Electricity Bill: ಗ್ರಾಹಕರ ಮೇಲೆ ಮನಬಂದಂತೆ ಇತರೆ ಶುಲ್ಕ ಹೇರಿಕೆ, ಗ್ಯಾರಂಟಿ ಖರ್ಚು ಪಡೆಯುತ್ತಿದೆಯೇ ಸರ್ಕಾರ?
ಬೆಂಗಳೂರು, ಜೂನ್ 05: ಉಚಿತ ವಿದ್ಯುತ್ ಯೋಜನೆ ಜಾರಿಗೂ ಮುನ್ನವೇ ಕರ್ನಾಟಕ ಕಾಂಗ್ರೆಸ್ ಸರ್ಕಾರವು ಗ್ರಾಹಕರಿಂದ ಸುಲಿಗೆ ಮುಂದಾಗಿದೆ. ಜೂನ್ ಮೊದಲ ವಾರ ಬಂದ ಮೇ ತಿಂಗಳ ವಿದ್ಯುತ್ ಬಿಲ್ ನಲ್ಲಿ ನೂರಾರು ರೂಪಾಯಿ ಇತರೆ ಶುಲ್ಕ ವಿಧಿಸಲಾಗಿದೆ. ಪ್ರತಿ ಯೂನಿಟ್ ದರ ಹೆಚ್ಚಿಸುವ ಮೂಲಕ ಜನರಿಗೆ ಕರೆಂಟ್ ಶಾಕ್ ನೀಡಲಾಗಿದೆ.
ಇತ್ತೀಚೆಗಷ್ಟೇ ರಾಜ್ಯ ಸರ್ಕಾರ ಜನರ ಅಭಿವೃದ್ಧಿ ಹೆಸರಿನಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿತು. ಅದರಲ್ಲಿ ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್ ಪೂರೈಕೆಯು ಒಂದು. ಜುಲೈ ನಂತರ ಉಚಿತ ವಿದ್ಯುತ್ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಘೋಷಿಸಿದ್ದಾರೆ.

ನಾಡಿನ ಜನರು ಉಚಿತ ವಿದ್ಯುತ್ ಸಿಗಲಿದೆ ಎಂಬ ಖಷಿಯನ್ನು ಜೂನ್ ನಲ್ಲಿ ಕೈ ಗೆ ಬಂದ ಮೇ ತಿಂಗಳ ವಿದ್ಯುತ್ ಬಿಲ್ ಕಸಿದುಕೊಂಡಿದೆ. ಪ್ರತಿ ಮನೆಯ ಮಿನಿಮಮ್ ವಿದ್ಯುತ್ ಶುಲ್ಕ 110 ಗಡಿ ತಲುಪಿದೆ. ಈ ಹಿಂದೆ ಅದು ಗ್ರಾಮೀಣ ಭಾಗದಲ್ಲಿ 85 ರೂಪಾಯಿ ಇತ್ತು. ಕರ್ನಾಟಕ ವಿದ್ಯುತ್ ನಿಯಂತ್ರಣದ ಆಯೋಗ (KERC)ದ ಪ್ರತಿ ಯುನಿಟ್ ವಿದ್ಯುತ್ ದರದ ಮೇಲೆ 70 ಪೈಸೆ ಹೆಚ್ಚಳ ಆದೇಶ ಇದೇ ತಿಂಗಳಿಂದ ಜಾರಿಗೆ ಬರುತ್ತಿದೆ.
ಹೆಸ್ಕಾಂ: ಮನಬಂದಂತೆ ಇತರೆ ಶುಲ್ಕ ಹೇರಿಕೆ
ಪ್ರತಿ ತಿಂಗಳು 42ಯುನಿಟ್ ಬಳಕೆ ಮಾಡುವ ಮನೆಗೆ 240-260 ರೂಪಾಯಿ ವಿದ್ಯುತ್ ಬಿಲ್ ಬರುತ್ತಿತ್ತು. ಮೇ ತಿಂಗಳಿನಲ್ಲಿ 597 ರೂಪಾಯಿ ಬಿಲ್ ನೀಡಲಾಗಿದೆ. ಮಿನಿಮಮ್ ದರ 110 ರೂಪಾಯಿ, ಇತರೆ ಮೊತ್ತ ಎಂದು 173 ರೂಪಾಯಿ ಹೇರಲಾಗಿದೆ. ಈ ಇತರ ಶುಲ್ಕ ಇಂತಿಷ್ಟು ಎಂಬುದಿಲ್ಲ. ಕೆಲವರ ಮನೆಗಳ ಮೇಲೆ ರೂ. 266, 310 ರೂಪಾಯಿವರೆಗೂ ಹಾಕಲಾಗಿದೆ. ಬಳಕೆ ಆಧರಿಸಿ ಹೆಚ್ಚಿನ ಇತರ ಶುಲ್ಕ ವಿಧಿಸಲಾಗಿದೆ. ಈ ಮೂಲಕ ಮುಂದಿನ ಆರು ತಿಂಗಳ ಉಚಿತ ವಿದ್ಯುತ್ ಖರ್ಚನ್ನು ಈಗಲೇ ಪಾವತಿಸಿಕೊಳ್ಳುತ್ತಿದ್ದಾರೆ ಎಂದು ಮನೆ ಮಾಲೀಕರು ಆಕ್ರೋಶ ಹೊರ ಹಾಕಿದ್ದಾರೆ.
ಅಧಿಕ ವಿದ್ಯುತ್ ಬಿಲ್ ಏಕೆ? ಎಂದು ಕಾರಣ ಕೇಳಿದ್ದಕ್ಕೆ, ಪ್ರತಿ ಯುನಿಟ್ ದರದ ಬೆಲೆ ಹೆಚ್ಚಾಗಿದೆ. ಜೊತೆಗೆ ಇತರೆ ಶುಲ್ಕ ವಿಧಿಸಲು ಹೇಳಿದ್ದಾರೆ. ಅದಕ್ಕೆ ಕಾರಣವನ್ನು ನಮಗೂ ಸರಿಯಾಗಿ ತಿಳಿಸಿಲ್ಲ. ಇದೆಲ್ಲ ದರಗಳು ಕಳೆದ ಎರಡು ತಿಂಗಳಿಂದ ಅನ್ವಯವಾಗುವಂತೆ ಬಿಲ್ ನೀಡಲು ಸೂಚಿಸಿದ್ದಾರೆ ಎಂದು ಹೆಸ್ಕಾಂ ಲೈನ್‌ಮನ್ ತಿಳಿಸಿದರು.

ಹೆಸ್ಕಾಂ ವ್ಯಾಪ್ತಿಯ ಹಾವೇರಿ, ಹುಬ್ಬಳ್ಳಿ, ಧಾರವಾಡ, ರಾಣಿಬೆನ್ನೂರು, ಶಿಗ್ಗಾವಿ ಹಾಗೂ ಮಲೆನಾಡಿನ ಜಿಲ್ಲೆಗಳು ಸೇರಿದಂತೆ ರಾಜ್ಯ ವಿವಿಧೆಡೆ ಈ ರೀತಿ ಇತರೆ ಶುಲ್ಕದಡಿ ದುಪಟ್ಟು ಹಣ ವಸೂಲಿ ಮಾಡಲಾಗುತ್ತಿದೆ. ಈ ಕುರಿತು ಹಾವೇರಿ ಜಿಲ್ಲೆಯ ಹೊಸರಿತ್ತಿಯ ವಿಭಾಗಾಧಿಕಾರಿ ಸತೀಶ್ ಅವರನ್ನು ಸಂಪರ್ಕಿಸಿತಾದರೂ ಅವರು ಕರೆ ಸಿಗಲಿಲ್ಲ.
ಇನ್ನೂ ದುಪ್ಪಟ್ಟು ಹಣ ವಸೂಲಿ ಬಗ್ಗೆ ಪ್ರತಿಕ್ರಿಯಿಸಿರುವ ಹೆಸ್ಕಾಂ ಮನೆ ಮಾಲೀಕರು, ಯಾರೇ ಬಂದರೂ ನಾವು ವಿದ್ಯುತ್ ಬಿಲ್ ಕಟ್ಟುವುದಿಲ್ಲ. ಒಂದು ಕಡೆ ಉಚಿತ ಅನ್ನುತ್ತೀರಿ, ಇದೀಗ ಡಬಲ್ ಮೊತ್ತ ವಿಧಿಸುತ್ತಿದ್ದೀರಿ ಎಂದು ಕಾಂಗ್ರೆಸ್ ಸರ್ಕಾರ ಮೇಲೆ ಕಂಡವಾಗಿದ್ದಾರೆ. ಸರ್ಕಾರ ನಡೆಯಿಂದ ವಿದ್ಯುತ್ ಬಿಲ್ ಸಂಗ್ರಹಿಸುವ, ಬಿಲ್ ನೀಡುವ ಸಿಬ್ಬಂದಿ ಜೊತೆಗೆ ಸಾರ್ವಜನಿಕರಿಗೂ ಕಿರಿಕಿರಿ ಉಂಟಾಗುತ್ತಿದೆ.
ಅಧಿಕ ದರ ಹೇರಿಕೆ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ
ಸರ್ಕಾರ ಅಧಿಕಾರಕ್ಕೆ ಬರುವ ಬರದಲ್ಲಿ ಜೂನ್ ನಿಂದಲೇ ಉಚಿತ ವಿದ್ಯುತ್ ಎಂದು ಹೇಳಿತ್ತು. ಆದರೆ ಅದು ಜಾರಿಗೆ ಬರಲು ಸುಮಾರು ಎರಡು ತಿಂಗಳು ಬೇಕು. ಕಾಂಗ್ರೆಸ್ ಚುನಾವಣೆಯಲ್ಲಿ ಗೆಲ್ಲುತ್ತಿದ್ದಂತೆ ಕೈ ನಾಯಕರ ಭಾಷಣ ಕೇಳಿದ್ದ ರಾಜ್ಯದ ಜನರು ನಾವು ವಿದ್ಯುತ್ ಬಿಲ್ ಕಟ್ಟುವುದಿಲ್ಲ ಎಂದು ತಿರ್ಮಾನಿಸಿಬಿಟ್ಟರು.
ಇದರಿಂದ ಲೈನ್ ಮನ್ ಮತ್ತು ಗ್ರಾಮಸ್ಥರ ಮಧ್ಯೆ ವಾಕ್ಸಮರ, ನಿತ್ಯ ಜಗಳ, ಜಟಾಪಟಿ ನಡೆಯುತ್ತಲೇ ಇವೆ. ಕೆಲವೆಡೆ ವಿದ್ಯುತ್ ಬಿಲ್ ಕೇಳಲು ಬಂದ ಸಿಬ್ಬಂದಿ ಮೇಲೆ ಹಲ್ಲೆ ಸಹ ಮಾಡಲಾಗಿದೆ. ರಾಜ್ಯ ಸರ್ಕಾರ ಅಧಿಕ ದರ ಹೇರಿಕೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಉಚಿತ ವಿದ್ಯುತ್ ಪೂರೈಕೆವರೆಗೂ ಜನರು ಬಿಲ್ ಕಟ್ಟಲು ಮುಂದಾಗುವುದಿಲ್ಲ. ಇಲ್ಲವೇ ಸಿಬ್ಬಂದಿ ಜೊತೆಗಿನ ವಾಗ್ದಾದ, ಜಗಳಗಳು ಮುಂದುವರಿಯುವ ಸಾಧ್ಯತೆ ಇದೆ.












Click it and Unblock the Notifications