ಸಿದ್ದರಾಮಯ್ಯ ಸಂಪುಟ ಸೇರಲಿದ್ದಾರೆ ನಾಲ್ವರು
ಬೆಂಗಳೂರು, ಆ.26 : ಉಪ ಚುನಾವಣೆ ಗೆಲುವಿನ ಬಳಿಕ ಮಂಗಳವಾರ ಕರ್ನಾಟಕ ಕಾಂಗ್ರೆಸ್ ಸಮನ್ವಯ ಸಮತಿ ಸಭೆ ನಡೆಯಿತು. ದಿಗ್ವಿಜಯ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಲವಾರು ವಿಚಾರಗಳ ಕುರಿತು ಚರ್ಚೆ ನಡೆಸಲಾಗಿದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಸಚಿವ ಸಂಪುಟ ವಿಸ್ತರಣೆ ಮಾಡಲು ಸಭೆಯಲ್ಲಿ ನಿರ್ಧರಿಸಲಾಗಿದೆ.
ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅಧ್ಯಕ್ಷತೆಯಲ್ಲಿ ಸಮನ್ವಯ ಮಿತಿ ಸಭೆ ನಡೆಯಿತು. ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಇಂಧನ ಸಚಿವ ಡಿ.ಕೆ.ಶಿವಕುಮಾರ್, ಗೃಹ ಸಚಿವ ಕೆ.ಜೆ.ಜಾರ್ಜ್ ಮುಂತಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಸಭೆಗೂ ಮುನ್ನ ಕುಮಾರಕೃಪಾ ಅತಿಥಿ ಗೃಹದಲ್ಲಿ ದಿಗ್ವಿಜಯ್ ಸಿಂಗ್ ಅವರನ್ನು ವೀರಣ್ಣ ಮತ್ತಿಕಟ್ಟೆ, ಕೆ.ಬಿ. ಕೋಳಿವಾಡ, ಮಾಲೀಕಯ್ಯ ಗುತ್ತೇದಾರ್, ಮೋಟಮ್ಮ, ಎಚ್.ವೈ.ಮೇಟಿ, ಎ. ಮಂಜು, ನರೇಂದ್ರ ಸ್ವಾಮಿ, ಕೆ.ಎನ್. ರಾಜಣ್ಣ, ಶಿವಶಂಕರ ರೆಡ್ಡಿ, ಮುಂತಾದ ಶಾಸಕರು ಭೇಟಿ ಮಾಡಿ ಸಚಿವ ಸ್ಥಾನದ ಬೇಡಿಕೆ ಮುಂದಿಟ್ಟರು. [ಉಪ ಚುನಾವಣೆ ಫಲಿತಾಂಶ]
ಸಭೆಯಲ್ಲಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ರಾಜ್ಯ ಸರ್ಕಾರದ ಬಗ್ಗೆ ನೀಡಿರುವ ಹೇಳಿಕೆ ಬಗ್ಗೆ ಚರ್ಚೆ ನಡೆಯಿತು. ದಿಗ್ವಿಜಯ್ ಸಿಂಗ್ ಅವರು ಪಕ್ಷದ ಹಿರಿಯ ನಾಯಕರೊಬ್ಬರು ಇಂತಹ ಹೇಳಿಕೆ ನೀಡುವುದು ಸರಿಯಲ್ಲ ಎಂದು ಮುಖ್ಯಮಂತ್ರಿಗಳ ಸಮ್ಮುಖದಲ್ಲಿಯೇ ಅಸಮಾಧಾನ ವ್ಯಕ್ತಪಡಿಸಿದರು.
ಸಭೆಯ ನಂತರ ಪತ್ರಿಕಾಗೋಷ್ಠಿ ನಡೆಸಿದ ದಿಗ್ವಿಜಯ್ ಸಿಂಗ್ ಅವರು, ರಾಜ್ಯದಲ್ಲಿ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಿದ ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು. ದೇಶದಲ್ಲಿ ನರೇಂದ್ರ ಮೋದಿ ಅವರ ಅಲೆ ಇದೆ ಎಂದು ಹೇಳುವುದಾದದರೆ, ರಾಜ್ಯದಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಗಳಿಸಬೇಕಿತ್ತಲ್ಲವೇ? ಎಂದು ಸಿಂಗ್ ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷ ಶೀಘ್ರವೇ ಸದಸ್ಯತ್ವ ಅಭಿಯಾನ ಆರಂಭಿಸಲಿದ್ದು, ಡಿಸೆಂಬರ್ 31ರ ತನಕ ಇದು ನಡೆಯಲಿದೆ ಎಂದು ಸಿಂಗ್ ಮಾಹಿತಿ ನೀಡಿದರು. ಬಿಬಿಎಂಪಿ ಚುನಾವಣೆಗಳು ಏಪ್ರಿಲ್ ತಿಂಗಳಿನಲ್ಲಿ ಎದುರಾಗುವುದರಿಂದ ಪಕ್ಷದ ಪ್ರಣಾಳಿಕೆ ರಚಿಸಲು ಸಮಿತಿಯನ್ನು ರಚಿಸಲು ಮುಖ್ಯಮಂತ್ರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.
ಸಂಪುಟ ವಿಸ್ತರಣೆ : ಸಚಿವ ಸಂಪುಟ ವಿಸ್ತರಣೆ ಮತ್ತು ಉಪ ಮುಖ್ಯಮಂತ್ರಿ ಹುದ್ದೆ ಬಗ್ಗೆ ಸಭೆಯಲ್ಲಿ ಯಾವುದೇ ಚರ್ಚೆ ನಡೆಸಿಲ್ಲ ಎಂದು ಹೇಳಿದ ಸಿಂಗ್, ಸಂಪುಟ ವಿಸ್ತರಣೆ ಮಾಡುವುದು ಮುಖ್ಯಮಂತ್ರಿಗಳಿಗೆ ಬಿಟ್ಟ ವಿಷಯ ಎಂದು ಹೇಳಿದರು. ಸಂಪುಟದಲ್ಲಿ ಖಾಲಿ ಇರುವ 5 ಸ್ಥಾನಗಳ ಪೈಕಿ ನಾಲ್ಕು ಸ್ಥಾನಗಳನ್ನು ಭರ್ತಿ ಮಾಡುವಂತೆ ಸಿದ್ದರಾಮಯ್ಯ ಅವರಿಗೆ ಸಿಂಗ್ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.












Click it and Unblock the Notifications