ರಾವಣನನ್ನು ಸಂಹರಿಸಿದ ರಾಮನಿಂದಲೇ ಬಿಜೆಪಿ ಸಂಹಾರ ಖಚಿತ!
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿರುವ ಸಂದರ್ಭದಲ್ಲಿ ಬಿಜೆಪಿ ಮಾಡಿರುವ ಟ್ವೀಟ್ ಬಗ್ಗೆ ಕಾಂಗ್ರೆಸ್ ಅಸಮಾಧಾನ ವ್ಯಕ್ತಪಡಿಸಿದ್ದು, ರಾಮನಿಗೆ ಬಿಜೆಪಿ ಅವಮಾನ ಮಾಡಿದೆ ಎಂದು ಆರೋಪಿಸಿದೆ.
ನರೇಂದ್ರ ಮೋದಿ ಜೊತೆ ರಾಮ ನಡೆದು ಹೋಗುತ್ತಿರುವ ಚಿತ್ರವನ್ನು ಹಂಚಿಕೊಂಡಿರುವ ಬಿಜೆಪಿ 'ಕಟ್ಟಿದೆವು ನಾವು ರಾಮಮಂದಿರ' ಎಂದು ಟ್ವೀಟ್ ಮಾಡಿತ್ತು. ಚಿತ್ರದಲ್ಲಿ ಬಾಲ ರಾಮನಿದ್ದು, ಮೋದಿ ಕರೆದುಕೊಂಡು ಹೋಗುವಂತೆ ಚಿತ್ರಿಸಿರುವುದು ಕಾಂಗ್ರೆಸ್ ಟೀಕೆಗೆ ಕಾರಣ.

ರಾಮನಿಗೆ ಅವಮಾನ ಎಂದ ಕಾಂಗ್ರೆಸ್
ಮರ್ಯಾದಾ ಪುರುಷೋತ್ತಮನ ಶ್ರೀರಾಮನ ಮರ್ಯಾದೆಯನ್ನು ಬಿಜೆಪಿ ತೆಗೆದಿದೆ ಎಂದು ಕಾಂಗ್ರೆಸ್ ಹೇಳಿದ್ದು, ಶ್ರೀರಾಮನಿಗೆ ಕೈಕೆಯಿಗಿಂತ ಹೆಚ್ಚು ಅವಮಾನಿಸಿದೆ ಎಂದು ಟ್ವೀಟ್‌ನಲ್ಲಿ ಹೇಳಿದೆ.
ಮೋದಿ ಎದುರು ಶ್ರೀರಾಮನನ್ನು ಕುಬ್ಜನನ್ನಾಗಿಸಿದ ಬಿಜೆಪಿ ಕೋಟ್ಯಂತರ ಭಕ್ತರ ಭಾವನೆಗೆ ಧಕ್ಕೆ ತಂದಿದೆ, ಶ್ರೀರಾಮನಿಗೆ ಮೋದಿಯೇ ಮಾರ್ಗದರ್ಶಕ ಎಂಬಂತೆ ಚಿತ್ರಿಸಿದ ಬಿಜೆಪಿ ದೇವರ ಪೂಜೆಗಿಂತ ವ್ಯಕ್ತಿ ಪೂಜೆಯೇ ಶ್ರೇಷ್ಠ ಎಂದು ಪ್ರತಿಪಾದಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಮರ್ಯಾದಾ ಪುರುಷೋತ್ತಮನ ಮರ್ಯಾದೆ ತೆಗೆದ ಬಿಜೆಪಿ ಶ್ರೀರಾಮನಿಗೆ ಕೈಕೆಯಿಗಿಂತ ಹೆಚ್ಚು ಅವಮಾನಿಸಿದೆ.
— Karnataka Congress (@INCKarnataka) December 24, 2023
ಮೋದಿ ಎದುರು ಶ್ರೀರಾಮನನ್ನು ಕುಬ್ಜನನ್ನಾಗಿಸಿದ ಬಿಜೆಪಿ ಕೋಟ್ಯಂತರ ಭಕ್ತರ ಭಾವನೆಗೆ ಧಕ್ಕೆ ತಂದಿದೆ,
ಶ್ರೀರಾಮನಿಗೆ ಮೋದಿಯೇ ಮಾರ್ಗದರ್ಶಕ ಎಂಬಂತೆ ಚಿತ್ರಿಸಿದ ಬಿಜೆಪಿ ದೇವರ ಪೂಜೆಗಿಂತ ವ್ಯಕ್ತಿ ಪೂಜೆಯೇ ಶ್ರೇಷ್ಠ ಎಂದು… https://t.co/G2TUSMZ4V7
ಅಂದು ರಾವಣನನ್ನು ಸಂಹರಿಸಿದ್ದ ರಾಮನಿಂದಲೇ ಇಂದು ಬಿಜೆಪಿ ಸಂಹಾರ ನಡೆಯುವುದು ಖಚಿತ! ಎಂದು ಕಾಂಗ್ರೆಸ್ ತನ್ನ ಟ್ವೀಟ್‌ನಲ್ಲಿ ಹೇಳಿದೆ.
ಕಾಂಗ್ರೆಸ್ ಟ್ವೀಟ್‌ಗೆ ಹಲವು ಅಭಿಪ್ರಾಯ
ಕಾಂಗ್ರೆಸ್ ಟ್ವೀಟ್‌ಗೆ ವಿರೋಧ ವ್ಯಕ್ತಪಡಿಸಿರುವ ಚಲುವೇಗೌಡ ಎನ್ನುವವರು, "ರಾಮನನ್ನು ವಿರೋಧಿಸಿದ ಪಕ್ಷ ಇಂದು ಯಾವ ಸ್ಥಿತಿಯಲ್ಲಿ ಇದೆ, ರಾಮ ಮಂದಿರದ ನಿರ್ಮಾಣ ವಿರೋಧಿಸಿದ ಕುಟುಂಬದ ಕುಡಿಯ ರಾಜಕೀಯ ಭವಿಷ್ಯ ಏನಾಗಿದೆ ಎನ್ನುವುದನ್ನು ಬಿಡಿಸಿ ಹೇಳುವ ಅವಶ್ಯಕತೆಯಿಲ್ಲ ಅಲ್ವೇ!? ಭಕ್ತರ ಸೇವೆಯನ್ನು ಭಗವಂತ ಮಾಡಿದ ಇತಿಹಾಸ ನಮ್ಮ ಸನಾತನ ಧರ್ಮದಲ್ಲಿದೆ, ಕಾಂಗಿಗಳ ಅರಿವಿಗೆ ಬಂದಿಲ್ಲ ಅನಿಸುತ್ತದೆ" ಎಂದು ಟ್ವೀಟ್ ಮಾಡಿದ್ದಾರೆ.
ಮಮತಾ ಎನ್ನುವವರು ಟ್ವೀಟ್ ಮಾಡಿದ್ದು, ಅಯೋಧ್ಯೆ ರಾಮಮಂದಿರ ಉದ್ಘಾಟನೆಯನ್ನು ತಮ್ಮ ಮೂರನೇ ಅವಧಿಯ ಪ್ರಧಾನಮಂತ್ರಿ ಕಾರ್ಯಾಲಯದ ಮೆಟ್ಟಿಲುಗಳನ್ನಾಗಿ ಮಾಡಿಕೊಳ್ಳಲು ಯತ್ನಿಸುತ್ತಿದ್ದಾರೆಯೇ ಹೊರತು ಇವರಲ್ಲಿ ಯಾವುದೇ ಧಾರ್ಮಿಕ ಭಾವನೆಗಳಿಲ್ಲ,ಈ ಮೂಲಕ ಹಿಂದೂ ಭಾವನೆಗಳಿಗೆ ಧಕ್ಕೆ ತರುತ್ತಿದ್ದಾರೆ ಎಂದು ಅವರೊಳಗೇ ಭಿನ್ನಾಭಿಪ್ರಾಯಗಳು ಸೃಷ್ಟಿ ಯಾಗಿರುವುದು ಈಗ ಎಲ್ಲರಿಗೂ ಗೊತ್ತಿರುವ ವಿಷಯ ಎಂದು ಹೇಳಿದ್ದಾರೆ.
ಉದ್ಘಾಟನೆ ಯಾವಾಗ?
ಸದ್ಯ ರಾಮ ಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಜನವರಿ 22 ರಂದು ದೇವಾಲಯ ಉದ್ಘಾಟನೆಗೆ ಮುಹೂರ್ತ ನಿಗದಿ ಮಾಡಲಾಗಿದೆ. 136 ಸನಾತನ ಸಂಪ್ರದಾಯಗಳ 25,000 ಕ್ಕೂ ಹೆಚ್ಚು ಹಿಂದೂ ಧಾರ್ಮಿಕ ಮುಖಂಡರನ್ನು ಸಮಾರಂಭಕ್ಕೆ ಆಹ್ವಾನಿಸಲು ಟ್ರಸ್ಟ್ ಯೋಜಿಸಿದೆ. ಪಟ್ಟಾಭಿಷೇಕ ಸಮಾರಂಭದಲ್ಲಿ ಪಾಲ್ಗೊಳ್ಳುವ 25,000 ಸಂತರ ಜೊತೆಗೆ, 10,000 ವಿಶೇಷ ಅತಿಥಿಗಳು ಸಹ ಇರಲಿದ್ದಾರೆ.












Click it and Unblock the Notifications