CM Post Fight: ಸಿದ್ದುಗೆ ಸಿಎಂ ಪಟ್ಟ?; ಡಿ ಕೆ ಶಿವಕುಮಾರ್ ಗೆ ಎರಡು ಜವಾಬ್ದಾರಿ ಕೊಟ್ಟ ಹೈಕಮಾಂಡ್! ಒಪ್ಪದ ಬಂಡೆ!
ಬೆಂಗಳೂರು, ಮೇ17; ರಾಜ್ಯ ಕಾಂಗ್ರೆಸ್ ನಲ್ಲಿ ಕಳೆದ ನಾಲ್ಕು ದಿನಗಳಿಂದಲೂ ಮುಖ್ಯಮಂತ್ರಿ ಆಯ್ಕೆ ವಿಚಾರವೇ ದೊಡ್ಡ ಕಗ್ಗಂಟಗಿತ್ತು. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನಡುವೆ ಸಿಎಂ ಸ್ಥಾನಕ್ಕಾಗಿ ಹಗ್ಗಜಗ್ಗಾಟ ಏರ್ಪಟ್ಟಿದ್ದು, ಕೊನೆಗೂ ಸರಣಿ ಸಭೆಗಳನ್ನ ನಡೆಸಿದ್ದ ಕಾಂಗ್ರೆಸ್ ಹೈಕಮಾಂಡ್ ಬಹುತೇಕ ಸಿದ್ದರಾಮಯ್ಯ ಅವರಿಗೆ ಸಿಎಂ ಪಟ್ಟ ಕಟ್ಟಲು ಸಿದ್ದತೆಯನ್ನ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಈಗಾಗಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಜೊತೆಗೆ ಸಭೆ ನಡೆಸಿದ್ದು, ಈ ಪ್ರತ್ಯೇಕ ಸಭೆಯಲ್ಲಿ ಕೊಟ್ಟರೇ ಮುಖ್ಯಮಂತ್ರಿ ಸ್ಥಾನ ಕೊಡಿ ಇಲ್ಲ ಎಂದರೇ ಯಾವುದೇ ಸ್ಥಾನ ಬೇಡ ಎಂದು ಡಿ ಕೆ ಶಿವಕುಮಾರ್ ಹೇಳಿದ್ದಾರೆ ಎನ್ನಲಾಗಿತ್ತು. ಅಲ್ಲದೇ ನೀವು ಮುಖ್ಯಮಂತ್ರಿಯಾಗುವುದಾದರೇ ನಾನು ಹಿಂದೆ ಸರಿಯುವುದಾಗಿ ಡಿ ಕೆ ಶಿವಕುಮಾರ್ ಚರ್ಚೆಯ ವೇಳೆ ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಹೇಳಿದ್ದಾರೆ ಎನ್ನಲಾಗಿತ್ತು.

ಇನ್ನೂ ಮುಖ್ಯಮಂತ್ರಿ ಕುರ್ಚಿಗಾಗಿ ಪಟ್ಟು ಹಿಡಿದಿದ್ದ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರನ್ನು ಮನವೊಲಿಸುವಲ್ಲಿ ಹೈ ಕಮಾಂಡ್ ಯಶಸ್ವಿಯಾಗಿಲ್ಲ. ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡುವ ಜೊತೆಗೆ, ಡಿ.ಕೆ.ಶಿವಕುಮಾರ್ ಉಪ ಮುಖ್ಯಮಂತ್ರಿಯಾಗಿ ಮಾಡಲು ಹೈಕಮಾಂಡ್ ನಿರ್ಧರಿಸಿದೆ ಎನ್ನಲಾಗಿದೆ.
ಇತ್ತ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಡಿ.ಕೆ.ಶಿವಕುಮಾರ್ ಅವರ ಜೊತೆಗೆ ಹಲವು ಸಭೆಗಳು ನಡೆಯುತ್ತಿದ್ದು, ಹಲವು ಲೆಕ್ಕಾಚಾರಗಳ ನಡುವೆ ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಸ್ಥಾನವನ್ನ ನೀಡಲು ಹೈಕಮಾಂಡ್ ನಿರ್ಧಾರಿಸಲಾಗಿದ್ದು, ಡಿ ಕೆ ಶಿವಕುಮಾರ್ ಮನವೊಲಿಸಲು ಕಸರತ್ತು ಮುಂದುವರೆದಿದೆ, ಈ ಬಾರೀ ಸಂಪುಟದಲ್ಲಿ ಡಿ ಕೆ ಶಿವಕುಮಾರ್ ಗೆ ಉಪಮುಖ್ಯಮಂತ್ರಿ ಸ್ಥಾನವನ್ನ ನೀಡುವುದಾಗಿ ಹೈಕಮಾಂಡ್ ತಿಳಿಸಿದ್ದು, ಎರಡು ಪ್ರಬಲ ಖಾತೆಯನ್ನ ನೀಡುವುದಾಗಿಯೂ ಹೈಕಮಾಂಡ್ ನಾಯಕರು ಭರವಸೆಯನ್ನ ನೀಡಿದ್ದಾರೆ ಎನ್ನಲಾಗಿದೆ.
ಇತ್ತ ಡಿಸಿಎಂ ಸ್ಥಾನದ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲೂ ಮುಂದುವರೆಯುವಂತೆ ಹೈಕಮಾಂಡ್ ಸೂಚನೆ ನೀಡಿದ್ದು, ಒಟ್ನಾಲಿ ಡಿಸಿಎಂ ಜೊತೆಗೆ ಪಕ್ಷದ ಅಧ್ಯಕ್ಷರಾಗಿಯೂ ಮುಂದುವರೆಯುವಂತೆ ಎರಡು ಜವಾಬ್ದಾರಿಯನ್ನ ಕಾಂಗ್ರೆಸ್ ಹೈಕಮಾಂಡ್ ಡಿ ಕೆ ಶಿವಕುಮಾರ್ ಗೆ ನೀಡಿದ್ದು, ಈ ಸೂತ್ರವನ್ನ ಒಪ್ಪದ ಡಿ ಕೆ ಶಿವಕುಮಾರ್ ತಳ್ಳಿ ಹಾಕಿದ್ದು, ಮುಖ್ಯಮಂತ್ರಿ ಸ್ಥಾನಕ್ಕಾಗಿ ಪಟ್ಟು ಹಿಡಿದಿದ್ದಾರೆ.

ಕೊಡುವುದಾದರೆ ಮುಖ್ಯಮಂತ್ರಿ ಸ್ಥಾನ ಕೊಡಿ. ಇಲ್ಲದಿದ್ದರೆ ನಾನು ಶಾಸಕನಾಗಿಯೇ ಇರುತ್ತೇನೆ. ಯಾವುದೇ ಸ್ಥಾನ ಬೇಡ. ಪಕ್ಷಕ್ಕಾಗಿ ನೀವೂ ಕೂಡ ಕೆಲಸ ಮಾಡಿದ್ದೀರಿ. ನೀವೇ ಮುಖ್ಯಮಂತ್ರಿ ಜವಾಬ್ದಾರಿ ವಹಿಸಿಕೊಳ್ಳಿ ಎಂದು ಡಿಕೆ ಶಿವಕುಮಾರ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಹೇಳಿದ್ದಾರೆ. ನಾನು ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಕಟ್ಟಿದ್ದೇನೆ. ಹೀಗಾಗಿ ಕಾಂಗ್ರೆಸ್ ಗೆಲುವು ಸಾಧಿಸಿದ್ದು, ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್ ಪಕ್ಷ ಸೇರಿಕೊಂಡ ಬಳಿಕ ಸಿದ್ದರಾಮಯ್ಯ ಅಧಿಕಾರ ಅನುಭವಿಸುತ್ತಿದ್ದಾರೆ. ಈ ಬಾರೀ ನನಗೆ ಮುಖ್ಯಮಂತ್ರಿ ಸ್ಥಾನ ನೀಡಿ ಎಂದು ಡಿ ಕೆ ಶಿವಕುಮಾರ್ ಒತ್ತಡ ಹಾಕಿದ್ದಾರೆ.
ಇನ್ನೂ ನಾಳೆ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ನಡೆಲಿದೆ ಎಂದು ಕಾಂಗ್ರೆಸ್ ನಾಯಕರು ತಯಾರಿ ನಡೆಸುತ್ತಿದ್ದು, ಮುಖ್ಯಮಂತ್ರಿ ಯಾರು ಎಂಬುದು ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ. ಇಂದು ಸಂಜೆಯೊಳಗೆ ಯಾರು ಕರುನಾಡ ಮುಖ್ಯಮಂತ್ರಿ ಎಂದು ಹೈಕಮಾಂಡ್ ಘೋಷಿಸಲಿದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.












Click it and Unblock the Notifications