ಏರ್ಪೋರ್ಟ್ ರೋಡಲ್ಲಿ ಬ್ಯಾನರ್ ಹಾಕ್ಸಿ ಹೈಲೈಟ್ ಆಗ್ತಾರೆ: ಸಚಿವ ಕೌಂಟರ್ ಕೊಟ್ಟಿದ್ದು ಯಾರಿಗೆ?
ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್ ಸಚಿವ ಸತೀಶ್ ಜಾರಕಿಹೊಳಿ ಅವರು ಸದ್ಯ ಸುದ್ದಿಯಲ್ಲಿದ್ದಾರೆ. ದೆಹಲಿಯಲ್ಲಿ ಹೈಕಮಾಂಡ್ ಭೇಟಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಸತೀಶ್ ಜಾರಕಿಹೊಳಿ ಭೇಟಿಯಾಗಿರುವ ವಿಚಾರವು ಚರ್ಚಗೆ ಗ್ರಾಸವಾಗಿದೆ. ಇದೇ ವೇಳೆ ಸತೀಶ್ ಅವರು ತಮ್ಮದೇ ಪಕ್ಷದವರ ವಿರುದ್ಧ ವಾಗ್ದಾಳಿಯೂ ನಡೆಸಿದ್ದಾರೆ.
ಪ್ರತಿ ಬಾರಿ ಹೈಕಮಾಂಡ್ ನಾಯಕರು ಬೆಂಗಳೂರಿಗೆ ಬಂದಾಗ ಏರ್‌ಪೋರ್ಟ್ ರಸ್ತೆಯುದ್ದಕ್ಕೂ ಬ್ಯಾನರ್ ಹಾಕಿಸಿಕೊಂಡು ಸ್ವಾಗತಿಸುವ ನಾಯಕರ ಬಗ್ಗೆಯೂ ಸತೀಶ್ ಜಾರಕಿಹೊಳಿ ಪರೋಕ್ಷವಾಗಿ ತಿವಿದಿದ್ದಾರೆ. ನಾವು ನಮ್ಮ ಪಕ್ಷದ ಪರ ನಿಂತಿದ್ದು, ದಿನದಲ್ಲಿ ಹೆಚ್ಚು ಸಮಯವನ್ನು ಪಕ್ಷಕ್ಕೇ ನೀಡುತ್ತಿದ್ದೇವೆ. ಕೆಲವರು ಪಕ್ಷಕ್ಕಾಗಿ ಎಲೆಮರೆಯ ಕಾಯಂತೆ ದುಡಿಯುತ್ತಾರೆ ಎಂದು ಹೇಳಿದ್ದಾರೆ.

ಈ ವಿಚಾರದಲ್ಲಿ ಕೆಲವರು ಮಾತ್ರವೇ ಗುರುತಿಸಿಕೊಳ್ಳುತ್ತಾರೆ. ಇನ್ನೂ ಕೆಲವರಿಗೆ ಆಗುವುದಿಲ್ಲ. ಆದರೆ, ಕೆಲವರು ಏರ್‌ಪೋರ್ಟ್ ರಸ್ತೆಯುದ್ದಕ್ಕೂ ಬ್ಯಾನರ್, ಪೋಸ್ಟರ್‌ಗಳನ್ನು ಹಾಕಿಸಿಕೊಂಡು ಹೈಲೈಟ್ ಆಗುವವರೂ ಇದ್ದಾರೆ. ಆದರೆ, ಹಳ್ಳಿಗಳಲ್ಲಿ ಸ್ವಂತ ದುಡ್ಡಿನಿಂದ ಪಕ್ಷ ಬೆಳೆಸುವವರು ಮುನ್ನೆಲೆಗೆ ಬರುವುದೇ ಇಲ್ಲ ಎಂದು ಹೈಕಮಾಂಡ್ ಹಾಗೂ ತಮ್ಮದೇ ಪಕ್ಷದ ವಿರುದ್ಧ ಗುಡುಗಿದ್ದಾರೆ.
ನಾವು ಸಭೆ ಸೇರಿದ ವಿಚಾರವಾಗಿ ಯಾರೂ ಹೆದರಬೇಕಾಗಿಲ್ಲ. ಎಲ್ಲ ಬೆಳವಣಿಗೆಗಳನ್ನು ಹೈಕಮಾಂಡ್ ಗಮನಿಸುತ್ತಲೇ ಇದೆ. ಪ್ರತಿಯೊಬ್ಬರಿಗೂ ಮುಖ್ಯಮಂತ್ರಿ ಆಗಬೇಕು ಎನ್ನುವ ಆಸೆ ಇದ್ದೇ ಇರುತ್ತದೆ. ಮೊದಲಿಗೆ ಸಚಿವನಾಗಬೇಕು, ಆಮೇಲೆ ಡಿಸಿಎಂ, ಬಳಿಕ ಸಿಎಂ, ಕೊನೆಗೆ ಕೇಂದ್ರ ಸಚಿವ ಆಗಬೇಕು ಎನ್ನುವ ಆಸೆ ಇದ್ದೇ ಇರುತ್ತದೆ. ಆದರೆ, ಸದ್ಯಕ್ಕೆ ಸಿಎಂ ರೇಸ್‌ನ ವಾತಾವರಣವಿಲ್ಲ. ಮುಡಾ ತನಿಖೆ ಪ್ರಗತಿಯಲ್ಲಿದ್ದು, ಸಿಎಂ ರಾಜೀನಾಮೆಯ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.

ಕಾಂಗ್ರೆಸ್‌ನಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮವಾಗಲಿದ್ದು, ಯಾರೊಬ್ಬರ ವೈಯಕ್ತಿಕ ತೀರ್ಮಾನಗಳು ನಡೆಯುವುದಿಲ್ಲ. ಕಾಂಗ್ರೆಸ್‌ನಲ್ಲಿ ಯಾರೂ ಕಿಂಗ್ ಮೇಕರ್ ಅಲ್ಲ. ಸಿದ್ದರಾಮಯ್ಯ ಅವರೇ ಮುಂದೆಯೂ ಸಿಎಂ ಆಗಿ ಇರುತ್ತಾರೆ. ಪಕ್ಷದಲ್ಲಿ ಯಾವುದೇ ಮುಸುಕಿನ ಫೈಟ್ ಇಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಉರುಳುತ್ತದೆ ಎಂದು ಬಿಜೆಪಿಯವರು ಹೇಳುತ್ತಲೇ ಇದ್ದಾರೆ. ಇದೆಲ್ಲ ಇಲ್ಲಿ ಕಾಮನ್ ಎಂದಿದ್ದಾರೆ.
ರಾಜ್ಯದಲ್ಲಿ ಸಿಎಂ ಬದಲಾವಣೆಯ ಚರ್ಚೆ ನಡೆಯುತ್ತಿರುವ ಹೊತ್ತಲೇ ಸತೀಶ್ ಜಾರಕಿಹೊಳಿ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರನ್ನ ಭೇಟಿ ಮಾಡಿ ಕುತೂಹಲ ಮೂಡಿಸಿದ್ದರು. ರಾಜ್ಯ ರಾಜಕಾರಣದಲ್ಲಿ ಈ ಮಹತ್ವದ ಬೆಳವಣಿಗೆ ನಡುವೆಯೇ ಸಚಿವ ಸತೀಶ್ ಜಾರಕಿಹೊಳಿಯನ್ನ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ದಿಢೀರ್ ಭೇಟಿಯಾಗಿದ್ದಾರೆ. ಇದರ ಬೆನ್ನಲ್ಲೇ ಸಿಎಂ ಆಗಲು ಸತೀಶ್ ಜಾರಕಿಹೊಳಿ ಅವರು ಕಸರತ್ತು ನಡೆಸುತ್ತಿದ್ದಾರೆ ಎಂದು ಚರ್ಚೆಗಳು ನಡೆಯುತ್ತಿವೆ.
ನಿನ್ನೆಯಷ್ಟೇ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನ ಸಚಿವ ಸತೀಶ್ ಜಾರಕಿಹೊಳಿ ಅವರು ಭೇಟಿಯಾಗಿದ್ದು, ಇಂದು ಶಿವಾನಂದ ಸರ್ಕಲ್ ಬಳಿಯ ಸರ್ಕಾರಿ ನಿವಾಸದಲ್ಲಿ ವಿಜಯೇಂದ್ರ ಅವರು ಸಚಿವ ಸತೀಶ್ ಜಾರಕಿಹೊಳಿ ಅವರನ್ನ ಭೇಟಿಯಾಗಿದ್ದಾರೆ. ಇಬ್ಬರು ನಾಯಕರ ಭೇಟಿ ವಿಚಾರ ಭಾರೀ ಚರ್ಚೆಗೆ ಕಾರಣವಾಗಿದೆ. ಸತೀಶ್ ಜಾರಕಿಹೊಳಿ ಅವರ ಮುಂದಿನ ನಡೆ ಏನಿರಬಹುದು? ಎನ್ನುವ ಕುತೂಹಲವೂ ಎಲ್ಲರಲ್ಲಿ ಮೂಡಿದೆ.












Click it and Unblock the Notifications