ಇ.ಡಿಯನ್ನ ಸೀಳು ನಾಯಿಗೆ ಹೋಲಿಸಿದ ಕಾಂಗ್ರೆಸ್ ಸಚಿವ, ಯಾಕೆ?
ಮುಡಾ ಕೇಸ್‌ನಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಎನ್ನುವ ಸೀಳು ನಾಯಿಯನ್ನು ನಮ್ಮ ಮೇಲೆ ಬಿಟ್ಟಿದ್ದಾರೆ. ಇದು ರಾಜಕೀಯ ದಾಳಿ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಆರೋಪಿಸಿದ್ದಾರೆ. ಇಡಿ ಅಂದ್ರೆ ಜಾರಿ ನಿರ್ದೇಶನಾಲಯ ಅಲ್ಲ, ಅದು ರಾಜಕೀಯ ಏಜೆನ್ಸಿ. ವಿರೋಧ ಪಕ್ಷಗಳನ್ನು ಟಾರ್ಗೆಟ್ ಮಾಡಲು, ನಾಯಕರನ್ನು ಮೇಲೆ ದಾಳಿ ಮಾಡೋಕ್ಷೆ ಇರುವ ಜಾಬ್ ಎಂದು ದೂರಿದ್ದಾರೆ.
ದೇಶದಲ್ಲಿ ಇಡಿ ಈವರೆಗೆ ಯಾರ ಮೇಲೆ ಕೇಸ್ ಹಾಕಿದೆ ಗೊತ್ತಾ? ಕೇಲಲ ರಾಜಕೀಯ ವಿರೋಧಿಗಳ ಮೇಲೆ ಮಾತ್ರ ಎಂದು ದೂರಿದ್ದಾರೆ. ಇಡಿಯವರು ಶ್ರೀಮಂತರ ಮೇಲೆ, ಅಕ್ರಮ ಹಣ ಸಂಪಾದನೆ ಮಾಡಿದವರ ಮೇಲೆ ಯಾವುದಾದ್ರೂ ಕೇಸ್ ಹಾಕಿದ್ದಾರಾ? ಸ್ವಿಸ್ ಬ್ಯಾಂಕ್‌ನಲ್ಲಿ ಹಣ ಇಟ್ಟಿರುವವರ ಮೇಲೆ ಕೇಸ್ ಹಾಕಿದ್ದಾರಾ? ಎಂದು ಪ್ರಶ್ನಿಸಿದ್ದಾರೆ.

ಇಡಿ ಎನ್ನುವುದು ಬಿಜೆಪಿ ಅಧೀನದಲ್ಲಿರುವ ಸಂಸ್ಥೆ. ಇದರ ಕೆಲಸ ಕೇವಲ ರಾಜಕೀಯ ವಿರೋಧಿಗಳನ್ನು ಬಲಿ ಕೊಡುವುದು. ಈಗ ದೇಶದೆಲ್ಲೆಡೆ ಬಿಜೆಪಿಯವರು ಇದೇ ಕೆಲಸ ಮಾಡಿದ್ದಾರೆ. ಇತ್ತೀಚಿನ ಬೈಎಲೆಕ್ಷನ್‌ನಲ್ಲಿ ಕಾಂಗ್ರೆಸ್‌ನ ಗೆಲುವನ್ನು ಬಿಜೆಪಿಗೆ ಸಹಿಸೋಕೆ ಆಗ್ತಿಲ್ಲ. ಕಳೆದ ವಿಧಾನಸಭೆಯಲ್ಲೂ ಸೋಲಿನ ನೋವು ಕಡಿಮೆಯಾಗಿಲ್ಲ. ಈ ಸೇಡಿಗಾಗಿ ಇಡಿ ಸೀಳುನಾಯಿಗಳನ್ನು ನಮ್ಮ ಮೇಲೆ ಛೂ ಬಿಟ್ಟಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಬಿಜೆಪಿಯವರು ಜನರ ಬಳಿ ಮುಖ ತೋರಿಸಿ ಗೆಲ್ಲಲು ಆಗಲಿಲ್ಲ. ಆ ನಿರಾಸೆಯಲ್ಲಿ ಇಡಿಯನ್ನು ಈ ರೀತಿ ನಮ್ಮ ಮೇಲೆ ಬಿಟ್ಟಿದ್ದಾರೆ. ಆದರೆ ಅವರನ್ನು ನಾವು ಕಾನೂನಿನ ಮೂಲಕವೇ ಎದುರಿಸುತ್ತೇವೆ. ಜನರ ದಾರಿ ತಪ್ಪಿಸಲು ನಿರಂತರ ಪ್ರಯತ್ನ ಮಾಡುತ್ತಲೇ ಇದ್ದಾರೆ. ಇದೊಂದು ರಾಜಕೀಯ ಪಿತೂರಿ ಎಂದು ಆರೋಪಿಸಿದ್ದಾರೆ.

ಬಿಜೆಪಿಯವರ ಅವಧಿಯಲ್ಲಿ ಸಾವಿರಾರು ಆಸ್ತಿ ವಕ್ಫ್ ಖಾತೆಗೆ ಮಾಡಿಕೊಟ್ಟಿದ್ದಾರೆ. ಆಗ ಇವರೆಲ್ಲ ಎಲ್ಲಿ ಹೋಗಿದ್ರೋ ಗೊತ್ತಿಲ್ಲ. ಈಗ ಜನರನ್ನ ಯಾಮಾರಿಸೋಕೆ ವಕ್ಫ್ ಹೋರಾಟ ಮಾಡ್ತಿದ್ದಾರೆ. ಕಾಂಗ್ರೆಸ್ ಸರ್ಕಾರವನ್ನು ಸಹಿಸಲಾರದೆ, ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಕೃಷ್ಣಬೈರೇಗೌಡರ ಹೇಳಿಕೆಗೆ ಯತ್ನಾಳ್ ಖಂಡನೆ
ಮಾನ್ಯ ಕಂದಾಯ ಸಚಿವ ಕೃಷ್ಣಬೈರೇಗೌಡರು ಜಾರಿ ನಿರ್ದೇಶನಾಲಯವನ್ನು ಸೀಳು ನಾಯಿ ಎಂಬ ತುಚ್ಛ ಪದ ಪ್ರಯೋಗದ ಮೂಲಕ ಸಾಂವಿಧಾನಿಕ ಸಂಸ್ಥೆಗೆ ಅವಮಾನಿಸಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ.ಮುಡಾ ಹಗರಣದಲ್ಲಿ ಮಹತ್ವದ ದಾಖಲೆಯನ್ನು ಹುಡುಕಿರುವ ಇ.ಡಿ ಚಾಣಾಕ್ಷ ನಡೆ ಮುಖ್ಯಮಂತ್ರಿಗಳ ಹಾಗೂ ಅವರ ಹೊಗಳು ಭಟ್ಟರ ನಿದ್ದೆ ಕೆಡಿಸಿದೆ ಎಂದು ತಿರುಗೇಟು ನೀಡಿದ್ದಾರೆ.
ಇ.ಡಿ ವಸ್ತುನಿಷ್ಠವಾಗಿ ತನಿಖೆ ಮಾಡುತ್ತಿದೆ. ಕಾನೂನಾತ್ಮಕವಾಗಿ ಏನು ಮಾಡಬೇಕೋ ಅದನ್ನು ಮಾಡುತ್ತಿದೆ. ಮುಡಾ ಪ್ರಕರಣದಲ್ಲಿ ಭಾಗಿಯಾಗಿರುವ ಕೆಲ ಪ್ರಭಾವಿಗಳು ತನಿಖೆಯ ದಿಕ್ಕನ್ನು ಬದಲಿಸಲು ಈ ರೀತಿಯಾದ ಹೇಳಿಕೆಗಳನ್ನು ನೀಡುತ್ತಿರುವುದು ಅವರ ಅಜ್ಞಾನಕ್ಕೆ, ಕುಟಿಲ ರಾಜಕಾರಣಕ್ಕೆ ಹಿಡಿದ ಕೈಗನ್ನಡಿ ಎಂದು ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.












Click it and Unblock the Notifications