Siddaramaiah Government: ಕೈ ತಪ್ಪಿದ ಸಚಿವ ಸ್ಥಾನ: ಮುಂದಿನ ದಿನದಲ್ಲಿ ಕಾದು ನೋಡಿ: ಸಲೀಂ ಅಹಮ್ಮದ್ ಎಚ್ಚರಿಕೆ
ಬೆಂಗಳೂರು,ಮೇ27: ರಾಜ್ಯ ಕಾಂಗ್ರೆಸ್ ನಲ್ಲಿ 24 ಜನ ಮಂತ್ರಿ ಸ್ಥಾನ ಒಲಿದು ಬಂದಿದ್ದು, ಸಚಿವ ಸ್ಥಾನ ಆಕಾಂಕ್ಷಿಗಳಾಗಿದ್ದ ಹಲವು ಜನ ನಾಯಕರು ಇದೀಗ ಪಕ್ಷದ ಹಿರಿಯ ನಾಯಕರ ವಿರುದ್ದ ಅಸಮಾಧಾನ ಹೊರ ಹಾಕಿದ್ದು, ಬೇಸರಗೊಂಡಿದ್ದಾರೆ.
ಈ ಕುರಿತು ಕೆಪಿಸಿಸಿ ಕಾರ್ಯಧ್ಯಕ್ಷ ಸಲೀಂ ಅಹಮ್ಮದ್ ಸಚಿವ ಸ್ಥಾನ ಕೈ ತಪ್ಪಿದ ಹಿನ್ನಲೆ ಪಕ್ಷದ ನಾಯಕರ ಮೇಲೆ ಬೇಸರಗೊಂಡಿದ್ದು, ಮುಂದಿನಗಳಲ್ಲಿ ಏನಾಗುತ್ತೋ ಕಾದು ನೋಡಿ ಎಂದು ಮಹತ್ತರ ಬದಲಾವಣೆ ಸುಳಿವು ನೀಡಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ್ದು, ಸಿದ್ದರಾಮಯ್ಯ ಕ್ಯಾಬಿನೆಟ್‌ಗೆ 24 ಸಚಿವರು ಮಂತ್ರಿಯಾಗಿ ಸೇರಿಕೊಂಡಿದ್ದಾರೆ. ನೂತನ ಸಚಿವರ ಪದಗ್ರಹಣ ಕಾರ್ಯಕ್ರಮ ರಾಜಭವನದಲ್ಲಿ ನಡೆಯುತ್ತಿದೆ. ನನಗೂ ಸಚಿವ ಸ್ಥಾನ ಸಿಗಬಹುದು ಅನ್ನೋ ನಿರೀಕ್ಷೆಯಲ್ಲಿದ್ದೆ ಎಂದು ಸಚಿವ ಸ್ಥಾನ ಸಿಗದ ನಾಯಕರು ಕಾಂಗ್ರೆಸ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಈಗಾಗಲೇ ಚರ್ಚೆಯಾದಂತೆ ವಿಧಾನ ಪರಿಷತ್‌ನ ಮೂವರು ಸದಸ್ಯರಿಗೆ ಸಚಿವ ಸ್ಥಾನ ನೀಡುವ ಕುರಿತು ಚರ್ಚೆ ನಡೆದಿತ್ತು. ಆದರೆ ಪರಿಷತ್ ನಲ್ಲಿ ಯಾರನ್ನೂ ಸಚಿವಸ್ಥಾನಕ್ಕೆ ಪರಿಗಣಿಸಿಲ್ಲ. ಇದು ನನಗೆ ಬೇಸರ ತಂದಿದೆ. ಮುಂದಿನ ದಿನಗಳಲ್ಲಿ ಏನಾಗುತ್ತೋ ಕಾದು ನೋಡಿ ಎಂದು ಸಲೀಂ ಅಹಮ್ಮದ್ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಇದೇ ವೇಳೆ ಬಿಕೆ ಹರಿಪ್ರಸಾದ್ ರಾಜೀನಾಮೆ ವಿಚಾರ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಸಚಿವ ಸ್ಥಾನ ಸಿಗದ ಬಿಕೆ ಹರಿಪ್ರಸಾದ್ ಬೇಸರಗೊಂಡು ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿರುವ ವಿಚಾರ ಮಾಧ್ಯಮಗಳಿಂದ ತಿಳಿಯಿತು. ಈ ಬಗ್ಗೆ ಅವರನ್ನೇ ಕೇಳಬೇಕು, ಅವರು ನನಗೆ ಸಿಕ್ಕಿಲ್ಲ. ಬಿಕೆ ಹರಿಪ್ರಸಾದ್ ಭೇಟಿಯಾಗಿ ಮಾತನಾಡುತ್ತೇನೆ ಎಂದು ಹೇಳಿದರು.
ಇನ್ನೂ ಸಚಿವ ಸ್ಥಾನ ಕೈ ತಪ್ಪಿದ ಹಿನ್ನಲೆ ಎಂ ಕೃಷ್ಣಪ್ಪ ಬೆಂಬಲಿಗರು ರಾಜಭವನ ಎದುರೇ ಪ್ರತಿಭಟನೆ ಮಾಡಿದ್ದಾರೆ. ಇತ್ತ ಶಿರಾ ಕ್ಷೇತ್ರದ ಶಾಸಕ ಟಿಬಿ ಜಯಚಂದ್ರ ಕಾರ್ಯಕರ್ತರು ಸಿದ್ದರಾಮಯ್ಯ ಮನೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ತಮ್ಮ ನಾಯಕರಿಗೆ ಸಚಿವ ಸ್ಥಾನ ನೀಡಬೇಕು ಎಂದು ಬೆಂಬಲಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications