ಸ್ಪೀಕರ್, ಸಭಾಪತಿಗಳನ್ನು ಎಐಸಿಸಿ ಆಯ್ಕೆಗೆ ಬಿಜೆಪಿ ಟೀಕೆ: ಬಿ ಕೆ ಹರಿಪ್ರಸಾದ್ ವಾಗ್ದಾಳಿ
ಬೆಂಗಳೂರು: ಸ್ಪೀಕರ್ ಹಾಗೂ ಸಭಾಪತಿಗಳನ್ನು ಎಐಸಿಸಿಯವರು ಆಯ್ಕೆ ಮಾಡಿರುವ ಬಗ್ಗೆ ಬಿಜೆಪಿಯವರು ಟೀಕೆ ಮಾಡಿದ್ದಾರೆ ಕೆಪಿಸಿಸಿ ಅಧ್ಯಕ್ಷರಾದ ಬಿ ಕೆ ಹರಿಪ್ರಸಾದ್ ಅವರು ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿಯವರು ಸಂವಿಧಾನ ಪಠಣೆ ಮಾಡುತ್ತಾರೆ ಎಂದರೆ ಅದೇ ದೊಡ್ಡ ಅದ್ಭುತ. ಸಂವಿಧಾನ ಒಪ್ಪದ ಜನ, ಈಗ ಸಂವಿಧಾನದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಹೇಳಿದರು.
ಈ ಕುರಿತು ಮಾಧ್ಯಮಗಳ ಜೊತೆಗೆ ಬಿ ಕೆ ಹರಿಪ್ರಸಾದ್ ಅವರು ಮಾತನಾಡಿ, ಸಂವಿಧಾನದ 178 ವಿಧಿ ಪ್ರಕಾರ ವಿಧಾನಸಭೆಯ ಸಭಾಧ್ಯಕ್ಷರು ಹಾಗೂ ಉಪಸಭಾಧ್ಯಕ್ಷರನ್ನು ವಿಧಾನಸಭೆ ಆಯ್ಕೆ ಮಾಡುತ್ತದೆ. 192ನೇ ವಿಧಿ ಪ್ರಕಾರ ಸಭಾಪತಿ ಹಾಗೂ ಉಪಸಭಾಪತಿಗಳನ್ನು ವಿಧಾನ ಪರಿಷತ್ ಆಯ್ಕೆ ಮಾಡಲಿದೆ. ಈ ಬಗ್ಗೆ ಕನಿಷ್ಠ ಜ್ಞಾನ ಇಲ್ಲದ ಬಿಜೆಪಿ ಮಾತನಾಡುತ್ತಿದ್ದಾರೆ. ನಾವು ಅವರನ್ನು ಸ್ಫೀಕರ್ ಸ್ಥಾನದಲ್ಲಿ ಕೂರಿಸಿಲ್ಲ. ನಮ್ಮ ಪಕ್ಷದ ವತಿಯಿಂದ ಆ ಸ್ಥಾನಗಳಿಗೆ ಅಭ್ಯರ್ಥಿ ಎಂದು ಹೇಳಿದ್ದೇವೆ. ಚುನಾವಣೆಯಾದರೆ ಇವರು ನಮ್ಮ ಅಭ್ಯರ್ಥಿ ಎಂದು ಹೇಳಿದ್ದಾರೆ. ಬಿಜೆಪಿಯವರು ಕಾಗೇರಿ, ಹೊರಟ್ಟಿ ಅವರನ್ನು ಹೇಗೆ ಮಾಡಿದರು? ಎಂದು ಪ್ರಶ್ನಿಸಿದರು.

ಮಂತ್ರಿಗಳ ನೇಮಕ ಅಧಿಕಾರವೂ ನಮಗೆ ಇಲ್ಲ. ರಾಜ್ಯಪಾಲರಿಗೆ ಇದೆ. ಅದೇ ರೀತಿ ನಾವು ಸದನದಲ್ಲಿ ಇವರ ಹೆಸರುಗಳನ್ನು ಪ್ರಸ್ತಾಪಿಸುತ್ತೇವೆ. ನಂತರ ಚುನಾವಣೆ ನಡೆದು ಆಯ್ಕೆ ಮಾಡಲಾಗುವುದು. 2026ರಲ್ಲಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸಿಎಂ ಸುವೆಂದು ಅಧಿಕಾರಿ, ತಾವು ಸಿಎಂ ಆಗುವ ಮೊದಲೇ ರಧೀಂದ್ರ ಬೋಸ್ ಅವರನ್ನು ಸ್ಪೀಕರ್ ಅವರನ್ನು ಘೋಷಣೆ ಮಾಡಿದ್ದರು. ಆಗ ಅಲ್ಲಿ ನಾಗ್ಪುರ ಸಂವಿಧಾನವಿತ್ತೇ? ಬಿಜೆಪಿಯವರು ನಮಗೆ ಸಂವಿಧಾನದ ಪಾಠ ಹೇಳುವ ಅಗತ್ಯವಿಲ್ಲ ಎಂದು ಹರಿಹಾಯ್ದರು.
ಬಸವರಾಜ್ ಹೊರಟ್ಟಿ ಅವರ ಹೇಳಿಕೆ ಬಗ್ಗೆ ಮಾತನಾಡಿ, ನಾವು ಅವರನ್ನು ಕೆಳಗಿಳಿಯಿರಿ ಎಂದು ಹೇಳಿಲ್ಲ. ಸದನ ಸಭೆ ಆಯ್ಕೆ ಮಾಡುತ್ತದೆ. ನಾವು ನಮ್ಮ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದೇವೆ. ಇವರನ್ನು ಆಯ್ಕೆ ಮಾಡುವುದು ಸದನ. ನಮ್ಮನ್ನು ಇಷ್ಟು ಪ್ರಶ್ನೆ ಮಾಡುವ ಮತಗಳ್ಳರು, ಹುಂಡಿ ಕಳ್ಳರು. ಗಾಯತ್ರಿ ಶಾಂತೇಗೌಡರ ಮತ ಕದ್ದು ಮಾನ ಮರ್ಯಾದೆ ಇಲ್ಲದೇ ನಾಲ್ಕು ವರ್ಷ ಆ ಸ್ಥಾನದಲ್ಲಿ ಕೂತು, ಕಾನೂನುಬಾಹಿರವಾಗಿ ಸರ್ಕಾರದ ಸೌಲಭ್ಯ, ಭತ್ಯೆಗಳನ್ನು ಪಡೆದಿದ್ದಾರೆ. ಸುಪ್ರೀಂ ಕೋರ್ಟ್ ಅವರ ಆಯ್ಕೆಯನ್ನೇ ಅಸಿಂಧು ಎಂದು ಹೇಳಿದ ಮೇಲೆ ಇವರು ರಾಜಿನಾಮೆ ನೀಡುವುದೇನಿದೆ? ಈ ದೇಶದಲ್ಲಿರುವವರನ್ನು ಅಂಧಭಕ್ತರು ಎಂದು ಭಾವಿಸಿದ್ದಾರಾ" ಎಂದು ಹರಿಹಾಯ್ದರು.
ಟಿಬಿ ಜಯಚಂದ್ರ ಅವರು ಹಂಗಾಮಿ ಸ್ಪೀಕರ್ ಆಗಿದ್ದು, ನನಗೆ ಉಸಿರುಗಟ್ಟಿಸುವಂತಾಗಿದೆ ನನಗೆ ಬೇಡ ಎಂದು ಹೇಳಿದ್ದಾರೆ. ಅವರ ಜೊತೆ ಮಾತನಾಡುತ್ತೀರಾ ಎಂಬ ಬಗ್ಗೆ ಮಾತನಾಡಿ, ನಾನು ಎಲ್ಲರ ಬಳಿಯೂ ಮಾತನಾಡುತ್ತೇನೆ. ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ಕಾರ್ಯಕರ್ತರಿಂದ ನಾಯಕರವರೆಗೆ ಎಲ್ಲರೊಂದಿಗೆ ಮಾತನಾಡುತ್ತಿರುತ್ತೇನೆ. ನನ್ನನ್ನು ಅದ್ಯಕ್ಷರನ್ನಾಗಿ ಮಾಡಿರುವುದು, ಅವರನ್ನು ಶಾಸಕರನ್ನಾಗಿ ಮಾಡಿರುವುದು ಕಾಂಗ್ರೆಸ್ ಪಕ್ಷ. ಸಮಸ್ಯೆ ಇದ್ದರೆ ಅದನ್ನು ಬಗೆಹರಿಸುವುದು ಕಾಂಗ್ರೆಸ್ ಪಕ್ಷವೇ ಎಂದು ತಿಳಿಸಿದರು.
ನಿಮ್ಮ ಬೆಂಬಲಿಗರಿಗೆ ನೀವು ಸಚಿವರಾಗುತ್ತೀರಿ ಎಂಬ ವಿಶ್ವಾಸವಿತ್ತು ಎಂಬ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ಇದು ದೊಡ್ಡ ಷಡ್ಯಂತ್ರ. ಎಲ್ಲಾ ಮಾಧ್ಯಮಗಳಲ್ಲೂ ಈ ಸುದ್ದಿ ಹರಿದಾಡಿತ್ತು. ಅದು ಆಗುವುದಿಲ್ಲ ಅಂತಾ ಗೊತತ್ತು, ಆದರೂ ಅದನ್ನು ಹೇಳಿ, ಈಗ ಮಂತ್ರಿ ಆಗಿಲ್ಲ ಎಂದು ಪ್ರಶ್ನೆ ಕೇಳುತ್ತೀದ್ದೀರಿ. ಈ ಷಡ್ಯಂತ್ರ ಫಲಿಸುವುದಿಲ್ಲ ಎಂದು ಮೊದಲೂ ಹೇಳಿದ್ದೆ, ಈಗಲೂ ಹೇಳುತ್ತಿರುವೆ. ನಾನು ಮಂತ್ರಿಯಾಗುವುದಿದ್ದರೆ 50 ವರ್ಷ ಕಾಯುವ ಅಗತ್ಯವಿರಲಿಲ್ಲ. ಈ ಸಂದರ್ಭದಲ್ಲಿ ಮಂತ್ರಿ ಆಗುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.


Click it and Unblock the Notifications
