅಡ್ಡಿಪಡಿಸುತ್ತಿದೆ. ಇದರಿಂದಾಗಿ ಕಳೆದ ಜೂನ್‌ನಲ್ಲಿ ಚಾಲನೆ ಪಡೆದುಕೊಂಡಿದ್ದ ಎತ್ತಿನಹೊಳೆ ಯೋಜನೆಯ ನೀರು ಬೇರೆ ಕಡೆಗೆ ಹರಿಯುತ್ತಿದೆ. ಇದರಿಂದ ಈ ಭಾಗದ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಎತ್ತಿನಹೊಳೆ ಅಧಿಕಾರಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, 415 ಎಕರೆ ಪ್ರದೇಶವನ್ನು ಬಿಟ್ಟುಕೊಡಲು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ಜನವರಿಯಲ್ಲಿ ಇದಕ್ಕೆ ಸಂಬಂಧಿಸಿದ ಆದೇಶ ಬರಲಿದೆ. ಏಪ್ರಿಲ್‌ನೊಳಗೆ ಈ ಕಾಮಗಾರಿ ಪೂರ್ಣಗೊಳಿಸುವ ಗುರಿ ಇದೆ ಎಂದು ಹೇಳಿರುವುದಾಗಿ ವರದಿಯಾಗಿದೆ.
ಈ ಬಗ್ಗೆ ಜೆಡಿಎಸ್ ಟ್ವೀಟ್ ಮಾಡಿದ್ದು, ಶಾಸಕ ಶಿವಲಿಂಗೇಗೌಡರ ವಿರುದ್ಧ ಕಿಡಿಕಾರಿದೆ. ಅರಸೀಕೆರೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ನೀವೇನೂ ಜನಪ್ರತಿನಿಧಿಯೋ? ಭಯೋತ್ಪಾದಕನೋ? ಎಂದು ಪ್ರಶ್ನಿಸಿದೆ. ಅರಣ್ಯ ಇಲಾಖೆ ಭೂಮಿ ಕೊಡದಿದ್ದರೆ ಬಾಂಬ್ ಹಾಕುತ್ತೇನೆ ಎಂದು ಬೆದರಿಕೆಯೊಡ್ಡಿರುವ ಶಿವಲಿಂಗೇಗೌಡ ಅವರೇ ನೀವು ಯಾವ ಉಗ್ರಸಂಘಟನೆಯ ಸದಸ್ಯ? ಎಂದು ವಾಗ್ದಾಳಿ ನಡೆಸಿದೆ.
ಸದಾ ಸಮಾಜದಲ್ಲಿ ಶಾಂತಿ ಸಾಮರಸ್ಯ ಕದಡುವ ಪ್ರಚೋದನಕಾರಿ ಹೇಳಿಕೆ ನೀಡುವ ಶಾಸಕ ಶಿವಲಿಂಗೇಗೌಡ, ಕೆಲ ದಿನಗಳ ಹಿಂದಷ್ಟೆ ರಾಜ್ಯದಲ್ಲಿ ರಕ್ತ ಕ್ರಾಂತಿ ಮಾಡುತ್ತೇವೆ ಉಗ್ರ ಭಾಷಣ ಮಾಡಿದ್ದರು. ಗೃಹ ಸಚಿವ ಜಿ.ಪರಮೇಶ್ವರ್ ಅವರೇ, ಬಾಂಬ್ ಹಾಕುತ್ತೇನೆ ಎಂದು ಬೆದರಿಕೆ ಹಾಕಿರುವ ಶಾಸಕ ಶಿವಲಿಂಗೇಗೌಡ ವಿರುದ್ಧ ಎಫ್‌ಐಆರ್ ದಾಖಲಿಸಿ ಕಾನೂನು ಕ್ರಮ ಜರುಗಿಸಿ ಎಂದು ಜೆಡಿಎಸ್ ಒತ್ತಾಯಿಸಿದೆ.
ಈ ಹಿಂದೆ ಹಾಸನದಲ್ಲಿ ಮಾತನಾಡಿದ್ದ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ, ಸಿದ್ದರಾಮಯ್ಯ ಅವರು ಎತ್ತಿನಹೊಳೆ ಯೋಜನೆಯನ್ನು ಸಾಕಾರಗೊಳಿಸಿ, ಸಾವಿರಾರು ಅಡಿ ಆಳದಿಂದ ನೀರನ್ನು ಮೇಲಕ್ಕೆತ್ತಿ ಅರಸೀಕೆರೆಯಂತಹ ಬಯಲು ಸೀಮೆ ಭಾಗಕ್ಕೆ ಹರಿಸುವಂತಹ ಭಗೀರತ್ನ ಪ್ರಯತ್ನ ಮಾಡಿದ್ದರು ಎಂದು ಹೊಗಳಿದ್ದರು.
ಇಂತಹ ಕೆಲಸವನ್ನು ರಾಜ್ಯ ರಾಜಕಾರಣದಲ್ಲಿ ಯಾವ ನಾಯಕರೂ ಮಾಡಿರಲಿಲ್ಲ. ಅರಸೀಕೆರೆಯ ಜನ ಸಿಎಂ ಸಿದ್ದರಾಮಯ್ಯ ಅವರನ್ನು ಜೀವನಪರ್ಯಂತ ನೆನಪಿನಲ್ಲಿಟ್ಟುಕೊಳ್ಳಬೇಕು. ಅಂತಹ ಕೆಲಸವನ್ನು ಸಿಎಂ ಮಾಡಿದ್ದಾರೆ. ಹಾಗಾಗಿ ಸಿದ್ದರಾಮಯ್ಯ ಅವರ ಫೋಟೋನ ಅರಸೀಕೆರೆ ಜನ ಮನೆಗಳಲ್ಲಿಟ್ಟು ಪೂಜೆ ಮಾಡಿ, ಅವರನ್ನು ದೇವರಂತೆ ನೋಡಬೇಕು ಎಂದು ಹೇಳಿದ್ದರು.












Click it and Unblock the Notifications