Congress Karnataka: 'ಕೈ' ನಾಯಕರ ನಡುವಿನ ಶೀತಲ ಸಮರಕ್ಕಿಲ್ಲ ವಿರಾಮ!
ಬೆಂಗಳೂರು, ಜನವರಿ 15: ಬಿಜೆಪಿ ಭ್ರಷ್ಟಾಚಾರದ ವಿರುದ್ಧ ಸಮರ ಸಾರಿ ಮತದಾರರ ಒಲವು ಗಳಿಸಿಕೊಂಡು ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಸರ್ಕಾರ ರಚನೆ ಮಾಡಿದಲ್ಲಿಂದ ಇಲ್ಲಿವರೆಗೆ ವಿವಾದ, ಹಗರಣ, ಬಣಬಡಿದಾಟ, ಅಧಿಕಾರ ಹಸ್ತಾಂತರದ ಕಿತ್ತಾಟದ ಸುಳಿಯಲ್ಲಿಯೇ ಮುನ್ನಡೆಯುತ್ತಿದ್ದು, ಸದ್ಯ ಹೈಕಮಾಂಡ್ ಮಾತಿಗೂ ರಾಜ್ಯ ನಾಯಕರು ಸೊಪ್ಪು ಹಾಕದೆ ತಾವು ನಡೆದದ್ದೇ ಹಾದಿ ಎಂಬಂತೆ ವರ್ತಿಸುತ್ತಿರುವುದು ಅಚ್ಚರಿ ಮೂಡಿಸುತ್ತಿದೆ.
ಹೈಕಮಾಂಡ್ ಒಳಬೇಗುದಿಯನ್ನು ಶಮಗೊಳಿಸುವ ಪ್ರಯತ್ನ ಮಾಡುತ್ತಿರುವಂತೆಯೇ ಲಕ್ಷ್ಮಿಹೆಬ್ಬಾಳ್ಕರ್ ಮತ್ತು ಬೆಳಗಾವಿ ಸಾಹುಕಾರರ ನಡುವಿನ ಶೀತಲ ಸಮರ ಜೋರಾದಂತೆ ಕಾಣಿಸುತ್ತಿದೆ. ಕಾಂಗ್ರೆಸ್ ಒಳಗೆ ನಡೆಯುತ್ತಿರುವ ವಿದ್ಯಮಾನಗಳು ಪಕ್ಷದ ನಾಯಕರಲ್ಲಿ ಅಸಮಾಧಾನಕ್ಕೆ ಕಾರಣವಾಗುತ್ತಿದೆ. ಡಿ.ಕೆ.ಶಿವಕುಮಾರ್ ಅವರ ನಡೆ ಹಿಂದುಳಿದ ವರ್ಗಗಳ ನಾಯಕರನ್ನು ರೊಚ್ಚಿಗೇಳುವಂತೆ ಮಾಡುತ್ತಿದೆ. ಇಲ್ಲಿ ಒಕ್ಕಲಿಗರು ಮತ್ತು ಹಿಂದುಳಿದ ವರ್ಗ ಹೀಗೆ ಈ ಎರಡು ವರ್ಗದ ಬಗ್ಗೆ ಮಾತ್ರ ಚರ್ಚೆಯಾಗುತ್ತಿದೆ. ಆದರೆ ಅದರಾಚೆಗೆ ಪ್ರಬಲ ಸಮುದಾಯದ ಲಿಂಗಾಯತರು ರೊಚ್ಚಿಗೇಳುವ ದಿನ ದೂರವಿಲ್ಲ. ಸದ್ಯಕ್ಕೀಗ ಸಿಎಂ ಹಸ್ತಾಂತರದ ಬಗ್ಗೆ ಪ್ರಸ್ತಾಪ ಜೋರಾಗಿದೆ. ಹೀಗಾಗಿಯೇ ತಕ್ಷಣವೇ ದಲಿತರಿಗೆ ಸಿಎಂ ಸ್ಥಾನ ಕೊಡಿ ಎಂಬ ಧ್ವನಿ ಕೇಳಿ ಬಂದಿದೆ.

ದಲಿತರ ಬಗ್ಗೆ ಮಾರುದ್ಧ ಮಾತನಾಡುವ ಕಾಂಗ್ರೆಸ್ ಇದುವರೆಗೆ ದಲಿತರಿಗೆ ಸಿಎಂ ಸ್ಥಾನ ನೀಡಿಲ್ಲ ಎಂಬ ಆರೋಪವಿದೆ. ಹೀಗಾಗಿ ಡಾ.ಜಿ.ಪರಮೇಶ್ವರ್ ಅವರಿಗೆ ನೀಡಿ ಎಂಬ ಮಾತುಗಳು ಕೇಳಿ ಬರುತ್ತಿವೆ. ಹೈಕಮಾಂಡ್ ಪ್ರತಿನಿಧಿಯಾಗಿ ಬಂದಿದ್ದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಅವರು ಕಾಂಗ್ರೆಸ್ ಶಾಸಕಾಂಗ ಸಭೆ ಮಾತ್ರವಲ್ಲದೆ, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರನ್ನು ಒಂದೆಡೆ ಕೂರಿಸಿಕೊಂಡು ಸಭೆ ನಡೆಸಿ ಸಿಎಂ ಬದಲಾವಣೆ ಬಗ್ಗೆ ಯಾರೂ ಬಾಯಿ ಬಿಡುವಂತಿಲ್ಲ ಎಚ್ಚರಿಕೆ ನೀಡಿದ್ದಾರೆ.
ಶೀತಲಸಮರ ಸ್ಫೋಟಗೊಳ್ಳುವ ಸಾಧ್ಯತೆಯಿದೆ
ಸಭೆಯಲ್ಲಿ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ನೀಡಿದ ಹೇಳಿಕೆಯಿಂದ ಎಲ್ಲ ಗೊಂದಲ ಶುರುವಾಯ್ತು ಎಂದು ಸಿಎಂ ಸಿದ್ದರಾಮಯ್ಯ ಆರೋಪ ಮಾಡಿದರೆ, ಈ ವೇಳೆ ನಾನು ಹೇಳಲಿಲ್ಲ ಎಂದು ಡಿಸಿಎಂ ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ ಎನ್ನಲಾಗಿದೆ. ಇಲ್ಲಿಗೆ ಎಲ್ಲವೂ ಮುಗಿಯಿತು. ಕಾಂಗ್ರೆಸ್ ನಲ್ಲಿ ಇನ್ಯಾವ ಕಚ್ಚಾಟವಿಲ್ಲ ಎಂದುಕೊಳ್ಳುವಾಗಲೇ ಮತ್ತೊಂದು ರಗಳೆ ಹುಟ್ಟಿಕೊಂಡಿದೆ. ಇದುವರೆಗೆ ಇದ್ದ ಶೀತಲಸಮರ ಸ್ಪೋಟಗೊಳ್ಳುವ ಮಟ್ಟಕ್ಕೆ ಹೋಗುವ ಲಕ್ಷಣ ಕಾಣಿಸುತ್ತಿದೆ.
ಬೆಳಗಾವಿ ಸಾಹುಕಾರರು ಅಂತಲೇ ಕರೆಯಿಸಿಕೊಳ್ಳುತ್ತಿರುವ ಜಾರಕಿಹೊಳಿ ಕುಟುಂಬದ ಪ್ರಾಬಲ್ಯವನ್ನು ಕಡಿಮೆ ಮಾಡಿ ಅಲ್ಲಿ ಲಕ್ಷ್ಮಿಹೆಬ್ಬಾಳ್ಕರ್ ಅವರನ್ನು ಮುನ್ನಲೆಗೆ ತರುವ ಪ್ರಯತ್ನಗಳಾಗುತ್ತಿವೆ ಎಂಬ ಆರೋಪ ಜಾರಕಿಹೊಳಿ ಕುಟುಂಬದಲ್ಲಿದೆ. ಇದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ತಂತ್ರ ಎನ್ನುವುದು ಕೂಡ ಅಷ್ಟೇ ಸತ್ಯ. ಜಾರಕಿಹೊಳಿ ಕುಟುಂಬದ ಪ್ರಾಬಲ್ಯ ಕುಗ್ಗುವಂತೆ ಮಾಡಿದರೆ ಅದರಿಂದ ಲಾಭವಿದೆ. ಕಳೆದ ಬಾರಿ ಸಮ್ಮಿಶ್ರ ಸರ್ಕಾರ ಪತನಗೊಂಡು ಬಿಜೆಪಿ ಅಧಿಕಾರಕ್ಕೆ ಬರಲು ಜಾರಕಿಹೊಳಿ ಕುಟುಂಬದ ಪ್ರಧಾನ ಪಾತ್ರವಿತ್ತು.

ಪಕ್ಷ ಕಚೇರಿ ನಿರ್ಮಾಣದ ಕ್ರೆಡಿಟ್ ವಾರ್
ಇಲ್ಲಿ ಜಾರಕಿಹೊಳಿ ಕುಟುಂಬವನ್ನು ಬದಿಗೆ ಸರಿಸಿ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಮುನ್ನಲೆಗೆ ತಂದರೆ ಮುಂದೆ ಪಕ್ಷಕ್ಕಾಗಲೀ ತಮಗಾಗಲೀ ಯಾವುದೇ ತೊಂದರೆಯಿಲ್ಲ ಎಂಬ ಸತ್ಯ ಡಿಕೆಶಿಗೆ ತಿಳಿದಿದೆ. ಆದರೆ ಎಲ್ಲೋ ಒಂದು ಕಡೆ ತಮ್ಮನ್ನು ತುಳಿಯಲಾಗುತ್ತಿದೆ ಎಂಬ ಸತ್ಯ ಸಚಿವರಾಗಿರುವ ಸತೀಶ್ ಜಾರಕಿಹೊಳಿಗಿದೆ. ಹೀಗಾಗಿಯೇ ಅವರು ಕಳೆದ ಕೆಲವು ಸಮಯಗಳಿಂದ ಎಲ್ಲೆಡ ಪ್ರವಾಸ ಮಾಡಿ ಹಿಂದುಳಿದ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತಿರುವುದು ಕಂಡು ಬರುತ್ತಿದೆ. ಅಷ್ಟೇ ಅಲ್ಲದೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆಯೂ ಧ್ವನಿ ಎತ್ತಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಬೆಳಗಾವಿ ಜಿಲ್ಲೆಯಲ್ಲಿನ ಪಕ್ಷದ ಕಚೇರಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಲಕ್ಷ್ಮೀಹೆಬ್ಬಾಳ್ಕರ್ ಅವರು ಸಚಿವರಾದ ಬಳಿಕ ಕಟ್ಟಡ ನಿರ್ಮಾಣ ಚುರುಕಾಗಿ ಮುಗಿದಿದೆ ಎಂಬ ಮೆಚ್ಚುಗೆಯ ಮಾತು ಸಚಿವ ಸತೀಶ್ ಜಾರಕಿಹೊಳಿ ಅವರ ಅಸಮಾಧಾನಕ್ಕೆ ಕಾರಣವಾಗಿದೆ.
ಡಿಕೆಶಿ ಹೇಳಿಕೆಗೆ ತಕ್ಷಣವೇ ಸತೀಶ್ ಜಾರಕಿಹೊಳಿಯವರು ಪ್ರತಿರೋಧ ವ್ಯಕ್ತಪಡಿಸಿ ಬೆಳಗಾವಿಯಲ್ಲಿ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ನಿವೇಶನ ಒದಗಿಸಿದ್ದು, ಈ ಹಿಂದೆ ಕಾಂಗ್ರೆಸ್ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ, ಕಟ್ಟಡ ನಿರ್ಮಾಣಕ್ಕೆ ತಾವು 3 ಕೋಟಿ ರೂ. ಸ್ವಂತ ಹಣವನ್ನು ಖರ್ಚು ಮಾಡಿದ್ದೇನೆ. ಕೆಪಿಸಿಸಿ ಅಧ್ಯಕ್ಷರು ವಾಸ್ತವಾಂಶವನ್ನು ಮರೆಮಾಚಿ ತಪ್ಪು ಮಾಹಿತಿ ನೀಡಿದರೆ ಅದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ರಾಜ್ಯ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಿಲ್ಲ
ಈ ವೇಳೆ ಮಧ್ಯಪ್ರವೇಶ ಮಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಾವು ಸಚಿವರಾದ ಬಳಿಕ ಕಟ್ಟಡ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಬಾಕಿ ಇದ್ದ ಹಣಕಾಸು ಸೌಲಭ್ಯ ಒದಗಿಸಿದ್ದು, ವಿದ್ಯುತ್ ಬಿಲ್, ನೀರಿನ ಬಿಲ್ ಎಲ್ಲಾ ಸೇರಿ ಸರಿಸುಮಾರು 7 ಕೋಟಿ ರೂ.ಗಳಷ್ಟು ಸಂಪನೂಲವನ್ನು ದಾನಿಗಳ ಸಹಕಾರದಿಂದ ಒದಗಿಸಿದ್ದಾಗಿ ಹೇಳಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗಲು ಬಿಡದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲರೂ ಒಟ್ಟಾಗಿ ಕೆಲಸ ಮಾಡಿದ್ದರಿಂದ ಕಟ್ಟಡ ಪೂರ್ಣಗೊಂಡಿದೆ. ಕಚೇರಿ ಸಿಕ್ಕಿದೆ. ಇದು ಸಂತೋಷದ ವಿಚಾರ. ಹೆಚ್ಚಿನ ಚರ್ಚೆ ಬೇಡ ಎಂದು ಸಲಹೆ ನೀಡಿ ಮುನಿಸು ತಣ್ಣಗೆ ಮಾಡಿದ್ದಾರೆ. ಆದರೆ ಈ ವಿಚಾರ ಇಲ್ಲಿಗೆ ಮುಗಿಯುವಂತೆ ಕಾಣುತ್ತಿಲ್ಲ.
ಬೆಳಗಾವಿಯಲ್ಲಿ ಕಾಂಗ್ರೆಸ್ ಪಕ್ಷದೊಳಗೆ ಬೆಂಕಿಹೊತ್ತಿಕೊಂಡರೆ ಅದರ ಪರಿಣಾಮಗಳು ಏನಾಗುತ್ತವೆ ಎನ್ನುವುದನ್ನು ಈಗಾಗಲೇ ರಮೇಶ್ ಜಾರಕಿಹೊಳಿ ಅವರು ತೋರಿಸಿಕೊಟ್ಟಿದ್ದಾರೆ. ಇದೀಗ ಬೆಳಗಾವಿಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಮುನ್ನಲೆಗೆ ಬರುವ ಮೂಲಕ ತಮ್ಮ ಕುಟುಂಬದ ಪ್ರಾಬಲ್ಯವನ್ನು ಕಿತ್ತುಕೊಳ್ಳಲಾಗುತ್ತಿದೆ ಎಂಬ ಅಸಮಾಧಾನ ಜಾರಕಿಹೊಳಿ ಕುಟುಂಬದಲ್ಲಿದೆ. ಹೀಗಾಗಿಯೇ ಜಾರಕಿಹೊಳಿ ಸಹೋದರರು ಒಳಗೊಳಗೆ ಕತ್ತಿಮಸೆಯುತ್ತಿದ್ದಾರೆ. ಇದು ಯಾವ ಹಂತಕ್ಕೆ ಹೋಗಿ ನಿಲ್ಲುತ್ತೋ ಗೊತ್ತಿಲ್ಲ. ಒಟ್ಟಾರೆ ಕಾಂಗ್ರೆಸ್‌ನಲ್ಲಿ ಯಾವುದೂ ಸರಿಯಿಲ್ಲ ಎಂಬುದಂತು ನಿಜ.












Click it and Unblock the Notifications