ಸರ್ಕಾರವು ವಿದ್ಯಾರ್ಥಿ, ದಲಿತರ, ಮಹಿಳೆಯರ ಮೇಲೆ ಮಾಡುತ್ತಿರುವ ದೌರ್ಜನ್ಯಗಳನ್ನು ಕೂಡಲೆ ನಿಲ್ಲಿಸಬೇಕು: ಸಿದ್ದರಾಮಯ್ಯ

ಮನೆ ನಿರ್ಮಿಸಿಕೊಡಬೇಕಾದ ಸರ್ಕಾರವು ದಾಖಲೆಗಳ ನೆಪ ಒಡ್ಡಿ ಅನುದಾನ ಹಿಂಪಡೆದಿರುವುದನ್ನು ನೋಡಿದರೆ ಈ ಬಿಜೆಪಿ ಸರ್ಕಾರಕ್ಕೆ ಆಡಳಿತ ನಡೆಸಲು ಬರುವುದಿಲ್ಲ ಮತ್ತು ಈ ಸರ್ಕಾರಕ್ಕೆ ಗೊತ್ತಿರುವುದು ಕೇವಲ ಭ್ರಷ್ಟಾಚಾರ ಎಂದು ಸಿದ್ದರಾಮಯ್ಯ ಕಿಡಿಕಾರಿದರು.

ಬೆಂಗಳೂರು, ಜನವರಿ 27: ವಿದ್ಯಾರ್ಥಿ, ದಲಿತ, ಅಲೆಮಾರಿ ಮತ್ತು ಮಹಿಳಾ ಸಮುದಾಯದ ಮೇಲೆ ಮಾಡುತ್ತಿರುವ ದೌರ್ಜನ್ಯಗಳನ್ನು ಕೂಡಲೆ ನಿಲ್ಲಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿದ ಅವರು, ಊರಿಲ್ಲದ, ಸೂರಿಲ್ಲದ ಮತ್ತು ವಿಳಾಸವೂ ಇರದ ಲಕ್ಷಾಂತರ ಸಂಖ್ಯೆಯ ಅಲೆಮಾರಿ ಸಮುದಾಯಗಳಾದ ಹಕ್ಕಿಪಿಕ್ಕಿಗಳು, ಹಂದಿಜೋಗಿಗಳು, ಸುಡುಗಾಡು ಸಿದ್ಧರು, ಚನ್ನದಾಸರು, ಬುಡ್ಗಜಂಗಮರು, ದೊಂಬರು, ಕಿಳ್ಳೆಕ್ಯಾತರು, ಕೊರಚ, ಕೊರಮ ಮುಂತಾದ ಜನರಿಗೆ ಮನೆ ಕಟ್ಟಿಕೊಡಲು ಕಳೆದ ಎರಡು ವರ್ಷಗಳಿಂದ ಮೀಸಲಿರಿಸಿದ್ದ 550 ಕೋಟಿ ಅನುದಾನವನ್ನು ಬೊಮ್ಮಾಯಿ ನೇತೃತ್ವದ ಸರ್ಕಾರ ವಾಪಸ್ಸು ಪಡೆದಿದೆ. ಮನೆ ನಿರ್ಮಿಸಿಕೊಡಬೇಕಾದ ಸರ್ಕಾರವು ದಾಖಲೆಗಳ ನೆಪ ಒಡ್ಡಿ ಅನುದಾನ ಹಿಂಪಡೆದಿರುವುದನ್ನು ನೋಡಿದರೆ ಈ ಬಿಜೆಪಿ ಸರ್ಕಾರಕ್ಕೆ ಆಡಳಿತ ನಡೆಸಲು ಬರುವುದಿಲ್ಲ ಮತ್ತು ಈ ಸರ್ಕಾರಕ್ಕೆ ಗೊತ್ತಿರುವುದು ಕೇವಲ ಭ್ರಷ್ಟಾಚಾರ ಎಂದು ಕಿಡಿಕಾರಿದರು.

ಸಾವಿರಾರು ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ ನಡೆಸುತ್ತಾ ಬೆಂಗಳೂರಿನ ರಸ್ತೆಗಳಲ್ಲಿ ಮಲಗಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ಕನಿಷ್ಠ ಮಾನವೀಯವಾಗಿ ನಡೆದುಕೊಳ್ಳುವಷ್ಟೂ ನೈತಿಕತೆ ಈ ಸರ್ಕಾರಕ್ಕೆ ಇಲ್ಲವಾಗಿದೆ. ಅವರ ಮೇಲೆ ವ್ಯಾಪಕ ದೌರ್ಜನ್ಯ ಎಸಗಿ, ಅವರ ತಾಳಿ ಬಳೆಗಳನ್ನೂ ಕಿತ್ತೆಸೆಯಲಾಗಿದೆ. ಬಟ್ಟೆ ಬರೆ ಹರಿದು ಅವಮಾನಿಸಲಾಗಿದೆ.

Congress Leader Siddaramaiah Outraged On CM Basavaraj Bommai

ಜೊತೆಗೆ ಬಳ್ಳಾರಿ ಜಿಲ್ಲೆಯಲ್ಲಿ ಇನ್ನೊಂದು ಆಘಾತಕಾರಿ ವಿದ್ಯಮಾನ ನಡೆದಿದೆ. ಅಲ್ಲಿನ ಪರಿಶಿಷ್ಟ ಪಂಗಡದ ಹಾಸ್ಟೆಲ್‍ನಲ್ಲಿ ಊಟ ಸರಿಯಿಲ್ಲವೆಂದು ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ದಾರೆ. ಜಿಲ್ಲಾಧಿಕಾರಿಗಳ ಮನೆ ಹತ್ತಿರ ರಾತ್ರಿ 10 ಗಂಟೆಯ ವೇಳೆಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದರೆಂದು ವಿದ್ಯಾರ್ಥಿಗಳನ್ನು ಹಾಸ್ಟೆಲ್‍ನಿಂದ ಹೊರಹಾಕಲಾಗಿದೆ.

ಬಳ್ಳಾರಿಯ ಜಿಲ್ಲಾಧಿಕಾರಿ ಮನುಷ್ಯನಾಗಿದ್ದರೆ, ಕಾನೂನಿನ ತಿಳುವಳಿಕೆ ಇದ್ದರೆ ಪ್ರತಿಭಟಿಸಿದ, ಸಮಸ್ಯೆಯನ್ನು ಗಮನಕ್ಕೆ ತಂದ ವಿದ್ಯಾರ್ಥಿಗಳನ್ನು ಶ್ಲಾಘನೆ ಮಾಡಬೇಕಾಗಿತ್ತು. ಅದರ ಬದಲು ಹಾಸ್ಟೆಲ್‍ನಿಂದ ಹೊರಹಾಕಲು ಆದೇಶ ಮಾಡಿದ್ದಾರೆ ಎಂಬುದು ಅತ್ಯಂತ ಅಮಾನವೀಯವಾದ ಸಂಗತಿಯಾಗಿದೆ. ಈ ಡಿಸಿಯೇನು ತನ್ನನ್ನು ತಾನು ಮಹಾರಾಜರ ಕಾಲದವರು ಅಂದುಕೊಂಡಿದ್ದಾರಾ? ಅಥವಾ ಈ ಜಿಲ್ಲಾಧಿಕಾರಿ, ಸರ್ಕಾರ ತನ್ನ 24 ಗಂಟೆಗಳ ಸೇವೆಗಾಗಿ ಸಂಬಳ ಕೊಡುತ್ತಿದೆ ಎಂದು ಭಾವಿಸದೆ 8 ಗಂಟೆ ಅವಧಿಗೆ ಗುತ್ತಿಗೆ ಕೆಲಸ ಮಾಡುವ ಕೆಲಸಗಾರ ಅಂದುಕೊಂಡಿದ್ದಾರಾ? ಜಿಲ್ಲಾಧಿಕಾರಿಯ ಈ ಅಮಾನವೀಯ ವರ್ತನೆಗೆ ಸರ್ಕಾರ ಇಷ್ಟೊತ್ತಿಗೆ ಅವರನ್ನು ಅವರನ್ನು ಅಮಾನತು ಮಾಡಬೇಕಾಗಿತ್ತು.

ಅಲೆಮಾರಿ ಸಮುದಾಯಗಳಿಗೆ ಮನೆ ಇಲ್ಲದಂತೆ ಮಾಡಿರುವ ಅಧಿಕಾರಿಗಳನ್ನು ಕೂಡಲೆ ಅಮಾನತು ಮಾಡಿ ವಿಚಾರಣೆಗೆ ಒಳಪಡಿಸಬೇಕು. ವಾಪಸ್ಸು ಪಡೆದಿರುವ ಅನುದಾನವನ್ನು ಕೂಡಲೆ ಪೂರ್ಣ ಪ್ರಮಾಣದಲ್ಲಿ ಬಿಡುಗಡೆ ಮಾಡಿ ಮನೆ ಕಟ್ಟಿಕೊಡುವ ಕೆಲಸ ಮಾಡಬೇಕು. ಅನುದಾನವನ್ನು ಸಮರ್ಪಕವಾಗಿ ಬಳಸಲಾಗದ ಸಂಬಂಧಪಟ್ಟ ಸಚಿವರ ಅಸಮರ್ಥತೆಯ ಕಾರಣಕ್ಕೆ ರಾಜೀನಾಮೆ ಪಡೆಯಬೇಕು. ಅಲ್ಲದೇ ಅಂಗನವಾಡಿ ಕಾರ್ಯಕರ್ತೆಯರ ಸಮಸ್ಯೆಯನ್ನು ಸಹಾನುಭೂತಿಯಿಂದ ಆಲಿಸಿ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದರು.

Congress Leader Siddaramaiah Outraged On CM Basavaraj Bommai

ಬಳ್ಳಾರಿಯ ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸದೆ ವಿದ್ಯಾರ್ಥಿಗಳನ್ನೆ ಶಿಕ್ಷಿಸಿರುವ ಜಿಲ್ಲಾಧಿಕಾರಿ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಹಾಗೂ ಸಂಬಂಧಿತ ಎಲ್ಲ ಅಧಿಕಾರಿಗಳನ್ನು ಈ ಕೂಡಲೆ ಅಮಾನತು ಮಾಡಿ ವಿಚಾರಣೆಗೆ ಆದೇಶಿಸಬೇಕು. ದಮನಿತ ಸಮುದಾಯಗಳ ವಿದ್ಯಾರ್ಥಿಗಳ ಹಿತ ರಕ್ಷಿಸಲು ಅಸಮರ್ಥರಾಗಿರುವ ಜಿಲ್ಲಾ ಉಸ್ತುವಾರಿ ಸಚಿವರನ್ನು ತಕ್ಷಣ ವಜಾಮಾಡಬೇಕು. ಆ ಎಲ್ಲ ವಿದ್ಯಾರ್ಥಿಗಳನ್ನು ಸರ್ಕಾರವೆ ಕ್ಷಮೆ ಕೇಳಿ ಅವರಿಗೆ ಸಾಂವಿಧಾನಿಕವಾಗಿ, ಕಾನೂನಾತ್ಮಕವಾಗಿ ಒದಗಿಸಬೇಕಾದ ಸವಲತ್ತುಗಳನ್ನು ಒದಗಿಸಬೇಕು.

ರಾಜ್ಯದ ಎಲ್ಲ ದಲಿತ, ಹಿಂದುಳಿದ, ಅಲ್ಪಸಂಖ್ಯಾತ, ಮಹಿಳಾ ವಿದ್ಯಾರ್ಥಿಗಳ ವಿದ್ಯಾರ್ಥಿವೇತನದ ಸಮಸ್ಯೆಯೂ ಸೇರಿದಂತೆ ಎಲ್ಲ ಸಮಸ್ಯೆಗಳನ್ನೂ ಬಗೆಹರಿಸಬೇಕೆಂದು ಆಗ್ರಹಿಸುತ್ತೇನೆ ಹಾಗೂ ಬಳ್ಳಾರಿಯ ಹಾಸ್ಟೆಲ್‍ನಿಂದ ಹೊರದಬ್ಬಿರುವ ವಿದ್ಯಾರ್ಥಿಗಳನ್ನು ಈ ಕೂಡಲೆ ಮರಳಿ ಹಾಸ್ಟೆಲ್‍ಗೆ ಸೇರಿಸಬೇಕೆಂದು ಒತ್ತಾಯಿಸುತ್ತೇನೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+