7th Pay Commission; ಬಜೆಟ್ ಬಳಿಕ ಸರ್ಕಾರಿ ನೌಕರರ ಕಳವಳವೇನು?
ಬೆಂಗಳೂರು, ಜುಲೈ 10; ಕರ್ನಾಟಕದ ಮುಖ್ಯಮಂತ್ರಿ ಮತ್ತು ಹಣಕಾಸು ಸಚಿವರೂ ಆದ ಸಿದ್ದರಾಮಯ್ಯ ಶುಕ್ರವಾರ 2023-24ನೇ ಸಾಲಿನ ಬಜೆಟ್ ಮಂಡನೆ ಮಾಡಿದರು. ಈ ಬಾರಿಯ ಬಜೆಟ್ ಗಾತ್ರ 3,27,747 ಕೋಟಿ ರೂ.ಗಳು ಆಗಿತ್ತು. ಆದರೆ ಬಜೆಟ್‌ನಲ್ಲಿ 7 ರಾಜ್ಯ ವೇತನ ಆಯೋಗದ ಕುರಿತು ಯಾವುದೇ ಘೋಷಣೆಗಳನ್ನು ಮಾಡಿಲ್ಲ.
7ನೇ ವೇತನ ಆಯೋಗದ ವರದಿ ಜಾರಿ ಮತ್ತು ಹಳೆ ಪಿಂಚಣಿ ವ್ಯವಸ್ಥೆಯನ್ನು ಮರು ಜಾರಿಗೊಳಿಸುವ ಕುರಿತು ಬಜೆಟ್‌ನಲ್ಲಿ ಘೋಷಣೆಯಾಗಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಯಾವುದೇ ಘೋಷಣೆಯಾಗದಿರುವುದು ಸರ್ಕಾರಿ ನೌಕರರಿಗೆ ನಿರಾಸೆ ಉಂಟು ಮಾಡಿದೆ.

ಹಿಂದೆ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗಲೇ ರಾಜ್ಯ ಸರ್ಕಾರಿ ನೌಕರರ ವೇತನ ಶ್ರೇಣಿಗಳನ್ನು ಪರಿಷ್ಕರಿಸಲು ಮತ್ತು ನೂತನ ವೇತನ ರಚನೆ ಇತ್ಯಾದಿಗಳನ್ನು ರೂಪಿಸಲು ಸುಧಾಕರ್ ರಾವ್ ಅಧ್ಯಕ್ಷತೆಯ 7ನೇ ರಾಜ್ಯ ವೇತನ ಆಯೋಗವನ್ನು ರಚನೆ ಮಾಡಲಾಗಿತ್ತು.
ಕರ್ನಾಟಕದಲ್ಲಿ ಚುನಾವಣೆ ಮುಗಿದು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿತು. ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಬಳಿಕ ಸರ್ಕಾರ 7ನೇ ರಾಜ್ಯ ವೇತನ ಆಯೋಗದ ಅವಧಿಯನ್ನು ದಿನಾಂಕ 19/5/2023ರಿಂದ ಜಾರಿಗೆ ಬರುವಂತೆ 6 ತಿಂಗಳ ಕಾಲ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ.
ಯಾವಾಗ ಬರಲಿದೆ ವರದಿ?; 2023ರ ಮಾರ್ಚ್‌ನಲ್ಲಿ ರಾಜ್ಯದ ಸರ್ಕಾರಿ ನೌಕರರು 7ನೇ ವೇತನ ಆಯೋಗದ ಶಿಫಾರಸು ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಿದ್ದರು. ಆಗ ಸರ್ಕಾರಿ ನೌಕರರಿಗೆ ಮಧ್ಯಂತರವಾಗಿ ಶೇ 17ರಷ್ಟು ವೇತನ ಹೆಚ್ಚಳ ಮಾಡುವ ತೀರ್ಮಾನವನ್ನು ಘೋಷಣೆ ಮಾಡಲಾಗಿದೆ.
ಆದರೆ ಸುಧಾಕರ್ ರಾವ್ ಅಧ್ಯಕ್ಷತೆಯ 7ನೇ ರಾಜ್ಯ ವೇತನ ಆಯೋಗ ಸರ್ಕಾರಕ್ಕೆ ಯಾವಾಗ ವರದಿ ನೀಡಲಿದೆ? ಎಂಬುದು ಇನ್ನೂ ಅಂತಿಮವಾಗಿಲ್ಲ. ನವೆಂಬರ್‌ನಲ್ಲಿ ವರದಿ ನೀಡಬಹುದು ಎಂದು ಅಂದಾಜಿಸಲಾಗಿದೆ. ವರದಿಯಲ್ಲಿ ಎಷ್ಟು ವೇತನ ಹೆಚ್ಚಳಕ್ಕೆ ಶಿಫಾರಸು ಮಾಡಲಾಗುತ್ತದೆ? ಎಂಬುದು ಇನ್ನೂ ಖಚಿತವಾಗಿಲ್ಲ.
7ನೇ ರಾಜ್ಯ ವೇತನ ಆಯೋಗದ ವರದಿ ವರ್ಷದ ಮಧ್ಯದಲ್ಲಿ ಸರ್ಕಾರದ ಕೈ ಸೇರಿದರೆ ಅದು ಜಾರಿಯಾಗುತ್ತದೆಯೆ? ಎಂಬುದು ಸರ್ಕಾರಿ ನೌಕರರ ಕಳವಳವಾಗಿದೆ. ಅಲ್ಲದೇ ಬಜೆಟ್‌ನಲ್ಲಿ ಸಿದ್ದರಾಮಯ್ಯ ವೇತನ ಆಯೋಗ ಜಾರಿ ಕುರಿತು ಯಾವುದೇ ಭರವಸೆ ನೀಡದಿರುವುದು ಸಹ ನೌಕರರ ನಿರಾಸೆಗೆ ಕಾರಣವಾಗಿದೆ.
ಕಳೆದ ವಾರ ವಿಧಾನ ಪರಿಷತ್‌ನಲ್ಲಿ ಸದಸ್ಯರೊಬ್ಬರ ಪ್ರಶ್ನೆಗೆ ಮುಖ್ಯಮಂತ್ರಿಗಳು ಉತ್ತರ ನೀಡಿದ್ದರು. 7ನೇ ರಾಜ್ಯ ವೇತನ ಆಯೋಗ ವರದಿಯನ್ನು ಜಾರಿಗೆ ತರುವ ಕುರಿತು ಖಜಾನೆಯ ಆರ್ಥಿಕ ಸ್ಥಿತಿಯನ್ನು ಪರಿಗಣಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದರು.
7ನೇ ರಾಜ್ಯ ವೇತನ ಆಯೋಗ ಸರ್ಕಾರಕ್ಕೆ ವರದಿ ನೀಡಿ, ಅದು ಜಾರಿಗೆ ಬರುವುದಾದರೆ ಏಪ್ರಿಲ್ 1, 2023ರಿಂದಲೇ ಜಾರಿಗೆ ಬರಬೇಕು ಎಂಬುದು ಸರ್ಕಾರಿ ನೌಕರರ ಬೇಡಿಕೆಯಾಗಿದೆ. ಆದರೆ 5 ಗ್ಯಾರಂಟಿ ಯೋಜನೆಗಳ ಅನುಷ್ಠಾನ, ಅದಕ್ಕಾಗಿ ಹಣ ಹೊಂದಿಸುವ ಒತ್ತಡದಲ್ಲಿರುವ ಸರ್ಕಾರ ಯಾವ ಕ್ರಮ ಕೈಗೊಳ್ಳಲಿದೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಎನ್‌ಪಿಎಸ್ ರದ್ದು; ಸರ್ಕಾರಿ ನೌಕರರ ಮತ್ತೊಂದು ಪ್ರಮುಖ ಬೇಡಿಕೆ ಹೊಸ ಪಿಂಚಣಿ ಯೋಜನೆ (ಎನ್‌ಪಿಎಸ್) ರದ್ದುಗೊಳಿಸುವುದು ಮತ್ತು ಇತರ ರಾಜ್ಯಗಳ ಮಾದರಿಯಲ್ಲಿ ಹಳೆ ಪಿಂಚಣಿ ಯೋಜನೆಯನ್ನು ಮರು ಜಾರಿಗೊಳಿಸುವುದು. ಈ ಕುರಿತು ಸಹ ಬಜೆಟ್‌ನಲ್ಲಿ ಯಾವುದೇ ಘೋಷಣೆಯಾಗಿಲ್ಲ. ಆದರೆ ಜೂನ್ 6ರಂದು ವಿಧಾನಸಭೆ ಕಲಾಪದಲ್ಲಿ ಸಿದ್ದರಾಮಯ್ಯ ಈ ಕುರಿತು ಮಾತನಾಡಿದ್ದಾರೆ.
ಪರಿಷತ್ ಸದಸ್ಯ ಮರಿತಿಬ್ಬೇಗೌಡ (ಶಿಕ್ಷಕರ ಕ್ಷೇತ್ರ) ಕೇಳಿದ್ದ ಪ್ರಶ್ನೆಗೆ ಉತ್ತರ ನೀಡಿದ್ದ ಅವರು, ಹೊಸ ಪಿಂಚಣಿ ಯೋಜನೆಯನ್ನು ರದ್ದುಪಡಿಸಿ ಹಳೆ ಪಿಂಚಣಿ ಯೋಜನೆಯನ್ನೇ ಜಾರಿಗೆ ತರಬೇಕೆಂದು ನೌಕರರ ಸಂಘಟನೆಗಳು ಹೋರಾಟ ನಡೆಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ ಎಂದು ಹೇಳಿದ್ದರು.
ಸರ್ಕಾರದ ಆದೇಶ ದಿನಾಂಕ 1/3/2023ರಲ್ಲಿ ರಾಜ್ಯದಲ್ಲಿ ಜಾರಿ ಇರುವ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ರದ್ದುಪಡಿಸುವ ಸಂಬಂಧ ಈಗಾಗಲೇ ಹಳೆ ಪಿಂಚಣಿ ಯೋಜನೆಯನ್ನು ಮರು ಜಾರಿ ಮಾಡಿರುವ ರಾಜ್ಯಗಳಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಿರುವ ಕುರಿತು ಕೈಗೊಂಡ ಕ್ರಮಗಳ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ಆದೇಶಿಸಿದೆ ಎಂದು ತಿಳಿಸಿದ್ದಾರೆ. ಆದರೆ ಯಾವಾಗ ಜಾರಿಗೆ ಬರಲಿದೆ? ಎಂಬ ಬಗ್ಗೆ ಸ್ಪಷ್ಟನೆ ನೀಡಿಲ್ಲ.












Click it and Unblock the Notifications