ಲೋಕಸಮರಕ್ಕೆ ಕಾಂಗ್ರೆಸ್ ವಿರುದ್ದ ಕಮಲ-ದಳಕ್ಕೆ ಕಾವೇರಿಯೇ ಅಸ್ತ್ರ! ಇಲ್ಲಿದೆ ಇನ್ ಸೈಡ್ ಸ್ಟೋರಿ
ಬೆಂಗಳೂರು, ಸೆಪ್ಟೆಂಬರ್ 27: 2024 ರ ಲೋಕಸಭಾ ಚುನಾವಣೆ ರಾಜ್ಯದಲ್ಲಿ ಆಡಳಿತರೂಢ ಕಾಂಗ್ರೆಸ್ ಹಾಗೂ ಮೈತ್ರಿಯಾಗಿರುವ ಬಿಜೆಪಿ-ಜೆಡಿಎಸ್ ಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಈಗಾಗಲೇ 2023 ರ ವಿಧಾನಸಭಾ ಚುನಾವಣೆಯಲ್ಲಿ 135 ಸ್ಥಾನಗಳಲ್ಲಿ ಗೆಲುವು ಸಾಧಿಸಿರುವ ಕಾಂಗ್ರೆಸ್ ಮತ್ತಷ್ಟು ತಂತ್ರಗಾರಿಕೆಯ ಮೂಲಕ ಲೋಕಸಭಾ ಚುನಾವಣೆಗೆ ತಯಾರಿ ನಡೆಸುತ್ತಿದ್ದು, ಕೈ ಗೆ ಠಕ್ಕರ್ ಕೊಡಲು ಕಮಲ-ದಳ ಹೊಸ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದೆ.
ಹೌದು, ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯಲ್ಲಿ ಅತೀ ಹೆಚ್ಚು ಸ್ಥಾನಗಳನ್ನ ಗೆಲ್ಲುವ ನಿಟ್ಟಿನಲ್ಲಿ ಕಾಂಗ್ರೆಸ್ ಹೈಕಮಾಂಡ್ ರಾಜ್ಯ ನಾಯಕರಿಗೆ ಟಾರ್ಗೆಟ್ ನೀಡಿದೆ ಎನ್ನಲಾಗಿದ್ದು, ರಾಜ್ಯ ಕಾಂಗ್ರೆಸ್ ನಾಯಕರು ಕನಿಷ್ಠ 28 ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲೇಬೇಕು ಎಂದು ಹಲವು ತಂತ್ರಗಾರಿಕೆಯನ್ನ ನಡೆಸಿದ್ದು, ಇತ್ತ ಲೋಕಸಮರಕ್ಕಾಗಿಯೇ ಪಕ್ಷವನ್ನ ಎಲ್ಲಾ ಭಾಗದಲ್ಲೂ ಸದೃಢಗೊಳಿಸುವ ನಿಟ್ಟಿನಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಅಸಮಾಧಾನಿತ ನಾಯಕರನ್ನ ಆಪರೇಷನ್ ಹಸ್ತದ ಮೂಲಕ ಕಾಂಗ್ರೆಸ್ ಗೆ ಕರೆತರುತ್ತಿದ್ದು, ಕಮಲ-ದಳ ನಾಯಕರಿಗೆ ಶಾಕ್ ಮೇಲೆ ಶಾಕ್ ನೀಡುತ್ತಿದೆ.

ಇತ್ತ ಕಾಂಗ್ರೆಸ್ ತಂತ್ರಕ್ಕೆ ಪ್ರತಿತಂತ್ರವನ್ನ ರೂಪಿಸುವ ನಿಟ್ಟಿನಲ್ಲಿ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರಗಳ ಹಂಚಿಕೆಯ ಆಧಾರದ ಮೇಲೆ ಲೋಕಸಭಾ ಚುನಾವಣೆಗೆ ಬಿಜೆಪಿ ಹಾಗೂ ಜೆಡಿಎಸ್ ಅಧಿಕೃತವಾಗಿ ಈಗಾಗಲೇ ಮೈತ್ರಿ ಮಾಡಿಕೊಂಡಿದ್ದು, ಆಡಳಿತರೂಢ ಕಾಂಗ್ರೆಸ್ ಗೆ ಠಕ್ಕರ್ ಕೊಡಲು ಹಾಗೂ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಜನರ ಗಮನ ಸೆಳೆಯುವ ನಿಟ್ಟಿನಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಹತ್ತು ಹಲವು ಅಸ್ತ್ರ ಪ್ರಯೋಜಕ್ಕೆ ಮುಂದಾಗಿದೆ.
ಈಗಾಗಲೇ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಿ ನಾಲ್ಕು ತಿಂಗಳು ಪೂರೈಸಿದ್ದು, ಆರಂಭದಿಂದಲೂ ಕಾಂಗ್ರೆಸ್ ಸರ್ಕಾರ ಸಾಕಷ್ಟು ವರ್ಗಾವಣೆ ಕುರಿತಾದ ಆರೋಪ, ಭ್ರಷ್ಟಾಚಾರ ಹಾಗೂ 55 ಕಮಿಷನ್ ಕುರಿತಾ ಆರೋಪಗಳನ್ನ ಎದುರಿಸುತ್ತಿದೆ. ಅಲ್ಲದೇ ಸರ್ಕಾರದ ವೈಪಲ್ಯಗಳ ಕುರಿತು ಈಗಾಗಲೇ ರಾಜ್ಯ ಬಿಜೆಪಿ ಕಿರು ಹೊತ್ತಿಗೆಯನ್ನ ಬಿಡುಗಡೆ ಮಾಡುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡಿತ್ತು. ಇದೀಗ ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಕಮಲ-ದಳ ನಾಯಕರು ಚುನಾವಣಾ ಪ್ರಚಾರಕ್ಕಾಗಿ ಹಲವು ತಂತ್ರಗಾರಿಕೆಯನ್ನ ರೆಡಿ ಮಾಡಿದ್ದಾರೆ ಎನ್ನಲಾಗಿದೆ.

ಇನ್ನೂ ರಾಜ್ಯದಲ್ಲಿ ಈ ಬಾರಿ ವಾಡಿಕೆಯಂತೆ ಮಳೆಯಾಗದೇ ಹಲವು ತಾಲೂಕುಗಳನ್ನ ಬರಪೀಡಿತ ತಾಲೂಕುಗಳಾಗಿ ಘೋಷಿಸಲಾಗಿದ್ದು, ರಾಜ್ಯದ ಹಲವು ಜಲಾಶಯಗಳು ಖಾಲಿಯಾಗಿದ್ದು, ರೈತರು ಕಾವೇರಿ ನೀರಿಗಾಗಿ ಪ್ರತಿಭಟನೆಯನ್ನ ನಡೆಸುತ್ತಿದ್ದಾರೆ. ಅಲ್ಲದೇ ಪದೇ ಪದೇ ಕಾವೇರಿ ನೀರಿನ ವಿಚಾರವಾಗಿ ಸುಪ್ರೀಂ ಕೋರ್ಟ್ ನಲ್ಲೂ ಕರ್ನಾಟಕಕ್ಕೆ ವಿರುದ್ದವಾಗಿ ತೀರ್ಪು ಬರುತ್ತಿದ್ದು, ಕರುನಾಡಿನ ಜನತೆ ಆಕ್ರೋಶಕ್ಕೂ ಕಾರಣವಾಗಿದೆ.
ಇತ್ತ ಲೋಕಸಭಾ ಚುನಾವಣೆಗೆ ಎನ್ ಡಿ ಎ ವಿರುದ್ದವಾಗಿ ಹಲವು ವಿಪಕ್ಷಗಳು ಸೇರಿ ಈಗಾಗಲೇ ಇಂಡಿಯಾ ಮೈತ್ರಿ ಕೂಟ ರಚನೆ ಮಾಡಿಕೊಂಡಿದ್ದು, ಈ ಮೈತ್ರಿ ಕೂಟದಲ್ಲಿ ಕಾಂಗ್ರೆಸ್ ಗೆ ತಮಿಳುನಾಡಿನ ಸರ್ಕಾರವೂ ಸಾಥ್ ಕೊಟ್ಟಿದ್ದು, ತಮ್ಮ ಇಂಡಿಯಾ ಮೈತ್ರಿಕೂಟದಲ್ಲಿ ತಮಿಳುನಾಡು ಸರ್ಕಾರವನ್ನ ಮೆಚ್ಚಿಸುವ ಸಲುವಾಗಿ ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ರಾಜ್ಯದಿಂದ ಕಾವೇರಿ ನೀರು ಹರಿಸುತ್ತಿದೆ ಎಂದು ರಾಜ್ಯ ಬಿಜೆಪಿ ಹಾಗೂ ಜೆಡಿಎಸ್ ಆರೋಪಿಸಿದೆ.
ಇನ್ನೂ ಕಾವೇರಿ ನೀರನ್ನ ತಮಿಳುನಾಡಿಗೆ ಹೋಗದಂತೆ ನಿಲ್ಲಿಸಿ ಎಂದು ಈಗಾಗಲೇ ಮೈಸೂರು, ಮಂಡ್ಯ , ಹಾಗೂ ಬೆಂಗಳೂರು ಭಾಗದಲ್ಲಿ ಸಾಕಷ್ಟು ಪ್ರತಿಭಟನೆಗಳಾಗುತ್ತಿದ್ದು, ಲೋಕಸಭಾ ಚುನಾವಣೆಯಲ್ಲಿ ಕಾವೇರಿ ವಿವಾದವನ್ನ ಅಸ್ತ್ರ ಮಾಡಿಕೊಳ್ಳುವ ನಿಟ್ಟನಲ್ಲಿ ಕಮಲ-ದಳ ಪ್ಲಾನ್ ನಡೆಸಿದೆ ಎಂದು ಹೇಳಲಾಗಿದೆ. ಈಗಾಗಲೇ ಮಂಡ್ಯ ಹಾಗೂ ಮೈಸೂರು ಭಾಗದಲ್ಲಿನ ರೈತರು ಈಗಾಗಲೇ ಕಾಂಗ್ರೆಸ್ ಸರ್ಕಾರದ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದು, ಸರ್ಕಾರದ ಹತ್ತು ಹಲವು ವೈಫಲ್ಯಗಳ ಜೊತೆಗೆ ಕಾವೇರಿ ವಿವಾದವನ್ನು ಅಸ್ತ್ರವನ್ನಾಗಿ ಮಾಡಿಕೊಳ್ಳಲು ಬಿಜೆಪಿ ಹಾಗೂ ಜೆಡಿಎಸ್ ಸಿದ್ದತೆ ನಡೆಸಿದೆ ಎಂದು ಹೇಳಲಾಗಿದೆ.












Click it and Unblock the Notifications