Karnataka Election: ಗ್ಯಾರಂಟಿಗಳನ್ನು ಈಡೇರಿಸಲಾಗದಿದ್ದರೆ ಸರ್ಕಾರ ವಿಸರ್ಜನೆ: ಕಾಂಗ್ರೆಸ್ ಟ್ವೀಟ್
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಭರವಸೆಗಳ ಭರಾಟೆ ಜೋರಾಗಿದೆ. ಕಾಂಗ್ರೆಸ್ ನೀಡಿರುವ ಗ್ಯಾರಂಟಿ ಭರವಸೆಗಳ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವ್ಯಂಗ್ಯ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕರ್ನಾಟಕ ಕಾಂಗ್ರೆಸ್ ಮೈಸೂರನ್ನು ಪ್ಯಾರಿಸ್ ಮಾಡ್ತೀನಿ ಅಂದಿದ್ದು ನೀವೆ ಅಲ್ಲವಾ ಎಂದು ವ್ಯಂಗ್ಯವಾಡಿದೆ.
ಏಪ್ರಿಲ್ 27ರಂದು ನಡೆದ ಕಾರ್ಯಕರ್ತರ ಸಂವಾದವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಹಿಮಾಚಲ ಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನೀಡಿದ್ದ ಭರವಸೆಗಳನ್ನು ಈಡೇರಸದ ಬಗ್ಗೆ ಟೀಕೆ ಮಾಡಿದ್ದರು. ಅಲ್ಲಿನ ಜನ ಈಗಾಗಲೂ ಗ್ಯಾರಂಟಿಗಳಿಗೆ ಕಾಯುತ್ತಿದ್ದಾರೆ, ವಾರಂಟಿಯದ್ದೇ ವಾಯಿದೆ ಮುಗಿದಿರುವಾಗ ಆ ಪಕ್ಷದಿಂದ ಇನ್ನೇನು ಗ್ಯಾರಂಟಿ ನಿರೀಕ್ಷೆ ಮಾಡುವುದು ಸಾಧ್ಯ ಎಂದು ಕುಟುಕಿದ್ದರು.

ಮೋದಿ ಮಾತುಗಳಿಗೆ ಕಾಂಗ್ರೆಸ್ ಈಗ ತಿರುಗೇಟು ನೀಡಿದ್ದು ಸರಣಿ ಟ್ವೀಟ್ ಮಾಡಿದೆ, "ಮೈಸೂರನ್ನು ಪ್ಯಾರಿಸ್ ಮಾಡುತ್ತೇನೆ ಎಂದಿದ್ದ ನರೇಂದ್ರ ಮೋದಿ ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ಟೀಕಿಸಿದ್ದಾರೆ. ನಾವು ನೀಡಿರುವ ಗ್ಯಾರಂಟಿಗಳನ್ನು ಈಡೇರಿಸಲಾಗದಿದ್ದರೆ ಸರ್ಕಾರ ವಿಸರ್ಜಿಸುತ್ತೇವೆ ಎಂಬ ವಾಗ್ದಾನ ಮಾಡುತ್ತೇವೆ. 20 ಲಕ್ಷ ಕೋಟಿ ಪ್ಯಾಕೆಟ್ ಎಂಬ ಬಿಳಿ ಕಾಗೆ ಹಾರಿಸಿದ ಅವರು ಯಾವ ರೀತಿ ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತಾರೆ ಹೇಳಲಿ." ಎಂದು ಪ್ರಧಾನಿ ಮೋದಿಗೆ ಕಾಂಗ್ರೆಸ್ ಸವಾಲು ಹಾಕಿದೆ.
"ನರೇಂದ್ರ ಮೋದಿಯವರೇ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನೀಡಿದ್ದ ಎಲ್ಲಾ 261 ಭರವಸೆಗಳನ್ನು ಈಡೇರಿಸಿದ ಇತಿಹಾಸ ಹೊಂದಿದೆ. ಹಾಗೆಯೇ ಕರ್ನಾಟಕ ಬಿಜೆಪಿ ಸರ್ಕಾರ 90 ಪ್ರತಿಶತ ಭರವಸೆಗಳನ್ನು ವಂಚಿಸಿದೆ. ನಿಮಗೆ ತಾಕತ್ತಿದ್ದರೆ ಕಳೆದ ಬಾರಿ ತಮ್ಮ ಪಕ್ಷ ನೀಡಿದ್ದ ಭರವಸೆಗಳ ಬಗ್ಗೆ ಮಾತಾಡಿ." ಎಂದು ಮೋದಿಗೆ ಪ್ರಶ್ನೆ ಮಾಡಿದೆ.
ಶಿವಮೊಗ್ಗದಲ್ಲಿ ತಮಿಳುನಾಡು ನಾಡಗೀತೆ : ಕಾಂಗ್ರೆಸ್ ಟೀಕೆ
ಶಿವಮೊಗ್ಗದಲ್ಲಿ ಬಿಜೆಪಿ ಕಾರ್ಯಕ್ರಮದಲ್ಲಿ ತಮಿಳುನಾಡಿನ ನಾಡಗೀತೆ ಹಾಕಿದ್ದ ಘಟನೆ ಬಗ್ಗೆ ಕಾಂಗ್ರೆಸ್ ಟೀಕೆ ಮಾಡಿದೆ. "ಮೇಕೆದಾಟು ವಿಚಾರದಲ್ಲಿ ಕರ್ನಾಟಕದ ವಿರುದ್ಧದ ನಿಲುವು ಹೊಂದಿದ್ದ ಅಣ್ಣಾಮಲೈ ಅವರನ್ನು ಕರ್ನಾಟಕದ ಚುನಾವಣಾ ಉಸ್ತುವಾರಿಯಾಗಿ ನೇಮಿಸುವ ಮೂಲಕ ಬಿಜೆಪಿ ಕನ್ನಡಿಗರ ಸ್ವಾಭಿಮಾನವನ್ನು ಅಣಕವಾಡಿದೆ. ಈಗ ಅಣ್ಣಾಮಲೈ ಮೆಚ್ಚಿಸಲು ಕರ್ನಾಟಕದ ನಾಡಗೀತೆಯ ಬದಲು ತಮಿಳುನಾಡಿನ ನಾಡಗೀತೆ ಹಾಡಲಾಗಿದೆ. ಬಿಜೆಪಿ ಕನ್ನಡಿಗರ ಸ್ವಾಭಿಮಾನ ಕೆಣಕುತ್ತಿರುವುದೇಕೆ?" ಎಂದು ಟ್ವೀಟ್ ಮಾಡಿದೆ.
ಕನ್ನಡಿಗರಿಗೆ ಭರವಸೆ ಬೇಕು
ಮತಯಾಚನೆಯಲ್ಲಿ ಎರಡು ವಿಧ ಎಂದು ಹೇಳಿರುವ ಕಾಂಗ್ರೆಸ್, " ಬಿಜೆಪಿಯು ಮೋದಿ ಆಶೀರ್ವಾದ ಬೇಕಿದ್ದರೆ ಮತ ಕೊಡಿ, ಗಲಭೆ ಮಾಡಿಸಬಾರದು ಎಂದರೆ ಮತ ಕೊಡಿ ಎಂದು ಬೆದರಿಕೆ ಹಾಕುವ ಮೂಲಕ ಮತಯಾಚನೆ ಮಾಡುತ್ತಿದೆ, ಆದರೆ ಕಾಂಗ್ರೆಸ್ ನಮ್ಮ ಗ್ಯಾರಂಟಿಗಳನ್ನು ಈಡೇರಿಸುತ್ತೇವೆ ಮತ್ತು ಬೆಲೆ ಏರಿಕೆ, ಭ್ರಷ್ಟಾಚಾರ ತಡೆಯುತ್ತೇವೆ ಮತ ಕೊಡಿ ಎಂದು ಕೇಳಿದೆ. ಕನ್ನಡಿಗರಿಗೆ ಬೆದರಿಕೆ ಬೇಕಿಲ್ಲ ಭರವಸೆ ಬೇಕು ಎಂದು ಟ್ವೀಟ್ ಮಾಡಿದೆ.












Click it and Unblock the Notifications