JP Nadda: ಮೋದಿ ಆಶೀರ್ವಾದ ಬೇಕೆಂದರೆ ಬಿಜೆಪಿಗೆ ಮತ ಹಾಕಿ: ಕನ್ನಡಿಗರಿಗೆ ನಡ್ಡಾ ಬೆದರಿಕೆ- ಕಾಂಗ್ರೆಸ್ ಹೇಳಿದ್ದೇನು?
ಬೆಂಗಳೂರು, ಏಪ್ರಿಲ್ 20: ಪ್ರಧಾನಿ ಅವರ ಆಶೀರ್ವಾದ ಬೇಕೆಂದರೆ ಬೇಕೆಂದರೆ ಬಿಜೆಪಿಗೆ ಮತ ಹಾಕಿ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಈಗ ರಾಜ್ಯ ರಾಜಕಾರಣದಲ್ಲಿ ಕಲ್ಲೋಲವನ್ನೇ ಸೃಷ್ಟಿಸಿದೆ. ಈ ಕುರಿತು ಕಾಂಗ್ರೆಸ್ ನಾಯಕರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, 'ಪ್ರಜಾಪ್ರಭುತ್ವದಲ್ಲಿ ಜನರೇ ಜನಾರ್ಧನರು, ಆಶೀರ್ವಾದ ನೀಡಲು ನರೇಂದ್ರ ಮೋದಿ ಅವರು ದೇವರಲ್ಲ, ಜನರ ಸೇವೆ ಮಾಡಲು ಜನರಿಂದ ಆಯ್ಕೆಯಾಗಿರುವ ಪ್ರತಿನಿಧಿ ಎನ್ನುವುದು ನೆನಪಿರಲಿ ಜೆಪಿ ನಡ್ಡಾ ಅವರೇ' ಎಂದು ಹೇಳಿದ್ದಾರೆ.

ಕರ್ನಾಟಕದ ಜನತೆ ನರೇಂದ್ರ ಮೋದಿ ಅವರ ಆಶೀರ್ವಾದದಿಂದ ವಂಚಿತರಾಗಬಾರದು ಎನ್ನುವ ನಿಮ್ಮ ಹೇಳಿಕೆ ಬೆದರಿಕೆ ಎಂದಾದರೆ ಅದಕ್ಕೆ ನನ್ನ ಧಿಕ್ಕಾರ ಇದೆ. ಇದು ನಿಮ್ಮ ಅಜ್ಞಾನ ಎಂದಾದರೆ ನಿಮಗೆ ದೇವರು ಸದ್ಬುದ್ಧಿಯ ಆಶೀರ್ವಾದವನ್ನು ಮಾಡಲಿ ಎಂದು ಹಾರೈಸುತ್ತೇನೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
'ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳು ಸಂವಿಧಾನದತ್ತವಾದ ಸಮಾನ ಸ್ಥಾನಮಾನ, ಗೌರವ ಮತ್ತು ಹಕ್ಕುಗಳನ್ನು ಹೊಂದಿರುತ್ತವೆ ಎಂಬುದು ನೆನಪಿರಲಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿಮ್ಮ ಸರ್ವಾಧಿಕಾರಿ ಧೋರಣೆಗೆ ಅವಕಾಶ ಇಲ್ಲ ಜೆಪಿ ನಡ್ಡಾ ಅವರೇ' ಎಂದು ಮಾಜಿ ಸಿಎಂ ಟ್ವೀಟ್ ಮಾಡಿದ್ದಾರೆ.
ನಡ್ಡಾರಿಂದ ಕನ್ನಡಿಗರಿಗೆ ಬೆದರಿಕೆ ಎಂದ ಕಾಂಗ್ರೆಸ್
' ಜೆಪಿ ನಡ್ಡಾ ಅವರೇ, ನಿಮ್ಮದೇ ತವರು ರಾಜ್ಯವಾದ ಹಿಮಾಚಲ ಪ್ರದೇಶದ ಜನರೇ ಬಿಜೆಪಿಗೆ ಆಶೀರ್ವದಿಸಿಲ್ಲ ಏಕೆ ಅಲ್ಲಿನ ಜನರಿಗೆ ಮೋದಿ ಮೇಲೆ ಸಿಟ್ಟಿತ್ತೋ? ನಿಮ್ಮ ಮೇಲೆ ಸಿಟ್ಟಿತ್ತೋ? ನಿಮ್ಮ ತವರು ರಾಜ್ಯದವರೇ ಮೋದಿ ಆಶೀರ್ವಾದ ಬೇಡ ಎಂದಿರುವಾಗ ಕರ್ನಾಟಕಕ್ಕೆ ಬಂದು ಬೆದರಿಕೆ ಹಾಕುವ ನೈತಿಕತೆ ಇದೆಯೇ? ಆಶೀರ್ವದಿಸಲು ಮೋದಿ ಏನು ಸರ್ವಾಧಿಕಾರಿಯೇ?' ಎಂದು ಕರ್ನಾಟಕ ಕಾಂಗ್ರೆಸ್ ಪ್ರಶ್ನಿಸಿದೆ.

'ಮೋದಿಯ ಆಶೀರ್ವಾದ ಬೇಕೆಂದರೆ ಬಿಜೆಪಿಗೆ ಮತ ಹಾಕಿ. ಇದು ಜೆಪಿ ನಡ್ಡಾ ಅವರು ಕನ್ನಡಿಗರಿಗೆ ಹಾಕುತ್ತಿರುವ ಬೆದರಿಕೆ. ಬಿಜೆಪಿ ಸರ್ವಾಧಿಕಾರವನ್ನು ಜಾರಿಗೊಳಿಸುತ್ತಿರುವುದಕ್ಕೆ ಈ ಮಾತುಗಳೇ ನಿದರ್ಶನ. ಆಶೀರ್ವಾದ ಮಾಡಬೇಕಿರುವುದು ಜನರೇ ಹೊರತು, ಮೋದಿಯಲ್ಲ. ಒಕ್ಕೂಟ ವ್ಯವಸ್ಥೆ & ಪ್ರಜಾಪ್ರಭುತ್ವದ ಮೇಲೆ ಬಿಜೆಪಿಗೆ ಕಿಂಚಿತ್ ಗೌರವವಿಲ್ಲ' ಎಂದು ಕೆಪಿಸಿಸಿ ಹೇಳಿದೆ.
'ಮಾನ್ಯ ದಡ್ದಾ, ಅಲ್ಲಲ್ಲ ನಡ್ಡಾ ಅವರೇ, ಮೋದಿ ಬರುವುದಕ್ಕೂ ಮುನ್ನ ದೇಶವೂ ಇತ್ತು, ಕರ್ನಾಟಕವೂ ಇತ್ತು. ಮೋದಿಗೂ ಮುನ್ನವೇ ಕರ್ನಾಟಕ ಆರ್ಥಿಕವಾಗಿ ಸಬಲವಾಗಿತ್ತು, ಸಂಪದ್ಭರಿತವಾಗಿತ್ತು. ಕನ್ನಡಿಗರನ್ನು ಬೆದರಿಸಿ ಅವಮಾನಿಸುವುದನ್ನು ನಿಲ್ಲಿಸಿ. ಕನ್ನಡಿಗರ 'ತೆರಿಗೆ ಆಶೀರ್ವಾದ'ದಿಂದ ನಿಮ್ಮ ಮೋದಿಯ ಆಟ ನಡೆಯುತ್ತಿರುವುದು ಎಂಬುದನ್ನು ಮರೆಯದಿರಿ' ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
'ರಾಜ್ಯದಲ್ಲೂ, ಕೇಂದ್ರದಲ್ಲೂ ಬಿಜೆಪಿ ಅಧಿಕಾರದಲ್ಲಿತ್ತು. ನೆರೆ ಪರಿಹಾರದಲ್ಲಿ, ಬರ ಪರಿಹಾರದಲ್ಲಿ, GST ಪಾಲಿನಲ್ಲಿ, ಲಸಿಕೆ ಹಂಚಿಕೆಯಲ್ಲಿ, ಆಕ್ಸಿಜನ್ ನೀಡಿಕೆಯಲ್ಲಿ, ಕರ್ನಾಟಕದ ಸರ್ಕಾರಿ ಸಂಸ್ಥೆಯನ್ನು ಮುಚ್ಚುವಲ್ಲಿ, ಮಹಾರಾಷ್ಟ್ರದ ಗಡಿ ತಂಟೆಯಲ್ಲಿ ಕನ್ನಡಿಗರಿಗೆ ಮೋದಿಯ ಆಶೀರ್ವಾದದ ಬದಲು ಶಾಪ ಸಿಕ್ಕಿದ್ದೇಕೆ ಜೆಪಿ ನಡ್ಡಾ?' ಎಂದು ಪ್ರಶ್ನಿಸಿದೆ.
ಜೈರಾಮ್ ರಮೇಶ್ ವಾಗ್ದಾಳಿ
ಈ ವಿಚಾರವಾಗಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, 'ನಡ್ಡಾ ಜೀ, ಭಕ್ತಿಗೂ ಒಂದು ಮಿತಿ ಇರಬೇಕು' ಎಂದು ಹೇಳಿದ್ದಾರೆ. 'ನೀವು ಕರ್ನಾಟಕದ ಜನರನ್ನು ಏಕೆ ಬೆದರಿಸುತ್ತೀರಿ ಮತ್ತು ಹೆದರಿಸುತ್ತಿದ್ದೀರಿ? ಕರ್ನಾಟಕದ ಜನರ ಆಶೀರ್ವಾದದಿಂದ ಕಾಂಗ್ರೆಸ್ ಸರ್ಕಾರ ರಚನೆಯಾಗಲಿದೆ' ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.












Click it and Unblock the Notifications