Hamare Baarah Ban: 'ಕೇವಲ ಒಂದು ಚಲನಚಿತ್ರದಿಂದ ಕಾಂಗ್ರೆಸ್ ಯಾಕಿಷ್ಟು ಗಲಿಬಿಲಿಗೊಂಡಿದೆ?' ಎಂದು ಚಾಟಿ ಬೀಸಿದ ಆರ್ ಅಶೋಕ್!
ಬೆಂಗಳೂರು, ಜೂನ್. 07: ಕರ್ನಾಟಕ ಸರ್ಕಾರ ಅಣ್ಣು ಕಪೂರ್ ಅಭಿನಯದ ಹಮಾರೆ ಬಾರಾಹ್ ವಿವಾದಾತ್ಮಕ ಚಿತ್ರದ ಬಿಡುಗಡೆಯನ್ನು ನಿಷೇಧಿಸಿದೆ. ರಾಜ್ಯದ ವಿವಿಧ ಜಿಲ್ಲೆ, ತಾಲ್ಲೂಕುಗಳ ಮುಸ್ಲಿಂ ಸಂಘಗಳಿಂದ ಬಂದ ಮನವಿ ಹಿನ್ನೆಲೆ ರಾಜ್ಯದಲ್ಲಿ ರಾಜ್ಯದಲ್ಲಿ ಎರಡು ವಾರಗಳವರೆಗೆ ಅಥವಾ ಮುಂದಿನ ಸೂಚನೆ ಬರುವವರೆಗೆ ಚಲನಚಿತ್ರವನ್ನು ನಿಷೇಧಿಸಲಾಗಿದೆ. ಇದಕ್ಕೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ಕಿಡಿಕಾರಿದ್ದಾರೆ.
"ಹಮಾರೆ ಬಾರಾಹ್ ಚಲನಚಿತ್ರ ಪ್ರದರ್ಶನಕ್ಕೆ ಕರ್ನಾಟಕದಲ್ಲಿ ನಿಷೇಧ ಹೇರಿರುವ ಸಿಎಂ ಸಿದ್ದರಾಮಯ್ಯ ಹಾಗು ಕರ್ನಾಟಕ ಕಾಂಗ್ರೆಸ್ ಸರ್ಕಾರದ ಈ ಧೋರಣೆಯ ಅತ್ಯಂತ ಖಂಡನೀಯ. ದೇಶದಲ್ಲಿ ಅಸಹಿಷ್ಣುತೆ ಎಲ್ಲೆ ಮೀರಿದೆ ಎಂದು ಹತ್ತು ವರ್ಷಗಳಿಂದ ಬೊಬ್ಬಿರಿಯುತ್ತಿದ್ದವರೇ ಇಂದು ಸ್ವತಃ ಎಲ್ಲದರ ಬಗೆಗೂ ಅಸಹಿಷ್ಣುವಾಗಿದ್ದಾರೆ. ಕೇವಲ ಒಂದು ಚಲನಚಿತ್ರದ ಬಗ್ಗೆ ಕಾಂಗ್ರೆಸ್ ಸರ್ಕಾರ ಯಾಕಿಷ್ಟು ಗಲಿಬಿಲಿಗೊಂಡಿದೆ..?" ಎಂದು ಪ್ರಶ್ನಿಸಿದ್ದಾರೆ.

"ಸಂವಿಧಾನದ ಏಕೈಕ ರಕ್ಷಕನಂತೆ ಸದಾಕಾಲ ಪೋಸು ಕೊಡುವ ಸಿದ್ದರಾಮಯ್ಯ ನವರಿಗೆ ತಮ್ಮ ಹಾಗು ತಮ್ಮ ಪಕ್ಷದ ವೋಟ್ ಬ್ಯಾಂಕ್ ರಾಜಕಾರಣದ ನಿಜಬಣ್ಣ ಬಯಲಾಗುವ ಸಂದರ್ಭ ಬಂದರೆ ಸಂವಿಧಾನವೂ ಬೇಡ, ಹಕ್ಕುಗಳೂ ಲೆಕ್ಕಕ್ಕಿಲ್ಲ. ಕಾಂಗ್ರೆಸ್ ಪಕ್ಷ ವಾಕ್ ಸ್ವಾತಂತ್ರ್ಯ, ಫ್ರೀಡಂ ಆಫ್ ಎಕ್ಸ್‌ಪ್ರೆಶನ್ ಬಗ್ಗೆ ಬೊಬ್ಬೆ ಹಾಕುತ್ತದೆ. ಇವೆಲ್ಲವೂ ಅಪಾಯದಲ್ಲಿದೆ ಎಂದು ಕಾಂಗ್ರೆಸ್ಸಿಗರು ಭಾಷಣದಲ್ಲಿ ಹೇಳುತ್ತಾರೆ. ಆದರೆ, ಆಚರಣೆ ವಿಚಾರಕ್ಕೆ ಬಂದಾಗ ಅದರ ತದ್ವಿರುದ್ಧವಾಗಿ ನಡೆದುಕೊಳ್ಳುತ್ತದೆ" ಎಂದು ಕಿಡಿಕಾರಿದ್ದಾರೆ.
"ಕಾಂಗ್ರೆಸ್ ಪಕ್ಷ ಎಂದೂ ಕೂಡ ಈ ದೇಶದ ಸಂವಿಧಾನವನ್ನು ಗೌರವಿಸುವ ಕೆಲಸ ಮಾಡಿಲ್ಲ. ತಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ಸಂವಿಧಾನದ ಆಶಯ, ಸುಪ್ರೀಂ ಕೋರ್ಟಿನ ತೀರ್ಪನ್ನು ಧಿಕ್ಕರಿಸಿ ಈ ದೇಶದಲ್ಲಿ ತುರ್ತು ಪರಿಸ್ಥಿತಿ ತಂದರು. ಮತಬ್ಯಾಂಕ್‍ಗೆ ಧಕ್ಕೆ ಆಗುತ್ತದೆ ಎಂಬಂಥ ಸಂದರ್ಭದಲ್ಲಿ ಇಂಥ ಅನೇಕ ಸಿನಿಮಾ ಪುಸ್ತಕಗಳನ್ನು ನಿಷೇಧಿಸುವ ಕೆಲಸ ಮಾಡಿದರು" ಎಂದು ತುರ್ತು ಪರಿಸ್ಥಿತಿ ನೆನಪಿಸಿಕೊಂಡಿದ್ದಾರೆ.
"ಅದು ಸಲ್ಮಾನ್ ರಶ್ದೀ ಅವರ 'ದಿ ಸೆಟಾನಿಕ್ ವರ್ಸಸ್' ಇರಬಹುದು, ತಸ್ಲಿಮಾ ನಸ್ರೀನ್ ಅವರ ಲಜ್ಜಾ ಇರಬಹುದು, ಬೇರೆಬೇರೆ ಸಂದರ್ಭದಲ್ಲಿ ಜನತಂತ್ರದ ಧ್ವನಿಯನ್ನು ಅಡಗಿಸುವ ಕೆಲಸವನ್ನು ಕಾಲಕಾಲಕ್ಕೆ ಕಾಂಗ್ರೆಸ್ ಮಾಡುತ್ತಲೇ ಬಂದಿದೆ. ಈಗ ಹಮಾರೆ ಬಾರಾಹ್ ಸಿನಿಮಾ ನಿಷೇಧ ಮಾಡಿರುವುದು ಸಹ ಅದಕ್ಕೆ ಮೂಕಸಾಕ್ಷಿಯಾಗಿ ನಿಂತಿದೆ" ಎಂದಿದ್ದಾರೆ.
"ಸಿನಿಮಾಗಳು ನಮ್ಮ ಸಮಾಜದ ಅತ್ಯಂತ ಪ್ರಮುಖ ಮತ್ತು ಪ್ರಭಾವಿ ಸಮೂಹ ಮಾಧ್ಯಮ. ಚಲನಚಿತ್ರಗಳಿಗೆ ಸೂಕ್ತವಾದ ಸ್ವಾತಂತ್ರ್ಯ ಕೊಟ್ಟಾಗ ಮಾತ್ರ ಜನತಂತ್ರದ ಮೌಲ್ಯಕ್ಕೆ ಬೆಲೆ ಸಿಗುತ್ತದೆ. ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬೆಲೆ ಸಿಗುತ್ತದೆ. ಇದು ಪ್ರಜಾಪ್ರಭುತ್ವದ ನಿಜ ತತ್ತ್ವಗಳಿಗೆ ಬೆಲೆ ಇರುವ ಕಾಲ, ಸತ್ಯ ಹೊರಬರಲೇ ಬೇಕು. ತಯಾರಾಗಿರಿ" ಎಂದು ಎಚ್ಚರಿಕೆ ನೀಡಿದ್ದಾರೆ.

ಹಮಾರೆ ಬಾರಾಹ್ ನಿಷೇದದ ಬಗ್ಗೆ ಸರ್ಕಾರದ ಆದೇಶದಲ್ಲಿ ಏನಿದೆ?
"ರಾಜ್ಯದ ವಿವಿಧ ಜಿಲ್ಲೆ / ತಾಲ್ಲೂಕುಗಳ ಮುಸ್ಲಿಂ ಸಂಘಗಳಿಂದ ಸ್ವೀಕೃತವಾಗಿರುವ ಮನವಿಗಳಲ್ಲಿ ಜೀ ಸಿನಿಮಾ ವಾಹಿನಿಯು ಇತ್ತೀಚಿಗೆ "ಹಮಾರೆ ಬಾರಾಹ್" ಎಂಬ ಚಲನಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ್ದು ಇದರಲ್ಲಿ ಮುಸ್ಲಿಂ ಧರ್ಮದ ಬಗ್ಗೆ ಪ್ರಚೋದನಾತ್ಮಕ ಮತ್ತು ಅವಹೇಳನಕಾರಿಯಾಗಿ ಚಿತ್ರಿಸಲಾಗಿದೆ. ಆದ್ದರಿಂದ ಇಂತಹ ಚಿತ್ರಗಳಿಗೆ ಅನುಮತಿ ನೀಡಿದರೆ ಧರ್ಮ ಮತ್ತು ಜಾತಿಗಳ ಮಧ್ಯೆ ದ್ವೇಷ ಹುಟ್ಟಿಸುತ್ತದೆ. ದೇಶದಲ್ಲಿ ಒಂದು ಧರ್ಮವನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿ, ಕೋಮು ಸೌಹಾರ್ದತೆಗೆ ಧಕ್ಕೆಯುಂಟು ಮಾಡಿ, ದೇಶದಲ್ಲಿ ಅಶಾಂತಿ ಉಂಟು ಮಾಡುವುದು, ಮುಸ್ಲಿಂ ಧರ್ಮದ ಭಾವನೆಗಳಿಗೆ ಧಕ್ಕೆ ಉಂಟು ಮಾಡುವುದು ಒಂದು ಷಡ್ಯಂತ್ರವಾಗಿದೆ. ಚಲನಚಿತ್ರಗಳು ಸಮಾಜದಲ್ಲಿ ಮಾರ್ಗದರ್ಶನವಾಗಬೇಕು, ಅದನ್ನು ಬಿಟ್ಟು ಧರ್ಮಗಳ ಮಧ್ಯೆ ದ್ವೇಷ ಭಾವನೆ ಹುಟ್ಟಿಸುವುದಲ್ಲ. ಅದರಂತೆ, ಜೂನ್ 07, 2024 ರಂದು ದೇಶಾದ್ಯಂತ ಬಿಡುಗಡೆಯಾಗಲಿರುವ "ಹಮಾರೆ ಬಾರಾಹ್" ಎಂಬ ವಿವಾದಾತ್ಮಕ ಸಿನಿಮಾವನ್ನು ಬಿಡುಗಡೆ ಮಾಡದೇ ಇರಲು ಕೋರಲಾಗಿದೆ" ಎಂದಿದೆ.
"ಈ ಚಲನಚಿತ್ರದ ಟ್ರೈಲರ್ ಅನ್ನು ಪರಿಶೀಲಿಸಲಾಗಿ "ಹಮಾರೆ ಬಾರಾಹ್" ಚಲನಚಿತ್ರದಲ್ಲಿ ಪವಿತ್ರ ಗ್ರಂಥ ಖುರಾನ್ ಶರೀಫರಲ್ಲಿ ಇರುವ ಸೂರೆ ಎ ಬಕರ ದ ಸಾಲಿನಲ್ಲಿನ ಉಪದೇಶಗಳು ಹಾಗೂ ಸಂದೇಶಗಳ ಕುರಿತಂತೆ ನಿರ್ಮಾಪಕ ಹಾಗೂ ನಿರ್ದೇಶಕರು ತಪ್ಪು ಅಪಾರ್ಥ ಸೃಷ್ಟಿಸಿ, ಪ್ರಚೋದನಾತ್ಮಕ ಹಾಗೂ ಅವಹೇಳನಕಾರಿ ಹೇಳಿಕೆ ನೀಡಿ, ಕೆಲವು ಧರ್ಮದ ಜನರುಗಳನ್ನು ಕೆರಳಿಸುವ ಹಾಗೂ ಜನರಲ್ಲಿ ಆಕ್ರೋಶ ಉಂಟು ಮಾಡಿ ದ್ವೇಷ ಭಾವನೆಗಳನ್ನು ಪ್ರಚೋದಿಸುವ ಸನ್ನಿವೇಶಗಳು ಹಾಗೂ ಒಂದು ಸಮಾಜವನ್ನು ಅವಹೇಳನಕಾರಿಯಾಗಿ ಬಿಂಬಿಸುವ ಪ್ರಯತ್ನದಂತೆ ಕಾಣುತ್ತದೆ. ಒಂದು ಸಮಾಜವನ್ನು ಧರ್ಮದ ಆಧಾರದಲ್ಲಿ ವಿಶ್ಲೇಷಣೆ ಮಾಡುವುದು ಸ್ವಾಸ್ಥ್ಯಕ್ಕೆ ಧಕ್ಕೆ ತರುವ ಸಂಭವವಿದೆ" ಎಂದಿದೆ.
"ಹಮಾರೆ ಬಾರಾಹ್" ಚಲನಚಿತ್ರವನ್ನು ಬಿಡುಗಡೆಗೆ ಅನುಮತಿ ಕೊಟ್ಟಲ್ಲಿ ರಾಜ್ಯದಲ್ಲಿ ಶಾಂತಿಗೆ ಭಂಗವುಂಟು ಮಾಡುವ ಹಾಗೂ ಜಾತಿ ಜಾತಿಗಳ ಮಧ್ಯೆ ದ್ವೇಷವುಂಟು ಮಾಡುವ, ಒಂದು ಧರ್ಮದ ಪದ್ಧತಿಗಳನ್ನು ಉದ್ದೇಶಪೂರ್ವಕವಾಗಿ ಅವಹೇಳನ ಮಾಡಿ ಧರ್ಮಗಳ ಮಧ್ಯೆ ದ್ವೇಷದ ಭಾವನೆಗಳನ್ನು ಉತ್ತೇಜಿಸುವ ಅಥವಾ ಸೌಹಾರ್ದತೆ ಹದಗೆಡಲು ಕಾರಣವಾಗುವ ಸಾಧ್ಯತೆಯ ಬಗ್ಗೆ ಹಾಗೂ ಮಹಿಳೆಯರ ಭಾವನೆಗಳಿಗೆ ಧಕ್ಕೆ ಉಂಟು ಮಾಡುವಂತೆ ಬಿಂಬಿತವಾಗಿರುವ ಸನ್ನಿವೇಶಗಳು ಕಂಡುಬಂದಿರುತ್ತವೆ ಎಂದು ಹೇಳಿದೆ.
"ಸಿನಿಮಾ (ರೆಗ್ಯೂಲೇಶನ್) ಆಕ್ಟ್ -1964ರ ಸೆಕ್ಷನ್ -15(2)ರಡಿ ಸಂಬಂಧಪಟ್ಟವರಿಗೆ ನೋಟೀಸನ್ನು ಜಾರಿ ಮಾಡಿ ವಿವರಣೆಯನ್ನು ಪಡೆಯಬೇಕಾಗಿದ್ದು, ಆದರೆ ಸದರಿ ಚಲನಚಿತ್ರದ ನಿರ್ದೇಶಕ ಕಮಲ್ ಚಂದ್ರ ಮತ್ತು ನಿರ್ಮಾಪಕ ಬೀರೇಂದ್ರ ಭಗತ್, ರವಿ ಎಸ್.ಗುಪ್ತ, ಶಿಯೋ ಬಲಕ್ ಸಿಂಗ್, ಸಂಜಯ್ ನಾಗಪಾಲ್ ಹಾಗೂ ಮತ್ತಿತರರುಗಳು ನೆರೆ ರಾಜ್ಯದಲ್ಲಿದ್ದು, ಸದರಿಯವರಿಗೆ ಕರ್ನಾಟಕ ಸಿನಿಮಾ (ರೆಗ್ಯೂಲೇಶನ್) ಆಕ್ಟ್-1964ರ ಸೆಕ್ಷನ್ -15(2) ರಡಿ ನೋಟೀಸು ಜಾರಿ ಮಾಡಿ, ಅವರುಗಳಿಂದ ವಿವರಣೆ ಪಡೆದು ಪರಿಶೀಲಿಸಲು ಸಾಕಷ್ಟು ಕಾಲಾವಕಾಶ ಇಲ್ಲದಿರುವುದರಿಂದ, ಹಾಗೂ "ಹಮಾರೆ ಬಾರಾಹ್" ಚಲನಚಿತ್ರವು ದಿನಾಂಕ: 07.06.2024ರಂದು ಬಿಡುಗಡೆಗೊಳ್ಳಲಿದ್ದು, ಚಲನಚಿತ್ರವು ಬಿಡುಗಡೆಗೊಂಡಲ್ಲಿ ರಾಜ್ಯದಲ್ಲಿ ಕೋಮು ಗಲಭೆಗೆ ಕಾರಣವಾಗುವ ಪರಿಸ್ಥಿತಿ ಉದ್ಭವಿಸಬಹುದೆಂದು ಮನಗಂಡು, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯಸ್ಥೆ (Law and Order) ಕಾಪಾಡುವ ಹಿತದೃಷ್ಟಿಯಿಂದ ಸದರಿ ಚಲನಚಿತ್ರವನ್ನು ನಿಷೇಧಿಸುವ ಬಗ್ಗೆ ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ".
ಕರ್ನಾಟಕ ಸಿನಿಮಾ (ರೆಗ್ಯೂಲೇಶನ್) ಆಕ್ಟ್ - 1964ರ ಸೆಕ್ಷನ್ -15(1) ಮತ್ತು 15(5) ರಡಿಯಲ್ಲಿ "ಹಮಾರ ಬಾರಾಹ್" ಎಂಬ ಟ್ರೈಲರ್ ಹಾಗೂ ಸಿನಿಮಾವನ್ನು ಎರಡು ವಾರಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ರಾಜ್ಯದ ಯಾವುದೇ ಎಲೆಕ್ಟ್ರಾನಿಕ್ ಮಾಧ್ಯಮ/ ಸಾಮಾಜಿಕ ಜಾಲತಾಣ/ ಸಿನಿಮಾ ಮಂದಿರಗಳು/ ಖಾಸಗಿ ಟಿವಿ ಚಾಲನ್ ಗಳು/ ಇತರೆ ಮಾಧ್ಯಮಗಳ ಮೂಲಕ ಪ್ರಸಾರ ಮಾಡುವುದನ್ನು ರಾಜ್ಯದಲ್ಲಿ ನಿಷೇಧಿಸಿ ಆದೇಶಿಸಿದೆ.
-
'ಗ್ಯಾರಂಟಿ ಸಮಿತಿ' ಸಿಬ್ಬಂದಿ ಮಾಸಿಕ ವೇತನ ಸರ್ಕಾರದ ಮುಖ್ಯ ಕಾರ್ಯದರ್ಶಿಗಿಂತಲೂ ಹೆಚ್ಚು! ವರ್ಷಕ್ಕೆ ಕೋಟಿ ಕೋಟಿ.. -
ಸದನದಲ್ಲಿ ಬಜೆಟ್ ಚರ್ಚೆ: ಸಿಎಂ ಸಿದ್ದರಾಮಯ್ಯ ವಿರುದ್ಧ ಆರೋಪ -
"5 ತಿಂಗಳಾದ್ರೂ ಸಿಗದ ದಸರಾ ಲೆಕ್ಕ: ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ'' -
ಬೆಂಗಳೂರಿನಲ್ಲಿ ದೇಶದ ಮೊದಲ ಮನೋರೋಗ ಅಧ್ಯಯನದ ಡಿಜಿಟಲ್ 'ಕಾಮ್-ಬ್ರೈನ್' ಲೋಕಾರ್ಪಣೆ -
ಮಾರ್ಚ್ 26ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Jobs: ರಾಜ್ಯದ ಕಾರಾಗೃಹ ಆಸ್ಪತ್ರೆಗಳಲ್ಲಿ ಖಾಲಿ ಇರುವ ವೈದ್ಯಕೀಯ ಸಿಬ್ಬಂದಿ ಹುದ್ದೆಗಳ ಭರ್ತಿಗೆ ಸರ್ಕಾರದ ಮಹತ್ವದ ಆದೇಶ -
ಮಾರ್ಚ್ 25ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ












Click it and Unblock the Notifications