Priyanka Gandhi: 'ನನ್ನ ಸಮಾಧಿ ಅಗೆಯುತ್ತಿದ್ದಾರೆ' ಎಂಬ ಮೋದಿ ಮಾತಿಗೆ ಮೈಸೂರಿನಲ್ಲಿ ಅಚ್ಚರಿ ವ್ಯಕ್ತಪಡಿಸಿದ ಪ್ರಿಯಾಂಕಾ ಗಾಂಧಿ
ಮೈಸೂರು, ಏಪ್ರಿಲ್ 25: 'ವಿರೋಧಿಗಳು ನನ್ನ ಸಮಾಧಿ ಅಗೆಯುತ್ತಿದ್ದಾರೆ' ಎಂಬ ಪ್ರಧಾನಿ ನರೇಂದ್ರ ಮೋದಿ ಮಾತಿಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ತೀವ್ರ ಅಚ್ಚರಿ ವ್ಯಕ್ತಪಡಿಸಿದರು. ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಚಾರ ಕೈಗೊಳ್ಳಲು ಅವರು ರಾಜ್ಯಕ್ಕೆ ಆಗಮಿಸಿದ್ದಾರೆ. ಮೈಸೂರು ಜಿಲ್ಲೆಯ ಟಿ ನರಸೀಪುರದಲ್ಲಿ ಅವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.
'ವಿರೋಧಗಳ ನನ್ನ ಸಮಾಧಿಯನ್ನು ಅಗೆಯುತ್ತಾರೆ' ಎಂಬ ಮೋದಿ ಹೇಳಿಕೆ ವಿಚಿತ್ರವಾಗಿದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
'ದೇಶದಲ್ಲಿ ಯಾರಿಗೂ ಪ್ರಧಾನಿಯವರಿಗೆ ಸಮಾಧಿ ತೋಡುವ ಇಚ್ಛೆ ಇಲ್ಲ. ನಾನು ಅವರಿಗೆ ದೀರ್ಘಕಾಲದ ಆಯುಷ್ಯಕ್ಕಾಗಿ ಹರಸುತ್ತೇನೆ' ಎಂದು ಹೇಳಿದರು.

ಮೋದಿಯವರು ವಿಚಿತ್ರ ಹೇಳಿಕೆಗಳನ್ನು ನೀಡುತ್ತಾರೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಮತ್ತು ನಿರುದ್ಯೋಗ ಸಮಸ್ಯೆಗಳ ಬಗ್ಗೆ ಮಾತನಾಡುವ ಬದಲು ಅವರು ತಮ್ಮ ಸಮಾಧಿಯನ್ನು ಅಗೆಯಲು ಬಯಸುತ್ತಿರುವ ಪ್ರತಿಪಕ್ಷಗಳ ಬಗ್ಗೆ ಮಾತನಾಡುತ್ತಾರೆ ಎಂದು ಪ್ರಿಯಾಂಕಾ ವ್ಯಂಗ್ಯವಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಕಳೆದೆರಡು ತಿಂಗಳ ಹಿಂದೆ ಮಂಡ್ಯ ಜಿಲ್ಲೆಯಲ್ಲಿ ಮಾಡಿದ ಭಾಷಣದಲ್ಲಿ ಹೇಳಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಕೇಂದ್ರದಲ್ಲಿ ಭಾರತೀಯ ಜನತಾ ಪಕ್ಷದ ಆಡಳಿತವನ್ನು ಟೀಕಿಸಿದ ಪ್ರಿಯಾಂಕಾ, 'ಶಾಲಾ ಶುಲ್ಕಗಳು, ವೈದ್ಯಕೀಯ ವೆಚ್ಚಗಳು ಸೇರಿದಂತೆ ಅಗತ್ಯ ವಸ್ತುಗಳ ಬೆಲೆಗಳು ಏರಿಕೆಯಾಗಿದೆ. 'ಕೈಗಾರಿಕೋದ್ಯಮಿ ಮಿತ್ರರು' ಮೋದಿ ಸರ್ಕಾರದಿಂದ ಲಾಭ ಪಡೆದುಕೊಂಡಿದ್ದಾರೆ. ಜನಸಾಮಾನ್ಯರನ್ನು ಬಳಲುವಂತೆ ಮಾಡಲಾಗಿದೆ' ಎಂದು ಹೇಳಿದರು.
आपको बार-बार दुर्बल नेता मिले, वो बार-बार मुख्यमंत्री बदलते रहे।
— Rohan Gupta (@rohanrgupta) April 25, 2023
40% कमीशन की सरकार ने आपको लूटा : कांग्रेस महासचिव श्रीमती @priyankagandhi जी pic.twitter.com/E5hBkP9IkY
ಬಿಜೆಪಿ ಸರ್ಕಾರವು 'ದಮನಕಾರಿ' ಧೋರಣೆಯನ್ನು ಅಳವಡಿಸಿಕೊಂಡಿರುವುದರಿಂದ ಉದ್ದೇಶಪೂರ್ವಕವಾಗಿ ಬಡವರಿಗೆ ಯಾವುದೇ ಸಹಾಯವನ್ನು ಮಾಡುತ್ತಿಲ್ಲ ಎಂದು ಅವರು ಆರೋಪಿಸಿದರು. ಬಡವರ ಅಭಿವೃದ್ದಿಯು ತೆರಿಗೆ ಬಳಕೆಯ ಬಗ್ಗೆ ಸರ್ಕಾರವನ್ನು ಪ್ರಶ್ನಿಸಲು ಕಾರಣವಾಗುತ್ತದೆ ಎಂದು ಬಿಜೆಪಿ ಭಯಪಡುತ್ತದೆ ಎಂದು ಹೇಳಿದರು.
ಬಿಜೆಪಿಗೆ ಮತ ಹಾಕದಿದ್ದರೆ ಮೋದಿಯವರ ಆಶೀರ್ವಾದವನ್ನು ಕರ್ನಾಟಕ ಕಳೆದುಕೊಳ್ಳುತ್ತದೆ ಎಂಬ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಹೇಳಿಕೆಗೆ ಪ್ರಿಯಾಂಕಾ ವಾಗ್ದಾಳಿ ನಡೆಸಿದರು. 12ನೇ ಶತಮಾನದ ಸಮಾಜ ಸುಧಾರಕ ಬಸವಣ್ಣ, ನಾರಾಯಣ ಗುರು, ರಾಷ್ಟ್ರಕವಿಗಳಂತಹ ಮಹಾನ್ ವ್ಯಕ್ತಿಗಳು ಬದುಕಿ ಬಾಳಿದ ರಾಜ್ಯಕ್ಕೆ ನಡ್ಡಾ ಅವಮಾನಿಸಿದ್ದಾರೆ ಎಂದು ಹೇಳಿದರು. ಕುವೆಂಪು ಅವರು ಈ ನೆಲವನ್ನು ಆಶೀರ್ವದಿಸಿದ್ದಾರೆ. ಹೀಗಿರುವಾಗ ಬೇರೆ ಯಾವುದೇ ಆಶೀರ್ವಾದದ ಅಗತ್ಯವಿಲ್ಲ ಎಂದು ಹೇಳಿದರು.

ರಾಜ್ಯದಲ್ಲಿ ನಿರುದ್ಯೋಗವನ್ನು ಉಲ್ಲೇಖಿಸಿದ ಅವರು, 'ರಾಜ್ಯದಲ್ಲಿ ಲಕ್ಷಗಟ್ಟಲೆ ಸರ್ಕಾರಿ ಉದ್ಯೋಗಗಳು ಖಾಲಿ ಉಳಿದಿವೆ ಮತ್ತು ನಿಮ್ಮಲ್ಲಿ ಎಷ್ಟು ಮಂದಿ ಸರ್ಕಾರಿ ಉದ್ಯೋಗಗಳನ್ನು ಪಡೆದಿದ್ದೀರಿ ಎಂದು ನಿಮಗೆ ತಿಳಿದಿದೆಯೇ?' ಎಂದು ಪ್ರಶ್ನಿಸಿದರು.
'ರಾಜ್ಯದಲ್ಲಿ ಸುಮಾರು 1.5 ಲಕ್ಷ ಸರ್ಕಾರಿ ಉದ್ಯೋಗಗಳು ಖಾಲಿ ಬಿದ್ದಿರುವುದು ನಿಮಗೆ ತಿಳಿದಾಗ ನೋವಾಗುತ್ತದೆ. ಸರ್ಕಾರಿ ಹುದ್ದೆಗಳಿಗೆ ಕೆಲವು ದರಗಳನ್ನು ನಿಗದಿಪಡಿಸಲಾಗಿದೆ ಎಂದು ತಿಳಿದಾಗ ಯುವಕರ ಹೃದಯ ಒಡೆದುಹೋಗುತ್ತದೆ' ಎಂದು ಪ್ರಿಯಾಂಕಾ ಹೇಳಿದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು.
ಕರ್ನಾಟಕ ಹಾಲು ಮಹಾಮಂಡಳದ ನಂದಿನಿ ಹಾಲಿನ ಉತ್ಪನ್ನಗಳ ವಿಚಾರವಾಗಿ, ರಾಜ್ಯದಲ್ಲಿ ಭಾರತದ ಒಕ್ಕೂಟವನ್ನು ವಿಭಜಿಸುವ ಪ್ರಯತ್ನ ನಡೆದಿದೆ ಎಂದು ಪ್ರಿಯಾಂಕಾ ಆರೋಪಿಸಿದರು.
ಮೈಸೂರಿಗೆ ಭೇಟಿ ನೀಡಿದ ಅವರು ಟಿ.ನರಸೀಪುರ, ಚಾಮರಾಜನಗರದ ಹನೂರು, ಕೃಷ್ಣರಾಜನಗರ ಮತ್ತು ಮೈಸೂರಿನ ಚಾಮರಾಜ ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದರು.












Click it and Unblock the Notifications