RSS ಬ್ಯಾನ್ ಮಾಡ್ತೀವಿ ಎಂದ ಪ್ರಿಯಾಂಕ್ ಖರ್ಗೆ, ಕೆರಳಿದ ಕೇಸರಿ ಕಲಿಗಳು
ನಮ್ಮ ಕಾಂಗ್ರೆಸ್ ಪಕ್ಷ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (RSS) ಬ್ಯಾನ್ ಮಾಡುತ್ತೇವೆ ಎಂದು ಕಾಂಗ್ರೆಸ್ ಸಚಿವ ಪ್ರಿಯಾಂಕ್ ಖರ್ಗೆ ನೀಡಿರುವ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ಕಿಚ್ಚು ಹೊತ್ತಿಸಿದೆ. ಪ್ರಿಯಾಂಕ್ ಹೇಳಿಕೆಗೆ ರಾಜ್ಯ ಬಿಜೆಪಿ ನಾಯಕರು ಕೆರಳಿ ಕೆಂಡವಾಗಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸೇರಿದಂತೆ ಪ್ರಮುಖ ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದ್ದಾರೆ. ಶತಮಾನ ಪೂರೈಸಿರುವ, ಲಕ್ಷಾಂತರ ಸ್ವಯಂಸೇವಕರನ್ನು ಹೊಂದಿರುವ ರಾಷ್ಟ್ರದ ಹಾಗೂ ವಿಶ್ವದ ಏಕೈಕ ಮಹಾನ್ ದೇಶಭಕ್ತರ ಸಂಘಟನೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಎಂಬ ಪ್ರಖರ ಸತ್ಯವನ್ನು ಸಚಿವ ಪ್ರಿಯಾಂಕ್ ಅವರು ತಮ್ಮ ಹತಾಶೆಯ ಮನಸ್ಸಿನ ಬಾಗಿಲ ಕಿಂಡಿಯಿಂದ ಇಣುಕಿ ನೋಡಲಿ ಎಂದು ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
ಆರ್‌ಎಸ್‌ಎಸ್ ಸಂಘಟನೆ ಮಹಾನ್ ವೃಕ್ಷ, ಈ ವೃಕ್ಷವನ್ನು ಬೇರು ಸಮೇತ ಕಿತ್ತೊಗೆಯುತ್ತೇವೆಂದು ಶತಮಾನಗಳಿಂದಲೂ ವಿಕೃತ ಮನಸ್ಸಿನ ರಾಜಕೀಯ ಶಕ್ತಿಗಳು ವ್ಯರ್ಥ ಪ್ರಲಾಪ ಮಾಡುತ್ತಲೇ ಇವೆ. ಆದರೆ ಆರ್‌ಎಸ್‌ಎಸ್‌ನ ರಂಬೆ-ಕೊಂಬೆಗಳನ್ನೂ ಕೊಂಕಿಸಲಾಗದವರ ಸೊಲ್ಲಡಗಿ ದಿಕ್ಕು ಕಾಣದಂತೆ ಧೂಳಿಪಟವಾಗಿವೆ. ಈ ಸಾಲಿಗೆ ಕಾಂಗ್ರೆಸ್ ಸೇರ್ಪಡೆಯಾಗಿರುವುದರಿಂದಲೇ ರಾಷ್ಟ್ರದ ರಾಜಕೀಯ ಭೂಪಟದಲ್ಲಿ ದುರ್ಬೀನು ಹಾಕಿ ಹುಡುಕುವ ದಯನೀಯ ಪರಿಸ್ಥಿತಿಯಲ್ಲಿ ಅಸ್ತಿತ್ವಕ್ಕಾಗಿ ತಿಣುಕಾಡುತ್ತಿದೆ ಎಂದು ಲೇವಡಿ ಮಾಡಿದ್ದಾರೆ.

ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವ ಮಾತಿರಲಿ, ಭವಿಷ್ಯದಲ್ಲಿ ಕಾಂಗ್ರೆಸ್ ಅಸ್ತಿತ್ವ ಉಳಿಯುತ್ತದೆಯೇ ಎಂಬ ಬಗ್ಗೆ ಪ್ರಿಯಾಂಕ್ ಖರ್ಗೆ ತಲೆಕೆಡಿಸಿಕೊಳ್ಳಲಿ. ʼದಂಡಿಗೆದರಲಿಲ್ಲ ದಾಳಿಗೆದರಲಿಲ್ಲ ಖಾಲಿ ಡಬ್ಬದ ಸದ್ದಿಗೆ ಹೆದರಲಾದೀತೇ?ʼ ಎಂಬ ಮಾತನ್ನು ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ನೆನಪಿಸಬಯಸುವೆ ಎಂದು ವಿಜಯೇಂದ್ರ ಎಕ್ಸ್‌ನಲ್ಲಿ ತಿರುಗೇಟು ನೀಡಿದ್ದಾರೆ.
ಸಾವಿರಾರು ಖರ್ಗೆಗಳು ಬಂದರೂ ಸಾಧ್ಯವಿಲ್ಲ
ಸ್ವತಃ ಪರಿಶ್ರಮವಿಲ್ಲದೆ, ಪಕ್ಷದ ಹಿರಿಯರನ್ನು ಮೂಲೆಗುಂಪು ಮಾಡಿ ಅಪ್ಪನ ಹೆಸರು ಹೇಳಿಕೊಂಡೇ ಮಹಾನಾಯಕನಾಗಲು ಹೊರಟಿರುವ ಸ್ವಯಂಘೋಷಿತ ಮಹಾನ್ ಬುದ್ದಿವಂತರಾದ ಪ್ರಿಯಾಂಕ್ ಖರ್ಗೆ ಅವರೇ ದಮ್ಮು ತಾಕತ್ತು ನಿಜವಾಗಿಯೂ ಇದ್ದರೆ RSS ಅನ್ನು ಬ್ಯಾನ್ ಮಾಡಿ ನೋಡಿ. ನಿಮ್ಮ ಕಥೆ ಅಮೇಲೆ ಹೇಳೋಣ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಕೂಡ ತೊಡೆತಟ್ಟಿದ್ದಾರೆ.
ದೇಶ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ RSS ಬಗ್ಗೆ ಕಣ್ಣು ಕುಕ್ಕುತ್ತಿರುವುದು ನಿಮ್ಮಂತಹ ಅಪ್ಪನ ನೆರಳಿನಲ್ಲಿ ಬೆಳೆದವರಿಗೆ ಹೊಸದೇನಲ್ಲ. ನಿಮ್ಮಂತಹ ಸಾವಿರಾರು ಖರ್ಗೆಗಳು ಬಂದರೂ ಅದರ ಒಂದೇ ಒಂದು ಬೇರನ್ನು ಅಲುಗಾಡಿಸಲು ಸಾಧ್ಯವಿಲ್ಲ. ಇಂದಿರಾಗಾಂಧಿ, ರಾಜೀವ್ ಗಾಂಧಿ, ಮಹಾನ್ ಅಧಿನಾಯಕಿಯಂತಹವರೇ ಏನು ಮಾಡಲಾಗಲಿಲ್ಲ. ಇನ್ನು ಅಪ್ಪನ ಕೋಟಾದಲ್ಲಿ ಮಂತ್ರಿ ಸ್ಥಾನ ಹೊಡೆದಿರುವ ನೀವು ಆರ್‌ಎಸ್‌ಎಸ್ ನಿಷೇಧ ಮಾಡಲು ಇನ್ನೂ ನೂರು ಜನ್ಮದಲ್ಲಿ ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದ್ದಾರೆ.












Click it and Unblock the Notifications