ಕಾಂಗ್ರೆಸ್ ಸರ್ಕಾರದ್ದು 1000 ದಿನಗಳ ದುರಾಡಳಿತ: ಕನ್ನಡಿಗರಿಗೆ ಸಿಕ್ಕಿದ್ದು 'ಚಿಪ್ಪು', 16 ಅಂಶಗಳ ಪಟ್ಟಿ ಕೊಟ್ಟ ವಿ.ಸೋಮಣ್ಣ
ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 1000 ದಿನಗಳಾಗಿವೆ. ಈ ಅವಧಿಯಲ್ಲಿ ಸಿಎಂ ಸಿದ್ದರಾಮಯ್ಯನವರು ನಡೆಸಿರುವುದು ಕೇವಲ 'ದುರಾಡಳಿತ, ಭ್ರಷ್ಟ ಆಡಳಿತ, ಅಭಿವೃದ್ಧಿಹೀನ ಆಡಳಿತ'ವಷ್ಟೇ. ನುಡಿದಂತೆ ನಡೆಯುತ್ತೇವೆ ಎಂದು ಅಧಿಕಾರಕ್ಕೇರಿದ ಸಿದ್ದರಾಮಯ್ಯನವರು ಮಾಡಿದ್ದು, 'ಆತ್ಮರತಿ'ಯ ಆಡಳಿತ. ಕರುನಾಡು ಈ ಅವಧಿಯಲ್ಲಿ ಒಂದು ಸಮೃದ್ಧ ರಸ್ತೆ ಕಾಣಲಿಲ್ಲ, ಉತ್ತಮ ಮೂಲ ಸೌಕರ್ಯಗಳನ್ನೂ ಕಾಣಲಿಲ್ಲ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ದೂರಿದರು.
ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 1000 ದಿನಗಳಾದ ಹಿನ್ನೆಲೆಯಲ್ಲಿ ಹಾವೇರಿಯಲ್ಲಿ ಸಂಭ್ರಮಾಚರಣೆ ನಡೆಸಿತು. ಈ ಸಾಧನೆ ಬಗ್ಗೆ ಸಾಕಷ್ಟು ಬಿಜೆಪಿ ನಾಯಕರು ಲೇವಡಿ ಮಾಡಿದ್ದರು. ಸರ್ಕಾರ ಅಡಳಿತ ನಡೆಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಬಡವರು, ಮಧ್ಯಮ ವರ್ಗದವರಿಗೆ ಆರ್ಥಿಕ ಭಾರ ಹಾಕಿದೆ ಎಂದೆಲ್ಲ ದೂರಿದ್ದರು. ಇದೀಗ ವಿ.ಸೋಮಣ್ಣ ಅವರು ಎಕ್ಸ್ ಪೋಸ್ಟ್ ಮಾಡಿ, 'ಸರ್ಕಾರದ್ದು ನಿರರ್ಥಕ ಸಾವಿರ ದಿನಗಳು, ದಲಿತ ನಿಧಿ ಲೂಟಿ ಹೊಡೆದಿದೆ' ಎಂದು ಸರ್ಕಾರದ ಮೇಲೆ ಕಿಡಿ ಕಾರಿದ್ದಾರೆ.

ಕನ್ನಡಿಗರಿಗೆ ಸಿಕ್ಕಿದ್ದು 'ಚಿಪ್ಪು'
ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಇಡೀ ಕರ್ನಾಟಕ ರಾಜ್ಯವೇ ನಿಮ್ಮ ದುರಾಡಳಿತಕ್ಕೆ ಬೇಸತ್ತು ಅಧಿಕಾರದಿಂದ ಹೊರಹಾಕಲು ಕಾದು ಕುಳಿತಿದೆ. ಕಳೆದ 1000 ದಿನಗಳಿಂದ ನೀವು ಕನ್ನಡಿಗರಿಗೆ ನೀಡಿದ್ದು ಕೇವಲ 'ಚಿಪ್ಪು' ಮಾತ್ರ. ಇನ್ನು ಕೆಲವೇ ತಿಂಗಳು ಅಧಿಕಾರದಲ್ಲಿರುವ ತಾವು ಕೊನೆ ಕ್ಷಣದಲ್ಲಾದರೂ ರಾಜ್ಯದ ಜನತೆಯ ಬಗ್ಗೆ ಯೋಚಿಸಿ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರದ ಗದ್ದುಗೆಯೇರಿದ ಸಂಭ್ರಮಾಚರಣೆ ಮಾಡಿದೆ. ಲೂಟಿ, ಭ್ರಷ್ಟಾಚಾರ ಎಸಗುವವರಿಗೆ ಕಳೆದ 1000 ದಿನಗಳು ಸಂಭ್ರಮದ ದಿನಗಳಾಗಿವೆಯೇ ಹೊರತು, ಕನ್ನಡಿಗರಿಗಲ್ಲ ಎನ್ನುವುದೇ ಸತ್ಯ ಸಂಗತಿ. ಕಾಂಗ್ರೆಸ್ ನಾಯಕರು ಈ ಸಂಭ್ರಮಾಚರಣೆ ಆಚರಿಸುತ್ತಿರುವುದು ಯಾವ ಪುರುಷಾರ್ಥಕ್ಕಾಗಿ? ಎಂದು ಪ್ರಶ್ನಿಸಿದ ಅವರು, ತಾವು ಆರೋಪಿಸಿರುವ ಅಕ್ರಮಗಳು, ಭ್ರಷ್ಟಾಚಾರ, ಹಣ ದುರ್ಬಳಕೆ ಕುರಿತು ಪಟ್ಟಿ ನೀಡಿದ್ದಾರೆ.
ಸಚಿವರು ಕೊಟ್ಟ ಅಕ್ರಮ, ಹಗರಣಗಳ ಪಟ್ಟಿ ಇಲ್ಲಿದೆ
1. ವಾಲ್ಮೀಕಿ ನಿಗಮದಲ್ಲಿ ಹಗರಣ ನಡೆಸಿ ಪರಿಶಿಷ್ಠ ವರ್ಗದ ಕೋಟಿ ಕೋಟಿ ಹಣ ಲಪಟಾಯಿಸಿದ್ದಾಕ್ಕಿಗಿ ಸಂಭ್ರಮಾಚರಣೆ ಮಾಡಲಾಗುತ್ತಿದೆಯೇ?
2. ಅಬಕಾರಿ ಇಲಾಖೆಯಲ್ಲಿ 6,000 ಕೋಟಿ ರೂ. ಹಗರಣ ನಡೆದಿದೆ.
3 ಸರ್ಕಾರ ಅಧಿಕಾರಕ್ಕೆ ಬಂದು 3 ವರ್ಷವಾಗುತ್ತಾ ಬಂದರೂ ಇನ್ನೂ ಗುತ್ತಿಗೆದಾರರ ಬಾಕಿ ಉಳಿಸಿಕೊಳ್ಳಲಾಗಿದೆ.
4. ಗುತ್ತಿಗೆದಾರರಿಂದ ಶೇ. 60 ರಷ್ಟು ಕಿಕ್ ಬ್ಯಾಕ್ ಪಡೆಯಲಾಗಿದೆ.
5. ಪ್ರಸಾರವೇ ಇಲ್ಲದ ನ್ಯಾಷನಲ್ ಹೆರಾಲ್ಡ್‌ಗೆ ಬರೋಬ್ಬರಿ 3 ಕೋಟಿ. ರೂ. ಜಾಹೀರಾತು ನೀಡಲಾಗಿದೆ.
6. ಪರಿಶಿಷ್ಠ ಹಾಗೂ ಹಿಂದುಳಿದ ವರ್ಗದ ಜಾತಿಗಳ ನಿಗಮಗಳಿಗೆ ಅನುದಾನ ನೀಡಲಿಲ್ಲ.
7. ಇಂದ್ರ, ಚಂದ್ರರ ಮೂಲಕ ವರ್ಗಾವಣೆ ದಂಧೆ ನಡೆಸಲಾಯಿತು.
8. 2.85 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳದೇ ರಾಜ್ಯದ ಸರ್ಕಾರಿ ಹುದ್ದೆ ಆಕಾಂಕ್ಷಿ ಯುವಜನತೆಯ ಕನಸನ್ನು ನುಚ್ಚು
ನೂರು ಮಾಡಲಾಯಿತು.
9. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ 5 ಸಾವಿರ ಕೋಟಿ ರೂ.ಗಳ ಘೋಷಣೆ, ಕೇವಲ ಘೋಷಣೆಯಾಗಿ
ಉಳಿಯಿತು.
10. ಗೃಹಲಕ್ಷ್ಮಿ ಯೋಜನೆಯೆ 5000 ಕೋಟಿ ರೂ. ಹಣ ಲಪಟಾಯಿಸಲಾಯಿತು.
11. 24 ಸಾವಿರ ಕೋಟಿಗೂ ಹೆಚ್ಚಿನ SC/STP ಹಣ ದುರ್ಬಳಕೆ ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡು, ಪರಿಶಿಷ್ಟ ವರ್ಗ
ಹಾಗೂ ಜಾತಿಯ ಜನತೆಗೆ ಮೋಸ ಮಾಡಲಾಯಿತು.
12. ಮೆಟ್ರೋ, ನಂದಿನಿ ಉತ್ಪನ್ನಗಳು, ಪೆಟ್ರೋಲ್ ಡೀಸೆಲ್, ಬಸ್, ವಿದ್ಯುತ್, ಮುದ್ರಾಂಕ ಶುಲ್ಕಗಳನ್ನು ಸೇರಿದಂತೆ
ಎಲ್ಲೆಡೆಯೂ ಬೆಲೆ ಹೆಚ್ಚಳ ಮಾಡಿ ಕನ್ನಡಿಗರ ಜೇಬಿಗೆ ಕೈ ಹಾಕಿ ದೋಚಿದ್ದಕ್ಕಾಗಿಯೇ? ಈ ಸಂಭ್ರಮಾಚರಣೆ.
13. 638 ಕನ್ನಡ ಶಾಲೆಗಳನ್ನು ಮುಚ್ಚಲಾಯಿತು.
14. ಆರ್‌ಸಿಬಿ ವಿಜಯೋತ್ಸವ ನಡೆಸಿ 11 ಜನ ಅಮಾಯಕರನ್ನು ಕೊಲ್ಲಲಾಯಿತು.
15. ರಾಜ್ಯದಲ್ಲಿ ನೆಲಕ್ಕಚ್ಚಿದ ಕಾನೂನು ಸುವ್ಯವಸ್ಥೆಯ, ಡ್ರಗ್ಸ್ ಜಾಲವನ್ನು ಬೇಧಿಸಲಾಗದ ದೈನೇಸಿ ಸ್ಥಿತಿ ಬಂದು ನಿಂತಿದೆ.
16. ರಾಜ್ಯದಲ್ಲಿ ರೈತರನ್ನು ನಿರ್ಲಕ್ಷಿಸಿದ್ದಕ್ಕಾಗಿಯೇ? ನಿಮ್ಮ ಸರ್ಕಾರದ 1000 ದಿನ ಸಂಭ್ರಮಾಚರಣೆ ಎಂದು ವಿ.ಸೋಮಣ್ಣ ಅವರು ಪ್ರಶ್ನಿಸಿದ್ದಾರೆ.












Click it and Unblock the Notifications