ವಿಶ್ವಾಸಮತಯಾಚನೆಗೆ ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರ ಗೈರು
ಬೆಂಗಳೂರು, ಜುಲೈ 17 : ಗುರುವಾರ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ವಿಧಾನಸಭೆಯಲ್ಲಿ ವಿಶ್ವಾಸಮತಯಾಚನೆ ಮಾಡಲಿದ್ದಾರೆ. ನಾಳೆಯ ಅಧಿವೇಶನಕ್ಕೆ ಕಾಂಗ್ರೆಸ್ ಶಾಸಕ ಬಿ. ನಾಗೇಂದ್ರ ಗೈರಾಗಲಿದ್ದಾರೆ.
ಹೆಬ್ಬಾಳ ಬಳಿಯ ಆಸ್ಪರ್ ಆಸ್ಪತ್ರೆಯಲ್ಲಿ ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರ ಚಿಕಿತ್ಸೆ ಪಡೆಯುತ್ತಿದ್ದಾರೆ. ಎದೆ ನೋವಿನ ಕಾರಣ ಆಸ್ಪತ್ರೆಯಲ್ಲಿರುವ ಅವರು ಗುರುವಾರದ ವಿಧಾನಸಭೆ ಕಲಾಪದಲ್ಲಿ ಪಾಲ್ಗೊಳ್ಳುತ್ತಿಲ್ಲ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಸಚಿವ ಜಮಿರ್ ಅಹಮದ್ ಖಾನ್ ಮಂಗಳವಾರ ಆಸ್ಪತ್ರೆಗೆ ಭೇಟಿ ನೀಡಿ ನಾಗೇಂದ್ರ ಆರೋಗ್ಯ ವಿಚಾರಿಸಿದ್ದರು. ವಿಶ್ವಾಸಮತಯಾಚನೆ ಕುರಿತು ಮಾಹಿತಿ ನೀಡಿ ಗುರುವಾರ ಸದನಕ್ಕೆ ಆಗಮಿಸುವಂತೆ ಕೋರಿದ್ದರು.

ಶುಕ್ರವಾರ ಆಪರೇಷನ್ ಇರುವ ಹಿನ್ನಲೆಯಲ್ಲಿ ಗುರುವಾರ ಸದನಕ್ಕೆ ಹಾಜರಾಗಲು ಸಾಧ್ಯವಿಲ್ಲ ಎಂದು ನಾಗೇಂದ್ರ ಅವರು ಸ್ಪಷ್ಟಪಡಿಸಿದ್ದಾರೆ. ಇದರಿಂದಾಗಿ ಕಾಂಗ್ರೆಸ್ ಪಾಲಿನ ಮತ್ತೊಂದು ಮತ ಕಡಿಮೆಯಾಗಲಿದೆ.
ಭಾನುವಾರ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ, ಸಚಿವ ಡಿ. ಕೆ. ಶಿವಕುಮಾರ್ ಅವರು ಆಸ್ಪತ್ರೆಗೆ ಭೇಟಿ ಕೊಟ್ಟು ನಾಗೇಂದ್ರ ಅವರ ಆರೋಗ್ಯ ವಿಚಾರಿಸಿದ್ದರು. ಎದೆ ನೋವಿನ ಕಾರಣ ನಾಗೇಂದ್ರ ಅವರು ಕಳೆದ ವಾರದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
15 ಅತೃಪ್ತ ಶಾಸಕರು ಈಗಾಗಲೇ ವಿಶ್ವಾಸಮತಯಾಚನೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಸರ್ಕಾರ ಉಳಿಸಿಕೊಳ್ಳಲು ಯಾವ ತಂತ್ರ ಅನುಸರಿಸಲಿದ್ದಾರೆ? ಎಂದು ಕಾದು ನೋಡಬೇಕಿದೆ.












Click it and Unblock the Notifications