ಬೆಂಗಳೂರು ಗ್ರಾಮಾಂತರದಿಂದ ಡಾ. ಮಂಜುನಾಥ್ ಸ್ಪರ್ಧೆ: ಹರಕೆ ಕುರಿ ಮಾಡಲು ಜೆಡಿಎಸ್ ರೆಡಿ: ಎಚ್.ಸಿ. ಬಾಲಕೃಷ್ಣ
ರಾಮನಗರ, ಫೆಬ್ರವರಿ 29: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಜಯದೇವ ಆಸ್ಪತ್ರೆಯ ನಿವೃತ್ತ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ಅವರನ್ನು ಬಿಜೆಪಿಯಿಂದ ಕಣಕ್ಕಿಳಿಸಲು ಮುಂದಾಗಿರುವ ಜೆಡಿಎಸ್ ನವರು ಮಂಜುನಾಥ್ ಅವರನ್ನು ಹರಕೆ ಕುರಿ ಮಾಡಲು ಮುಂದಾಗಿದ್ದಾರೆ ಎಂದ ಕಾಂಗ್ರೆಸ್ ಶಾಸಕ ಎಚ್.ಸಿ. ಬಾಲಕೃಷ್ಣ ಹೇಳಿದರು.
ಈ ಕುರಿತು ಗುರುವಾರ ಮಾಗಡಿ ಪಟ್ಟಣದ ಕೋಟೆ ಮೈದಾನದಲ್ಲಿ ಗ್ಯಾರಂಟಿ ಯೋಜನೆ ಫಲಾನುಭವಿಗಳ ಸಮಾವೇಶ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಎಚ್ ಸಿ ಬಾಲಕೃಷ್ಣ , ತಮ್ಮದೇ ಸ್ವಂತ ಪಕ್ಷ ಇದ್ದರೂ ಎಚ್.ಡಿ. ದೇವೇಗೌಡರು ಮತ್ತು ಅವರ ಮಗ ಎಚ್.ಡಿ. ಕುಮಾರಸ್ವಾಮಿ ಅವರಿಗೆ, ತಮ್ಮ ಮನೆಯ ಅಳಿಯನನ್ನು ತಮ್ಮ ಜೆಡಿಎಸ್ ಪಕ್ಷದಲ್ಲಿ ನಿಲ್ಲಿಸುವ ಯೋಗ್ಯತೆ ಇಲ್ಲವಾಗಿದೆ. ಆ ಮಟ್ಟಕ್ಕೆ ಅವರ ಪಕ್ಷ ತಲುಪಿದೆ ಎಂದು ವ್ಯಂಗ್ಯವಾಡಿದರು.

ಬೆಂಗಳೂರು ಗ್ರಾಮಾಂತರ ಸಂಸದರಾದ ಡಿ.ಕೆ. ಸುರೇಶ್ ಅವರನ್ನು ಎದುರಿಸಲು ಸಾಧ್ಯವಾಗದೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು, ಮಂಡ್ಯಕ್ಕೆ ಓಡಿ ಹೋಗಲು ಮುಂದಾಗಿದ್ದಾರೆ. ಬಿಜೆಪಿಯ ಸಿ.ಪಿ. ಯೋಗೇಶ್ವರ್ ಚನ್ನಪಟ್ಟಣ ಬಿಟ್ಟು ಕದಲುವುದಿಲ್ಲ ಎನ್ನುತ್ತಿದ್ದಾರೆ.
ಇನ್ನೂ ವೈದ್ಯರಾಗಿರುವ ಡಾ. ಮಂಜುನಾಥ್ ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ಆದರೆ, ಯಾರು ಯಾವ ಕಸುಬು ಮಾಡಬೇಕೊ ಅದನ್ನು ಮಾಡಿದರೆ ಮಾತ್ರ ಗೌರವ. ಅದು ಬಿಟ್ಟು ಬೇರೆ ಕೆಲಸ ಮಾಡಲು ಬಂದರೆ ಏನಾಗುತ್ತದೆ ಎಂದು ನಾನೇನು ಹೇಳಬೇಕಿಲ್ಲ ಎಂದು ಹೇಳಿದರು.
ಲೋಕಸಭಾ ಚುನಾವಣೆಯಲ್ಲಿ ಸುರೇಶ್ ಅವರಿಗೆ ನಾವೇನಾದರೂ ಮೋಸ ಮಾಡಿದರೆ, ಅದು ನಮಗೆ ನಾವೇ ಮಾಡಿಕೊಂಡಂತೆ. ಅವರಿಗೆ ಮೋಸವಾದರೆ ಮುಂದಿನ ಚುನಾವಣೆಯಲ್ಲಿ ಜನ ನನಗೂ ಮತ ಹಾಕುವುದು ಬೇಡ. ಕಾಂಗ್ರೆಸ್ ಸರ್ಕಾರ ಅಭಿವೃದ್ದಿ ಕೆಲಸವನ್ನ ಮಾಡಿದೆ ಎಂದು ಕಾಂಗ್ರೆಸ್ ಶಾಸಕ ಎಚ್ ಸಿ ಬಾಲ ಕೃಷ್ಣ ಹೇಳಿದರು.












Click it and Unblock the Notifications